‘ಕುಂಜಾಲು ಕಣಿವೆಯ ಕೆಂಪು ಹೂವು’ – ನಾ. ಡಿಸೋಜ

kempu hoovu

ನಮ್ಮ ದುಡಿವ ಇಂದಿನ ಏಕಾತನತೆ ನಮ್ಮನ್ನು ಎಲ್ಲಿಗೆ ತಂದು ನಿಲಿಸುತ್ತದೆ ಎಂದು ಹೇಳುವುದು ಕಷ್ಟ. ಒಬ್ಬೊಬ್ಬರಿಗೆ ಒಂದೊಂದು ವೇದ್ಯವಾಗುವುದು. ಎಲ್ಲವೂ ಬದುಕನ್ನು ನೋಡುವ ರೀತಿ ಮತ್ತು ನಮಗಿರುವ ಅಭಿರುಚಿಯ ಮೇಲೆ ಅವಲಂಬಿಸಿರುತ್ತದೆ. ನಮ್ಮ ಅಭಿರುಚಿ ಕುತೂಹಲಕಾರಿಯಾಗಿಯೂ, ಹೊಸದನ್ನು ಅನ್ವೇಷಿಸುವ ಮನಸ್ಸುಳ್ಳದ್ದಾಗಿಯೂ ಇದ್ದರೆ ನಮಗೆ ಪ್ರಾಪ್ತವಾಗುವ ಹೊಸ ಅನುಭವಗಳೂ ಅಷ್ಟೇ ಮನೋಹರ ಮತ್ತು ವಿದ್ವತ್ತ್ಪೂರ್ಣವಾಗಿರುತ್ತದೆ. ಕೇವಲ ಯಾಂತ್ರಿಕ ಬದುಕಿಗೆ ಒಗ್ಗಿದ ಜೀವಕ್ಕೆ ರಂಜನೀಯವಾದ ಅನುಭವವಾಗಲಿ, ರಸಪೂರ್ಣ ಬದುಕನ್ನು ಸವಿಯುವ ಅವಕಾಶವಾಗಲಿ, ಉಹುಂ, ಸಿಗುವುದಿಲ್ಲ. ಬದುಕಿನ ಜಂಜಡಗಳಿಗೆ ತತ್ತರಿಸಿದ ನಮ್ಮ ಅಸಮರ್ಥ ಜೀವನ ನಗರೀಕರಣವೆಂಬ ನಾಗಾಲೋಟಕ್ಕೆ ಸಿಕ್ಕಿ ಮನಸ್ಸನ್ನು ಮಬ್ಬುಗೊಳಿಸುವುದು ವಿಪರ್ಯಾಸವೇ ಸರಿ.

ಆದರೆ ಆದ ಎಲ್ಲ ಅನುಭವ ಸಾಕ್ಷಾತ್ಕಾರವಾಗುತ್ತದೆಯೇ? ಹಿಂದೆ ನಡೆದದ್ದಕ್ಕೂ ಈಗ ನಡೆವುದಕ್ಕೂ ವ್ಯತ್ಯಾಸವಿಲ್ಲವೇ? ನಡೆದ ಹೆಜ್ಜೆಯ ಗುರುತು ಈಗಲೂ ಹಾಗೇ ಇರಬಹುದೇ? ಹಾಗೆ ಇರುವುದು ಸಾಧ್ಯವಾ? ಬದಲಾವಣೆ ಜಗದ ನಿಯಮ ಎಂದು ಹೇಳುವುದಾದರೆ ಈ ಪ್ರಶ್ನೆಗಳಿಗಿಲ್ಲಿ ಅರ್ಥವೇ ಇರುವುದಿಲ್ಲ. ಇದರ ಸೂಕ್ಷ್ಮ ಸಂಬಂಧ ತಿಳಿಯಬೇಕಾದರೆ ಈ ಕೃತಿಯನ್ನು ಓದಲೇ ಬೇಕು.

ಕಥಾನಾಯಕ ತನ್ನ ಕಛೇರಿಯ ಪೀಕಲಾಟದಿಂದ ರೋಸತ್ತು ತನ್ನ ಸಹೋದ್ಯೋಗಿಯೊಬ್ಬ ಕೊಡುವ ಸಲಹೆಯನ್ನು ಸ್ವೀಕರಿಸಿ, ಒಂದು ತಿಂಗಳ ಮಟ್ಟಿಗೆ ರಜೆ ಪಡೆದು, ಹೆಂಡತಿ ಮಕ್ಕಳನ್ನು ಒಪ್ಪಿಸಿ ತನ್ನ ಹುಟ್ಟೂರಿಗೆ ಬರುತ್ತಾನೆ. ಬಹಳ ದಿನದ ಮೇಲೆ ಊರಿಗೆ ಬಂದು ತಾಯಿಯನ್ನು ಕಾಣುತ್ತಾನೆ. ತಾನು ಆಡಿ ಬೆಳೆದ ಪರಿಸರವನ್ನು ಕಣ್ತುಂಬಿಕೊಳ್ಳುತ್ತಾನೆ. ಬಾಲ್ಯದ ದಿನಗಳನ್ನು ಮೆಲುಕು ಹಾಕುತ್ತಾನೆ. ಆದರೆ ಎಷ್ಟು ದಿನ ಅಂತ ನೆನೆದದ್ದನ್ನೇ ನೆನೆಯುವುದು? ತಾಯಿಯೊಡನೆ ಕಾಲ ಕಳೆಯುವುದು? ನೋಡಿದ ಜಾಗೆಗಳನ್ನೇ ಮತ್ತೆ ಮತ್ತೆ ನೋಡುವುದು? ನಾಯಕನ ಮನಸ್ಸು ಕುತೂಹಲಭರಿತವಾದದ್ದು. ಊರಿಗೆ ಬಂದ ಮೇಲೆ ಏನನ್ನು ಮಾಡಬೇಕೆಂದು ಪೂರ್ವನಿಯೋಜಿತನಾಗಿ ಬಂದಿರುತ್ತಾನೋ ಅದನ್ನು ಸಾಧಿಸಲು ಅತ್ತ ತೊಡಗುತ್ತಾನೆ. ಅದೆಂದರೆ ಕುಂಜಾಲು ಕಣಿವೆಯ ಕೆಂಪು ಹೂವನ್ನು ನೋಡುವುದು.

ಅದು ಬರೀ ಹೂವೆಂದರೆ ಹೂವಲ್ಲ. ಹತ್ತು ವರ್ಷಕ್ಕೊಮ್ಮೆ ಚುಮುಚುಮು ಚಳಿಯುಕ್ಕಿಸುವ ಡಿಸೆಂಬರ್ ಮಾಹೆಯ ಅಮಾವಾಸ್ಯೆಯ ನಂತರ ಅರಳುವ ಕೆಂಪು ಹೂವು, ಕುಂಜಾಲು ಕಣಿವೆಯಲ್ಲಿ. ಅದರ ಆಯುಷ್ಯ ಕೇವಲ ಹತ್ತುಹನ್ನೆರೆಡು ದಿನಗಳು ಮಾತ್ರ. ಅದನ್ನು ನೋಡಿದವರು ಬೆರಳೆಣಿಕೆ ಮಂದಿ ಮಾತ್ರ. ಅದರಲ್ಲಿ ನಾಯಕನ ತಂದೆಯೂ ಒಬ್ಬರು. ಕುಂಜಾಲು ಕಣಿವೆಯೆಂದರೆ ಅದು ಸಾಮಾನ್ಯದ ಮಾತಲ್ಲ, ಇಲ್ಲೇ ಎಲ್ಲೋ ಪಕ್ಕದಲ್ಲಿರುವುದಲ್ಲ. ಕೇರಳಕ್ಕೆ ಹೊಂದಿಕೊಂಡ ಕುಂಜಾಲು ದಟ್ಟಾರಣ್ಯದಲ್ಲಿದೆ.

ಕಥಾನಾಯಕ ಅಲ್ಲಿಗೆ ಹೊರಡಲು ಅನುವಾಗುತ್ತಾನೆ. ತನ್ನ ತಂದೆ ಬರೆದಿಟ್ಟಿದ್ದ ಕುಂಜಾಲು ಕಣಿವೆಗೆ ಹಿಂದೆ ಹೋಗಿ ಬಂದದ್ದರ ಅನುಭವ ವಿವರಿಸಿದ್ದ ಡೈರಿಯನ್ನು ತನ್ನ ತಾಯಿಯಿಂದ ಪಡೆದ ನಂತರ ಅವನ ಯಾತ್ರೆ ಆರಂಭಗೊಳ್ಳುತ್ತದೆ.

ಆ ಡೈರಿಯಲ್ಲಿ ಆತನ ತಂದೆ ಪ್ರತಿಯೊಂದು ಹಂತವನ್ನು, ವಿಷಯವನ್ನು ಆಮುಲಾಗ್ರವಾಗಿ ಬರೆದಿಟ್ಟಿರುತ್ತಾರೆ. ಅದನ್ನೇ ದೀವಟಿಗೆ ಮಾಡಿಕೊಂಡು ಮುನ್ನಡೆಯುತ್ತಾನೆ. ನಾಯಕ ಎಷ್ಟೇ ಆದರೂ ಸಾಹಸ ಪ್ರವೃತ್ತಿಯುಳ್ಳವನು, ಹೊಸದನ್ನು ನೋಡಿ ಅನುಭವಿಸಬೇಕೆಂದ ಗಟ್ಟೆದೆಯುಳ್ಳವನು. ಕುಂಜಾಲು ಕಣಿವೆಯ ತೀರ ಸಮೀಪಕ್ಕೆ ಹೋಗಿ ತಲುಪುವ ಬಸ್ಸಿನ ವ್ಯವಸ್ಥೆಯಿದ್ದರೂ ಕಾಲ್ನಡಿಗೆಯಲ್ಲೇ ತನ್ನ ತಂದೆ ಹೋಗಿಬಂದಂತೆಯೇ, ತೀರ ಅವಶ್ಯವಿದ್ದೆಡೆ ಮಾತ್ರ ಬಸ್ಸನ್ನು ಅವಲಂಬಿಸುವುದಾಗಿಯೂ, ಹಾಗೆ ಬಸ್ಸಿನಲ್ಲಿ ಹೋದರೆ ಪ್ರಕೃತಿಯನ್ನು ಹೆಚ್ಚು ಸವಿಯಲು ಆಗುವುದಿಲ್ಲ ಎಂದು ನಿರ್ಧರಿಸಿ ನಡೆದೇ ಹೊರಡಲು ವಿದ್ಯುಕ್ತನಾಗುತ್ತಾನೆ. ಸರಿ. ಯಾತ್ರೆ ಆರಂಭವಾಗುತ್ತದೆ.

ಒಂದೊಂದೇ ಹಳ್ಳಕೊಳ್ಳ ದಾಟಿ ಸುತ್ತಮುತ್ತಲಿನ ಹಸಿರನ್ನು ನೋಡುತ್ತಾ, ಪ್ರಕೃತಿಯೊಳಗೆ ತಾನು ಒಂದು ಭಾಗವಾಗುತ್ತಾ, ಸಿಕ್ಕ ಹಳ್ಳಿಗಳಲ್ಲಿ ಸಿಕ್ಕದ್ದು ತಿನ್ನುತ್ತಾ ಗಮ್ಯದೆಡೆ ನಡೆಯುತ್ತಾನೆ. ತನ್ನ ತಂದೆ ಬರೆದಿಟ್ಟಿದ್ದ ಡೈರಿಯನ್ನೇ ಆಧಾರವಾಗಿಟ್ಟುಕೊಂಡು ಮುನ್ನಡೆಯುವಾತನಿಗೆ ನಿಧಾನವಾಗಿ ಒಂದೊಂದೇ ಬದಲಾವಣೆಗಳು ಸ್ಪಷ್ಟವಾಗಿ ಗೋಚರಿಸಲು ಆರಂಭವಾಗುತ್ತದೆ. ಅದು ತಾನು ನಡೆಯುತ್ತಿರುವ ರಸ್ತೆಯಾಗಬಹುದು ಹಿಂದೆ ಇದ್ದ ಕಾಲು ದಾರಿಯಾಗಿರಬಹುದು. ಹಿಂದೆ ತನ್ನ ತಂದೆ ಇದೇ ಹಳ್ಳಿಗೆ ಬಂದಾಗಿನ ಚಿತ್ರಣಕ್ಕೂ ಆತನೀಗ ನೋಡುತ್ತಿರುವ ಚಿತ್ರಣಕ್ಕೂ ಅಜಗಜಾಂತರ ವ್ಯತ್ಯಾಸ. ಅವು ಹೆಸರಿಗಷ್ಟೇ ಹಳ್ಳಿಗಳು. ನಗರ ಸಂಸ್ಕೃತಿ ಅಲ್ಲಿಗೆ ಕಾಲಿಟ್ಟು ಅದೆಷ್ಟೋ ದಿನಗಳಾಗಿರುತ್ತದೆ. ತನ್ನ ತಂದೆ ಸಂಧಿಸಿದ ವ್ಯಕ್ತಿಗಳು ಆಗ ಇದ್ದದ್ದಕ್ಕೂ, ಈಗ ಅದೇ ವ್ತಕ್ತಿಯನ್ನು ತಾನು ಸಂಧಿಸಿದಾಗ ವ್ಯಕ್ತಿಯಲ್ಲಾದ ಬದಲಾವಣೆ ಕಂಡು ನಂಬುವುದು ಕಷ್ಟವಾಗುತ್ತದೆ. ಅವರಲ್ಲಿ ಕೆಲವರು ಕಾಲವಾಗಿರುತ್ತಾರೆ, ಇನ್ನುಳಿದವರು ಆಧುನಿಕತೆಯ ಪರದೆ ತಮ್ಮ ಮೈಮೇಲೆಳೆದುಕೊಂಡು “ನಾಗರೀಕ”ರಂತೆ ಭಾಸವಾಗುತ್ತಾರೆ.

ಎಲ್ಲಕ್ಕಿಂತ ಮುಖ್ಯವಾಗಿ ಸುತ್ತಲ ಪರಿಸರದಲ್ಲಾದ ಬದಲಾವಣೆ ಆತನನ್ನು ಚಕಿತಗೊಳಿಸುತ್ತದೆ. ಮಾನವನ ನಗರ ಸಂಸ್ಕೃತಿ, ಆಧುನಿಕ ಜೀವನ, ತನ್ನ ಸುಖಕ್ಕಾಗಿ ಏನನ್ನೂ ಮಾಡಲು ಸಿದ್ಧವಾಗಿ ನಿಂತ ಸ್ವಾರ್ಥಪರತೆ ಕೇವಲ ಆತ ನೋಡುತ್ತಿರುವ ಜನಜೀವನವನ್ನಷ್ಟೇ ಅಲ್ಲದೇ ಸುತ್ತಲ ಕಾಡು ಮೇಡು, ನದಿ ತೊರೆ, ಹಳ್ಳ ಗುಡ್ಡ, ಬೆಟ್ಟ ಬಯಲು, ಕ್ರಿಮಿಕೀಟಪ್ರಾಣಿಪಕ್ಷಿ ಎಲ್ಲವನ್ನೂ ಬುಡಮೇಲು ಮಾಡಿ ಬರಿದು ಮಾಡಿರುತ್ತದೆ. ಇದರಿಂದ ಕ್ಷೋಭೆಗೆ ಒಳಗಾದ ಆತನ ಮನಸ್ಸು ಮುಮ್ಮಲ ಮರುಗುತ್ತದೆ. ಎಲ್ಲಿ ಹಚ್ಚ ಹಸಿರು ಕಂಗೊಳಿಸಿ, ನದಿ ತೊರೆ ಹಳ್ಳಗಳು ತುಂಬಿ ಹರಿದು, ಹೆಮ್ಮರಗಳು ಸೂರ್ಯನ ಕಿರಣವೇ ನೆಲದ ಮೇಲೆ ಬೀಳದೆ ಇರುತ್ತಿರಲು, ಯಾವುದೋ ಮರದ ರೆಂಬೆಯಲ್ಲಿ ಕೂತ ಹಕ್ಕಿಯ ಕಲರವ ಕೇಳಿ ಮನಸ್ಸು ಮುದಗೊಳ್ಳುತ್ತಿತ್ತೋ, ಮುಗಿಲೆತ್ತರ ಬೆಳೆದು ನಿಂತ ದಟ್ಟ ಬೆಟ್ಟಗಳು ಆಕಾಶವೇ ಕಾಣದಂತೆ ಮುಗಿಲನ್ನು ಮರೆ ಮಾಡಿ ನಿಂತಿತ್ತೋ, ಈಗ ಅಲ್ಲೆಲ್ಲಾ ಬರೀ ಬೋಳು ಬೋಳು. ಎಲ್ಲಿ ನೋಡಿದರಲ್ಲಿ ಮಾನವನ ಹೆಜ್ಜೆ ಗುರುತುಗಳು ಆತನು ಅಲ್ಲೆಲ್ಲಾ ಮಾಡಿದ ಘನಂದಾರಿ ಕೆಲಸಕ್ಕೆ ಗುರುತು ಹೇಳುತ್ತಿತ್ತು.

ಏನು ಕಾಣಲಿ ಬಿಡಲಿ, ನಾಯಕನ ಯಾತ್ರೆ ಮಾತ್ರ ಮುಂದುವರೆಯಬೇಕಲ್ಲ? ಮುಂದುವರೆಯುತ್ತದೆ. ಕುಂಜಾಲು ಕಣಿವೆಯ ತನಕ ನಡೆಯಬೇಕಾದಾಗ ನಡೆದು, ಬಸ್ಸನ್ನು ಗಾಡಿಯನ್ನು ಹತ್ತಬೇಕಾದಾಗ ಹತ್ತಿ, ಉಳಿಯಬೇಕಾಗಿ ಬಂದಾಗ ಗತ್ಯಂತರವಿಲ್ಲದೆ ಪರರ ಮನೆಯಲ್ಲಿ ಉಳಿದು, ಕಣ್ಣಿಗೆ ಕಂಡಷ್ಟೇ ಪ್ರಕೃತಿ – ವನಸಿರಿ – ಕಾಡು – ಪ್ರಾಣಿಗಳನ್ನು ಕಂಡು, ತನ್ನ ಮನೋಧ್ಯೇಯವನ್ನು ಗುರಿಯಾಗಿಸಿಕೊಂಡು ಮುನ್ನಡೆದಾಗ ಅಂತೂ ಕೊನೆಗೊಮ್ಮೆ ಕಣಿವೆಗೆ ಬಂದು ತಲುಪುತ್ತಾನೆ. ಅಲ್ಲಾದರೂ ಆತನಿಗೆ ನಿರಾಸೆಯಾಗುತ್ತದೆ. ಯಾವ ಎರಡು ಬೆಟ್ಟಗಳ ಬುಡದಿಂದ ಕಣಿವೆ ಶುರುವಾಗಲಿತ್ತೋ ಅಲ್ಲಿ ಗಣಿ ಕೆಲಸ, ನದಿಗೆ ಸೇತುವೆ ಕಟ್ಟಿ ನೀರನ್ನು ಸಂಗ್ರಹಿಸಿ ವಿದ್ಯುತ್ತ್ ತೆಗೆಯುವ ಕಾಮಗಾರಿ ನಡೆಯುತ್ತಿರುತ್ತದೆ. ತನ್ನ ತಂದೆ ತಮ್ಮ ಡೈರಿಯಲ್ಲಿ ಪ್ರಸ್ತಾವಿಸಿದ್ದ ಆದಿಜನಾಂಗವೊಂದು ಈಗಲೂ ಅಲ್ಲಿರಬೇಕಿತ್ತು. ಈಗಲೂ ಇದ್ದರು, ಗಣಿ ಕೆಲಸದ ಕಾರ್ಮಿಕರಾಗಿ, ಸೇತುವೆ ಕಟ್ಟುವ ಕೂಲಿಯಾಳಾಗಿ!

ಅವರ ಸಹಾಯವನ್ನು ಪಡೆದು ಕೊನೆಗೂ ನಾಯಕ ತನ್ನ ಗಮ್ಯವನ್ನು ಮುಟ್ಟುತ್ತಾನೆ. ತನ್ನ ಯಾನ ಆರಂಭವಾದ ಘಳಿಗೆಯಿಂದಲೂ ಕೇವಲ ನಿರಾಸೆಯನ್ನೇ ಕಾಣುತ್ತಿದ್ದ ನಾಯಕ ಕೊನೆಗೂ ಅಷ್ಟೆಲ್ಲಾ ಸಾಹಸ ಮಾಡಿ, ಕಷ್ಟಪಟ್ಟು ಆ ಕುಂಜಾಲು ಕಣಿವೆಯ ಕೆಂಪು ಹೂವು ಅರಳಿ ನಿಂತಿರುತ್ತಿದ್ದ ಆ ದೊಡ್ಡ ಕಂದಕದೊಳಗೆ ಇಣುಕಿ ನೋಡಿದಾಗ ಆತನಿಗೆ ಕಂಡದ್ದೇನು? ಆ ಕೆಂಪು ಹೂವಿಗೂ ಪರಮಾತ್ಮ ಶ್ರೀಕೃಷ್ಣನಿಗೂ ಇರಬಹುದಾದ ಸಂಬಂಧವೇನು? ಆದಿಜನಾಂಗ ಆ ಹೂವನ್ನು ಅಷ್ಟು ಹತ್ತಿರವಿದ್ದೂ ನೋಡದಿರುವುದಕ್ಕೆ ಕಾರಣವೇನು?

ನಾ ಡಿಸೊಜಾ ಕೊನೆಯನ್ನು ಮುಗಿಸಿರುವ ರೀತಿ ಇದೆಯೆಲ್ಲಾ? ಕ್ಲೈಮ್ಯಾಕ್ಸ್ ಎಂದರೆ ಹೀಗಿರಬೇಕು ಎನ್ನಿಸುವಂತಿದೆ. ಹೇಳಿದರೆ ಬರುವುದಿಲ್ಲ, ಈ ಸಣ್ಣಗಾದಂಬರಿಯನ್ನು ಓದಬೇಕು. ಒಂದೆರೆಡು ಮೂರು ಸಿಟ್ಟಿಂಗ್ ಅಲ್ಲಿ ಓದಬಹುದಾದ ಈ ಕೃತಿ ನಮ್ಮ ಇಂದಿನ ವಾಸ್ತವಕ್ಕೆ ಹಿಡಿದ ಕೈಗನ್ನಡಿಯಂತಿದೆ.

ನಮಸ್ಕಾರ.

ಮೋಹನ್ ಕುಮಾರ್ ಡಿ ಎನ್
ದೊಡ್ಡಬಳ್ಳಾಪುರ

Advertisements

About pustakapremi

ಪುಸ್ತಕ ಪರಿಚಯ, ವಿಮರ್ಶೆ, ಅನಿಸಿಕೆ ಮತ್ತು ಮಾಹಿತಿ ವೇದಿಕೆ. ಪುಸ್ತಕಪ್ರೇಮಿಗಳಿಗೊಂದು ಸಮೃದ್ಧ ತಾಣ.
This entry was posted in ಕನ್ನಡ, ನಾ. ಡಿಸೋಜ, Uncategorized and tagged , . Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s