‘ಪರಮಹಂಸ ಕೃಪಾಹಸ್ತ’ – ಡಾ. ಗುರುಪಾದ ಮರಿಗುದ್ದಿ

paramahamsaಪುಸ್ತಕ : ಪರಮಹಂಸ ಕೃಪಾಹಸ್ತ.
ಲೇಖಕರು : ಡಾ. ಗುರುಪಾದ ಮರಿಗುದ್ದಿ.
ಕುವೆಂಪು ತಮ್ಮ ಕಾವ್ಯ ಸೃಷ್ಟಿ ಮತ್ತು ಜೀವನ ದೃಷ್ಟಿಯಲ್ಲಿ ರಾಮಕೃಷ್ಣ ಪರಮಹಂಸ ದರ್ಶನ ಪರಂಪರೆಯಿಂದ ಹೇಗೆ ಪ್ರಭಾವಿತರಾದರು ಎಂಬುದನ್ನು ಡಾ. ಗುರುಪಾದ ಮರಿಗುದ್ದಿಯವರ ‘ಪರಮಹಂಸ ಕೃಪಾ ಹಸ್ತ’ ಪುಸ್ತಕ ಅನನ್ಯವಾಗಿ ತೆರೆದಿಡುತ್ತಾ ಹೋಗಿದೆ. ಕುವೆಂಪು ಅವರ ಆತ್ಮಕತೆ ‘ನೆನಪಿನ ದೋಣಿಯಲ್ಲಿ’ ಅಂತರ ಗಂಗೆಯಂತೆ ಹರಿದಿರುವ ಪರಮಹಂಸ ಪ್ರಭಾವವನ್ನು ಡಾ. ಮರಗುದ್ದಿ ತಮ್ಮ ಆಳ ಓದುವಿಕೆ ಒಳನೋಟಗಳಿಂದ ತಮ್ಮ ಪ್ರತಿಭೆಯ ತೀರದ ನಡುವೆ ಆ ಅಂತರಗಂಗೆ ದೃಗ್ಗೋಚರಚಾಗುವಂತೆ ಮಾಡಿದ್ದಾರೆ. ಚದುರಿದ ಚಿತ್ರಗಳಿಗೆ ಸುಭದ್ರ ಚೌಕಟ್ಟು ಹಾಕಿದ್ದಾರೆ ಪರಮಹಂಸ ಎಂಬ “phenomenon” ‘ಗುರುತ್ವ’ ದೆಡೆಗೆ ಸೆಳೆಯಲ್ಪಟ್ಟ ಕುವೆಂಪುರವರ ಚೇತನ ಅನಿಕೇತನವಾಗಿ ಹೇಗೆ ವಿಶ್ವ ಚೇತನವಾಯಿತು ಎಂಬುದನ್ನು ‘ ಅಧ್ಯಾತ್ಮ ವಿಜ್ಞಾನದ ಹೆಜ್ಜೆ ಗುರುತುಗಳು ’ ಎಂದು ಉಲ್ಲೇಖಿಸುವ ಲೇಖಕರು ದಿವ್ಯಗುರುವಿನ ಕೃಪಾ ಹಸ್ತ ಕಾವ್ಯಗುರುವಿನ ಲೌಕಿಕ , ಅಲೌಕಿಕ ಮಾರ್ಗಕ್ಕೆ ಹೇಗೆ ಕೈದೀವಿಗೆಯಾಯಿತು ಎಂದು ಈ ಪುಟ್ಟ ಕೃತಿಯಲ್ಲಿ ಸ್ಪಷ್ಟವಾಗಿ ಬರೆಯುತ್ತಾ ಹೋಗಿದ್ದಾರೆ.

1) ಅನುಭಾವದ ಮೊಳಕೆ ಮತ್ತು ಕೃಪಾಹಸ್ತ : ಸಹ್ಯಾದ್ರಿ ಪರ್ವತ ಮಾಲೆಯ ಹಳ್ಳಿಯಲ್ಲಿ ಜನಿಸಿದ ಪುಟ್ಟಪ್ಪನವರ ಮೈಸೂರಿನ ಸಂತೆಪೇಟೆಯ ಕಿಷ್ಕಿಂದೆಯಂಥ ಕೋಣೆಯಲ್ಲಿನ ವಾಸ, ಸಾಹಿತ್ಯದೊಡನೆ ಅವರ ಪ್ರವಾಸ, ಲೌಕಿಕ ಜಂಜಡದ ಪ್ರಯಾಸ ಮತ್ತು ಅಸಾಮಾನ್ಯ ಯೋಗಿ ಸ್ವಾಮಿ ಸಿದ್ದೇ ಶ್ವರ ನಂದರ ಪ್ರವೇಶ.

2) ಆಶ್ರಮ ವಾಸದ ಅಪೂರ್ವ ದಿನಗಳು : ರಸಋುಷಿ, ವಿಚಾರವಾದಿ, ಕುವೆಂಪು ಅವರ ವ್ಯಕ್ತಿತ್ವದ ಮೂಲ ಪ್ರಬಲ ವಿನ್ಯಾಸವಾಗಿದ್ದು ಶ್ರೀ ರಾಮಕೃಷ್ಣಾಶ್ರಮದಲ್ಲಿ. ಇದು ಮುಂದೆ ಜಗದಗಲ ವ್ಯಾಪಿಸಿದ ಮೇರು ವ್ಯಕ್ತಿತ್ವಗಳು ಕುವೆಂಪುರವರಿಗೆ ಜತೆಯಾದ ಜಗಲಿಯಾಯಿತು. ಕುವೆಂಪು ಆಶ್ರಮದ ಧ್ಯಾನ ಸಮಯವನ್ನು “ನೀಲಾಂಜನದ ಬೆಳಕಿನ ರಹಸ್ಯಮಯ ಕತ್ತಲು” ಎಂದು ರಮ್ಯವಾಗಿ ವರ್ಣಿಸುತ್ತಾರೆ. ಆ ರಹಸ್ಯಮಯ ಕತ್ತಲೆಯ ಅಂತಃಹೊಳಹುಗಳೇ ಕುವೆಂಪುರವರ ಬಹಿರ್ ಬೆಳಕಾಗಿ ಗೋಚರವಾಯಿತು.

3) ಪ್ರತಿಭೆಯ ಆವಿರ್ಭಾವ : ಬಾಡಿಗೆ ಮನೆಯಲ್ಲಿದ್ದ ರಾಮಕೃಷ್ಣಾಶ್ರಮ ವಾಸಿಯಾಗಿ ಸೇರುವ ಪುಟ್ಟಪ್ಪನವರು ಅಲ್ಲಿಯೇ ಅದ್ವಿತೀಯ ಕೃತಿಗಳನ್ನು ರಚಿಸಿ ವಾಚಿಸಿದರು. ‘ಶ್ರೀ ರಾಮಾಯಣ ದರ್ಶನಂ’ ಪ್ರಾರಂಭಗೊಂಡಿದ್ದು ಆಶ್ರಮದಲ್ಲಿಯೇ. ಮೊದಲ ಶೋತೃವಾಗಿ ಆ ಗುರು ಮಹಾರಾಜ, ಆತನ ಮುಂದೆ ಈ ಕವಿರಾಜ. ದಿವಾಣ ರಸ್ತೆಯ ಆಶ್ರಮದ ಬಾಡಿಗೆ ಕಟ್ಟಡವೇ ಸಾಮ್ರಾಜ್ಯ. ‘ಜಲಗಾರ’ ನ ಶಿವನಾಗಿ ‘ಮಹಾರಾತ್ರಿ’ ಸಿದ್ಧಾರ್ಥನಾಗಿ ಪ್ರತಿಭೆಯ ಭೈರವ ಪುಟ್ಟಪ್ಪನವರ ಎದೆಯಲ್ಲಿ
“ ಹಸಿವೇ ಅನ್ನ, ನೆಲವೇ ಹಾಸು, ಮೃತ್ಯುವೇ ಬಹುಮಾನ
ಹಗಲಿರುಳೂ ಮಳೆಇಸಿಲೂ ಚಳೀಗಾಳಿಯ ಹೊದಿಕೆ ”
“ನನ್ನದೆಲ್ಲವೆಂದು ಬಲ್ಲೆ
ನಾನೇ ಎಲ್ಲ ಎಂದು ಬಲ್ಲೆ,
ಸಾಧುಗಿನ್ನು ಏನು ಬೇಕು?
ನಾನೆ ನನಗೆ ಸಾಕೆ ಸಾಕು……” ಎನ್ನುತ್ತಾ ತಾಂಡವ ಶುರು ಮಾಡಿದ್ದ

4) ದೀಕ್ಷೆ ಎಂಬ ಅಗ್ನಿಪಥ : ಶ್ರೀರಾಮಕೃಷ್ಣರ ಪದತಲದಲ್ಲಿ ಸಾಧನೆ ಮಾಡಿದ ಅವರ ನೇರ ಶಿಷ್ಯ ಶ್ರೀ ಸ್ವಾಮಿ ಶಿವಾನಂದರಿಂದ ಅಕ್ಟೋಬರ 08, 1929 ರಂದು ಕುವೆಂಪು ಮಂತ್ರ ದೀಕ್ಷೆ ಪಡೆಯುವ ಅಪೂರ್ವ ಯೋಗ ಹೊಂದುತ್ತಾರೆ. ಅವರ ಕಾವ್ಯಾತ್ಮ ಚೇತನ
“ ಜೀವನವನಿತುಂ ಜಪವೆನಗಾಗಿರೆ
ಜಪಗಿಪ, ಮಣಿಗಿಣಿ ಮಾಲೆಯದೇಕೆ ?
ಸುಂದರ ಜಗ ಶಿವಮಂದಿರವಾಗಿರೆ
ಅಂಧತೆ ಕವಿದಿಹ ದೇಗುಲವದೇಕೆ ?” ಎಂದು ಸ್ವಂತಿಕೆಯಿಂದ ಪ್ರಶ್ನಿಸುತ್ತಾ
“ ರಾಮಕೃಷ್ಣ ಗುರು ಕರುಣಿಸಿ ತಾನು
ವ್ಯೋಮಕ್ಕೇರಿಸಿದಾತನೂ ನೀನು !” ಎನ್ನತ್ತ ಗಗನಗಾಮಿಯಾಗುತ್ತದೆ.
“ ಕಡಲಾಗಿ ಹಿಂತಿರುಗಲೆಂದೇ ಹನಿಯಾಗಿ ಹೊರಟಿಹೆನು” ಎಂಬ ವಿನಮ್ರತೆಯೂ
ಅಲ್ಲಿದೆ.
“ ಸೌಂದರ್ಯವೆನ್ನ ಹರಿ! ಸೌಂದರ್ಯವೆನ್ನ ಹರ !
ಸೌಂದರ್ಯವೆನ್ನ ಅವ್ಯಕ್ತ ಬ್ರಹ್ಮ
ಸೌಂದರ್ಯವೇ ಪುಣ್ಯ, ಸೌಂದರ್ಯವೇ ಸ್ವರ್ಗ
ಸೌಂದರ್ಯವೇ ನನ್ನ ಚರಮಮೋಕ್ಷ !”
ಎಂಬ ಸ್ಪಷ್ಟಗುರಿಯೂ ಅಲ್ಲಿದೆ. ಅದಕ್ಕೇ ಕುವೆಂಪುರವರನ್ನು ರಸಋಷಿ ಎಂದದ್ದು ಬರಿ ಮಾತಿನ ಖುಷಿಗಲ್ಲ!!

5) ಸಾಧನೆಯ ಹೆಜ್ಜೆಗುರುತುಗಳು : ಪುಟ್ಟಪ್ಪನವರು ಕುವೆಂಪು ಎಂಬ ದರ್ಶನಕ್ಕೆ ಒಳಗಾಗುವ ಘಟ್ಟ.
“ ಹನಿಯೊಡಲಲಿ ಸಾಗರವಿದೆ
ಹುಡಿಯಲಿ ಕುಲಪರ್ವತವಿದೆ
ನಿಮಿಷದಿ ಕಲ್ಪಾಂತರವಿದೆ
ಕಿಡಿಯಲಿ ಬ್ರಹ್ಮಾಂಡವಿದೆ”
“ ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?
ಎಂದೋ ಮನು ಬರೆದಿಟ್ಟುದಿಂದೆಎಗೆ ಕಟ್ಟೇನು ?
ನಿನ್ನೆದೆಯ ದನಿಯೆ ಋಷಿ! ಮನು ನಿನಗೆ ನೀನು!”
ಎಂಬಲ್ಲಿ ದರ್ಶನ ತಾನು ತಾನಾಗಿಯೇ ಪಲ್ಲವಿಸಿದ ಇದಕ್ಕೆ ಬೇರೆ ಪದಗಳ ಅಗತ್ಯವಿಲ್ಲ.

6) ಗೃಹೀಭಕ್ತನ ಅಂತರಂಗ : ಪುಟ್ಟಪ್ಪನವರು ರಾಮಕೃಷ್ಣಾಶ್ರಮದಲ್ಲಿ ಸನ್ಯಾಸಿಯಾಗಿ ಮುಂದುವರಿಯುವ ಒಳ ಬಯಕೆ ಇಟ್ಟುಕೊಂಡಿದ್ದರು. ಅಂತರಂಗ ರಣರಂಗವಾಗಿ “ ಮರುಭೂಮಿ ಮಾರ್ಗದಲಿ, ವೈರಾಗ್ಯ ಸಾಧಕರು
ಮುಕ್ತಿ? ನಾನದನೊಲ್ಲೆ ಅದು ನನ್ನ ಪಥವಲ್ಲ”
ಎಂದು ಒಳಗಿನ ಬೇಗುದಿ ಕಾವ್ಯದ ಹಾದಿಯಾಗಿ ಹೊರಹೊಮ್ಮುತ್ತದೆ. ಪುಟ್ಟಪ್ಪ ಅವರನ್ನು ಆವರಿಸಿದ ಕೃಪಾಹಸ್ತದ ತೋರು ಬೆರಳಾದ ಸ್ವಾಮಿ ಸಿದ್ದೇಶ್ವರ ನಂದರ ಪ್ರೇರಣೆ ಧೋರಣೆಗಳಿಂದ ಅವರು ಗೃಹಸ್ಥಾಶ್ರಮ ಸ್ವೀಕರಿಸುತ್ತಾರೆ. “ ನಿನ್ನ ಚುಂಬನರಸದ ಪಾನದಿ ಕವಿಯೆ ಯೋಗಿ” ಎಂದೆನ್ನುವ ಪುಟ್ಟಪ್ಪನವರು “ ಜೀವೋತ್ಸವದ ತೇರ್ಗೆ ಗಾಲಿಯಾದೊಡೆ ಬಾಳು
ಸಾರ್ಥಕಂ, ಸುಂದರಂ, ಮಧುರಚಿರನೂತನಂ
ನೀರಸತೆಗಿಂ ಪಾಪಮಿಲ್ಲ, ರಸಕೆಣೆಯಾಗಿ
ಪುಣ್ಯಮಿಲ್ಲನೆ- ಪೂರ್ಣಯೋಗಿಯೆ ಪರಮಭೋಗಿ”
ಎಂದು ಭೋಗದಲ್ಲೂ ರಸಯೋಗಿಯಾಗುತ್ತಾರೆ. ಪತ್ನಿಯನ್ನು
“ ಗುರುವು ಕೊಟ್ಟ ಪರಮಭಿಕ್ಷೆ
ನೀನೆ ನನಗೆ ಧರ್ಮರಕ್ಷೆ
ನಿನ್ನ ನೆನಪೆ ನೀಲೆ ಶಿಕ್ಷೆ
ಪ್ರೇಮದೆನ್ನ ಹೃದಯಕೆ!
ನೀನೆ ದಿಶಾದೇವಿಯಲ್ತೆ
ಪೂರ್ಣಚಂದ್ರನುದಯಕೆ” ಎಂದು ಭಾವಿಸುತ್ತಾರೆ. ತನ್ನ ಮಗುವಿಗಾಗಿ
“ ಕಳುಹಿಸು ಯೋಗ್ಯನನು ಹೇ ಗುರುವೇ , ಕಳುಹಿಸು ಭಾಗ್ಯನನು ಹೇ ಗುರುವೇ” ಎಂದು ಬೇಡುತ್ತಾರೆ.

7) ರಸಸೃಷ್ಟಿಯಸಹಜಾಭಿವ್ಯಕ್ತಿ : ರಸ ತೀವ್ರತೆ ವೈಚಾರಿಕತೆ ಅಧ್ಯಾತ್ಮ ಉಚಿತಾನುಚಿತಗಳ ನಿಷ್ಠುರ ನಿಲುವು ಕುವೆಂಪುರವರಲ್ಲಿ ಸುಸಂಬದ್ಧವಾಗಿ ಹೊಕ್ಕಾಗಿತ್ತು, ವ್ಯಕ್ತವಾಗುತ್ತಿತ್ತು. ಅವುಗಳ ಹಿಂದೆ ನಿರ್ಭೀತ ಅಪ್ಪಟ ಪ್ರಾಮಾಣಿಕತೆ ಇರುತ್ತಿತ್ತು. ಇದು ಅವರ ಮಾತುಗಳನ್ನು ಮಂತ್ರವಾಗಿಸಿತು.
“ ಬರಿ ಹನಿಯಲ್ಲಿದು; ಸ್ವರ್ಗಾದೇಶ !
ಬರಿ ಹೊಳಪಲ್ಲಿದು; ದಿವ್ಯಾದೇಶ !
ಅವತಾರಗಳಲಿ ಇದೂ ಒಂದೀ ಹಿಮಮಣಿ
ನಶ್ವರಲೀಲೆಯ ಈ ಶಾಶ್ವತನಿಗೆ ಮಣಿ”

8) ವಿಶ್ವಮಾನವತೆಯ ಮಹಾಮಾರ್ಗ : ಕುಪ್ಪಳ್ಳಿಯ ಪುಟ್ಟಪ್ಪನವರಿಗೆ ವಿಶ್ವ ಮಾನವ ಕುವೆಂಪು ಏನೆಂದು ಗೊತ್ತಿತ್ತು.
“ ಎಲ್ಲವೊಂದುಗೂಡಲೆಂದು ವಿಧಿಯ ಮನಸು ಕಡೆದ ಕನಸು
ಕಾವ್ಯ ಕಣಸೆ ಕಾಣ್; ಕುವೆಂಪು!
ಭಕ್ತಿಯಡಿಯ ಹುಡಿ- ಕುವೆಂಪು! ಗುರುಹಸ್ತದ ಕಿಡಿ- ಕುವೆಂಪು!
ನುಡಿರಾಣಿಯ ಗುಡಿ- ಕುವೆಂಪು! ಸಿರಿಗನ್ನಡ ಮುಡಿ ಕುವೆಂಪು!
ಇರ್ದುಮಿಲ್ಲದೀ ಕುವೆಂಪು!”
ಇಂಥ ಸಾಲು ಬರೆಯಲು ಎಂಥ ಧೀಮಂತಿಕೆ ಬೇಕು ಎಂದು ಯೋಚಿಸಿದಾಗ ಅಚ್ಚರಿಯಾಗುತ್ತದೆ. “ ನಾನು ರಾಮಕೃಷ್ಣ ಗೋತ್ರ ಸಂಭೂತ” ನೆಂದು ಹೇಳುತ್ತಿದ್ದ ಕುವೆಂಪು “ ವಜ್ರವನಾಗಿಸು ಈ ಇದ್ದಲಿನ ಚೂರನು
ನಿನ್ನಡಿಯ ವಿದ್ಯುತ್ ಸ್ಪರ್ಶದಿಂದ, ಓ ಜಗದ್ಗುರುವೇ,
ವಜ್ರಾವಾಯುಧವಾಗಿ ಇಂದ್ರಹಸ್ತವ ಸೇರಿ
ಆಸುರೀ ದಮನದಲನಕೆ ನಿವೇದಿತವಾಗಲಿ!” ಎಂದು ಪ್ರಾರ್ಥಿಸುತ್ತಾರೆ.

ಕುವೆಂಪುರವರ ಮಾತು, ವ್ಯಕ್ತಿತ್ವ, ದರ್ಶನ ಪರೀಕ್ಷೆಗೊಳಪಟ್ಟಿದೆ. ಕೆಲ ಕೊಂಕು ನುಡಿಗಳು ಬಂದಿವೆ. ಅವರೆಲ್ಲರಿಗೂ ಕುವೆಂಪು ಸಹಜವಾಗಿ “ನಾನೇರುವೆತ್ತರಕೆ ನೀನೇರಬಲ್ಲೆಯಾ?!!” ಎಂದು ಕೇಳುತ್ತಾರೆ. ಈ ಮಾತನ್ನು ಅಹಂ ಕೇಂದ್ರಿತವಾಗಿ ತೆಗೆದುಕೊಳ್ಳದೆ ಆಹ್ವಾನವಾಗಿ ಸಾಧನಾ ಕೇಂದ್ರಿತವಾಗಿ, ಪರೀಕ್ಷಾರ್ಥವಾಗಿ ತೆಗೆದುಕೊಂಡರೆ ನಮ್ಮ ಮನಸ್ಸು ಕೊಂಚವಾದರೂ ವಿಕಸಿತವಾಗುತ್ತದೆ.

ಡಾ ಗುರುಪಾದ ಮರಿಗುದ್ದಿ ಅವರು ಈ ಕೃತಿಯ ಮೂಲಕ ಕುವೆಂಪುರವರ ಅಂತಸ್ರೋತದ ಮೇಲೆ ಬೆಳಕು ಚೆಲ್ಲುತ್ತಾರೆ ಕನ್ನಡ, ಕುವೆಂಪು ಸಾಹಿತ್ಯಾಸಕ್ತರು ಮೇರು ಕವಿಯ ಅಪರೂಪದ ಒಳನೋಟಗಳಿಗಾಗಿ ಈ ಕೃತಿಯನ್ನು ಅವಶ್ಯವಾಗಿ ಓದಬಹುದು. ಕುವೆಂಪುರವರ ನೇರ ಸಂಪರ್ಕದಲ್ಲಿದ್ದು ಅವರ ಸಾಹಿತ್ಯವನ್ನು ವಿಶೇಷವಾಗಿ ಅಭ್ಯಸಿಸಿದ ಡಾ ಗುರುಪಾದ ಮರಿಗುದ್ದಿ ಅವರ ಈ ಕೃತಿಯನ್ನು ಹಿರಿಯ ಸಾಹಿತಿ ಸಿಪಿಕೆ ಕೃತಿ ಅವತಾರವೆಂದು ಕರೆದಿದ್ದಾರೆ.

Raju Sankpal

Advertisements

About pustakapremi

ಪುಸ್ತಕ ಪರಿಚಯ, ವಿಮರ್ಶೆ, ಅನಿಸಿಕೆ ಮತ್ತು ಮಾಹಿತಿ ವೇದಿಕೆ. ಪುಸ್ತಕಪ್ರೇಮಿಗಳಿಗೊಂದು ಸಮೃದ್ಧ ತಾಣ.
This entry was posted in ಕನ್ನಡ, ಗುರುಪಾದ ಮರಿಗುದ್ದಿ, Uncategorized and tagged , , . Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s