‘ತೆಂಕನಿಡಿಯೂರಿನ ಕುಳುವಾರಿಗಳು’- ವ್ಯಾಸರಾವ್ ನಿಂಜೂರ್

tenkanidiyoorina.jpg

ಒಂದೂರಿನ ಒಂದಿಷ್ಟು ಜನರ ಕುರಿತು..

ಅತ್ಯಂತ ಸಮಗ್ರ ದೃಷ್ಟಿ ಚಿತ್ತಕೋನ ಇರುವರು ಮಾತ್ರ ತನ್ನ ಸುತ್ತಮುತ್ತಲ ಪರಿಸರದ ಬಗ್ಗೆ ಆದ್ಯಂತವಾಗಿ ಬರೆಯಲು ಸಾಧ್ಯವಾದೀತು, ಇಲ್ಲದೆ ಹೋದರೆ ಓದುವವರಿಗದು ಅಪಥ್ಯವಾಗುವುದು ಮಾತ್ರವಲ್ಲದೇ ಲೇಖಕನ ದೃಷ್ಟಿಕೋನದ ಬಗ್ಗೆ ಅನುಮಾನ ಮತ್ತು ಅಪಸ್ವರ ಬರುವುದು ನಿಸ್ಸಂಶಯ. ಏನು ಮತ್ತು ಎಷ್ಟು ಅಂತ ನಮ್ಮ ಸುತ್ತಮುತ್ತಲ ಪರಿಸರ, ಅದರ ಚಿತ್ರಣ, ಜನರ ಜೀವನ, ಅವರ ದಿನಚರಿ ಬಗ್ಗೆ ಬರೆಯಲು ಸಾಧ್ಯ ಹೇಳಿ? ಇದು ನಾವು ತಿಳಿದಂತೆ ಅಷ್ಟು ಸುಲಭ ಸಾಧ್ಯವಲ್ಲ. ಈಗಾಗಲೇ ಈ ವಿಷಯವನ್ನು ಕನ್ನಡದ ಹೆಚ್ಚು ಕಡಿಮೆ ಎಲ್ಲಾ ಸಾಹಿತಿಯೂ, ಲೇಖಕರು ಆದಷ್ಟು ತಮ್ಮ ಕೃತಿಗಳಲ್ಲಿ ಬರೆದದ್ದಾಗಿದೆ. ಒಂದು ಕಥೆಯೋ, ಕಾದಂಬರಿಯೋ, ನೀಳ್ಗವಿತೆಯೋ ಅಥವಾ ಹಲವು ಪ್ರಾಕಾರದ ಸಾಹಿತ್ಯ ರೂಪಕಗಳಲ್ಲಿ ಬರೆಯುವುದು ಕೇವಲ ತನ್ನ ಶಕ್ತಿಸಾಮರ್ಥ್ಯದಿಂದ ಮತ್ತು ದ್ಯೋತಕಶಕ್ತಿಯಾದ ತನ್ನ ಆಲೋಚನಾಲಹರಿಯಿಂದ ಮಾತ್ರ ಸಾಧ್ಯ. ಮತ್ತು ಈ ಪ್ರಾಕಾರಗಳಲ್ಲಿ ಲೇಖಕನ ಆಲೋಚನೆಗಳಿಗನುಗುಣವಾಗಿ ಕಥೆಯ ಹಂದರ ಮತ್ತು ಪಾತ್ರಗಳ ಏರಿಳಿತವಾಗುತ್ತದೆ. ಆದರೆ ತನ್ನ ಸುತ್ತಮುತ್ತಣ ಜೀವಂತ ವ್ಯಕ್ತಿಚಿತ್ರಣ, ಅಲ್ಲಿ ನಡೆಯುವ ನೈಜ್ಯ ಘಟನೆ ಕುರಿತು ಬರೆಯುವುದು ಎಂದರೆ ಎಂಥಹವರಿಗೂ ಹದಿನಾರಿಂಚಿನ ಗುಂಡಿಗೆ ಬೇಕಾಗುತ್ತದೆ! ಈ ರೀತಿ ಇದ್ದದ್ದನ್ನು ಇದ್ದ ಹಾಗೆ ಹೇಳಿ, ತನ್ನ ಅನುಭವಕ್ಕೆ ಬಂದ ವ್ಯಕ್ತಿಗಳನ್ನು, ಅವರ ವ್ಯಕ್ತಿತ್ವವನ್ನು ಅಕ್ಷರರೂಪಕ್ಕಿಳಿಸಿದ ಕೀರ್ತಿ ನಮಗೆ ತಿಳಿದಂತೆ ಕುವೆಂಪು, ಕಾರಂತ, ಲಂಕೇಶ್, ತೇಜಸ್ವಿಯಂತ ಕೆಲವೇ ಕೆಲವು ನಿಷ್ಠುರವಾದಿಗಳಿಗಿತ್ತಾದರೂ ಆ ಸಾಲಿನಲ್ಲಿ ನಿಲ್ಲುವ ಮತ್ತೊಬ್ಬ ಲೇಖಕರೆಂದರೆ ವ್ಯಾಸರಾವ್ ನಿಂಜೂರ್!

ಯಾವುದೇ ಪೂರ್ವಾಗ್ರಹಪೀಡಿತನಾಗದೆ, ಮುಲಾಜಿಗೆ ಬೀಳದೆ ತಾನು ಹುಟ್ಟಿ ಬೆಳೆದ ಊರಾದ ತೆಂಕನಿಡಿಯೂರಿನ ಜನರ ಜೀವಂತ ಚಿತ್ರಣವನ್ನು ನಿರ್ಭಿಡೆಯಿಂದ ಚಿತ್ರಿಸಿಕೊಡುವುದಲ್ಲದೇ, ಹಲವು ವಿಶೇಷ ವ್ಯಕ್ತಿಗಳ ನೈಜ್ಯ ಪರಿಚಯ ಮತ್ತವರ ಸಂಪೂರ್ಣ ವ್ಯಕ್ತಿತ್ವವನ್ನು ಎಳೆಎಳೆಯಾಗಿ ತೆರೆದಿಡುತ್ತಾ ಹೋಗುತ್ತಾರೆ. ಓದುತ್ತಾಹೋದಂತೆ ಓದುಗನಿಗೆ ಎಲ್ಲೂ ಕೃತ್ರಿಮವಾಗಲೀ, ಸ್ವಜನಪಕ್ಷಪಾತವಾಗಲಿ, ಭಿಡೆಗೆ ಬಿದ್ದಂತೆ ಅನಿಸದೆ ಪಾತ್ರಗಳನ್ನು ಸಮತೋಲಿಸಿ ಸಂಭಾಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು ವಾಸ್ತವ ಚಿತ್ರಣ ಕಟ್ಟಿಕೊಡುವ ಕಾದಂಬರಿಯೋ ಅಥವಾ ಕಾಲ್ಪನಿಕವೋ ಎಂದು ಓದುಗರು ಗೊಂದಲಕ್ಕೆ ಬಿದ್ದರೆ ಅದು ಓದುಗರ ಚ್ಯುತಿಯಾದೀತೆ ಹೊರತು ನಿಂಜೂರರ ಸಹಜ ಬರವಣಿಗೆಯ ಕುರಿತ ಆಕ್ಷೇಪವಾಗುವುದಿಲ್ಲ, ಅಷ್ಟು ಸೊಗಸಾಗಿ ನಿರೂಪಿಸಿದ್ದಾರೆ ಕಥಾನಕವನ್ನು. ನನಗೆ ತಿಳಿದಮಟ್ಟಿಗೆ, ಜೀವಂತ ವ್ಯಕ್ತಿ ಬಂದು ತನ್ನ ಪಾತ್ರವನ್ನು ನಿಮ್ಮ ಕಥೆಯಲ್ಲಿ ಕಟ್ಟಿಕೊಡುವಿರಾ? ಎಂದು ಒಬ್ಬ ಲೇಖಕನನ್ನು ಕೇಳಿ ಆತನಿಂದ ತನ್ನ ಬಗ್ಗೆ ಬರೆಸಿಕೊಂಡ ಏಕೈಕ ಕೃತಿ ಎಂದರೆ ಇದೇ ಇರಬೇಕು ಎನಿಸುತ್ತದೆ!

ಇಡೀ ಕಾದಂಬರಿಯ ಇನ್ನೊಂದು ಮಹತ್ವ ಅಂಶವೆಂದರೆ ಇದನ್ನು ತನ್ನ ಆಡು ಭಾಷೆಯಲ್ಲೇ ಬರೆದಿರುವುದು. ನಾವು ನೀವು ಅಷ್ಟಾಗಿ ಕೇಳಿರದ ಕರಾವಳಿ ಜನರ ಹಲವು ಹೊಸ ಪದಗಳು ಹದವಾಗಿ ಬೆಸೆದುಕೊಂಡು ಇಡೀ ಕಾದಂಬರಿಗೆ ಅವರ್ಣನೀಯ ಸೌಂದರ್ಯ ಕಲ್ಪಿಸಿಕೊಟ್ಟಿದೆ. ಓದುವಾಗ ಹೊಸಚೈತನ್ಯವಿತ್ತು, ಪದಗಳ ಪರಿಮಳ ಓದುಗನನ್ನು ಆವರಿಸದಿದ್ದರೆ ನೋಡಿ! ಮೂಲಭೂತವಾಗಿ ಬಯಲುಸೀಮೆಯ ಜನ ನಾವಾದ್ದರಿಂದ ಕರಾವಳಿಯ ಗ್ರಾಮ್ಯ ಸೊಗಡಿನ ಭಾಷೆ ನಮಗೆ ಸದಾ ಕೇಳಿ ಸಂಭ್ರಮಿಸುವಂತದ್ದೇ ಆಗಿರುತ್ತದೆ. ಎಲ್ಲಾ ಭಾಷೆಗೂ, ಅದರ ನುಡಿಗೂ (ಮಾತಾಡುವ ಅರ್ಥದಲ್ಲಿ) ಅದರದ್ದೇ ಆದ ಚಂದವಿರುತ್ತದೆ, ಲಯಬದ್ಧತೆಯಿರುತ್ತದೆ. ಆದರೆ ಮಲೆನಾಡು ಮತ್ತು ಕರಾವಳಿ ಜನರ ಭಾಷೆ ನಮಗೆ ಸದಾ ಕೌತುಕಾಸಕ್ತಿ ಬೆರೆತ ಬೆರಗು ಮೂಡಿಸುವುದು ಅತಿಶಯೋಕ್ತಿಯೇನಲ್ಲ.

ಕಥೆಗೆ ಗಟ್ಟಿತನ ಬರುವುದು ತಾನು ಹುಟ್ಟಿಬೆಳೆದ ಊರಿನ ವಾಸ್ತವ ಚಿತ್ರಣಕ್ಕೆ ನಿಂಜೂರರು ದೂರದ ಮುಂಬೈನ ಚಿತ್ರಣವನ್ನು ತಂದಿರುವುದಲ್ಲದೆ ಅದರ ವಾಸ್ತವಿಕ ಚಿತ್ರಣ ಕಟ್ಟಿಕೊಟ್ಟಿರುವುದೇ ಆಗಿದೆ. ಒಂದು ಕಡೆ ತನ್ನೂರಿನ ಚಿತ್ರಣವನ್ನೀಯುತ್ತಾ ಸಾವಿರ ಕನಸ್ಸು ಕಟ್ಟಿಕೊಂಡು ಮುಂಬೈಗೆ ಹಾರುವ ಅಸಂಖ್ಯಾತ ಯುವಕರ ಜೀವನವನ್ನು ಅವರು ಅನುಭವಿಸುವ ಕಷ್ಟಕಾರ್ಪಣ್ಯವನ್ನು ತಲ್ಲಣ ತವಕ ತುಮುಲ ಅಭದ್ರತೆಯನ್ನು ಜೊತೆಜೊತೆಗೇ ಕಟ್ಟಿಕೊಡುವ ನಿಂಜೂರರ ನೈಪುಣ್ಯತೆಗೆ ಬೆಕ್ಕಸ ಬೆರಗಾಗಲೇ ಬೇಕು. ಕಥೆಯ ಓಘಕ್ಕೆ ಎರಡೂ ಚಿತ್ರಣವನ್ನು ಸಮಗ್ರವಾಗಿ ಸಮರ್ಪಕವಾಗಿ ನೇಯ್ದಿದ್ದಾರೆ. ಇದು ನಿಂಜೂರರು ಬಹುಕಾಲ ಮುಂಬೈನಲ್ಲಿ ಕೆಲಸ ಮಾಡಿದುದರ ಪರಿಣಾಮ. ಇತ್ತಕಡೆ ಕರುನಾಡಿಗೆ ಅತ್ತಕಡೆ ಮುಂಬೈ ಕನ್ನಡಿಗರಿಗೆ ಕೊಂಡಿಯಾಗಿ ಕೆಲಸ ಮಾಡಿದವರಲ್ಲಿ ಮತ್ತು ತನ್ನ ಬಹಳಷ್ಟು ಸಾಹಿತ್ಯಕೃಷಿಯಲ್ಲಿ ಮುಂಬೈ ಸಹ್ಯ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ನಿರೂಪಿಸಿದವರಲ್ಲಿ ಇವರ ಪಾತ್ರ ದೊಡ್ಡದು.

ಕುಳುವಾರಿಗಳನ್ನು ನಿಂಜೂರರು ನಿರ್ವಹಿಸಿರುವ ಬಗೆ ಅನನ್ಯವಾದುದು. ಹಾಂ! ಅಂದ ಹಾಗೆ ಕುಳುವಾರಿಗಳು ಎಂದರೆ ನಮ್ಮ ಕಡೆ “ಆಸಾಮಿಗಳು” ಎನ್ನುತ್ತೀವಲ್ಲ? ಆ ಅರ್ಥ ಬರುತ್ತದೆ. ಒಮ್ಮೆ ಓದಿ ನೋಡಿ.

– Mohan Kumar D N

Advertisements

About pustakapremi

ಪುಸ್ತಕ ಪರಿಚಯ, ವಿಮರ್ಶೆ, ಅನಿಸಿಕೆ ಮತ್ತು ಮಾಹಿತಿ ವೇದಿಕೆ. ಪುಸ್ತಕಪ್ರೇಮಿಗಳಿಗೊಂದು ಸಮೃದ್ಧ ತಾಣ.
This entry was posted in ಕನ್ನಡ, ವ್ಯಾಸರಾವ್ ನಿಂಜೂರ್, Uncategorized and tagged , . Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s