a walk in the woodsಎ ವಾಕ್ ಇನ್ ದಿ ವುಡ್ಸ್ – ಬಿಲ್ ಬ್ರಾಯ್ಸನ್

ನಲವತ್ತನಾಲ್ಕು ವಯಸ್ಸಿನ ಇಬ್ಬರು ಸ್ನೇಹಿತರು, 2200 ಮೈಲಿಗಳ ಚಾರಣ!

ಸಂಯುಕ್ತ ಅಮೆರಿಕದಲ್ಲಿ ಎರಡು ಪ್ರಮುಖ ಚಾರಣದ “ಟ್ರೇಲ್” ಗಳಿವೆ. ಒಂದು ಪಶ್ಚಿಮ ಕರಾವಳಿಯ ಉದ್ದಕ್ಕೆ, ಮೆಕ್ಸಿಕೋದಿಂದ ಕೆನಡಾವರೆಗೂ ಇರುವ ಪೆಸಿಫಿಕ್ ಕ್ರೆಸ್ಟ್ ಟ್ರೇಲ್. ಮತ್ತೊಂದು ಪೂರ್ವ ಕರಾವಳಿಯಗುಂಟ ಇರುವ ಅಪಲೇಷಿಯನ್ ಪರ್ವತಶ್ರೇಣಿಗಳ ಟ್ರೇಲ್.

ಅಪಲೇಷಿಯನ್ ಟ್ರೇಲ್ ನಲ್ಲಿ ಮಾಡುವ ಚಾರಣವು ನಾವು ತಿಳಿದಿರುವ ಮಟ್ಟದ ವೀಕೆಂಡ್ ಚಾರಣಗಳಂತಲ್ಲ. ಅದು ಉತ್ಸಾಹಿ ಸ್ವಯಂ ಸೇವಕರು ಅಚ್ಚುಕಟ್ಟಾಗಿ ಕಾಲುರಸ್ತೆಗಳನ್ನು ಕಡಿದು, ಮಾರ್ಗಸೂಚಿಗಳನ್ನು ನೆಟ್ಟು, ಅಲ್ಲಲ್ಲಿ ತಂಗುದಾಣಗಳನ್ನು ಕಟ್ಟಿ, ಹತ್ತಿರ ಒಂದು ಶತಮಾನದಿಂದ ಸುಸಜ್ಜಿತವಾಗಿ ನಿರ್ವಹಣೆಯಾಗುತ್ತಿರುವ ಬರೋಬ್ಬರಿ 2200 ಮೈಲಿಗಳ ಚಾರಣ ಮಾರ್ಗ!

ಬಿಲ್ ಬ್ರಾಯ್ಸನ್, ಪ್ರವಾಸ ಕಥನಗಳಿಂದ ಹೆಸರು ಮಾಡಿರುವ ಬ್ರಿಟಿಷ್-ಅಮೆರಿಕನ್ ಲೇಖಕ. ಅವರ “ಎ ವಾಕ್ ಇನ್ ದಿ ವುಡ್ಸ್” ಅಮೆರಿಕ ದೇಶವನ್ನು ಹಾಲಿವುಡ್, ಎಂಐಟಿ, ಕಸಿನೊಗಳು, ವಾಲ್ ಸ್ಟ್ರೀಟ್, ಆಪಲ್, ಮೈಕ್ರೋಸಾಫ್ಟ್, ಸಿಲಿಕಾನ್ ವ್ಯಾಲಿಗಳಂತಹ ವಿಷಯಗಳಿಂದ ಬೇರ್ಪಡಿಸಿ ಬೇರೆಯದೇ ಆಯಾಮದಿಂದ ನೋಡಲು ಪ್ರೇರೇಪಿಸುತ್ತದೆ.

ಬ್ರಾಯ್ಸನ್ ನಾಗರೀಕತೆ ಬೆಳೆದಂತೆಲ್ಲ ಮನುಷ್ಯ -ಪ್ರಕೃತಿ ನಡುವಣ ತಿಕ್ಕಾಟವನ್ನು ನೋಡುವ ರೀತಿ ವಿಶೇಷವಾಗಿದೆ. ಸ್ನೇಹಿತ ಸ್ಟೀಫನ್ ಕಾಟ್ಜ್ ಜತೆ ತಮ್ಮ ಚಾರಣದ ಅನುಭವಗಳನ್ನು ರಸವತ್ತಾಗಿ, ತಿಳಿ ಹಾಸ್ಯದ ಮೂಲಕ ಹೇಳುತ್ತಾ ಅಮೆರಿಕದ ನಗರಗಳ ಮತ್ತು ಹಳ್ಳಿ

ಗಳ ಇತಿಹಾಸ, ಅರಣ್ಯಗಳು, ವನ್ಯಜೀವ, ನದಿಗಳು, ಸರೋವರಗಳು, ಸರ್ಕಾರವು ಅವುಗಳನ್ನು ನಿರ್ವಹಣೆ ಮಾಡುವ ಕಾರ್ಯವೈಖರಿ, ಅಪಲೇಷಿಯನ್ ಚಾರಣ ಮಾರ್ಗದ ಚರಿತ್ರೆ ಪ್ರತಿಯೊಂದನ್ನೂ ತಮ್ಮ ವಿಶಿಷ್ಟ ದೃಷ್ಟಿಕೋನದಿಂದ ತಾರ್ಕಿಕವಾಗಿ ವಿಶ್ಲೇಷಿಸಿದ್ದಾರೆ.

ಅಪಲೇಷಿಯನ್ ಚಾರಣವನ್ನು ಸಾವಿರಾರು ಜನ ಅಮೆರಿಕನ್ನರು ಪ್ರತಿವರ್ಷ ಪ್ರಾರಂಭಿಸುತ್ತಾರೆ. ಅದರಲ್ಲಿ 2200 ಮೈಲುಗಳನ್ನು ಪೂರೈಸುವರು ವಿರಳ. ಅಷ್ಟು ದೂರವನ್ನು ಒಂದೇ ಸಲ ಪೂರೈಸಲು ಆರು ತಿಂಗಳು ಬೇಕು! ಆ ಕಾರಣದಿಂದಲೇ ಬಹಳಷ್ಟು ಜನ ಸೆಕ್ಷನ್ ಹೈಕ್ ಮಾದರಿಯಲ್ಲಿ(ಲೇಖಕರೂ ಕೂಡ) ಹಂತ ಹಂತವಾಗಿ ಚಾರಣ ಕೈಗೊಳ್ಳುತ್ತಾರೆ. ಋತು ಬದಲಾದಂತೆ ಪ್ರಕೃತಿಯಲ್ಲಿ ಆಗುವ ಬದಲಾವಣೆಗಳನ್ನು, ಚಾರಣ ಮಾರ್ಗ ದುಸ್ತರವಾಗುವ, ಹೊಸ ಕಾಠಿಣ್ಯತೆಗಳು ಎದ್ದುನಿಲ್ಲುವ, ಕಾಡು ತನ್ನದೇ ಆದ ರೀತಿಯಲ್ಲಿ ಸೌಂದರ್ಯವನ್ನು ಹೊರಹಾಕುವ ವೈಖರಿಯನ್ನು ಪುಸ್ತಕದಲ್ಲಿ ಸವಿಯಬಹುದು. ಕಡಿದಾದ ಕೊಲ್ಲಿಗಳು, ವಿಶಾಲ ಹುಲ್ಲುಗಾವಲುಗಳು, ಮೊಣಕಾಲು ಮಟ್ಟಕ್ಕಿರುವ ಹಿಮ, ಬೃಹತ್ ಮರಗಳು, ವಯ್ಲೆಟ್ ಹೂಗಳ ವಿವರಣೆ ವರ್ಡ್ಸ್ ವರ್ಥ್ ಕವಿತೆಗಳ ಮೆಲುಕು ಹಾಕುವಂತೆ ಆಗುತ್ತದೆ.

 

ಪುಸ್ತಕ ಓದಿದ ಬಳಿಕ ನಮ್ಮಲ್ಲೂ ಈ ತರಹದ “ಟ್ರೇಲ್” ಒಂದನ್ನು ಪಶ್ಚಿಮ ಘಟ್ಟಗಳಲ್ಲಿ ಅಭಿವೃದ್ಧಿಪಡಿಸಬಹುದೇ, ಪ್ರಾಣಿ ಪಕ್ಷಿಗಳಿಗೆ

ಹಾನಿಯಾಗದಂತೆ, ಬಿಸ್ಲೇರಿ – ಬಡ್ವೈಸರ್ ಬಾಟಲಿಗಳನ್ನು ಬಿಸಾಡದೆ ಚಾರಣ ಮಾರ್ಗದ ಉಪಯೋಗವನ್ನು ನಾವು ಪಡೆಯಬಹುದೇ ಎಂದು ಯೋಚಿಸುವಂತಾಗುತ್ತದೆ. ಮತ್ತೊಮ್ಮೆ ಕಾರಂತರ “ಕುಡಿಯರ ಕೂಸು” ಓದುವಂತೆ, ಬ್ಯಾಗ್ ಪ್ಯಾಕ್ ಮಾಡಿ ಸಹ್ಯಾದ್ರಿಗಳ ಕಡೆಗೆ ಓಡುವಂತೆ ಪ್ರೇರೇಪಿಸುತ್ತದೆ ಈ ಪುಸ್ತಕ. ಅಂದಹಾಗೆ ಈ ಕೃತಿಯು 2015ರಲ್ಲಿ ಚಲನಚಿತ್ರವಾಗಿಯೂ ಬಂದಿದೆ.

ಚಾರಣಪ್ರಿಯರು, ನಿಸರ್ಗ ಪ್ರೇಮಿಗಳು ಓದಲೇಬೇಕಾದ ಪುಸ್ತಕ! ಗಣರಾಜ್ಯೋತ್ಸವ ದಿನದ ಶುಭಾಶಯಗಳು!

Shrinidhi Desai

Advertisements