ನವಿರಾದ ಭಾವಗಳುಳ್ಳ ಪುಟ್ಟ ಪುಟ್ಟ ಕತೆಗಳು. ನನಗೆ ಬಹಳ ಖುಷಿ ಕೊಟ್ಟದ್ದು ‘ಮಗು ಚಿತ್ರ ಬರೆಯಿತು’ ಮತ್ತು ‘ಕಿಚನ್ ಪ್ಯಾರಡೈಸ್’ ಕತೆಗಳು. ಮಗು ಅಕಸ್ಮಾತ್ ಆಗಿ ಟ್ರಂಕ್ ಒಳಗೆ ಬಂಧಿಯಾಗುವ ಸನ್ನಿವೇಶದಲ್ಲಿನ ಘಟನಾವಳಿಗಳ ಮಗು ಚಿತ್ರ ಬರೆಯಿತು. ಮತ್ತು ಮಕ್ಕಳಾಗದ ದಂಪತಿಗಳ ಕತೆಯ ‘ಕಿಚನ್ ಪ್ಯಾರಡೈಸ್’. ಇದರಲ್ಲಿನ‌ ಸಾಲೊಂದನ್ನು ಗಮನಿಸಿ ‘ಶೋಕೇಸಿನಲ್ಲಿರುವ ಅಂದದ ಹೂಜಿಯೊಂದು ಆಡಲು ಕೆಳಗಿಳಿದು ಬಂದು ನಾಲ್ಕೂ ಬದಿಯಲ್ಲಿ ಮುದ್ದಾಗಿ ಸೀಳಿ ಕೂತಿದ್ದು, ಬೆಳ್ಳಿ ಚಿತ್ತಾರದೆಳೆಯಿಂದ ಚಿತ್ರ ಬಿಡಿಸಿದಂತೆ ಕಾಣುತ್ತಿತ್ತು’ ಅತ್ಯಂತ ಸರಳವಾಗಿರುವ ಸಂಗತಿಯನ್ನೂ ಹೇಳಿದ ಬಗೆ ನೋಡಿ. ಇನ್ನೊಂದು ಗಮನಿಸಬೇಕಾದ ಅಂಶ ,ಇವರ ಕತೆಗಳಲ್ಲಿನ ಚಿತ್ರವತ್ತತೆ. ಕತೆ ಓದುವಾಗ,ಅಲ್ಲೇ ಬದಿಯಲ್ಲೇ ನಿಂತುಕೊಂಡು ನಾವೂ ಭಾಗುಯಾಗುತ್ತಿದ್ದೇವೆ ಎಂಬ ಭಾವ, ಕೊನೆಗೆಲ್ಲ ಸುಖಾಂತವಾಯಿತು ಎನ್ನುವಾಗಿನ ‘ಸುಸ್ಕಾರ’ ನಮ್ಮದೂ ಕೂಡ ಆಗುವುದು ಕತೆಗಳ ಸಾರ್ಥಕತೆ!

ಆದರೆ ಮನೆ,ಸಂಸಾರ, ಭಾವಕೋಶ ಇತ್ಯಾದಿಗಳ ವಸ್ತವಾಗಿಟ್ಟುಕೊಂಡ ಹೊಳೆವ ಕತೆಗಳು ಕೋಮು ಗಲಭೆ, ಮಿತ್ರ ದ್ರೋಹ ಇತ್ಯಾದಿಗಳ (ಬಣ್ಣದ ಕೌದಿ, ಗುಬ್ಬಿ ಗೂಡು)(ಇವು ಚಿಕ್ಕ ಅಂಶಗಳು.ಇದರಲ್ಲೂ ಭಾವವೇ ಪ್ರಧಾನ) ನಿಭಾಯಿಸುವಾಗ ನಿರೀಕ್ಷಿತ ಪರಿಣಾಮ ಹುಟ್ಟಿಸುವುದಿಲ್ಲ.

ಒಟ್ಟಾರೆಯಾಗಿ ಇಲ್ಲಿನ ಕತೆಗಳು ಶಾಂತವಾದ ಕೆರೆಯೊಂದರಲ್ಲಿ ಎಸೆದ ಕಲ್ಲುಗಳಂತೆ, ಓದಿ ಮುಗಿದರೂ ಉಂಗುರವೆಬ್ಬಿಸುತ್ತಲೇ ಇರುತ್ತವೆ. ‘ಮಗು ಚಿತ್ರ ಬರೆಯಿತು’ ಕತೆಯಲ್ಲಿ‌ ಮಗು ಬದುಕಿ ಬರಲಿ ಎಂಬ ಜನರ ಪ್ರಾರ್ಥನೆ ನಮ್ಮದೂ ಆಗಿರುವಾಗಲೇ ಕತೆಗಾರ್ತಿ ಗೆದ್ದ ಹಾಗೆ!

Advertisements