ballikala belliಬಸ್ತಿಕೇರಿ ಪೋಸ್ಟು. ಉತ್ತರಕನ್ನಡ ಜಿಲ್ಲೆ !
============================

ದೃಶ್ಯ 1:
ನಿಮ್ಗೆ ಓದೋ ಹುಚ್ಚು. ಅದ್ರಲ್ಲೂ ಕನ್ನಡಾ ಪುಸ್ತಕ. ಹಠಕ್ಕೆ ಬಿದ್ದವರಂತೆ ಹತ್ತಾರು ಇತರೆ ಪುಸ್ತಕಗಳ ಜೊತೆಗೆ ಈ ಪುಸ್ತ್ಕಾನೂ ಓದಿರ್ತೀರಿ……..

ದೃಶ್ಯ 2:
ಮಳೆಗಾಲ ಅಲ್ಲ. ಚಳೀನೂ ಕಡಿಮೆ ಆಗ್ತಿದೆ. ಹಂಗೇ ಒಂದ್ರೌಂಡ್ ಟ್ರಿಪ್ ಯಾಕೆ ಹೋಗ್ಬಾರ್ದು ? ಅಂತೊಂದು ಯೋಚನೆ ಬಂತು ಅಂದ್ಕೋಳಿ……. ಅದರ ಹಿಂದಿಂದೇ, ಯಾವೂರಿಗೆ ಹೋಗೋದು ಅನ್ನೋ ಮತ್ತೊಂದು ಯೋಚನೆ ಬರುತ್ತೆ. ಹಾಗೇ………ರಿಲೇಟಿವ್ಸೋ, ಕೇವಲ ಲಾಂಗ್ ಡ್ರೈವೋ, ನೇಚರ್ ವ್ಯಾಲೀನೋ ಇಲ್ಲಾ ಹಿಸ್ಟಾರಿಕ್ ಸೈಟೋ ಅಂತೆಲ್ಲಾ ತಲೆ ಕೆಟ್ಟೋಗುತ್ತೆ. ಕೊಟ್ಟ ಕೊನೆಗೆ ನೇಚರ್ ವಿಥ್ ಹಿಸ್ಟಾರಿಕ್ ಸೈಟು ಅಂತ ಡಿಸೈಡ್ ಮಾಡ್ಕೊಂಡ್ರಿ ಅಂದ್ಕೊಳ್ಳಿ……. ಕನ್ನಡನಾಡಲ್ಲಿ ಹಾಗಿರೋ ಪ್ರದೇಶಗಳು ಬೆರಳೆಣಿಕೆಯಷ್ಟು…….. for example: ಕವಲೇದುರ್ಗ, ಮಿರ್ಜಾನು ಕೋಟೆ, ಶೃಂಗೇರಿ, ಯಾಣ, ಮುಳ್ಳೈಯ್ಯನಗಿರಿ, ನೇತ್ರಾಣಿ, ಗೇರುಸೊಪ್ಪಾ, ಕುಪ್ಪಳ್ಳಿ…… ಇತ್ಯಾದಿ.

ದೃಶ್ಯ 3:
ನಿಮ್ಮ ಫ್ರೆಂಡ್ಸು, ’ಗೇರ್ಸೊಪ್ಪಾಗೆ ಹೋಗ್ಬನ್ನಿ……ಸೂಪರ್ರಾಗಿದೆ….’ ಅಂತಾರೆ. ನೀವೊಂದಿಷ್ಟು ಹೋಮ್ವರ್ಕ್ ಮಾಡ್ತೀರ……..ಲಾಂಗ್ ಡ್ರೈವ್, ನೇಚರ್ ವಿಥ್ ಹಿಸ್ಟಾರಿಕ್ ಸೈಟು ಎಲ್ಲಾ ಇರುತ್ತೆ, ಜೈ ಅಲಕ್ ನಿರಂಜನ್ ಅಂತ ಹೊರ್ಟು ಬೆಂಗ್ಳೂರಿಂದ ಬರೋಬ್ಬರಿ 438 ಕಿಲೋಮೀಟರು ದೂರದ ’ನಗರ ಬಸ್ತಿಕೇರಿ’ ಎಂಬ ಊರಿಗೆ ಸೀದಾ ಬಂದಿಳಿತೀರಾ. ಈ ನಗರ ಬಸ್ತಿಕೇರಿ ಅಂದ್ರೇನು ? ಅದೆಲ್ಬರುತ್ತೆ ? ಅಂತೆಲ್ಲಾ ನಿಮಗೆ ಗೊತ್ತಿಲ್ಲ. ಏಕೆಂದರೆ ನಿಮಗೆ ಗೊತ್ತಿರುವುದು ಅದರ ಇವತ್ತಿನ ಹೆಸರು – ಗೇರುಸೊಪ್ಪೆ !

ಹೀಗೇ ಅರಿವಿನ ಕತ್ತಲೆಯಲ್ಲಿ ತಡಕಾಡುವಾಗ ಫ್ಲಾಷ್ ಆಗುತ್ತೆ ’ಛೆ…..ಇಲ್ಲಿ ಇನ್ಟರ್ನೆಟ್ ನೆಟ್ವರ್ಕ್ ಸಿಗಲ್ಲಾ !…….. ಹ್ಯಾಗಪ್ಪಾ ಜೀಪೀಎಸ್ಸು ಯ್ಯಾಕ್ಸೆಸ್ ಮಾಡೋದು ? ಇಲ್ಲಿನ್ ಹಿಸ್ಟರಿ ಬಗ್ಗೆ ಅದ್ಯಾವ್ದೋ ಪುಸ್ತಕ ಓದಿದ್ ನೆನ್ಪು……ಆ ಪುಸ್ತಕಾನಾದ್ರೂ ತಂದಿದ್ದಿದ್ರೆ ಚೆನ್ನಾಗಿರೋದು….ಥತ್’ ಅಂದ್ಕೋತಿರ್ತೀರ………… ಹಾಗೇ ಆಲ್ಲೆಲ್ಲೋ ಕೂತಿರೋರ/ನಿಂತಿರೋರ ಹತ್ರಾನೋ ಕೇಳ್ತೀರಾ “ಇಲ್ಲೆಲ್ಲೋ ಹಳೇ ಕೋಟೆ ಇದ್ಯಂತಲ್ಲಾ ಅದ್ರ ಬಗ್ಗೆ ಸೊಲ್ಪ ಹೇಳ್ತೀರಾ ?’ ಆತ ಹೇಳಿದ ಇತಿಹಾಸದಲ್ಲಿ ಚೆನ್ನಭೈರಾದೇವಿ ಅನ್ನೋ ಹೆಸ್ರು ಗಮನ ಸೆಳೆಯುತ್ತೆ. ಒಬ್ಬ ಹೆಣ್ಣುಮಗ್ಳು 40-42 ವರ್ಷ ಒಂದು ಸಂಸ್ಥಾನವನ್ನು ಆಳೋದು ಅಂದ್ರೇನು ?? ಬರೀ ಕಾಳುಮೆಣಸು ಮಾರಿ ಯೂರೋಪಲ್ಲೆಲ್ಲಾ ಫೇಮಸ್ಸಾಗೋದು ಅಂದ್ರೇನು ?? ಹೀಗೆ ತರಹೇವಾರಿ ಪ್ರಶ್ನೆಗಳೆಲ್ಲಾ ನಿಮ್ಮ ತಲೆಯ ಒಳಹೊರಗೆ ಗಿರಕಿ ಹೊಡೆಯುತ್ತಿರುವಾಗ…..just imagine: ಹಾಗೆ ನೀವು ಗೇರುಸೊಪ್ಪೆಗೆ ಹೋಗೋವಾಗ ಈ ಪುಸ್ತಕ ನಿಮ್ಮ ಜೊತೆ ಇದ್ದ್ರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ…… !!!!

ಕೆ. ಗಣೇಶಯ್ಯನವರ ಎಲ್ಲಾ ಕೃತಿಗಳ ಕಮಾಲೇ ಅಂತಹುದು. ಬಿಟ್ಟೇನೆಂದರೂ ಬಿಡದ ಮಾಯೆ. ಓದುತ್ತಾ ಹೋದರೆ ’ಈ ನಿಜ ಅಲ್ಲಿತ್ತು ಈಗ ಇಲ್ಯಿದ್ಯಲ್ಲ….. ಹೌದೂ… ಇದು ನಿಜ್ವಾಗ್ಲೂ ನಿಜಾನಾ ? ಅಥ್ವಾ ಸುಳ್ಳೇ ನಿಜ್ವಾದ್ ಸುಳ್ಳಾ ಇಲ್ಲಾ ಸುಳ್ಳಾದ್ ನಿಜಾನಾ ??…..’ ಅಂತೆಲ್ಲಾ ಭಯಾನಕ ಕನ್ಫ್ಯೂಷನ್.

Odyssey Marine Explorationನವರು 2011ರಲ್ಲಿ ಐರ್ಲ್ಯಾಂಡಿನ ಸಮೀಪದ ಶರಧಿಯಾಳದಲ್ಲೆಲ್ಲೋ ಹುದುಗಿದ್ದ ’S S ಗೇರ್ಸೊಪ್ಪಾ’ ಅನ್ನುವ ಬ್ರಿಟೀಶರ ಸರಕುಸಾಗಣೆ ಹಡಗೊಂದನ್ನ ಹುಡುಕಿ ತೆಗೆದದ್ದರ ಮೇಲೆ ಹೆಣೆದ ಈ ಕಥಾನಕ, ಕೊನೆಯವರೆಗೂ ಕುತೂಹಲ ಕಾಯ್ದುಕೊಳ್ಳುತ್ತದೆ. Odysseyಯವರು ಮುಳುಗಿದ್ದ ಹಡಗಿಂದ 60ಕ್ಕೂ ಹೆಚ್ಚು ಟನ್ ಬೆಳ್ಳಿ ಹೊರತೆಗೆದ್ರು. ಆದ್ರೆ ಗಣೇಶಯ್ಯ ಇಲ್ಲಿ ಭೂತವನ್ನು ತಡಕಿ, ಕಾಳುಮೆಣಸಿನ ರಾಣಿಯ ಭವಿತ ಬರೆಯುತ್ತಾರೆ.

ವಿಪರ್ಯಾಸ ನೋಡಿ: ಅತ್ತ S S ಗೇರ್ಸೊಪ್ಪಾದಿಂದ ಹೊರತೆಗೆದ ಬೆಳ್ಳಿಯನ್ನು ಗ್ರಾಮು ಅರೆಗ್ರಾಮಿನ ಬಿಲ್ಲೆಗಳಾಗಿಸಿ ಎರಕ ಹೊಯ್ದು ಅಮೇಜಾನ್ ಡಾಟ್ ಕಾಂ ನ ಮುಖೇನ ಬಿಲ್ಲೆಯೊಂದಕ್ಕೆ ಸುಮಾರು 1200 ರೂಪಾಯಿಗೆ ಮಾರಿಕೊಂಡು Odyssey Marine Explorationನವರು ಹಣ ಗೋರಿಕೊಳ್ಳುತ್ತಿದ್ದರೆ, ಇತ್ತ ನಾಡಿಗೇ ಬೆಳಕು ನೀಡುವ ಶರಾವತಿ ವಿದ್ಯುದಾಗಾರದ ಸಮೀಪವಿದ್ದೂ, ಗೇರುಸೊಪ್ಪೆ ದಿನಂಪ್ರತಿ ಪವರ್ ಕಟ್ ಶಾಪ ಅನುಭವಿಸುತ್ತಿದೆ.

ಪುಸ್ತಕದ ಹಾಳೆಗಳ ಓಣಿಗೆ ಇಳಿದಿರೆಂದರೆ: ಈ ಹೆಸರುಗಳನ್ನು, ಜಯಂತ ಕಾಯ್ಕಿಣಿಯವರ ಯಾವುದೋ ಕೃತಿಯ ಯಾವುದೋ ಅಜ್ಞಾತ ಸಾಲಿನಲ್ಲಿ ಕಂಡಿದ್ದಲ್ಲವಾ ? ಗೌರೀಶ ಕಾಯ್ಕಿಣಿಯವರು ಈ ಹೆಸರನ್ನೆಲ್ಲಾದರೂ ತಮ್ಮ ಬರಹಗಳಲ್ಲಿ ಬಳಸಿದ್ದುಂಟಾ……? ’ನನ್ನ ತಮ್ಮ ಶಂಕರ’ದ ಯಾವುದಾದ್ರೂ ಸಾಲಲ್ಲಿ ಇಲ್ಲಿರೋ ಹೆಸರು ಬಂದಿತ್ತಾ ? ಯಶವಂತ ಚಿತ್ತಾಲ, ಗಂಗಾಧರ ಚಿತ್ತಾಲ, ವಿವೇಕ ಶಾನುಭಾಗ್ ಇವರೆಲ್ಲರು ಚಿತ್ರಿಸಿದ ಹಾಳೆಗಳಲ್ಲಿ ಬಿಂದುಗಳಾಗಿ ಈ ಊರಿನ ಹೆಸರುಗಳು ಬಂದಿವೆಯಾ ? ದಿನಕರ ದೇಸಾಯರ ಚುಟುಕುಗಳ ಜೊತೆ ಈ ಊರುಗಳನ್ನು ಗುಟುಕರಿಸಿದ್ದುಂಟಾ ? ಕನ್ನಡ ಸಿನಿಮಾಗಳಲ್ಲೆಲ್ಲಾದರೂ ಬೆಳ್ಳಿತೆರೆಯ ಮೇಲೆ ಬಂದಹಾಗೆ ನೆನಪುಂಟು…ಅಲ್ವಾ ? ಶಾಂತಿನಾಥರ ’ಓಂ ಣಮೋ’ ದಲ್ಲಿದೆಯಾ ಈ ಊರು ? ಅಂತೆಲ್ಲಾ ಹಲುಬತೊಡಗುತ್ತೀರ.

ಜಲಪಾತಗಳ ಜಿಲ್ಲೆ ಉತ್ತರಕನ್ನಡದ ಇತಿಹಾಸದ ಬಗ್ಗೆ ಬರೆದವರು ಇಲ್ಲವೇನೋ. ಅಲ್ಲಿನ ಹೇರಳ ಕಾಡುಗಳು ಇತಿಹಾಸದ ಇಂಚಿಂಚನ್ನೂ ನುಂಗಿ ನೊಣೆದು ತನ್ನ ಪದತಲದಲ್ಲಿ ಸುರಕ್ಷಿತವಾಗಿರಿಸಿಕೊಂಡಿವೆ. ಭೂತದಲ್ಲಿ ಹಿಂದೆ ಹಿಂದೆ ನಡೆದು B L ರೈಸರ ಎಫಿಗ್ರಾಫಿಕಾ ಕರ್ನಾಟಕಾ ದಲ್ಲಿ ಮಗುಚಾಡಿದರೂ, ಇದಿಷ್ಟು ವೈನಾದ ಮಾಹಿತಿ ಸಿಗಲಾರದೇನೋ !! ಸೂರ್ಯನಾಥ ಕಾಮತರು ಇಲ್ಲವೇ ಚಿದಾನಂದ ಮೂರ್ತಿಯವರು ಹಾಗೆ ಉತ್ತರಕನ್ನಡದ ಬಗ್ಗೆ ಬರೆದಿದ್ದಾರೋ ಇಲ್ಲವೋ. ಏಕೆಂದರೆ ಕನ್ನಡದ ಎಲ್ಲಾ ಇತಿಹಾಸಕಾರರಿಗೆ ಮಲೆನಾಡಿನ ಇತಿಹಾಸದಲ್ಲಿ ಹೊಳೆದು ಕಾಣುವುದು ಕೆಳದಿ ಸಂಸ್ಥಾನ ಮಾತ್ರ. ಗೇರುಸೊಪ್ಪೆಯನ್ನಾಳಿದ, ವಿಜಯನಗರದರಸರ ಸಾಮಂತರೂ, ಸಂಬಂಧಿಗಳೂ ಆಗಿದ್ದ ಸಾಳುವ ವಂಶಸ್ಥರ ಬಗ್ಗೆ ಈ ನಾಡು ಮಾತಾಡಿದ್ದು ವಿರಳ.

ಆದರೆ ಗಣೇಶಯ್ಯ ಆ ಕೊರತೆ ನೀಗಿಸಿದ್ದಾರೆ. ಈ ಪುಸ್ತಕದಿಂದಲಾದರೂ ಗೇರುಸೊಪ್ಪೆಯ ಸಾಳುವ ರಾಜರ ಬಗ್ಗೆ ಈ ನಾಡು ಆಸಕ್ತಿ ಮತ್ತು ಆಸ್ಥೆ ಹೊಂದಲಿ ಅನ್ನುವುದೊಂದು ಆಶಯ.

ಓದಿನೋಡಿ, ಇದುವರೆಗೆ ನಿಮ್ಮೆದುರಿಗಿಲ್ಲದಿದ್ದ ಇತಿಹಾಸದ ತುಣುಕೊಂದು ಎಂದೂ ಇಲ್ಲದಂತೆ ಕಾಡತೊಡಗದಿದ್ದರೆ ಕೇಳಿ.

ಆದರೆ ಗಣೇಶಯ್ಯನವರನ್ನು ನಾನು ಒಂದು ವಿಷಯಕ್ಕೆ ಕ್ಷಮಿಸಲಾರೆ. ಕೆಳದಿ ಸಂಸ್ಥಾನದ ಇತಿಹಾಸವನ್ನು ಕನ್ನಡ ಕುಲಕೋಟಿಗೆ ಪರಿಚಯಿಸಿದ, ಕೆಳದಿಯಲ್ಲಿ ಪುರಾತತ್ವ ವಸ್ತುಸಂಗ್ರಹಾಲಯವನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ, ಮೇಲಾಗಿ ’ಕೆಳದಿ ನೃಪವಿಜಯ’ವನ್ನು ಸಂಪಾದಿಸಿ ಕೊಟ್ಟ ವಿದ್ವಾಂಸ, ಕೆಳದಿ ಗುಂಡಾ ಜೋಯಿಸರನ್ನು ತೀರಾ ಅವಹೇಳನಕಾರಿಯಾಗಿ ಈ ಪುಸ್ತಕದಲ್ಲಿ ಚಿತ್ರಿಸಿದ್ದಾರೆ. For this, I hate Mr. Ganeshaiah forever.

– ಸುಧೀರ್ ಪ್ರಭು

Advertisements