ನಮ್ಮ ಪೂರ್ವಜರಾದ ಮಂಗಗಳಿಗೂ ನಮ್ಮಂತೆ ಸಹಜೀವನ, ನಾನು, ನನ್ನದು ಎಂಬ ಭಾವನೆಗಳಿವೆಯೇ?? ತಮ್ಮ ಸುತ್ತಲಿರುವ ನೈಸರ್ಗಿಕ ಗಿಡಮೂಲಿಕೆಗಳು ಮತ್ತು ಅವುಗಳ ಉಪಯೋಗದ ಬಗ್ಗೆ ಅವುಗಳಿಗೆಷ್ಟು ಗೊತ್ತು, ಪ್ರಕೃತಿಯನ್ನು ಅವು ಎಷ್ಟು ಸಮರ್ಪಕವಾಗಿ ಬಳಸಿಕೊಳ್ಳುತ್ತವೆ? ಹೀಗೆ ಮಂಗಗಳ ಅಧ್ಯಯನದಿಂದ ಆರಂಭವಾಗುವ ಕಾದಂಬರಿ, ರಾಮಾಯಣ ನಡೆದಿರುವುದು ನಿಜವೇ, ಲಿಪಿಯೇ ಇಲ್ಲದ ಸಮಯದಲ್ಲಿ ಅದು ನಡೆದಿತ್ತು ಎನ್ನಲು ಪುರಾವೆಗಳೇನಿವೆ? ರಾಮಾಯಣದ ಹನುಮಾನ್ ಗೂ ಅಂಡಮಾನ್ ಗೂ ಎಲ್ಲಿಯ ಸಂಬಂಧ? ಹೀಗೆ ಅದೆಷ್ಟೋ ಕೂತೂಹಲ ವಿಚಾರಗಳು ಕಾದಂಬರಿಯಲ್ಲಿವೆ.

ಮಂಗಗಳ ಅಧ್ಯಯನದಲ್ಲಿ ತೊಡಗುವ ರಾಣಾ, ಅವೇ ಮಂಗಗಳನ್ನು ಬಳಸಿ, ಮಾಹಿತಿಗಳನ್ನು ಸಂರಕ್ಷಿಸುತ್ತಾರೆ. ಇದರ ಮಧ್ಯದಲ್ಲಿ ಕಾಣೆಯಾಗುವ ಅವರು ಕೊಲೆಯಾಗುತ್ತಾರೆಯೇ? ಜರವಾ ಆದಿವಾಸಿಗಳ ಜೀವನದ ಅಧ್ಯಯನಕ್ಕೆ ತೊಡಗಲು ಅವರ ಅಭೇದ್ಯ ಕೋಟೆಯಲ್ಲಿ ನುಸುಳಿದ ಮೀರಾ, ಅವರ ನಿಗೂಢ ಬದುಕನ್ನು ಅರಿಯಲು ಯತ್ನಿಸುತ್ತಿರುವುದರ ಹಿಂದಿರುವ ಕಾರಣವೇನು, ಜರವಾಗಳೇಕೆ ಅಪರಿಚಿತರನ್ನು ತಮ್ಮ ಪ್ರದೇಶದಲ್ಲಿ ಬಿಟ್ಟುಕೊಳ್ಳದೇ ಕೊಲ್ಲುತ್ತಾರೆ, ಇದಕ್ಕೂ ರಾಮಾಯಣದ ಹನುಮಾನ್ ಜನಾಂಗಕ್ಕೂ ಸಂಬಂಧವಿದೆಯೇ?

ಹಿಮಾಲಯದಲ್ಲಿ ಬದುಕುವ ಅಶ್ವಿನಿಗಳ ವೈದ್ಯಶಾಸ್ತ್ರವನ್ನು ಅರಿಯಲು ಜೀವದ ಹಂಗು ತೊರೆದು ಅವರ ಗುಂಪು ಸೇರುವ ಡಾ. ಭಟ್ ಅವರ ಉದ್ದೇಶವೇನು? ಈ ಮೂರು ಜನರ ಅಧ್ಯಯನಗಳಿಗೆ ಅನುದಾನ ಬಿಡುಗಡೆ ಮಾಡುತ್ತಾ ಮಾಹಿತಿಗಳಿಗಾಗಿ ಒತ್ತಡ ಹೇರುವ ಪ್ರೈಸ್ ಲಾರೆನ್ಸ್ ನ ಕುಹಕವೇನು, ಅದರಿಂದ ಅವರಿಗೇನು ಲಾಭ? ನಮ್ಮ ದೇಶದ ಜ್ಞಾನದ ಲೂಟಿ ಹೇಗೆ ನಡೆಯುತ್ತಿದೆ? ರಾಮಾಯಣ ನಡೆದಿದ್ದು ನಿಜವೆಂದಾದರೆ ಸಂಜೀವಿನಿ ಇರಲೇಬೇಕಲ್ಲ. ಹೌದೆಂದಾದರೆ ಅದು ಭಾರತದ ಯಾವ ಪ್ರದೇಶದಲ್ಲಿದೆ, ಅದೆಷ್ಟು ಸಂಶೋಧನೆಗಳು ನಡೆದಿದ್ದರೂ ಪತ್ತೆಯಾಗಿಲ್ಲ ಏಕೆ, ಸಂಜೀವಿನಿ ಎಂಬ ಔಷಧಿ ಬರೀ ಭಾವನಾತ್ಮಕವಾಗಿ ಬೆಳೆಸಿಕೊಂಡು ಬಂದಿರುವ ಕಲ್ಪನೆಯೇ? ಎಂಬ ಪ್ರಶ್ನೆಗಳಿಗೆ ಸಿಗುವ ಉತ್ತರಗಳು ನಮ್ಮನ್ನು ನಿಬ್ಬೆರಗಾಗಿಸುತ್ತದೆ. ಚರಿತ್ರೆ, ಇತಿಹಾಸ, ವೈಜ್ಞಾನಿಕ ವಿಷಯಗಳ ಜೊತೆಗೆ ಪತ್ತೇದಾರಿ, ಥ್ರಿಲ್ಲರ್ ರೀತಿ ಇರುವ ಕಪಿಲಿಪಿಸಾರ ಕಾದಂಬರಿ, ಬಿಟ್ಟೂಬಿಡದೆ ಓದಿಸಿಕೊಂಡು ಹೋಗುತ್ತದೆ.

ಡಾ. ಕೆ. ಎನ್ ಗಣೇಶಯ್ಯ ಅವರ ನಿರೂಪಣೆ, ಕಥೆಯನ್ನು ಹೆಜ್ಜೆ ಹೆಜ್ಜೆಗೂ ರೋಚಕವಾಗಿಸುವ ಪರಿ ಅನನ್ಯವಾದದು. ವಿಶಿಷ್ಟವಾದ ಕಾದಂಬರಿ. ನೀವೂ ಓದಿ. ನಮಸ್ಕಾರ

Rampura Raghothama

Advertisements