ಮಾಟ, ಮಂತ್ರ, ವಾಮಾಚಾರಗಳ ಕುರಿತಾಗಿ ಕನ್ನಡದಲ್ಲಿ ಕಾದಂಬರಿಗಳು ಇತರ ಕಾದಂಬರಿಗಳಂತೆ ಹೆಚ್ಚಿಗೆ ಬಂದಿಲ್ಲವಾದರೂ ಸ್ವಲ್ಪಮಟ್ಟಿಗೆ ಬಂದಿವೆ. ಕೌಂಡಿನ್ಯ ಅವರ ಈ ರೀತಿಯ ಕಾದಂಬರಿಗಳನ್ನು ನಾನು ಓದಿದ್ದೆ. ನನಗೆ ತಿಳಿದಂತೆ ಇತರ ಕಾದಂಬರಿಕಾರರು ಈ ಬಗ್ಗೆ ಅಷ್ಟು ಗಮನಹರಿಸಿಲ್ಲ ಅಂತ ಕಾಣುತ್ತದೆ.

ಆದರೆ ನನ್ನ ಅಭಿಪ್ರಾಯ ಸುಳ್ಳಾಗುವಂತೆ ಮಾಡಿದ್ದು #ಚಕ್ರಾಯಣ ಎಂಬ ಕಾದಂಬರಿ. #ಇಂದಿರಾತನಯ ಎಂಬ ಕಾವ್ಯನಾಮವನ್ನು ಹೊಂದಿರುವ ಶ್ಯಾಮ್ ಅವರು ಬರೆದಿರುವ ಕಾದಂಬರಿ ಅದು.

ಅವರೇ ಮುನ್ನುಡಿಯಲ್ಲಿ ಬರೆದಂತೆ ಇದು ಅವರದೇ ಅನುಭವವನ್ನು ಹೊಂದಿರುವ ಕಾದಂಬರಿ. ಕಥಾನಾಯಕನು ಸುಮಾರು ಏಳೆಂಟು ತಿಂಗಳ ಅವಧಿಯಲ್ಲಿ ಆಧ್ಯಾತ್ಮಿಕ ಸಾಧನೆಗಾಗಿ ಗುರುವನ್ನು ಹುಡುಕಿಕೊಂಡು ತಿರುಗುವ ಅನುಭವವದು. ಆ ದಾರಿಯಲ್ಲಿ ಎದುರಾಗುವ ಬಹುತೇಕ ಅನುಭವವನ್ನೂ ಹಂಚಿಕೊಂಡಿದ್ದಾರೆ. ಓದುವವರಿಗೆ ಅವುಗಳು ಪವಾಡದಂತೆ ಕಂಡರೂ ಅವುಗಳು ಲೇಖಕರ ಅನುಭವ ಅಂತ ಅವರೇ ಹೇಳಿಕೊಂಡಿದ್ದಾರೆ.

ಸಾಮಾನ್ಯ ವಾಮಾಚಾರದ ಕಾದಂಬರಿಗಿಂತ ವಿಭಿನ್ನವಾದ ಕಾದಂಬರಿಯದು. ಶ್ರೀಚಕ್ರವನ್ನು ತನ್ಮೂಲಕ ಆದಿಪರಾಶಕ್ತಿಯನ್ನು ಒಲಿಸಿಕೊಳ್ಳಲು ಪ್ರಯತ್ನಪಡುವ ಯುವಕರ ಗುಂಪಿನ ಕಥೆ ಇದಾಗಿದೆ. ನಡುನಡುವೆ ಬರುವ #ಲಲಿತಾ_ಸಹಸ್ರನಾಮ ದ ಹಾಗೂ #ಸೌಂದರ್ಯಲಹರಿ ಯ ಶ್ಲೋಕಗಳು ಕಾದಂಬರಿಯ ಓಟಕ್ಕೆ ಪೂರಕವಾಗಿವೆ.

ಜೊತೆಗೆ ಸರಾಗ ಓದು ಹಾಗೂ ಕುತೂಹಲವನ್ನು ಹಿಡಿದಿಡುವ ಬರವಣಿಗೆ.

Vighneshwara Manja Maranakatte

 

Advertisements