ಹತ್ತು ಹಲವಾರು ಪ್ರಶ್ನೆಗಳು, ಉತ್ತರ : ನಾಲ್ಕೇ ಪುಸ್ತಕ!

malenadu novels

1) ಮಲೆನಾಡು ಎಂದರೆ ಏನು? ಮತ್ತು ಅಲ್ಲಿನ ಜೀವನ ಹೇಗಿರುತ್ತದೆ? ಮಲೆನಾಡಿನ ಜೀವನವೆಂದರೆ ನಾವಂದುಕೊಂಡಷ್ಟು ಸುಲಭವಲ್ಲ. ಅಲ್ಲಿ ಪ್ರತಿಕ್ಷಣ, ಪ್ರತಿದಿನವೂ ಒಂದೊಂದು ತರಹ ಹೋರಾಟವೇ ಸರಿ. ಪ್ರತಿ ಬಾರಿಯೂ ವಿಭಿನ್ನವಾದ ಅನುಭವ ಕೊಡುವ ಮಲೆನಾಡಿಗರಿಗೆ ಅದು ದಿನ ನಿತ್ಯದ ಜಂಜಾಟ. ಅಲ್ಲಿ ಬೇರೆ ದಾರಿಯೇ ಇಲ್ಲ, ಬಂದದ್ದನ್ನು ಬಂದ ಹಾಗೆ ಸ್ವೀಕರಿಸಲೇಬೇಕು. ಅಲ್ಲಿನ ಜನ ವ್ಯವಸಾಯ ಮಾಡುವ ಪರಿ ಹೇಗೆ? ಪ್ರಕೃತಿಮಾತೆ ಮುನಿಸಿಕೊಂಡರೆ ಹಸುರಾಗಬೇಕಿದ್ದ ಬಾಳು ಹೇಗೆ ಅಲ್ಲೋಲಕಲ್ಲೋಲವಾಗುತ್ತದೆ? ಕೃಷಿಯನ್ನು ನಂಬಿದ ರೈತರು ಕೊನೆಗೆ ಅದನ್ನು ಬಿಟ್ಟು ನಗರಗಳ ನಾಗಾಲೋಟದಲ್ಲಿ ಏಕೆ ಬಿದ್ದಿರುವರು, ಅದರಲ್ಲೂ ಮಲೆನಾಡಿಗರು? ಅಲ್ಲಿನ ಜನ ಮಳೆಗಾಲವನ್ನು ಸ್ವೀಕರಿಸುವ ರೀತಿ ಹೇಗಿರುತ್ತದೆ? ಅದಕ್ಕಾಗಿ ಅವರು ಮಾಡಿಕೊಳ್ಳುವ ಸಿದ್ಧತೆಗಳೇನು? ನಾವು ಮಳೆಯನ್ನು ನೋಡುವ ರೀತಿ ಮತ್ತು ಮಲೆನಾಡಿಗರು ಮಳೆಯನ್ನು ನೋಡುವ ಬಗೆ ಹೇಗೆ? ಇದೆಲ್ಲವನ್ನು ಮೀರಿ, ಮಾನವ ಸಂಬಂಧಗಳು ಇಲ್ಲಿರುವ ನಮಗಿಂತಲೂ ಅಲ್ಲಿ ವಿಭಿನ್ನವಾದುದೋ ಹೇಗೆ? ಅಥವಾ ನಮ್ಮೆಲ್ಲರಂತೆ ಅವರದೂ ಸಾಮಾನ್ಯವಾದ ಮಾನವ ಸಂಬಂಧಗಳೇನಾ? ಮಲೆನಾಡಿನ ಆ ವರ್ಣಿಸಲಸದಳ ಪ್ರಕೃತಿಯು ಹೇಗೆ ವರ್ಷಒಂಬತ್ತು ಕಾಲ ತನ್ನೊಳಗಡಗಿರುವ ಗುಟ್ಟನ್ನು ಬಿಟ್ಟುಕೊಡದೆ ಮಲೆನಾಡಿಗರನ್ನು ಆಡಿಸುವ ಪರಿ, ಇದರಿಂದ ಅಲ್ಲಿನವರು ಅನುಭವಿಸಬೇಕಾದ ಕಷ್ಟನಷ್ಟಗಳೇನು? ಸುಖಸಂತೋಷಗಳೇನು? ಪ್ರಕೃತಿಯ ಅವಿಭಾಜ್ಯ ಅಂಗವಾದ ಕಾಡು ಪ್ರಾಣಿಗಳು ಇವರಿಗೆ ವರವೋ ಶಾಪವೋ? ವರ್ಷದ ಹನ್ನೆರೆಡು ತಿಂಗಳು ಅಲ್ಲಿನ ಜನರ ದಿನಚರಿ ಹೇಗಿರುತ್ತದೆ? ಎನ್ನುವ ಇಂತಹ ಹತ್ತುಹಲವು ಪ್ರಶ್ನೆಗಳಿಗೆ ಉತ್ತರ ಸಿಗುವುದು “ಮಲೆನಾಡಿನ ರೋಚಕ ಕಥೆಗಳು” ಕೃತಿಯಲ್ಲಿ.

2) ಮಳೆಗಾಲದಲ್ಲಿ ಮಲೆನಾಡ ಚಾರಣ ಹೇಗಿರುತ್ತದೆ? ನಾವು ಪ್ರಯಾಣಿಸು ವೇಳೆಯಲ್ಲಿ ವಾಹನದಿಂದ ಹಾಗೇ ಇಣುಕಿ ನೋಡುವಾಗ ನಮ್ಮ ಕಣ್ಣಿಗೆ ಬೀಳುವ ಕಾಡಿಗೂ ಅದರಾಚೆಯಿರುವ ಕಾಡಿಗೂ ಏನಾದರೂ ಸಂಭಂಧ ಅಥವಾ ಬದಲಾವಣೆಯಿದೆಯೇ? ಅಪರೂಪಕ್ಕೊಮ್ಮೆ ಪ್ರವಾಸಕ್ಕಾಗಿಯೋ, ಚಾರಣಕ್ಕಾಗಿಯೋ, ದಿನನಿತ್ಯದ ರಗಳೆಯಿಂದ, ಆಫೀಸಿನ ಕಿರಿಕಿರಿಯಿಂದ, ಟ್ರಾಫಿಕ್ಕಿನ ಘೋರ ಅನುಭವದಿಂದ ತಪ್ಪಿಸಿಕೊಂಡು, ಪ್ರಶಾಂತವಾದ, ಸದಾ ಹಸುರೆಲೆಯಿಂದ ತುಂಬಿ, ನೀರ್ಜರಿಯಿಂದ ಕಂಗೊಳಿಸುವ, ಬೆಟ್ಟಗುಡ್ಡಗಳಿಂದ ಕಣ್ಮನ ತಣಿಸುವ, ನಾವು ನೋಡಿರದ ಪ್ರಾಣಿಪಕ್ಷಿಗಳಿಂದ ಭಯಪಡಿಸುವ, ಹೆಜ್ಜೆಹೆಜ್ಜೆಗೂ ಕೌತುಕವನ್ನು ತನ್ನ ಮಡಿಲಲ್ಲಿ ಅಡಗಿಸಿಕೊಂಡಿರುವ ನಿತ್ಯನೂತನೆ ಮಲೆನಾಡಿಗೆ ಹೊರಡುವ ನಮಗೆ ಮಲೆನಾಡು ಪ್ರಕೃತಿ ನೀಡಿದ ಅನನ್ಯ ಕೊಡುಗೆಯೇ ಸರಿ. ಈ ಅಪರಿಮಿತ ಸೌಂದರ್ಯವನ್ನು ಸವಿಯಲು ಮಲೆನಾಡಿಗೆ ಹೋಗುವ ನಾವು ವಹಿಸಬೇಕಾದ ಎಚ್ಚರಿಕೆಗಳೇನು? ಕಾಡಲ್ಲಿ ದಾರಿತಪ್ಪಬಾರದು. ಅಕಸ್ಮಾತ್ ತಪ್ಪಿದರೆ ಅಲ್ಲಿಂದ ಹೊರಬರುವುದು ಹೇಗೆ? ಅಲ್ಲೇ ಸಿಗುವ ಆಹಾರವಾದರೂ ಏನು? ಎನ್ನುವ ಹಲವು ಕೌತುಕ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು, ಹಲವು ಕಾಲ್ಪನಿಕ ಪಾತ್ರಗಳೊಂದಿಗೆ “ಅರಮನೆಗುಡ್ಡ” ಚಾರಣಕ್ಕೆ ಹೊರಡುವ ಹೊಸದಾಗಿ ಮದುವೆ ಆದ ಎರಡು ನವಜೋಡಿಗಳು ಕಾಡಲ್ಲಿ ದಾರಿತಪ್ಪಿ ಪಡುವ ಪಾಡುಗಳೇನು? ಅಲ್ಲಿ ಅವರು ಎದುರಿಸುವ ಸಂಕಷ್ಟ ಹೇಗಿರುತ್ತದೆ? ತಾನು ಎಣಿಸಿದ್ದಕ್ಕಿಂತ ಪ್ರಕೃತಿ ಹೇಗೆ ತನ್ನ ಇನ್ನೊಂದು ಕ್ರೂರಮುಖ ತೋರಿಸುತ್ತದೆ? ಅಲ್ಲಿಂದ ಅವರು ಜೀವಂತ ಬದುಕಿ ಹೊರಬರಲು ಸಾಧ್ಯವಾಯಿತೇ? ಅಥವಾ ಆ ನಾಲ್ಕರಲ್ಲಿ ಯಾರಾದರೂ ಸತ್ತರೇ? ಇನ್ನುಳಿದವರ ಕಥೆಯೇನು? ಮೊಬೈಲು ಕೈಕೊಟ್ಟಾಗ ಏನಾಗುತ್ತದೆ? ಸೀಳುನಾಯಿಗಳು ಆಕ್ರಮಣ ಮಾಡಿದಾಗ ಯಾರು ಸಾಯುತ್ತಾರೆ? ಹೀಗೆ ಕಥೆಯನ್ನು ಅತ್ಯಂತ ರೋಚಕತೆಯೊಂದಿಗೆ ಪ್ರತಿಕ್ಷಣದ ಕುತೂಹಲದೊಂದಿಗೆ ಓದಿಸಿಕೊಂಡು ಹೋಗುವ ಪುಸ್ತಕ ” “ಅರಮನೆ ಗುಡ್ಡದ ಕರಾಳ ರಾತ್ರಿಗಳು” ಪುಸ್ತಕದಲ್ಲಿ ಉತ್ತರ ದೊರೆಯುತ್ತದೆ.

3) ಮಲೆನಾಡಿನ ದಟ್ಟ ಅರಣ್ಯ ಪ್ರದೇಶದ ಒಳಗೆ ಅಥವಾ ಪಶ್ಚಿಮಘಟ್ಟದ ನಟ್ಟನಡುವೆ ವಿದ್ಯುತ್ ಉತ್ಪತ್ತಿಗಾಗಿ ಅಣೆಕಟ್ಟು ಕಟ್ಟಿದರೆ, ಅಲ್ಲಿ ಸುತ್ತಮುತ್ತ ಹಲವಾರು ತಲೆಮಾರಿನಿಂದ ವಾಸ ಮಾಡುತ್ತಿರುವ ಜನರ ಗತಿಯೇನು? ಒಂದು ಅಣೆಕಟ್ಟಿನಿಂದ ಜನರ ದಿನನಿತ್ಯದ ಸಂಗತಿ ಮೊದಲುಗೊಂಡು ಇಡೀ ಅವರ ಜೀವನದ ಮೇಲೆ ಅದು ಹೇಗೆ ಪರಿಣಾಮ ಬೀರಬಹುದು? ಅಲ್ಲಿನ ಅವಿದ್ಯಾವಂತ ಯುವಸಮೂಹ ಹೇಗೆ ದಾರಿ ತಪ್ಪುತ್ತದೆ? ಅಣೆಕಟ್ಟು ಕಟ್ಟುವ ನೆಪದಲ್ಲಿ ಅಲ್ಲಿನ ಮುಗ್ದ ಜನರಿಗೆ ತಿಳಿಯದೆಯೇ ತಲೆತಲಾಂತರದಿಂದಲೂ ತಾಯಿಯಂತೆ ಕಾಯುತ್ತಾ ಬಂದಿರುವ ಅರಣ್ಯ ಸಂಪತ್ತನ್ನು ಹೇಗೆಲ್ಲಾ ಕೊಳ್ಳೆಹೊಡೆಯುತ್ತಾರೆ? ಹುಟ್ಟಿದಾಗಿನಿಂದ ಸ್ವಂತ ಅಣ್ಣತಮ್ಮಂದಿರಂತೆ ಬಾಳುವೆ ನಡೆಸುತ್ತಾ ಬಂದಿರುವ ಅಲ್ಲಿನ ಜನ ಒಂದು ಅಣೆಕಟ್ಟಿನಿಂದ ಹೇಗೆಲ್ಲಾ ತಮ್ಮತಮ್ಮಲ್ಲೇ ಬಡಿದಾಡಿಕೊಂಡು ಒಬ್ಬರಮೇಲೊಬ್ಬರು ಶತ್ರುತ್ವ ಸಾಧಿಸುತ್ತಾರೆ? ಹಳ್ಳಿಯ ಅಮಾಯಕ ಜನರನ್ನು ಮುಗ್ದರನ್ನಾಗಿಸಿ ಅವರಿಗೆ ಆಮಿಷತೋರಿಸಿ ಹೇಗೆ ಸರಕಾರ, ಅಣೆಕಟ್ಟು ಕಟ್ಟಲು ಬಂದ ಪರವೂರಿನ ಜನ ಅವರಿಗೆ ಮೋಸ ಜೊತೆಗೆ ತಾರತಮ್ಯ ಮಾಡುತ್ತಾರೆ? ಇದೆಲ್ಲದರ ಜೊತೆ ಪ್ರಕೃತಿಯ ಜೊತೆ ನಮ್ಮ ಸಂಬಂಧ ಹೇಗಿರಬೇಕು? ಪ್ರಕೃತಿಮಾತೆ ಮುನಿದರೆ ಏನಾಗುತ್ತದೆ? ಎನ್ನುವ ಹತ್ತು ಹಲವು ಪ್ರಶ್ನೆಗಳಿಗೆ ಕಾಲ್ಪನಿಕ ಕಥೆಯೊಂದರ ಹದವನ್ನಿಟ್ಟುಕೊಂಡು ಸೊಗಸಾಗಿ ಎಲ್ಲೂ ಬೋರಾಗದಂತೆ ವಾಸ್ತವದಲ್ಲಿ ನಡೆಯುತ್ತಿರುವ ಹಲವು ವಿದ್ಯಮಾನಗಳ ಮೇಲೆ ಬೆಳಕು ಚೆಲ್ಲುವ ಮತ್ತು ದಟ್ಟ ಪಶ್ಚಿಮಘಟ್ಟದ ಮೇಲೆ ನಮಗಿರಬೇಕಾದ ಕಾಳಜಿಯ ಸುತ್ತ ಹೇಳುವ ಕಾದಂಬರಿಯೇ “ಪಶ್ಚಿಮ ಘಟ್ಟದ ತಪ್ಪಲಿನಲ್ಲಿ”.

4) ಮಲೆನಾಡಿನ ಸಂಪದ್ಭರಿತ ಮತ್ತು ಅಪರಿಮಿತ ಸಂಪತ್ತನ್ನು ಹೊರಪ್ರಪಂಚದಲ್ಲಿರುವ ನಮಗೆ ತಿಳಿಯದಂತೆ ಹೇಗೆಲ್ಲಾ ದೋಚಬಹುದು? ಅಲ್ಲಿ ಪುಂಡರು ಹೇಗೆ ಅರಣ್ಯವನ್ನು ಕೊಳ್ಳೆಹೊಡೆಯುತ್ತಿದ್ದಾರೆ? ಅದರಿಂದ ಮನುಷ್ಯಕುಲದ ಮೇಲೆ ಆಗುತ್ತಿರುವ ಭೀಕರ ಪರಿಣಾಮಗಳೇನು? ರಕ್ಷಕರೇ ಭಕ್ಷಕರಾದಾಗ ಮುಂದಿರುವ ದಾರಿ ಯಾವುದು? ತಪ್ಪೇ ಮಾಡದ ಸಾಮಾನ್ಯರು ಪುಂಡರ ಸಂಚಿಗೆ ಸಿಲುಕಿದಾಗ ಹೊರಬರಲು ದಾರಿ ಯಾವುದು? ತಾನು ಮಾಡಿದ ತಪ್ಪು ಕೊನೆಗೆ ತನಗೇ ಹೇಗೆ ಉರುಳಾದೀತು? ಎನ್ನುವುದರ ಜೊತೆಗೆ ಅಂದಿನಿಂದ ಇಂದಿನ ತನಕ ತನ್ನ ಕಬಂಧಬಾಹು ಚಾಚಿ ತನ್ನ ದಾಸರನ್ನಾಗಿ ಮಾಡಿಕೊಳ್ಳುತ್ತಿರುವ ಗಾಂಜಾ ಎನ್ನುವ ಮಾದಕ ವ್ಯಸನ ಹೇಗೆ ಇಡೀ ಸಮುದಾಯವನ್ನು, ದೇಶದ ಮುಂದಿನ ಭವಿಷ್ಯ ರೂಪಿಸುವ ಯುವಪೀಳಿಗೆಯನ್ನು ತಪ್ಪುದಾರಿಗೆಳೆಯುತ್ತಿದೆ? ಅದರಿಂದ ದೇಶದ ಮೇಲಾಗುತ್ತಿರುವ ಪರಿಣಾಮವೇನು? ಆ ದುಶ್ಚಟಕ್ಕೊಳಗಾದ ಆ ಮಕ್ಕಳ ಹೆತ್ತವರು ಪಡುವ ಯಾತನೆಗಳೇನು? ಅದರಿಂದ ಹರಡುತ್ತಿರುವ ಗುಣಪಡಿಸಲಾಗದ ಭೀಕರ ಮತ್ತೊಂದು ವ್ಯಾಧಿ ಏಡ್ಸ್ ಮಹಾಮಾರಿ ಹೇಗೆ ಹರಡುತ್ತಿದೆ? ಎನ್ನುವ ಸಾಮಾಜಿಕ ಕಳಕಳಿಯೊಂದಿಗೆ ಬಹು ಕುತೂಹಲಕಾರಿ ವಿಷಯವಾದ ಜೇನುಹುಳಗಳ ಬಗ್ಗೆ ಅಪರೂಪದ ವಿಷಯಗಳನ್ನು ತಿಳಿಸುತ್ತಾ, ಜೇನುಹುಳುಗಳ ಜೇನು ಸಂಗ್ರಹಣೆಯ ಪ್ರಮಾಣ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಾ ಬಂದಿರಲು ಅದಕ್ಕೆ ಕಾರಣ ಹುಡುಕುತ್ತಾ ಬರುವ ದೇಶದ ಪ್ರಖ್ಯಾತ ವಿಜ್ಞಾನಿ ಮತ್ತವನ ಸಂಗಡಿಗರು ಈ ವಿಷಯದ ಬಗ್ಗೆ ಮಲೆನಾಡಿನ ದಟ್ಟಾರಣ್ಯದಲ್ಲಿ ನೆಲೆಸಿರುವ ಅತ್ಯಂತ ಪ್ರಖ್ಯಾತಿ ಮತ್ತು ಕುಖ್ಯಾತಿ ಪಡೆದ “ಜೇನುಕಲ್ಲು ಗುಡ್ಡ”ದಲ್ಲಿ ಮಾಡಹೊರಡುವ ಸಂಶೋಧನೆ, ಜೇನುಹುಳುಗಳ ಬಗ್ಗೆ ವಿಜ್ಞಾನಿ ಹೇಳಿರುವ ಅತಿ ಕುತೂಹಲಕಾರಿ ಮಾಹಿತಿಗಳು, ಇದೆಲ್ಲದರ ಜೊತೆ ಅಷ್ಟು ಪರಿಚಯವಲ್ಲದ ಆದರೆ ಜನಸಾಮಾನ್ಯರಿಗೆ ತಿಳಿಯದ “ಟೈಗಾನ್” ಮತ್ತು “ಲೈಗಾನ್” ಎನ್ನುವ ತಳಿ ಪ್ರಾಣಿಯ ಬಗ್ಗೆ ಹೇಳಿರುವುದನ್ನು ಓದಿದಾಗ ಬೆಕ್ಕಸಬೆರಗಾಗುವುದು ಖಂಡಿತ. ಮೊಬೈಲ್ ತರಂಗಗಳಿಂದ ಅವುಗಳ ಸಂತತಿ ನಾಶ ಮತ್ತು ಜೇನಿನ ಸಂಗ್ರಹಣಾ ಪ್ರಮಾಣ ಕಡಿಮೆಯಾಗುತ್ತಿದೆ ಎನ್ನುವ ವಿಜ್ಞಾನಿಯ ಗುಮಾನಿ, ಸಂಶೋಧನೆ ಮಾಡುತ್ತಿರುವಾಗ ಅಕಸ್ಮಾತ್ತಾಗಿ ಕಂಡ ಗಾಂಜಾ ಬೆಳೆ ಹೇಗೆ ಇಡೀ ಕಥೆಗೆ ತಿರುವು ತಂದು ವಿಜ್ಞಾನಿ ಅತ್ಯಂತ ರೋಚಕವಾಗಿ ಕೊಲೆಯಾಗಿ ಅದು ತನ್ನ ಶಿಷ್ಯೆಯೊಬ್ಬಳ ಮೇಲೆ ಬಂದು ಆಕೆ ಹೇಗೆ ಅದನ್ನು ಮೆಟ್ಟಿನಿಲ್ಲುತ್ತಾಳೋ ಅಥವಾ ಮಾಡದ ತಪ್ಪಿಗೆ ಶಿಕ್ಷೆಯಾಗುವುದೋ ಎನ್ನುವ ಕುತೂಹಲಕಾರಿ ವಿಷಯಗಳೊಂದಿಗೆ ಸಮಾಜಕ್ಕೆ ಬೇಕಾದ ಮಾರ್ಗದರ್ಶನ ಕೊಡುವ ಇನ್ನೊಂದು ಕೃತಿಯೇ “ಜೇನು ಕಲ್ಲಿನ ರಹಸ್ಯ ಕಣಿವೆ”.

ಈ ಮೇಲಿನ ನಾಲ್ಕೂ ಕಾದಂಬರಿ ಬರೆದವರು ಗಿರಿಮನೆ ಶ್ಯಾಮರಾವ್. ಅವರು ಮಲೆನಾಡು ಸಕಲೇಶಪುರದಲ್ಲಿ ಹುಟ್ಟಿಬೆಳೆದು ಅಲ್ಲಿನ ರೀತಿರಿವಾಜುಗಳನ್ನು ಚೆನ್ನಾಗಿ ಅರಿತವರಾದ್ದರಿಂದ ಇಂತಹ ಅಮೂಲ್ಯ ಕೃತಿಯನ್ನು ಬರೆಯಲು ಸಾಧ್ಯವಾಗಿದೆ. ಮಲೆನಾಡಿನ ಬಗ್ಗೆ ಅಪರಿಮಿತ ಪ್ರೀತಿ ಮತ್ತು ಭಕ್ತಿಯಿದ್ದವರು ನಿಸ್ಸಂಶಯವಾಗಿ ಎಷ್ಟು ಬಾರಿ ಬೇಕಾದರೂ ಓದಬಹುದಾದ ಅಮೂಲ್ಯ ಸರಕುಗಳಿವು. ಈ ನಾಲ್ಕೂ ಕಾದಂಬರಿಗಳ ವಿಶೇಷತೆ ಎಂದರೆ ಎಲ್ಲೂ ಅನವಶ್ಯಕವಾಗಿ ಆತುರಕ್ಕೆ ಬಿದ್ದು ಹೇಳಬಾರದ್ದನ್ನು ಹೇಳಿಲ್ಲ,ಹೇಳುವುದನ್ನು ಅಚ್ಚುಕಟ್ಟಾಗಿ ಹೇಳುತ್ತಾ ಯಾವುದೇ ಉದ್ವೇಗವಿಲ್ಲದೆ ನಡೆಸುವ ಪಾತ್ರಗಳು ಮತ್ತು ಸನ್ನಿವೇಶಗಳು ಲೇಖಕರ ಚಾತುರ್ಯತೆಗೆ ಹಿಡಿದ ಕನ್ನಡಿ. ಇದನ್ನು ಓದುವಾಗ ಎಲ್ಲೋ ಒಂದು ಕಡೆ ಕಾಡು ಮತ್ತದರ ಬಗ್ಗೆ ಅನೂಹ್ಯವಾಗಿ ಬರೆದ ಇನ್ನೊಬ್ಬ ದೈತ್ಯ ತೇಜಸ್ವಿ ನೆನಪಾಗುತ್ತಾರಾದರೂ ಲೇಖಕರು ತನ್ನತನವನ್ನು ಬಿಟ್ಟುಕೊಡದೇ ಇರುವುದು ಎದ್ದು ಕಾಣುತ್ತದೆ.

Mohan Kumar D N

Advertisements