“ಮೂಕಜ್ಜಿಯ ಕನಸುಗಳು” ಚಂದದ ಕಾದಂಬರಿ. ಓದಲು ಸರಳ ಭಾಷೆಯಲ್ಲೇ ಇದ್ದರೂ ಅರ್ಥವಾದಂತೆ ಕಂಡರೂ ಓದುತ್ತಾ ಹೋದಂತೆ ಅದರಲ್ಲಿನ ವಿಚಾರಗಳು ಪುನಃ ಪುನಃ ಓದಿದ್ದನ್ನೇ ಓದುವಂತೆ ಮಾಡುತ್ತವೆ .. ಕಥೆಯ ಮುಖ್ಯಪಾತ್ರ ಮೂಕಜ್ಜಿಯ ವಿಚಾರಧಾರೆಗಳು ಯಾವುದೇ ವಿಷಯವನ್ನು ಅವರು ವಿಶ್ಲೇಷಿಸುವ ಪರಿಯನ್ನು ಕಾರಂತಜ್ಜ ಮನನೀಯವಾಗಿ ಚಿತ್ರಿಸಿದ್ದಾರೆ ….

ಮೂಕಜ್ಜಿಯ ಮಾತುಗಳಲ್ಲಿ ಒಂದು ರೀತಿಯ ಯಾತನೆಯಿದೆ. ಅಲ್ಲಿಯೇ ಒಂದು ಸಂತೋಷವಿದೆ. ಧೈರ್ಯವಿದೆ. ಕೆಲವೊಂದು ವಿಚಾರಗಳಲ್ಲಿ ತಿರಸ್ಕಾರವೂ ಇದೆ. ಎಲ್ಲವನ್ನೂ ಅವರು ಮುಲಾಜಿಲ್ಲದೆ ನೇರವಾಗಿ ಹೇಳುವುದೇ ಚಂದ. ಸಂಸ್ಕೃತಿ ಆಚರಣೆ ನಂಬಿಕೆಗಳ ವಿಚಾರದಲ್ಲಿ ಮೂಕಜ್ಜಿ ಮುಚ್ಚುಮರೆಯಿಲ್ಲದೆ ಪರಾಂಬರಿಸುವ ಚಿಂತನೆ ವೈಚಾರಿಕತೆಯ ನಿಟ್ಟಿನಲ್ಲಿ ಓದಿದಾಗ ಮಾತ್ರ ಚಿಂತನೆಗೆ ಹಚ್ಚುತ್ತದೆ …

ಸೃಷ್ಟಿ … ಜಗತ್ತು… ಮನುಷ್ಯರ ಬಗ್ಗೆ ಒಂದು ತೆರನಾದ ಅಭಿಪ್ರಾಯವಾದರೆ ದೇವರು … ಅವರ ಅವತಾರದ ಬಗ್ಗೆಯೇ ಇನ್ನೊಂದು ರೀತಿಯಲ್ಲಿ ಅರ್ಥೈಸುವ ಅಜ್ಜಮ್ಮನ ವಿಚಾರಗಳನ್ನು ವೈಚಾರಿಕತೆಯಲ್ಲಿ ಅರ್ಥೈಸಿದಾಗ ಮಾತ್ರ ಅದರ ಚಿಂತನೆಗೊಂದು ಅರ್ಥ ಸಿಗುತ್ತದೆ …. ಮೂಕಜ್ಜಿ ಯಾವುದನ್ನೂ ಹಗುರವಾಗಿ ಪರಿಗಣಿಸದೆ ಅಂತಃಚಕ್ಷುವಿಗೆ ಕಾಣುವ ಮಾತುಗಳು ಎಂತಹ ಸುಸಂಸ್ಕೃತ ಯೋಚನೆಗಳ ಆಗರ ಎಂದೆನಿಸುವುದರಲ್ಲಿ ಸುಳ್ಳಿಲ್ಲ … ಗಂಡು ಹೆಣ್ಣು ಸಂಸಾರ ನಿಯಮದಲ್ಲಿ ಅಜ್ಜಮ್ಮ ಹೊಂದಿರುವ ಉದಾತ್ತಭಾವ ಯೋಚನೆಗೆ ಅರ್ಹವಾದುದಾಗಿದೆ …

ಮೂಕಜ್ಜಿಯ ಬಗ್ಗೆ ಎಷ್ಟು ಹೇಳಿದರೂ ಸಾಲದು. ಅದನ್ನು ಓದಿಯೇ ಅನುಭವಿಸಬೇಕು …

Sapna Vamshi

Advertisements