’ಕಾಡಿನ ಬೆಂಕಿ’ – ನಾ. ಡಿಸೋಜ

kadina benkiತನ್ನೊಳಗಿನ ಬೆಂಕಿ ತನ್ನನ್ನು ಸುಟ್ಟೀತೆ ಪರರನ್ನಲ್ಲ. ಹಾಗೆ ಹೊರಗಿನಿಂದ ಬೆಂಕಿ ಬೀಳದ ಹೊರತು ಒಳಗೆ ಕಿಡಿ ಹತ್ತುವುದಿಲ್ಲ. ನಮ್ಮಲ್ಲಿರುವ ಅಜ್ಞಾನದ ಕೊರತೆ ಮತ್ತು ಪರರ ಅಜ್ಞಾನವೂ ಜೊತೆಗೂಡಿ ನಮ್ಮನ್ನು ಕತ್ತಲೆಡೆ ಕರೆದೊಯ್ಯಬಹುದು. ಅಂದರೆ ಅಜ್ಞಾನವೇ ನೋವಿನ ಮೂಲ ಎಂದಾಯ್ತು. ಹಾಗಾದರೆ ಅಜ್ಞಾನ ಎಂದರೇನು? ಅದನ್ನು ಹಲವು ಮಜಲುಗಳಲ್ಲಿ ಹೇಳಬಹುದು ದಾರ್ಶನಿಕವಾಗಿ, ಮಾರ್ಮಿಕವಾಗಿ. ಅರಿವಿಗೆ ಬಂದಷ್ಟು ಜ್ಞಾನ, ಬರದಿರುವುದೆಲ್ಲವೂ ಅಜ್ಞಾನ. ಯಾರಿಗೆ ಯಾವುದರ ಎಷ್ಟು ಪ್ರಾಪ್ತಿಯೋ ಅಷ್ಟು. ಕತ್ತಲು ಬೆಳಕಿಗಿರುವ ರೂಪುರೇಷೆಯಂತೆ ಜ್ಞಾನಕ್ಕೂ ಅಜ್ಞಾನಕ್ಕೂ ತನ್ನದೇ ಆದ ಹಲವು ಒಳ ಕವಲುಗಳಿವೆ, ಓರೆಕೋರೆಗಳಿವೆ.

ಈ ಕಾದಂಬರಿಯ ಚೌಕಟ್ಟಿನೊಳಗೆ ಹೇಳಬೇಕಾದರೆ, ಅಜ್ಞಾನ ಎಂದರೆ ಅದು ಲೈಂಗಿಕತೆ. ಇದರ ಕುರಿತು ಬೆಳಕು ಚೆಲ್ಲಲು ಯತ್ನಿಸಿದಷ್ಟೂ ಮುಚ್ಚಿಕೊಳ್ಳುತ್ತದೆ. ಸಭ್ಯತೆಯ ಪರಿಧಿಯಲ್ಲಿ ಇರಿಸಿದಷ್ಟೂ ಹರಡಿಕೊಳ್ಳುತ್ತದೆ. ಬೆಳಕಿನೆಡೆಗೆ ತರಲೆತ್ನಿಸಿದಷ್ಟೂ ಕರೆಗಟ್ಟುತ್ತದೆ. ಲೋಕೋ ಭಿನ್ನ ರುಚಿಃ. ಒಬ್ಬೊಬ್ಬರಿಗೆ ಒಂದೊಂದು ಅಜ್ಞಾನದಂತೆ ಪರಿಭಾಸವಾಗಬಹುದು. ಲೈಂಗಿಕತೆಯ ಬಗ್ಗೆ ನಮಗಿರುವ ಅಂಧತೆಯೇ ಅಜ್ಞಾನವಾಗಬಾರದೇಕೆ?

ನಮ್ಮೊಳಗೆ ಲೈಂಗಿಕ ಅಜ್ಞಾನ ಇರುವುದರಿಂದಲೇ ನಾವು ನೋಡುವ ಪರಿಸರ, ವ್ಯಕ್ತಿ ಮತ್ತು ಅನುಭವ ಬೇರೆ ಬೇರೆಯಾಗಿ ಮನಸ್ಸಿನ ಮೇಲೆ, ಸ್ವಾಸ್ಥ್ಯ ಸಮಾಜದ ಮೇಲೆ ಮಾರಕ ಪರಿಣಾಮ ಬೀರುತ್ತಿದೆ. ಸಂಬಂಧಗಳನ್ನು ನೋಡುವ, ಎದುರಿಸುವ ಮತ್ತು ಸಂಭಾಳಿಸಿಕೊಂಡು ಹೋಗುವ ಮೂಲಭೂತ ಸ್ವರೂಪವನ್ನೇ ಕಳೆದುಕೊಳ್ಳುತ್ತಿವೆ. ಇದಕ್ಕೆ ಅಸಂಬದ್ಧ ಕಲ್ಪನೆಗಳು, ಜೊತೆಗೆ ವಿಕಾರ ಮನಸ್ಥಿತಿಯೂ ಸೇರಿಕೊಂಡಾಗ ಆಗುವುದು ನಾ. ಡಿಸೋಜಾ ವಿರಚಿತ “ಕಾಡಿನ ಬೆಂಕಿ”.

ಕಾದಂಬರಿಯ ನಾಯಕ ಕಾಡಿನ ಕಾವಲುಗಾರ. ಹೊಸದಾಗಿ ಕೆಲಸಕ್ಕೆ ಸೇರಿರುತ್ತಾನೆ. ಸುತ್ತ ಇರುವ ಸುಂದರ ಕಾಡಿನ ರಮ್ಯ ವನಸಿರಿ ಇರುವಷ್ಟು ಜನಸಂದಣಿ ಇರದ ಪ್ರದೇಶವದು. ಅಲ್ಲೊಬ್ಬ ಮೇಟಿ. ವಯಸ್ಸಾದವ. ಆತನಿಗೆ ಎರಡನೇ ಹೆಂಡತಿ ಇರುತ್ತಾಳೆ, ಸಣ್ಣ ಪ್ರಾಯದವಳು. ಆಕೆಗೆ ವಯೋಸಹಜ ಕಾಮನೆಗಳು, ಮಕ್ಕಳಿಲ್ಲದ ಕೊರಗು, ಜೊತೆಗೆ ಮೇಟಿಯ ಅಸಮರ್ಥತೆ. ನಾಯಕನಿಗೆ ಮೊದಮೊದಲು ಕುತೂಹಲ ಬೆರೆತ ಮುಜುಗರ, ನಾಚಿಕೆ. ಬೆಂಕಿಯಿದ್ದೆಡೆ ಬೆಣ್ಣೆ ಕರಗದಿರುತ್ತದೆಯೇ? ಯಾರು ಬೆಂಕಿ? ಯಾರು ಬೆಣ್ಣೆ? ಅದಿಲ್ಲಿ ಅಪ್ರಸ್ತುತ. ಆಕೆ ಗಂಡನನ್ನು ಉದ್ರೇಕಿಸುತ್ತಾಳೆ. ಆತ ಸೋಲುತ್ತಾನೆ. ಆದರೆ ಇದನ್ನು ನೋಡಿದ ನಾಯಕ ವಿಕೃತನಾಗುತ್ತಾನೆ. ಅದೇ ಸಮಯದಲ್ಲಿ ಕಾಡಿನ ಮೂಲದಾಳದಲ್ಲೆಲ್ಲೋ ಬೆಂಕಿ ಬಿದ್ದಿರುತ್ತದೆ. ಇಲ್ಲಿ ಇಬ್ಬರ ಸಮಾಗಮವಾಗುತ್ತದೆ.

ಕೆಲವು ದಿನಗಳೆದ ಬಳಿಕ ನಾಯಕನಿಗೆ ಮದುವೆಯಾಗಿ ಹೆಂಡತಿಯನ್ನು ಕರೆತರುತ್ತಾನೆ. ಆಕೆಯನ್ನು ಬಹಳ ಪ್ರೀತಿಸುತ್ತಾನೆ. ಆದರೆ ಅವರಿಬ್ಬರ ಸಮಾಗಮ ನಡೆದಿರುವುದಿಲ್ಲ. ಮೊದಲಿಗೆ ತನ್ನ ಗಂಡನ ಈ ವಿಚಿತ್ರ ನಡವಳಿಕೆಯನ್ನು ಪ್ರೀತಿಯೆಂದೇ ತಿಳಿದಿರುತ್ತಾಳೆ. ಆಕೆಯೂ ಉಪ್ಪು ಹುಳಿ ತಿಂದುಂಡವಳಲ್ಲವೇ? ಬಯಕೆ ಅವಳಿಗೂ ಕೆರಳುತ್ತದೆ. ಉಹುಂ, ನಾಯಕ ಸಹಕರಿಸಲ್ಲ. ಪ್ರೀತಿಯ ಮಾತಾಡಿ ಆಕೆಯನ್ನು ಸುಮ್ಮನಿರಿಸುತ್ತಾನೆ. ಸಮಯ ಸರಿದಂತೆ ಮೇಟಿಯ ಹೆಂಡತಿ ತನ್ನಾಸೆ ಫಲಿಸಿತೆಂಬಂತೆ ಗರ್ಭವತಿಯಾಗಿ ಹೆರಿಗೆಗೆ ತವರಿಗೆ ಹೋಗುತ್ತಾಳೆ.

ಇಲ್ಲಿಯವರೆಗೂ ಕಥೆಯ ಧಾಟಿಯನ್ನು ಊಹಿಸಬಹುದು. ಊಹಿಸಲಾಗದ್ದು ನಾಯಕನ ವಿಕೃತ. ಇತ್ತ ನಾಯಕ ತನ್ನ ಪ್ರೇಯಸಿ ತವರಿಗೆ ಹೋದ ಮೇಲೆ ಹುಚ್ಚನಾಗುತ್ತಾನೆ. ಬಯಕೆಯ ಬೆಂಕಿ ಸುಡುತ್ತಿರುತ್ತದೆ. ಪಕ್ಕ ಹೆಂಡತಿಯಿದ್ದೂ ನಿಷ್ಕ್ರಿಯ ಮತ್ತು ಅಸಮರ್ಥನಾಗಿರುತ್ತಾನೆ. ಕಾರಣ ಅವನನ್ನು ಉದ್ರೇಕಗೊಳಿಸುವರೇ ಇರುವುದಿಲ್ಲ! ಗಂಡು ಹೆಣ್ಣನ್ನು ಬಲಾತ್ಕರಿಸ ಬೇಕು, ಹೆಣ್ಣು ತಡೆಯೊಡ್ಡಬೇಕು, ಅದನ್ನು ಈತ ನೋಡಬೇಕು ಆಗ ಈತ ಸಿದ್ಧಗೊಳ್ಳುತ್ತಾನೆ! ಆಕೆ ಬಂದು ಅಲ್ಲಿ ನಡೆದುದ್ದನ್ನು ರೋಚಕವಾಗಿ ಈತನಿಗೆ ವಿವರಿಸಬೇಕು, ಆಗ ಉದ್ರೇಕಗೊಳ್ಳುತ್ತಾನೆ! ಇದನ್ನು ಕೇಳಿದ ಆಕೆ ಮರ್ಮಾಘಾತಕ್ಕೊಳಗಾಗುತ್ತಾಳೆ. ಅವನನ್ನು ಈ ವಿಕೃತದಿಂದ ಹೊರತರಬೇಕೆಂದು ಪ್ರಯತ್ನಿಸುತ್ತಾಳೆ. ಆದರೆ ಕಾಡಿನಲ್ಲಿ ಅವನಿಗೆ ಅಂಟಿಕೊಂಡಿದ್ದ ವಿಕೃತ ಬೆಂಕಿ ಆಕೆಯ ಪ್ರಯತ್ನಕ್ಕೆ ಫಲಕೊಡುವುದಿಲ್ಲ.

ನಡುವೆ ಇದ್ದ ಮೇಟಿಗೆ ವಯಸ್ಸಾಗಿ ರಿಟೈರ್ ಆಗುತ್ತಾನೆ. ಆ ಜಾಗಕ್ಕೆ ಹೊಸಬ ಬರುತ್ತಾನೆ. ನಾಯಕನ ಹೆಂಡತಿಯ ಬಗ್ಗೆ ಅಕ್ಕ ಎನ್ನುವ ಭಾವನೆ ಅವನಲ್ಲಿ ಇದ್ದರೂ ಸ್ವತಃ ನಾಯಕನೇ ಅವನ ಜೊತೆ ಇದ್ದು ಬಾ, ಅವನು ಏನೆಲ್ಲಾ ಮಾಡಿದ ಎಂದು ಹೇಳು, ನಂತರ ಸಮರ್ಥನಾಗುವೆ ಎಂದು ಕೈ ಹಿಡಿದ ಗಂಡನೇ ಆಕೆಯನ್ನು ವಿಕೃತ ಕೂಪಕ್ಕೆ ದಬ್ಬಿದಾಗ, ಅಪಾರ ನೋವಾದರೂ ಗಂಡನ ಸಲುವಾಗಿ ಆಕೆ ಅವನಲ್ಲಿಗೆ ಹೋಗುತ್ತಾಳೆ. ಹೊಸ ಮೇಟಿಗೆ ಸಂಗತಿ ಅರಿವಿಗೆ ಬರುತ್ತದೆ. ಅಲ್ಲಿ ಏನೂ ಘಟಿಸುವುದಿಲ್ಲ. ಇಲ್ಲಿ ಅವಳಿದ್ದು ಬಂದದ್ದನ್ನು ನೋಡಿ ನಾಯಕ ಸಿಂಹಪುರುಷನಾಗುತ್ತಾನೆ. ಅವನಲ್ಲಿದ್ದ ವಿಕೃತ ವಿರಹಾಗ್ನಿ ಆವತ್ತಿನ ಮಟ್ಟಿಗೆ ಧಮನವಾಗುತ್ತದೆ. ಆದರೆ ಎಷ್ಟು ದಿನ ಅಂತ ಗಂಡನ ವಿಕೃತ ತಣಿಯಲು ಪರಪುರುಷಣ ಬಳಿ ಹೋಗಿ ಬರೋ ನಾಟಕ ಆಡೋದು? ವೈಪರೀತ್ಯವೆಂದರೆ ಬರುಬರುತ್ತಾ ಇಬ್ಬರಲ್ಲೂ ಸಂಬಂಧ ಏರ್ಪಡುತ್ತದೆ. ನಾಯಕನಿಗೆ ಇದರ ಅರಿವು ಬರುತ್ತದೆ. ಆದರೆ ಕಾಲ ಮಿಂಚಿರುತ್ತದೆ. ಆಕೆಗೆ ಅದು ತಪ್ಪು ಎಂದು ತಿಳಿದು ಆತ್ಮಹತ್ಯೆಗೆ ಯತ್ನಿಸುತ್ತಾಳೆ.

ಕಾರಣ ಬೇರೆ ಇರಬೇಕೆಂದು ತಿಳಿದ ಆಕೆಯ ಮನೆಯವರು ಎಲ್ಲಾ ವೈದ್ಯಕೀಯ ಚಿಕಿತ್ಸೆ ಕೊಡಿಸಿ ಅದು ಪರಿಣಾಮಕಾರಿಯಾಗದೆ ಕೊನೆಗೆ ಮನೋವೈದ್ಯರಲ್ಲಿಗೆ ಕರೆತರುತ್ತಾರೆ. ಇಷ್ಟವಿಲ್ಲದಿದ್ದರೂ ಜೊತೆಗೆ ನಾಯಕನೂ ಬರುತ್ತಾನೆ. ಬಿಡಿಬಿಡಿಯಾಗಿ ಇಬ್ಬರ ಜೊತೆ ಮಾತಾಡಿದಾಗ ಸಮಸ್ಯೆಯ ಆಳಅಗಲ ತಿಳಿಯುತ್ತದೆ. ನಾಯಕ ಎಲ್ಲ ಗೊತ್ತಿದ್ದೂ ಗುಮ್ಮನ ಗುಸಕನ ಥರ ಇರುತ್ತಾನೆ. ಅರಗಿಸಿಕೊಳ್ಳಲಾಗದ, ಮತ್ತೊಬ್ಬರೊಂದಿಗೆ ಹಂಚಿಕೊಳ್ಳಲಾಗದ ವೇದನೆಯೊಂದಿಗೆ, ತಾನು ಮಾಡದ ತಪ್ಪಿಗೆ, ತನ್ನ ಗಂಡನ ವಿಕೃತ ಮನಸ್ಸಿನ ಪರಿಣಾಮವಾಗಿ ಆಕೆ ಕೊನೆಯುಸಿರೆಳೆಯುತ್ತಾಳೆ.

ಇದು ಕಪೋಲಕಲ್ಪಿತ ಕಥೆಯಾಗಿದ್ದರೂ ನಮ್ಮ ನಮ್ಮಗಳ ನಡುವೆ ನಮ್ಮ ಅರಿವಿಗೇ ಬರದೆ ಅದೆಷ್ಟು ಮನೆಗಳಲ್ಲಿ ಈ ರೀತಿ ನಡೆಯುತ್ತಿಲ್ಲ? ಮೂಕವೇದನೆಯನ್ನು, ಅರಣ್ಯರೋಧನವನ್ನು ಅದೆಷ್ಟು ಹೆಣ್ಣುಮಕ್ಕಳು ಉಸಿರೆತ್ತದೆ ಅನುಭವಿಸುತ್ತಿಲ್ಲ? ಇದಕ್ಕೆಲ್ಲ ಕಾರಣ ಲೈಂಗಿಕತೆಯ ಬಗ್ಗೆ ನಮಗಿರುವ ಅಜ್ಞಾನವೇ ಹೊರತು ಮತ್ತೇನಲ್ಲ. ಈ ಕಥೆಯಲ್ಲಿ ಯಾರ ತಪ್ಪಿದೆ ಎಂದು ಹುಡುಕ ಹೊರಟರೆ ಮೇಲುನೋಟಕ್ಕೆ ನಾಯಕನದೇ ಎಂದು ಅನಿಸಿದರೂ, ಆತನು ಬೆಳೆದ ಹಿನ್ನೆಲೆ, ಇದ್ದ ಪರಿಸರ, ಮನೆಯಲ್ಲಿ ಆತನ ತಂದೆ ತನ್ನ ತಾಯಿಯ ಮೇಲೆ ನಡೆಸುತ್ತಿದ್ದ ದಬ್ಬಾಳಿಕೆ, ಲೈಂಗಿಕ ದೌರ್ಜನ್ಯ, ಬಡತನ, ಮನೆ ತುಂಬಾ ಮಕ್ಕಳು, ಪರಸ್ತ್ರೀ ಸಂಬಂಧ..ಎಲ್ಲವೂ ಪೂರಕವಾಗಿ ನಿಲ್ಲುತ್ತವೆ. ನಾಯಕನನ್ನು ಸಮರ್ಥಿಸುತ್ತಿಲ್ಲ. ಇದು ಕೇವಲ ದೃಷ್ಟಾಂತವಷ್ಟೇ.

ಈ ಸಮಸ್ಯೆಯ ಸುಳಿಯಿಂದ ಹೊರಬರಲು ನಾವು ನಾವು ಲೈಂಗಿಕತೆಯ ಬಗ್ಗೆ ಕಟ್ಟಿಕೊಂಡ ನಮ್ಮ ಕಣ್ಕಾಪುಗಳೇ ಕಾರಣ. ಅದರ ಬಗ್ಗೆ ಇರುವ ಅಸ್ಪೃಶ್ಯತೆಯೇ ಕಾರಣ. ಮಡಿವಂತಿಕೆಯೇ ಕಾರಣ. ಇರಬೇಕಾದಷ್ಟು ಇಲ್ಲದ ತಿಳುವಳಿಕೆಯೇ ಕಾರಣ. ಅಂದ ಮಾತ್ರಕ್ಕೆ ಎಲ್ಲವನ್ನೂ ಎಲ್ಲರೆದುರು ವಯಸ್ಸಿನ ಅಂತರವಿಲ್ಲದೆ ತೆರೆದಿಡಿ, ಬಿಚ್ಚಿಡಿ ಎಂದರ್ಥವಲ್ಲ. ವಯಸ್ಸಿಗೆ ಅನುಗುಣವಾಗಿ ಬದಲಾಗುತ್ತಿರುವ ಕಾಲಮಾನಕ್ಕೆ ತಕ್ಕಂತೆ ನಮ್ಮ ಮಾಡಿವಂತಿಕೆಯನ್ನೂ ಸಾಣೆ ಹಿಡಿಯಬೇಕಿದೆ. ದೃಷ್ಟಿಯನ್ನು ವಿಶಾಲಗೊಳಿಸ ಬೇಕಿದೆ. ಡಾಂಭಿಕತೆಯನ್ನು ಪಕ್ಕಕ್ಕೆ ಕಟ್ಟಿಟ್ಟು, ಸೋಗಲಾಡಿತನಕ್ಕೆ ಬೀಗ ಹಾಕಬೇಕಿದೆ. ಇಲ್ಲದಿದ್ದಲ್ಲಿ, ಕಥಾ ನಾಯಕನ ವಿಕೃತ ಮನಸ್ಸುಗಳು, ಕಥಾ ನಾಯಕಿಯ ನೋವಿನ ನಿಟ್ಟುಸಿರು ನಮ್ಮ ಸಮಾಜದಲ್ಲಿ ಶರವೇಗದಲ್ಲಿ ಬೆಳೆಯುತ್ತಲೇ ಇರುತ್ತವೆ.

ಕೊನೆ ಮಾತು : ಈ ಕಾದಂಬರಿ ಚಲನಚಿತ್ರವಾಗಿ ರಾಷ್ಟ್ರ ಮಟ್ಟದ ರಜತ ಪದಕ ಪಡೆದಿದೆ. ನಾಯಕನಾಗಿ ಸುರೇಶ್ ಹೆಬ್ಳೀಕರ್, ಪ್ರೇಯಸಿಯಾಗಿ ವನಿತವಾಸು ಮತ್ತು ನಾಯಕನ ಹೆಂಡತಿಯಾಗಿ ಮಮತಾ ಶೆಣೈ ಅಭಿನಯಿಸಿದ್ದಾರೆ. ಕಾದಂಬರಿ ಓದಲಾಗದವರು ಚಿತ್ರವನ್ನು ನೋಡಬಹುದು.

ನಮಸ್ಕಾರ.

ಮೋಹನ್ ಕುಮಾರ್ ಡಿ ಎನ್
ದೊಡ್ಡಬಳ್ಳಾಪುರ.

Advertisements

About pustakapremi

ಪುಸ್ತಕ ಪರಿಚಯ, ವಿಮರ್ಶೆ, ಅನಿಸಿಕೆ ಮತ್ತು ಮಾಹಿತಿ ವೇದಿಕೆ. ಪುಸ್ತಕಪ್ರೇಮಿಗಳಿಗೊಂದು ಸಮೃದ್ಧ ತಾಣ.
This entry was posted in ಕನ್ನಡ, ನಾ. ಡಿಸೋಜ, Uncategorized and tagged , . Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s