ಈ ಮೊದಲ ಸಂಪುಟದಲ್ಲಿ ಮನುಷ್ಯನ ಚಾರಿತ್ರಿಕ ಘಟ್ಟಗಳನ್ನು ಪರಿಚಯಿಸುತ್ತ ಕಾಡಿನಲ್ಲಿ ಇದ್ದ ಮನುಷ್ಯ ಹೇಗೆ ಊರು ಕಟ್ಟಿದ, ಊರಿನ ನಂತರ ನಗರಗಳನ್ನು ಹೇಗೆ ಕಟ್ಟಿದೆ. ಇಡೀ ಪ್ರಕ್ರಿಯೆಯಲ್ಲಿ ಮನುಷ್ಯ ಮಾಂತ್ರಿಕತೆಯೊಂದಿಗೆ ಪ್ರಕೃತಿಯನ್ನು ಆರಾಧಿಸುತ್ತಿದ್ದ. ಆದರೆ ಪುರೋಹಿತಶಾಹಿ ಹುಟ್ಟಿಕೊಂಡು ಹೇಗೆ ಮಾಂತ್ರಿಕತೆಯೊಂದಿಗೆ ಮೌಢ್ಯಗಳನ್ನು ಸೇರಿಸಿ ಅದನ್ನೇ ಧರ್ಮ ಎಂದು ನಂಬಿಸಿ ನಂಬದವರನ್ನು ಬಹಿಷ್ಕಾರ ಹಾಕಿ ಅಥವಾ ಕೊಲ್ಲಿಸಿ ತನ್ನ ಪರಮಾಧಿಕಾರವನ್ನು ಉಳಿಸಿಕೊಂಡಿತ್ತು ಅನ್ನುವುದರ ಚರ್ಚೆ ಮಾಡುತ್ತದೆ.

ನಗರಗಳು, ರಾಜ್ಯಾಧಿಕಾರ, ಉತ್ಪಾದನೆಯಲ್ಲಿ ಅದ ಬದಲಾವಣೆಯಿಂದ ಪುರೋಹಿತಶಾಹಿಯ ವಿರುದ್ಧವಾಗಿ ಭಾರತ, ಈಜಿಪ್ಟ್ ಮತ್ತು ಗ್ರೀಸ್ ನಲ್ಲಿ ಪರ್ಯಾಯ ಚಿಂತನೆಗಳು ಹುಟ್ಟಲು ಶುರುವಾಯಿತು. ಭಾರತದಲ್ಲಿ ಮುಖ್ಯವಾಗಿ ವೇದಗಳನ್ನು ಬಿಟ್ಟು ಉಪನಿಷತ್ತುಗಳು, ಬೌದ್ಧ ಮತ್ತು ಜೈನ ಚಿಂತನೆಗಳು ಪ್ರಾರಂಭವಾದವೂ. ಇವೆಲ್ಲಕ್ಕಿಂತಲೂ ಹಳೆಯದಾದ ಲೋಕಯಾತ ಚಿಂತನೆ ಇದ್ದೇ ಇತ್ತು. ಮುಖ್ಯವಾಗಿ ಈ ಪುಸ್ತಕ ಭಾರತೀಯ ತತ್ವಶಾಸ್ತ್ರ ಚಿಂತನೆ ಅನ್ನುವುದು ಪರಲೋಕದ ಚಿಂತನೆ ಅಲ್ಲವೇ ಅಲ್ಲ. ಅದರಲ್ಲೂ ನಾವುಗಳು ಕಲ್ಪಿಸಿಕೊಂಡಿರುವ ಮುನ್ನೂರು ಮೂವತ್ತು ಕೋಟಿ ದೇವರುಗಳ ಚಿಂತನೆ ಅಲ್ಲವೇ ಅಲ್ಲ ಅನ್ನುವುದನ್ನು ಸರಳವಾಗಿ ವಿವರಿಸುತ್ತದೆ.

ಅದರಲ್ಲೂ #ಛಾಂದೋಗ್ಯ_ಉಪನಿಷತ್ತಿನ ಆರನೇ ಅಧ್ಯಾಯದ #ಉದ್ದಾಲಕನ ಚಿಂತನೆಗಳ ಜಿಜ್ಞಾಸೆ ಮಾಡುತ್ತದೆ. ಉದ್ದಾಲಕ ತನ್ನ ಮಗ ಶ್ವೇತಕೇತುವಿನ ಜೊತೆ ನಡೆಸುವ ಜಿಜ್ಞಾಸೆಯಲ್ಲಿ ಮೋಕ್ಷವನ್ನು ಹೊರಗಿಟ್ಟು ಭೌತ ಪ್ರಪಂಚದ ಬಗ್ಗೆ ವಿಷದವಾಗಿ ಚಿಂತನೆ ನಡೆಸಿದ್ದಾನೆ. ಉಪನಿಷತ್ತುಗಳಲ್ಲೂ ನಿಗೂಢವಾದದ್ದು ಏನೋ ಇದೆ ಅನ್ನುವ ಪ್ರತೀತಿಯನ್ನು ಮುರಿದು ಸತ್ ಅನ್ನುವ ಹೊಸದೊಂದು ಪರಿಭಾಷೆಯನ್ನು ಉದ್ದಾಲಕ ಹುಟ್ಟುಹಾಕಿದ. ಸತ್ ಅಂದರೆ ಕೇವಲ ಅಸ್ತಿತ್ವ ಅಥವಾ ಕೇವಲ ಇರುವಿಕೆಯ ಚಿಂತನೆಗಳನ್ನು ಉದ್ದಾಲಕ ಮಾಡಿದ. ಒಟ್ಟಿನಲ್ಲಿ ಛಾಂದೋಗ್ಯ ಉಪನಿಷತ್ತಿನ ಒಂದು ಭಾಗವನ್ನು ಈ ಸಂಪುಟ ದೀರ್ಘವಾಗಿ ವಿಶ್ಲೇಷಿಸುತ್ತದೆ. ಕೊನೆಯದಾಗಿ ಥೇಲಿಸ್ ವಿಶ್ವದ ವಿಜ್ಞಾನದ ಅದ್ಯಪ್ರವರ್ತಕ ಅನ್ನುವ ವಾದವನ್ನು ಹಲ್ಲೆಗಳೆದು ಆ ಪಟ್ಟ ಉದ್ದಾಲಕ ಅರುಣಿಗೆ ಸಲ್ಲಬೇಕು ಎಂದು ದೇವಿಪ್ರಸಾದ್ ಚಟ್ಟೋಪಾಧ್ಯಾಯ ವಾದಿಸುತ್ತಾರೆ.

ಇವತ್ತು ನಾವುಗಳು ಸ್ಮೃತಿಗಳು ಸೃಷ್ಟಿಸಿದ ಪುರಾಣಗಳಿಗೆ ಹೆಚ್ಚು ಒತ್ತುಕೊಟ್ಟು ನಮ್ಮ ತಲೆಯಲ್ಲಿ ಮುನ್ನೂರು ಮೂವತ್ತು ಕೋಟಿ ದೇವರುಗಳನ್ನು ಒತ್ತು ತಿರುಗುತ್ತಿದ್ದೇವೆ. ಅದರಲ್ಲೂ ರಾಮನನ್ನು ಅತಿಯಾಗಿ ಹಚ್ಚಿಕೊಂಡಿದ್ದೇವೆ. ನಾವುಗಳು ಛಾಂದೋಗ್ಯ ಉಪನಿಷತ್ತನ್ನು ಅರ್ಥಮಾಡಿಕೊಂಡಿದ್ದೆ ಅದಲ್ಲಿ ಇಡೀ ಅಸ್ತಿತ್ವವೇ ಸತ್ ನಿಂದ ಸೃಷ್ಟಿಯಾಗಿದೆ ಮತ್ತು ಸತ್ ನ ರೂಪಾಂತರಣೆಯೆ ಜಗತ್ತು ಅನ್ನುವುದು ಅರ್ಥವಾಗುತ್ತದೆ. ಛಾಂದೋಗ್ಯ ಉಪನಿಷತ್ತು ತಾನು ಹೇಳುವುದನ್ನು ಕುರುಡಾಗಿ ನಂಬು ಎಂದು ಹೇಳುವುದಿಲ್ಲ ಜಿಜ್ಞಾಸೆ ಮಾಡಿ ಒಪ್ಪಿಕೊ ಎಂದು ಹೇಳುತ್ತದೆ. ಆದ್ದರಿಂದ ನಿಜವಾದ ಹಿಂದೂ ಆಗುವುದು ಅಂದರೆ ಉಪನಿಷತ್ತುಗಳನ್ನು ಅರಿಯುವುದು. ಒಮ್ಮೆ ಉಪನಿಷತ್ತಿನ ಅರಿವು ನಮ್ಮಲ್ಲಿ ಮೂಡಿದರೆ ಹಿಂದೂ ಅನ್ನುವ ಗುರುತು ಕಳೆದು ಹೋಗಿ ನಾನು ಕೂಡ ಅದೇ ಆಗಿದ್ದೇನೆ ಅನ್ನುವ ಎಚ್ಚರ ಮೂಡುತ್ತದೆ.

ಇನ್ನಾದರೂ ನಾವೆಲ್ಲರೂ ಹುಸಿ ಹಿಂದೂತ್ವವನ್ನು ತ್ಯಜಿಸಿ ಶುದ್ಧ ಭಾರತೀಯ ಚಿಂತನೆಗಳನ್ನು ಅಧ್ಯಯನ ಮಾಡಲು ಪ್ರಾರಂಭಿಸಬೇಕು.

– ಸತ್ಯ ಕಾಮ 

Advertisements