ಜೋಗಿಯವರ ದೇವರ ಹುಚ್ಚು ವಿಶಿಷ್ಟವಾದ ಕಾದಂಬರಿ.

devara hucchcuತನ್ನ ಹುಟ್ಟನ್ನು ಮೀರುವುದಕ್ಕಾಗಿ ದೇವರು ಬೇಕು ಎಂದು ನಂಬುವ ರಾಜಶೇಖರ, ದೇವರನ್ನು ಧಿಕ್ಕರಿಸುತ್ತಾ ದೂರ ಹೋಗಿ ಬದುಕಬೇಕೆನ್ನುವ ರಂಗನಾಥ. ದೇವರ ಬಗೆಗಿನ ಇವರಿಬ್ಬರ ನಿಲುವನ್ನು ಕಾದಂಬರಿಯಲ್ಲಿ ಸುಂದರವಾಗಿ ಚಿತ್ರಿಸಿದ್ದಾರೆ.
ಸಮಾಜದಲ್ಲಿ ಬದುಕಲು ಅಸ್ತಿತ್ವ ಕಾಪಾಡಲು ಹುದ್ದೆ, ದೇಶೀಯತೆ, ಪ್ರಾಂತಿಯತೆ ಅದಕ್ಕಿಂತ ಹೆಚ್ಚಾಗಿ ಧರ್ಮ, ಜಾತಿ ಬೇಕು, ಅದನ್ನೇ ಧಿಕ್ಕರಿಸುತ್ತಾ ರಂಗನಾಥ ರಾಜಶೇಖರನ ಮೇಲೆ ಪ್ರಭಾವ ಬೀರುತ್ತಾನೆ, ಆದರೆ ದೇವರನ್ನು ತಿರಸ್ಕರಿಸಿದ ಮಾತ್ರಕ್ಕೆ ಜಾತಿಯನ್ನು ತಿರಸ್ಕರಿಸಿದ ಹಾಗಲ್ಲ, ಅದು ಅವನ ಬೆನ್ನಿಗೆ ಬಂದದ್ದು, ನಾಸ್ತಿಕವಾದ ಕೂಡ ಜ್ಞಾನ, ಭೌದ್ದಿಕತೆ. ಎಲ್ಲವನ್ನೂ ಮೀರುತ್ತಾ, ದಾಟ್ಟುತ್ತಾ ಹೋಗಲು ರಂಗನಾಥನಿಗೆ ಮಾತ್ರ ಸಾಧ್ಯ. ಏನನ್ನೇ ಧಿಕ್ಕರಿಸಿದರೂ ಅವತಾರವೆತ್ತಿದ ದೇವರ ಹಾಗೇ ಉಳಿಯಬಲ್ಲ. ಆದರೆ ತಾನು ಯಾವುದನ್ನೂ ಧಿಕ್ಕರಿಸಲಾರೆ, ಧಿಕ್ಕರಿಸಲು ತನ್ನಲ್ಲಿ ಏನೂ ಇಲ್ಲ, ದೇವರಿಗೆ ಹತ್ತಿರವಾಗಲೂ ಬೇರೆಯವರನ್ನು ಆಶ್ರಯಿಸುವಾಗ ದೂರವಾಗುವುದೇಗೆ ಎಂಬ ತೊಳಲಾಟದಲ್ಲಿ ರಾಜಶೇಖರ ಬೀಳುತ್ತಾನೆ. ಅಲ್ಲದೆ ಒಬ್ಬ ಬ್ರಾಹ್ಮಣ, ಶೂದ್ರನನ್ನು ಮುಟ್ಟಿ ತಾನು ಜಾತಿಯನ್ನು ಧಿಕ್ಕರಿಸಿದೆ ಎನ್ನಬಹುದು ಆದರೆ ಒಬ್ಬ ಶೂದ್ರನಿಗೆ ಅದು ಸಾಧ್ಯವೇ? ಜಾತಿಪದ್ಧತಿಯಲ್ಲಿ ಮೇಲಿನ ಶ್ರೇಣಿಯಿಂದ ಕೆಳಗಿಳಿಯಬಹುದು, ಆದರೆ ಕೆಳಗಿರುವವರು ಮೇಲೇರುವಂತಿಲ್ಲ, ಇಂತಹ ಅಸಮಾನತೆಯನ್ನು ಕೆಡವಿ ಅವೆಲ್ಲವನ್ನೂ ಮೀರಬೇಕೆನ್ನುತ್ತಲೇ ತನ್ನನ್ನು ಇನ್ನಷ್ಟು ತುಳಿಯುವುದು ರಂಗನಾಥನ ಹುನ್ನಾರವೇ ಎಂಬ ಗೊಂದಲ ರಾಜಶೇಖರನಿಗೆ.
ಇವರಿಬ್ಬರ ದೇವರು, ಜಾತಿಯ ಕುರಿತ ವೈರುಧ್ಯವೇ ಕಥಾವಸ್ತು.

ಪುಟ್ಟ ಕಾದಂಬರಿಯಾದರೂ, ಓದುಗರನ್ನು ಆಳವಾಗಿ ಚಿಂತನೆಗೆ ಒಳಪಡಿಸುತ್ತದೆ , ಇನ್ನು ಜೋಗಿಯವರ ನಿರೂಪಣೆ ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ.

– Kavitha Bhat

Advertisements