ಒಂದು ವರ್ಷದ ಓದು …

2017 — ಒಂದು ವರ್ಷದ ಓದು …

ಕಳೆದ ಒಂದು ವರ್ಷದ ಓದು ಎಂದಿನಂತೆ ಆಹ್ಲಾದಕರವಾಗಿತ್ತು. ಕೃತಿಗಳು ತಮ್ಮ ಲೋಕಕ್ಕೆ ನನ್ನನ್ನು ಕರೆದುಕೊಂಡು ಹೋಗಿ ತಮ್ಮ ಕಥೆಗಳನ್ನು ಹಂಚಿಕೊಂಡವು, ವಿಚಾರಗಳನ್ನು ಚರ್ಚಿಸಿದವು. ಓದಿದ ಪುಸ್ತಕಗಳಲ್ಲಿ ಕಾಲಚಕ್ರವನ್ನು ಹಿಂದಕ್ಕೆ ತಿರುಗಿಸಿ , ಹೇಳುವ ವಿಚಾರಗಳೆ ನನಗೆ ಅಚ್ಚುಮೆಚ್ಚು ಎನಿಸಿದವು.ದ್ “ಮರೆಯಲಾರದ ಕತೆಗಳು” ಗತಕಾಲದ ಭಾವಚಿತ್ರದಲ್ಲಿ ಅಂದಿನ ಕತೆಗಳು ಹೇಳಿತು. ಅಂದಿನ ಭಾವಸಂವೇದನೆ, ಸಮಾಜ ಸ್ಥಿತಿ, ಇಂದಿನ ಕಾಲಕ್ಕೆ ಅದೆಷ್ಟು ಅಪರಿಚಿತ ಎಂಬುದನ್ನು ಪರಿಚಯಿಸುತ್ತದೆ. ಷೇಕ್ಸ್‍ಪಿಯರ್ ನ “ಸಾನೆಟ್ ಚಕ್ರ” ಐತಿಹಾಸಿಕ ಕಾಲದೊಡಲಿನಿಂದ ಕವಿಯೊಬ್ಬನ ಅಸ್ಮಿತೆಯ ಲೋಕಕ್ಕೆ ಬಾಗಿಲನ್ನು ತೆರೆಯಿತ್ತದೆ. ಅನುವಾದಕರು ಅಲ್ಲಿ ಕೊಟ್ಟಿರುವ ಟಿಪ್ಪಣಿಗಳು ಓದುಅಗನು ತನ್ನ ಭಾವಸಂಚಾರದಲ್ಲಿ ದಾರಿತಪ್ಪದಂತೆ ಕೈಮರವಾಗಿ ಸೂಚನೆ ನೀಡುತ್ತದೆ. “ಚಿತ್ರಾಂಗದ” “ಗೊಮ್ಮಟೇಶ್ವರ ಚರಿತೆ” ಪುರಾಣ ಕಥೆಗಳ ಭಾವನೆಗಳನ್ನು, ಸಾಧನೆಗಳನ್ನು ಕಾವ್ಯದಲ್ಲಿ ಬಿಂಬಿಸಿದರೆ, “ಅಜ್ಞಾತನೊಬ್ಬನ ಆತ್ಮಚರಿತ್ರೆ” ಓರ್ವ ಸಾಮಾನ್ಯ ಸೈನಿಕನ ಆತ್ಮಕಥನದಲ್ಲಿ ಅಳಿದ ಸಾಮ್ರಾಜ್ಯವೊಂದು ತನ್ನ ಅಂತಿಮ ಕಾಲದಲ್ಲಿ ಜನಸಾಮಾನ್ಯರ ಮೇಲೆ ಹೇಗೆ ಪರಿಣಾಮ ಬೀರಿತು? ಎಂಬುದನ್ನು ಬರೆದಿಡುತ್ತದೆ.

“ಅಮೇರಿಕಾ ಗಾಂಧಿ” ಪುಸ್ತಕ ಕರಿಯರ ಸಮಾನತೆ, ಹಕ್ಕು, ಸ್ವಾತಂತ್ರ್ಯಗಳಿಗೆ ಹೋರಾಡಿ ಮಡಿದ ಸಮಾಜ ಸುಧಾರಕ ಮಾರ್ಟಿನ್ ಲೂಥರ್ ನ ಜೀವನ ಚಿತ್ರ ಪರಿಚಯಿಸುತ್ತದೆ. “ಮತಾಂತರ” – ಭಾರತೀಯ ಸಮಾಜ ಕಂಡ ಮತಾಂತರಗಳನ್ನು ಮತ್ತು ಅವುಗಳ ಬಗ್ಗೆ ಇಂದಿನ ವಿಚಾರವಾದಿಗಳಲ್ಲಿ ಇರುವ ವೈರುದ್ಧ್ಯಗಳನ್ನು ವಿಶದಪಡಿಸುತ್ತದೆ. “ಮ್ಯಾನ್ ಎಗೈನ್ಸ್ಟ್ ಮಿತ್” ಪ್ರಭಾವಶೀಲ ತತ್ವಜ್ಞಾನಿಯಾದ ‘ಬ್ಯಾರೊಸ್ ಡನ್‍ಹ್ಯಾಮ್’ ಸಮಾಜದಲ್ಲಿರುವ ಅನೇಕ ರಾಜಕೀಯ, ಕೈಗಾರಿಕ, ಧಾರ್ಮಿಕ ಮೌಢ್ಯಗಳು ಹೇಗೆ ಸಮಾಜ ಸ್ಥಿತಿಯನ್ನು ಅಧೋಗತಿಗೆಳೆದಿದೆ ಎಂಬುದನ್ನು ಐತಿಹಾಸಿಕ ಉದಾಹರಣೆಗಳ ಸಮೇತ ವಿಶ್ಲೇಶಿಸುತ್ತಾರೆ. ಅಲ್ಲಿನ (ಅಂದಿನ) ವಿಚಾರಗಳು ಇಂದಿಗೂ ಪ್ರಸ್ತುತವಿರುವುದು , ಸರಿದ ಕಾಲದಲ್ಲಿ ಅಳಿಸದೇ ಉಳಿದುಬಿಟ್ಟಿರುವ ಸಾಮಾಜಿಕ ಜಡತ್ವವನ್ನು ಎತ್ತಿ ತೋರಿಸುತ್ತದೆ. “ವಿಚಾರವಾದ ವಿಜ್ಞಾನ ಅಧ್ಯಾತ್ಮ” ಹಾಗು “ದಿ ಬುದ್ದ” ವಿಜ್ಞಾನ ಹಾಗು ಅಧ್ಯಾತ್ಮವನ್ನು ಸಮನ್ವಯಗೊಳಿಸಲು ಪ್ರಯತ್ನಿಸುತ್ತದೆ. “ನವ್ಯ ಕಾವ್ಯ ಪ್ರಯೋಗ” ನವೋದಯ ಯುಗದಿಂದ ಪಲ್ಲಟಗೊಂಡು ಹೊಸ ರೂಪ ಪಡೆದುಕೊಂಡ ನವ್ಯಕಾವ್ಯ ಪ್ರಯೋಗವನ್ನು ವಿಮರ್ಶಿಸಿದರೆ, “ಸಂಭಾವಿತ” ಶಬ್ಧಗಾರುಡಿಗ ವರಕವಿ ಬೇಂದ್ರೆಯವರ ಕಾವ್ಯಾನುಸಂಧಾನಕ್ಕೆ ರಂಗವನ್ನು ಸೃಷ್ಟಿಸಿಕೊಟ್ಟಿದೆ. “ಪೆನ್-ಆನ್-ಫೈರ್” – ಇಂದಿನ ಅವಿಶ್ರಾಂತ ಜೀವನದಲ್ಲಿಯೂ ಬರವಣಿಗೆಯನ್ನು ಸಾಧ್ಯಾವಾಗಿಸಬಹುದು ಎಂದು ಲೇಖಕರು ಅನೇಕ ಪ್ರೋತ್ಸಾಹಪೂರ್ಣ ಲೇಖನಗಳಲ್ಲಿ ವಿವರಿಸಿದ್ದಾರೆ.

“ದಿ ವ್ಯಾಲಿ ಆಫ್ ಮಾಸ್ಕ್” – ಹಳೆಯ ಧರ್ಮವನ್ನು ಬಿಟ್ಟು ಒಂದು ಹೊಸ ಧರ್ಮವು ಹುಟ್ಟುವ ಸಂಘರ್ಷವನ್ನು, ಹೊಸ ಧರ್ಮದಲ್ಲೂ ಹೇಗೆ ಮೌಢ್ಯಗಳು ಆವರಿಸಿಕೊಂಡು ತನ್ನ ಸಮಾಜದ ಪ್ರಗತಿಗೆ ಮುಳುವಾಗುತ್ತದೆ ಎಂಬುದನ್ನು ನಿರೂಪಿಸುತ್ತದೆ. ಸಂಘರ್ಷಣೆಯ ಸಂಧಿಕಾಲದಲ್ಲಿ ಸಿಕ್ಕಿ ಗೊಂದಲಗೊಳ್ಳುವ ಮನಸ್ಥಿತಿಯೊಂದು, ಹೇಗೆ ತನ್ನ ಬಿಡುಗಡೆಯನ್ನು ಪಡೆದುಕೊಳ್ಳುತ್ತದೆ ಎಂಬುದೇ ಈ ಕಾದಂಬರಿಯ ಸಾರ. “ಎರೆಡು ಮಹಾಕಾವ್ಯಗಳು” ರಾಮಾಯಣ ಮಹಾಭಾರತಗಳು ನಡೆದ ಕಾಲವನ್ನು ನಿರ್ಣಯಿಸಲು ಪ್ರಯತ್ನಿಸುವ ಸಂಶೋಧನ ಪ್ರಬಂಧ. “ದೃಗ್ ದೃಶ್ಯ ವಿವೇಕ” ಪ್ರಕರಣ ಗ್ರಂಥ ಹೇಗೆ ಜಗದ್ವ್ಯಾಪಾರವೆಲ್ಲಾ ವಿಷಯಿ-ವಿಷಯಗಳಿಂದ ಕೂಡಿದೆ, ಹಾಗು ಅದನ್ನು ನೋಡುವ ಸಾಕ್ಷಿಯೇ ಬ್ರಹ್ಮಸ್ವರೂಪ ಎಂಬುದನ್ನು ೪೮ ಶ್ಲೋಕಗಳಲ್ಲಿ ವಿಶ್ಲೇಷಿಸುತ್ತದೆ. “ಋಗ್ವೇದ” -ಋಗ್ವೇದದ ಕಾಲ, ಋಷಿಗಳು, ಮಹತ್ವವಾದ ಶ್ಲೋಕಗಳ ಪರಿಚಯ ನೀಡಿ, ವೇದಕಾಲದ ಚಿಂತನೆಗಳ ಸಮಗ್ರ ದೃಷ್ಟಿಯನ್ನು ಕೊಡುತ್ತದೆ. “ಡೀಪ್ ಸಿಂಪ್ಲಿಸಿಟಿ” ಎಂಬ ಪುಸ್ತಕದಲ್ಲಿ – ಹೊರನೋಟಕ್ಕೆ ಅಂಕೆಯಿಲ್ಲದಂತೆ ಕಾಣುವ ಈ ವಿಶ್ವವು, ಹೇಗೆ “ಕಾರಣ ಮತ್ತು ಪರಿಣಾಮ” ವನ್ನು ಪ್ರತಿನಿಧಿಸುವ ಕೆಲವು ಸಾಮಾನ್ಯ ಸೂತ್ರಗಳ ಮೇಲೆ ನಿಂತಿದೆ ಎಂಬುದನ್ನು ಅನಾವರಣಹೊಳಿಸುತ್ತಾರೆ. ವಿಶ್ವವ್ಯಾಪಾರವನ್ನು “ಕಾರಣ ಮತ್ತು ಪರಿಣಾಮ”ದ ದೃಷ್ಟಿಕೋನದಲ್ಲಿ ಹೇಗೆ ಅರ್ಥೈಸಬಹುದು ಮತ್ತು ಗಣಿತ,ಭೌತ,ರಸಾಯನ ಶಾಸ್ತ್ರಗಳ ಸೂತ್ರಗಳ ಮೂಲಕ ಹೇಗೆ ವಿಜ್ಞಾನಿಗಳು ಈ ಅರ್ಥಗಳಿಗೆ ಆಧಾರವನ್ನು ಕಲ್ಪಿಸಿಕೊಟ್ಟಿದ್ದಾರೆ ಎಂದು ಸರಳ ಉದಾಹರಣೆಗಳೊಂದಿಗೆ ತಿಳಿಹೇಳುತ್ತದೆ.

“ಫ್ರೀಡಮ್ ಅಟ್ ಮಿಡ್‍ನೈಟ್’ – ಭಾರತ-ಪಾಕಿಸ್ಥಾನ ವಿಭಜನೆ ಕಾಲದ ಸಂಘರ್ಷ, ಸಾವು, ನೋವುಗಳನ್ನು ಬಹಳ ಸಮೀಪದಿಂದ ಕಂಡ ಜನರನ್ನು ಸಂದರ್ಶಿಸಿ ಬರೆದ ಐತಿಹಾಸಿಕ ಕೃತಿ. ಇಂದಿನ ಭಾರವನ್ನು ವಿಭಜನೆಗೊಳಿಸುತ್ತಿರುವ ಜನಾಂಗ ದ್ವೇಷ, ಮತ ದ್ವೇಷ, ನೆರೆ ರಾಷ್ಟ್ರಗಳ ಜೊತೆ ನಮಗಿರುವ ಸಂಭಂಧದ ವಿಷಮ ಸ್ಥಿತಿ, ಇವುಗಳನ್ನು ಅರಿಯಲು ನಮ್ಮ ಪ್ರಜ್ಞೆಯನ್ನು ಇನ್ನಷ್ಟು ವಿಶಾಲಗೊಳಿಸಬಹುದಾದಂತ ಬೃಹತ್ ಓದು.

ಈ ಓದುಗಳ ವೈವಿದ್ಯಮಯ ವಿಚಾರಗಳ ನಡುವೆ ನಾನು ಕಳೆದು ಹೋದಾಗ, ನನ್ನ ಮನಸ್ಸನ್ನು ಮತ್ತೆ ಆರ್ದ್ರಗೊಳಿಸಿದ್ದು ಕಾವ್ಯಾನುಸಂಧಾನಗಳು. ಕುವೆಂಪು, ಬೇಂದ್ರೆ, ಲಂಕೇಶ್, ಕಣವಿ, ನಿಸಾರ್ ಅಹ್ಮದ್ ಅವರ ಅನೇಕ ಕವಿತೆಗಳ ಜೊತೆ , ಅನೇಕ ಅನ್ಯಭಾಷಾ ಕವಿತೆಗಳ ಅನುವಾದಗಳನ್ನು ಓದಿ, ಆ ಸಮಾಜದಲ್ಲಿ ಅರಳಿದ ಕಾವ್ಯ ಪ್ರರ್ಪಪಂಚಕ್ಕೂ ಭೇಟಿಕೊಟ್ಟೆ. ನನ್ನ ದಣಿದ, ಗೊಂದಲಗೊಡ ಮನಸ್ಥಿತಿಗೆ, ಅನೇಕ ಪ್ರಶ್ನೆಗಳಿಗೆ ಉತ್ತರಕೊಟ್ಟು ಹಗುರಗೊಳಿಸುವುದು ಎಂದೆಂದಿಗೂ ಕವಿಸಮಯವೇ ಎಂಬುದನ್ನು ಮತ್ತೆ ಈ ವರ್ಷವೂ ಕವಿತೆಗಳು ನಿರೂಪಿಸಿದವು !!

– ಚಂದ್ರಶೇಖರ ಬಿ.ಸಿ.

Advertisements

About pustakapremi

ಪುಸ್ತಕ ಪರಿಚಯ, ವಿಮರ್ಶೆ, ಅನಿಸಿಕೆ ಮತ್ತು ಮಾಹಿತಿ ವೇದಿಕೆ. ಪುಸ್ತಕಪ್ರೇಮಿಗಳಿಗೊಂದು ಸಮೃದ್ಧ ತಾಣ.
This entry was posted in ಇಂಗ್ಲೀಷ್, ಕನ್ನಡ, Uncategorized and tagged . Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s