ಪೆರು: ಒಂಚೂರು !
==============

ಜಯಂತ ಕಾಯ್ಕಿಣಿಯವರ ’ಭಾವನಾ’ ಳ ಸಂಗಕ್ಕೆ ಬಿದ್ದಾಗ ಈ ಹೆಸರನ್ನು ಕಂಡಿದ್ದೆನೇನೋ ಅನ್ನುವ ಒಂದು ಅನುಮಾನ. ಹೆಸರು ನೋಡಿ ಹುಡುಗನಿರಬಹುದೇನೋ ಅನ್ನುವ ಕುತೂಹಲ. ಹಾಗೆ ಇತ್ತೀಚಿನವರೆಗೂ ಕಾಡಿದ ಆ ಹೆಸರು: ’ನೇಮಿಚಂದ್ರ’ !!

ಅದು ಅವನಲ್ಲ, ಆಕೆ……… ಸರಕಾರೀ ಸ್ವಾಮ್ಯದ ಒಂದು ಸಂಸ್ಥೆಯಲ್ಲಿ ಎಂಜಿನಿಯರ್ರು, ಕನ್ನಡದ renowned ಕಥೆಗಾರ್ತಿ, ಟ್ರಾವೆಲಾಗ್ ಬರೆದಾಕೆ ಅಂತೆಲ್ಲಾ ಇತ್ಯೋಪರಿಗಳು ಗೊತ್ತಾದ್ದು ತೀರಾ ಇತ್ತೀಚೆಗೆ !

’ಪೆರುವಿನ ಪವಿತ್ರ ಕಣಿವೆಯಲ್ಲಿ’ ಅವರ ಹೆಜ್ಜೆ ಜಾಡು ಹಿಡಿದೆ……. ಆ ದಕ್ಷಿಣ ಅಮೇರಿಕಾ, ಆ ಪೆರು, ಆ ಇಂಕಾ ಸಾಮ್ರಾಜ್ಯ, ಆ ಅಮೇಜಾನ್ ನದಿ, ಆ ನಾಸ್ಕಾ, ಆ ಕೋಸ್ಕೋ, ಆ ಇಕಿಟಾಸ್, ಆ ಮಾಚು-ಪಿಚು ಗಳೆಲ್ಲಾ ಸೇರಿ ಕಿಚಪಿಚ ಸದ್ದಾಗಿಸಿ ಕಾಡಿಬಿಟ್ಟವು !

ಇದು ಪ್ರವಾಸ ಕಥನಕ್ಕಿಂತ ಮಿಗಿಲಾಗಿ ಇತಿಹಾಸ ಕಥನ !
KR ಮಾರ್ಕೆಟ್ಟಲ್ಲಿ ಇನ್ನೂರಾ ಹತ್ತನೇ ನಂಬರು ಬಸ್ಸು ಹತ್ತಿ, ಆ ಅದೋ ಕಲಾಸಿಪಾಳ್ಯ, ಇದು ಮಕ್ಕಳಕೂಟ ಸರ್ಕಲ್ಲು, ಮುಂದಿನ್ಸ್ಟಾಪು ಉಮಾ ಥಿಯೇಟ್ರು, (ಒಂದ್ಕಾಲ್ದಲ್ಲಿ ಬರೀ ಕನ್ನಡಾ ಫಿಲಂಸೇ ಹಾಕ್ತಿದ್ರು…..ಇವಾಗ ಕ್ಲೋಸ್ಮಾಡವ್ರೆ), ರಾಂಕ್ರಿಷ್ಣಾಶ್ರಮ್ದತ್ರ ನಿಲ್ಸ್ತೀರಲ್ಲಾ….?, (ಇಲ್ಲಿಳ್ಕೊಂಡು ಲೆಫ್ಟ್ಗೋದ್ರೆ ಗಾಂಧೀಬಜಾರು), ವಿಕ್ಟೋರಿಯಾ ಹಾಸ್ಪಿಟ್ಲತ್ರ ಹೋಗ್ಬೇಕಿತ್ತು…..ಎಲ್ಲಿಳ್ಕೋಬೇಕು ?, ನ್ಯಾಷನಲ್ ಕಾಲೇಜು ಇಲ್ಲಿಂದ ಹತ್ರಾನಾ ? (ನೀವೊಂದ್ಕೆಲ್ಸಾ ಮಾಡಿ…. ವಾಣಿವಿಲಾಸ್ ಸ್ಟಾಪಲ್ಲಿಳ್ಕೊಂಡು ಎಡಕ್ಕೋಗಿ…….200 ಮೀಟ್ರು…. ಆಯ್ಯೋ ಇದುಕ್ಕಿಂತಾ ನೀವು ಮೆಟ್ರೊದಲ್ಲೇ ಹೋಗ್ಬೋದಿತ್ತಲ್ಲ…. ಕಾಲೇಜೆದ್ರಿಗೇ ಮೆಟ್ರೋ ಸ್ಟೇಷನ್ನು….), ನೆಟ್ಕಲ್ಲಪ್ಪಾದತ್ರ ನಿಲ್ಸಿ….., ಯಾರ್ರೀ ಕಟ್ಟೇ ಬಳಗ ಎನ್ನಾರ್ಕಾಲೋನೀ…..ಇಳ್ಕೊಳ್ರೀ…… ಅಂತೆಲ್ಲಾ ಅಂತರಂಗ-ಬಹಿರಂಗವಾಗಿ ಮಾತಾಡಿಕೊಳ್ಳುವಷ್ಟ್ರಲ್ಲಿ ಕೊನೇಸ್ಟಾಪು ಬಂದಿರುತ್ತಲ್ಲಾ…… ಹಂಗೇ ಓದುಸ್ಕೊಂಡೋಗುತ್ತೆ ಈ ಪುಸ್ತಕ….. ಪೆರುವಿನ ಭೂತ ಭವಿತ ವರ್ತಮಾನವನ್ನೆಲ್ಲಾ ಬುಕ್ಕಿನಲ್ಲಿ ಬಟಾಬಯಲಾಗಿಸಿದ್ದಾರೆ ನೇಮಿಚಂದ್ರ………

ಅಂದಹಾಗೆ ಒಂದು ಕಾಕತಾಳೀಯ ಅಂದ್ರೆ: ನೇಮಿಚಂದ್ರರು ಈ ಪ್ರವಾಸ ಮುಗಿಸಿ ಬಂದು ಮೂರು ತಿಂಗಳಿಗೆ ಪೆರುವಿನಲ್ಲಿ ರಿಕ್ಟರ್ ಮಾಪನದ 8 ಚಿಲ್ಲರೆ ಮೊತ್ತಕ್ಕೆ ಭೂಕಂಪವಾಗಿತ್ತಂತೆ….. ಅದೇನಾಶ್ಚರ್ಯವೋ, ನಿನ್ನೆಯಲ್ಲ ಮೊನ್ನೆ ಪೆರುವಿನ ಲಿಮಾದ ಬಳಿ 7.3ರ ಭೂಕಂಪವಾಗಿದೆ !

’ಕಾಲುಹಾದಿಯ ಕೋಲ್ಮಿಂಚುಗಳು’ ಅಂತ ನೇಮಿಚಂದ್ರರ ಒಂದು ಪುಸ್ತಕ. ಜಗತ್ತು ಕಂಡ ಅಪ್ರತಿಮ ಮಹಿಳಾ ವಿಜ್ಞಾನಿಗಳ ಬಗ್ಗೆ ಬರೆದದ್ದು. ಬರಿಯ ಪುಸ್ತಕವನ್ನು ಈಗ ನಾನೂ ಬರೆಯಬಲ್ಲೆ……. ಸಂತೆಹೊತ್ತಿಗೆ ಮೂರು ಮೊಳ ಅನ್ನುವ ಹಾಗೆ……. ಆದರೆ ನೇಮಿಚಂದ್ರರು ಹಾಗಲ್ಲ. ಆಕೆ ಆ ಪುಸ್ತಕ ಬರೆಯಲು ಆಯ್ದುಕೊಂಡ ಮಹಿಳಾ ವಿಜ್ಞಾನಿಗಳ nativಗೆ/ಕಾರ್ಯಕ್ಷೇತ್ರಕ್ಕೇ ಹೋಗಿ ಮಾಹಿತಿಯ ಕಣಜವನ್ನು ಹೊತ್ತು ತಂದಿದ್ದಾರೆ. ಅದು commitment ಅಂದ್ರೆ !!

ಮರಿಯಾ ರಿಚ್ಚಿ ಅಂತೊಬ್ಬ ಜರ್ಮನಿಯ ವಿಜ್ಞಾನಿ/ಪುರಾತತ್ವ ಸಂಶೋಧಕಿ. ಆಕೆ ತನ್ನ ಬದುಕಿನ ಅಮೂಲ್ಯ 40 ವರ್ಷಗಳನ್ನು ಪೆರುವಿನ ’ನಾಸ್ಕಾ’ (nazca)ದ ಶುಷ್ಕ ಪರಿಸರದಲ್ಲಿ ಕಳೆದಳು. ಸುಮ್ಮನೇ ಕಳೆಯಲಿಲ್ಲ. ’ನಾಸ್ಕಾ ಆಕೃತಿಗಳು’ (nazca lines) ಎಂದೇ ಹೆಸರಾದ, ಇಂಕಾ ಸಾಮ್ರಾಜ್ಯದ ಜನತೆ ಸರಿಸುಮಾರು ಕ್ರಿಸ್ತ ಪೂರ್ವ 100 ಮತ್ತು ಕ್ರಿಸ್ತಶಕ 800ರ ವರೆಗೆ ನಾಸ್ಕಾದ ಆ ಭಾರೀ ಬಯಲುಗಳಲ್ಲಿ, ಬೆಟ್ಟಗಳ ಮೇಲೆ, larger than the life ಅನ್ನುವ ಗಾತ್ರಗಳಲ್ಲಿ (ಕನಿಷ್ಠ 310 ಅಡಿಗಳಿಂದ ಗರಿಷ್ಟ 1200 ಅಡಿಗಳು – ವಿಮಾನ/ಬಲೂನ್ಗಳನ್ನೇರದ ಹೊರತು, ನೆಲದ ಮೇಲೆ ನಿಂತು ಇವುಗಳನ್ನು ಕಾಣಲು ಸಾಧ್ಯವಿಲ್ಲ) ಸುಮಾರು 450 ಚದುರ ಕಿಲೋಮೀಟರು ವ್ಯಾಪ್ತಿಯಲ್ಲಿ ಕೊರೆದಿಟ್ಟ ಆಕೃತಿಗಳನ್ನು ವೈಜ್ಞಾನಿಕವಾಗಿ ಸಂಶೋಧಿಸಿ ಜಗತ್ತಿಗೆ ಪರಿಚಯಿಸಿದಳು

peruvina.jpg

ಈ ಮರಿಯಾ ರಿಚ್ಚಿ ಎಂಬ ಕೋಲ್ಮಿಂಚನ್ನು ತಮ್ಮ ಕಾಲುಹಾದಿಯಲ್ಲಿ ಸೇರಿಸಬೇಕೆಂಬ ಹಂಬಲ, ಪರಮ ಪಾಪಿ ಸ್ಪ್ಯಾನಿಷ್ಷರು ಕೊಂದು ಕೆಡವಿ, ದಾರುಣವಾಗಿ ದೋಚಿದ ಇಂಕಾ ಸಾಮ್ರಾಜ್ಯ ನೋಡಬೇಕೆಂಬ ತುಡಿತ, ಅಮೇಜಾನ್ ನದಿಗುಂಟ ಒಂದು ಸಣ್ಣ ಸವಾರಿ ಮಾಡಬೇಕೆಂಬ ಬಯಕೆ, ಅಮೇಜಾನ್ ಕಾಡುಗಳ ಆತ್ಮಸಂಧಾನ ಸಾಕಾರವಾಗಬೇಕೆಂಬ ಸೆಳೆತಕ್ಕೆ ಒಳಗಾಗಿ ವಿಧಿಯ ಜಟಕಾ ಬಂಡಿಯೊಡನೆ ಅದು ಪೆರುವಿನಲ್ಲಿ ಹೋಗೆಂದ ಕಡೆಗೆಲ್ಲಾ ಹೋಗಿ, ಮಸ್ತಕವೆಂಬ ಜೋಳಿಗೆಯಲ್ಲಿ ಹಿಡಿಸಿ ಮಿಗುವಷ್ಟು ಬಾಚಿ, ಅದನ್ನು ಪುಸ್ತಕಕ್ಕಿಳಿಸಿ ಕೊಟ್ಟಿದ್ದಾರಲ್ಲಾ…… a big round of applause to her !!

ಗಂಡ ಮಕ್ಕಳನ್ನು ಭಾರತದಲ್ಲಿ ಬಿಟ್ಟು, ಅಷ್ಟು ದೂರದ ದಕ್ಷಿಣ ಅಮೇರಿಕೆಗೆ ಇಬ್ಬರೇ ಇಬ್ಬರು ಹೆಂಮ್ಮಕ್ಕಳು ಹೋಗೋದು ಅಂದ್ರೆ ಸುಮ್ನೇನಾ ? ಅಂತ ಮೂಗಿನ ಮೇಲೆ ಬೆರಳಿಡುವಷ್ಟು ಸಲೀಸಾಗೆ ನೇಮಿಚಂದ್ರ ಹೋಗಿ ಬಂದಿದ್ದಾರೆ……. ಅದರೊಂದಿಗೆ ಅದಷ್ಟೂ

ಸ್ವಾರಸ್ಯವನ್ನು ಇದೊಂದು ಚಂದ ಪುಸ್ತಕದೊಂದಿಗೆ ಕಟ್ಟಿಕೊಟ್ಟಿದ್ದಾರೆ ಕನ್ನಡ ಕುಲಕೋಟಿಗೆ !

ಬರೀ ನೂರಿಪ್ಪತ್ರೂಪಾಯಿಗೆ ಪೆರು, ಕೊಲಂಬಿಯಾ, ಬ್ರೆಜಿಲ್ ದೇಶಗಳನ್ನೆಲ್ಲಾ ಸುತ್ತಿಸಿದ್ದಾರೆ. ಆ ಹಣಕ್ಕೆ ನಮ್ಮ ಬೆಂಗಳೂರಿನ ’ಸಬ್ ವೇ’ ಔಟ್ಲೆಟ್ಟಲ್ಲಿ ಒಂದು ಸ್ಯಾಂಡ್ವಿಚ್ ಬರೋಲ್ಲ ಈಗ…… !!

ಇದೊಂದು ಕೌತುಕ….. ಕುತೂಹಲ ಅಂದ್ರೆ ಕುತೂಹಲ….. ಮಾಹಿತಿ ಅಂದ್ರೆ ಮಾಹಿತಿ….. ಇತಿಹಾಸ ಅಂದ್ರೆ ಇತಿಹಾಸ….. ಡಾಕ್ಯುಮೆಂಟ್ರಿ ಅಂದ್ರೆ ಡಾಕ್ಯುಮೆಂಟ್ರಿ……

ಸಾಧ್ಯವಾದರೆ ಓದಿ…….. ಪೆರುವಿನ ಪವಿತ್ರ ಕಣಿವೆಯಲ್ಲಿ ಮಿಂದು ಪುನೀತರಾಗಿ….. ಅಮೇಜಾನ್ ತಟದಲ್ಲಿ ಓಡಾಡಿ ಉಲ್ಲಸಿತರಾಗಿ !!

Sudheer Prabhu

Advertisements