’ಮಸಾಲೆ ದೋಸೆಗೆ ಕೆಂಪು ಚಟ್ನಿ’ – ಜೋಗಿ

masale dose kempu chatneyಸಿಟಿಗೆ ಹೋದಾಗಲೆಲ್ಲಾ ಒಂದೆರಡು ಪುಸ್ತಕಗಳನ್ನಾದರೂ ಕೊಂಡುತರದಿದ್ದರೆ, ಹೋಗಿದ್ದೇ ವ್ಯರ್ಥ ಎಂಬ ಭಾವನೆಗೆ ಸಿಕ್ಕು ಒದ್ದಾಡಿಬಿಡುತ್ತೇನೆ. ನನಗೆ ತಿಳಿದಿರುವ ಮಟ್ಟಿಗೆ ನಮ್ಮ ಊರಲ್ಲಿ ಪುಸ್ತಕಗಳು, ಕಾದಂಬರಿಗಳು ಸಿಗುವುದು ಒಂದೇ ಅಂಗಡಿಯಲ್ಲಿ. ಹೀಗಾಗಿ ನಾನು ಆ ಅಂಗಡಿಯ ಖಾಯಂ ಗಿರಾಕಿ. ಒಂದೆರಡು ತಿಂಗಳ ಹಿಂದೆ ಎಂದಿನಂತೆ, ಒಂದರ ಮೇಲೊಂದರಂತೆ ರಾಶಿ ಹಾಕಿಟ್ಟಿದ್ದ ಪುಸ್ತಕಗಳ ನಡುವೆ ಬೇಕಾದ ಒಂದು ಪುಸ್ತಕವನ್ನು ಗಂಭೀರವಾಗಿ ಹುಡುಕುತ್ತಿದ್ದೆ. ನನ್ನ ಹುಡುಕಾಟಕ್ಕೆ ಕೆಲವೊಮ್ಮೆ ತಲೆಹಾಕುವ, ಬಹುತೇಕ ನಾನು ಕೇಳಿದ ಪುಸ್ತಕದ ಬದಲಿಗೆ, ಅದು ಇಲ್ಲರೀ ಇದು ಇದೆ, ನಡಿಯುತ್ತಾ? ಎನ್ನುತಲೇ ತನ್ನ ದಿವ್ಯ ನಿರ್ಲಕ್ಷ್ಯ ತೋರಿಸುವ ಅಂಗಡಿಯವ, ತಗೊಳ್ರಿ ಮಸಾಲೆ ದೋಸೆಗೆ ಕೆಂಪು ಚಟ್ನಿ ಅಂದಾಗ, ನನಗೆ ತಲೆಬುಡ ಅರ್ಥವಾಗದೇ ಹಿಂತಿರುಗಿ ಮಿಕಮಿಕ ಕಟ್ಟುಬಿಟ್ಟೆ, ನನ್ನ ಗೊಂದಲ ನೋಡಿ ಜೋಗಿಯವರದ್ದು ಮಾರಾಯ್ರೆ ಎಂದು ನಕ್ಕು ಪುಸ್ತಕ ಕೈಗಿಟ್ಟು ಮಾಯವಾದ. ಯಪ್ಪಾ… ಪುಸ್ತಕಗಳಿಗೆ ಏನೆನೆಲ್ಲಾ ಹೆಸರಿಡುತ್ತಾರೊ, ಹೀಗೂ ಇಡಬಹುದಾ ಅಂತ ಆಶ್ಚರ್ಯಪಟ್ಟೆ.
ಹಾಗೇ ನೋಡಿದರೆ ಜೋಗಿಯವರ ಪುಸ್ತಕಗಳ ಶಿರ್ಷಿಕೆಗಳು ಅವರ ಬರಹದ ಶೈಲಿಯ ರೀತಿ ವಿಶಿಷ್ಟವೇ. ಮಸಾಲೆ ದೋಸೆಗೆ ಕೆಂಪು ಚಟ್ನಿ, ಅವರ ೩೫ ಅಂಕಣ ಬರಹಗಳಿರುವ ಸಂಕಲನ. ಪ್ರತಿಯೊಂದು ಕಥೆಗಳೂ ನಮಗೇನನ್ನೊ ಹೇಳಲು ತವಕಿಸುತ್ತವೆ.
ಜೀವನದ ಸತ್ಯಗಳನ್ನು, ನಮ್ಮ ದಿನನಿತ್ಯದ ಬದುಕಿನಲ್ಲಿ ಹಾದುಹೋಗುವ ಸೂಕ್ಷ್ಮ ಸಂಗತಿಗಳನ್ನು,ಅವವೇ ವಿಚಾರಗಳನ್ನು, ಹೇಳಬೇಕಿರುವುದನ್ನೇ ಹೊಸಬಗೆಯಾಗಿ ಹೇಳುವುದು ಜೋಗಿಯವರ ಕೃತಿಗಳ ವಿಶಿಷ್ಟ. ಅದರ ಜೊತೆಗೆ, ನಿರೂಪಣೆ, ಕಥೆ ಹೆಣೆಯುವ ಬಗೆಯಿಂದ ಹೊಸ ಓದುಗರಿಗೆ ಬಹುಬೇಗನೆ ಆಪ್ತರಾಗಿಬಿಡುತ್ತಾರೆ. ಕಥೆ ಹೇಳುತ್ತಾ ಹೇಳುತ್ತಾ ಎಲ್ಲೆಂದರಲ್ಲಿ ಕೈಕೊಟ್ಟು,ಗೊಂದಲಗೊಳಿಸಿ ಮುಂದಿನದನ್ನು ನಮ್ಮ ಊಹೆಗೆ ಬಿಟ್ಟು ಚಿಂತನೆಯ ಬಾಗಿಲುಗಳನ್ನು ತಡಕುವಂತೆ ಮಾಡುತ್ತಾರೆ.

ಆಧುನಿಕತೆಯಲ್ಲಿ ಬದುಕುತ್ತಿದ್ದೇವೆಂದು ಬೀಗುವ ನಗರವಾಸಿಗಳು ಹಳ್ಳಿಗಳ ಸ್ವಚ್ಛತೆಯ ಬಗ್ಗೆ ಹೇಗೆ ಪಾಠ ಮಾಡುತ್ತಾರೆ ಎಂದು ಹೇಳುತ್ತಲೇ ಸ್ವಚ್ಛತೆ ಇರುವುದು ಹಳ್ಳಿಗಳಲ್ಲೊ, ನಗರಗಳಲ್ಲೊ ಎಂಬ ಚಂದದ ಪಾಠಮಾಡುತ್ತಾ, ವಿಜ್ಞಾನದ ವಿಶ್ಲೇಷಣೆಯಲ್ಲಿಯೇ ಎಲ್ಲವನ್ನೂ ಅರಿಯುತ್ತಾ ಅದೆಷ್ಟು ರೋಮಾಂಚನಗಳನ್ನು ಕಳೆದುಕೊಳ್ಳುತ್ತಿದ್ದೇವೆ, ಜ್ಞಾನ ಮತ್ತು ವಿಜ್ಞಾನಗಳು ಬದುಕನ್ನು ನೀರಸವಾಗಿಸಿವೆಯೇ, ಅಜ್ಞಾನದಲ್ಲಿಯೇ ಸುಖವಿದೆಯಾ ಎನ್ನುತ್ತಾ, ತಾಪತ್ರಯಗಳನ್ನು ತಾವಾಗಿಯೇ ಮೈಮೇಲೆ ಎಳೆದುಕೊಂಡು ಅದರಿಂದ ಬಿಡಿಸಿಕೊಳ್ಳುವುದರಲ್ಲಿಯೇ ಸುಖಿಸುವ ಪೆಟ್ರೊಮ್ಯಾಕ್ಸ್ ರಾಮಣ್ಣ ನಮ್ಮಲ್ಲೂ ಇದ್ದು ಆಗಾಗ ಮೈಮುರಿದು ಮೇಲೆಳುತ್ತಾನೆ.

ಹಿಂದಿನ ಆಚರಣೆಗಳನ್ನು ಎಲ್ಲಿದ್ದರೂ ಪಾಲಿಸಬೇಕೆಂಬ ನಿಷ್ಠೆಯಿಂದ ಇನ್ನು ಯಾಕೆ ಕಳಚಿಕೊಂಡಿಲ್ಲ, ಯಾವುದನ್ನು ನಿಷ್ಠೆ ಎನ್ನಬಹುದು ದಾಂಪತ್ಯ ನಿಷ್ಠೆ ಎನ್ನುವುದಿದೆಯೇ, ಹಾಗಂದರೇನು? ತಪ್ಪು ಮಾಡದೆ ತಪ್ಪು ಹೊರಿಸುವಾಗ, ಅದನ್ನು ಸಾಬೀತುಪಡಿಸಲು ಹೆಣಗುವ ಬದಲಿಗೆ ಒಪ್ಪಿಕೊಂಡುಬಿಡಬಾರದೇಕೆ? ಯಾವ ಉದ್ದೇಶಕ್ಕಾಗಿ ಬದುಕುತಿದ್ದೇವೆ, ನಮ್ಮ ಬದುಕಿನ ಉದ್ದೇಶದ ಅರಿವಿದೆಯೇ ಎಂಬ ಪ್ರಶ್ನೆಗೆ ನಾವು ಯಾವ ಉತ್ತರ ಕೊಡಬಲ್ಲೆವು? ನಿರೀಕ್ಷೆಗಳಿರುವ ಸ್ನೇಹ ಅದೆಷ್ಟು ಕೃತಕವಾದ ಸಂಬಂಧ, ಬೀಸುವ ಗಾಳಿಯ ಹಾಗೆ, ಹೂವಿನ ಪರಿಮಳದಂತೆ ಮುದಗೊಳಿಸುತ್ತ ಬಂದದ್ದೂ ಗೊತ್ತಾಗದೇ ಹೊದದ್ದೂ ತಿಳದೇ ಇದ್ದುಬಿಡಬೇಕು, ಇಲ್ಲಿ ಆಪ್ತತೆ, ಅಕ್ಕರೆ ಇದ್ದರೆ ಸಾಕು, ನಿರೀಕ್ಷೆಗಳಿರಬಾರದು ಎನ್ನುತ್ತಾ, ಇವುಗಳ ನಡುವೆ ಟೀವಿ ಸೀರಿಯಲ್ ಗಳಿಗೆ ಸಂಭಾಷಣೆ ಬರೆಯುವ ಬರಹಗಾರರ ಕಷ್ಟಸುಖಗಳು, ನೆನಪಿನಲ್ಲಿ ಉಳಿಯುವಂತ ಭಯ ಅಭಯ, ಬೆನಜೀರಳ ನಗೆ, ಕಥೆಗಳಲ್ಲಿ ಏಕಾಏಕಿ ಪ್ರತ್ಯಕ್ಷವಾಗುವ ಪುರಾಣದ ಪಾತ್ರಗಳು, ಆಗಾಗ ಇಣುಕಿ ನೋಡುವ ಕವಿ, ಕವಿತೆಗಳು, ಲೇಖಕರು, ಎಲ್ಲವೂ ಚಂದವೇ.

ಇದರಲ್ಲಿರುವ ಬಹುತೇಕ ಕಥೆಗಳು ಲೈಫ್ ಈಸ್ ಬ್ಯುಟಿಫುಲ್ ದಲ್ಲಿರುವುದು, ಒಂದು ರೀತಿಯ ನಿರಾಸೆ ಮೂಡಿಸುತ್ತದೆ. ಓದುವಾಗಲೆಲ್ಲಾ ಅರೆ..ಇದನ್ನು ಮೊದಲೇ ಓದಿದ್ದೀನಲ್ಲ ಎನ್ನಿಸಿಬಿಡುತ್ತವೆ. ಒಂದೇ ಪುಸ್ತಕ ಎರಡನೇ ಬಾರಿ ಓದುವಾಗ ಆಗುವ ಪರಿಚಿತತೆ ಬಗ್ಗೆ ಏನೂ ಅನ್ನಿಸದು, ಅದೇ ಹೊಸ ಪುಸ್ತಕವನ್ನು ಓದುವಾಗ, ಹೊಸದೇನನ್ನೊ ಹುಡುಕುವಾಗ ಅದೇ ಲೇಖಕರ ಅವೇ ಹಳೆಕಥೆಗಳು ಎದುರಾದಾಗ ಹೊಸದೇನೂ ಇಲ್ಲ ಎಂಬ ಬೇಸರದಲ್ಲಿ ಓದು ತೂಗುತ್ತದೆ. ಅದನ್ನು ಹೊರತುಪಡಿಸಿದರೆ ಇದೊಂದು ಚಂದದ ಪುಸ್ತಕ.

ಧನ್ಯವಾದಗಳು.

-Kavitha Bhat

Advertisements

About pustakapremi

ಪುಸ್ತಕ ಪರಿಚಯ, ವಿಮರ್ಶೆ, ಅನಿಸಿಕೆ ಮತ್ತು ಮಾಹಿತಿ ವೇದಿಕೆ. ಪುಸ್ತಕಪ್ರೇಮಿಗಳಿಗೊಂದು ಸಮೃದ್ಧ ತಾಣ.
This entry was posted in ಕನ್ನಡ, ಜೋಗಿ, Uncategorized and tagged , . Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s