ರಾಜರಹಸ್ಯದ ರುದ್ರನರ್ತನ ಮತ್ತು ಕಿಲ್ಲಿಂಗ್’ನ ಅಟ್ಟಹಾಸ !
===========================

18 ಅಕ್ಟೋಬರ್ 2004ರ ನಂತರ ಹುಟ್ಟಿದವರಿಗೆ ಅವ ದಂತಕಥೆ. ಸ್ಪೆಶಲ್ ಟಾಸ್ಕ್ ಫೋರ್ಸ್’ನ ಪೋಲೀಸರಿಗೆ ಅವ ದುರಂತಕಥೆ.
ಹತ್ತಿರ ಹತ್ತಿರ 125ಕ್ಕೂ ಹೆಚ್ಚಿನ ಮಾನವ ಜೀವಿಗಳಿಗೆ ಅವ ಕಾಲ. ಲೆಕ್ಕವಿಲ್ಲದಷ್ಟು ಕಾನನ ಜೀವಿಗಳಿಗೆ ಅವ ಯಮ.
200ಕ್ಕೂ ಹೆಚ್ಚು ತನ್ನ ಗ್ಯಾಂಗ್ ಮೆಂಬರುಗಳಿಗೆ ಅವ ನೆಚ್ಚಿನ ’ಅಣ್ಣೆ’. ತಾಯಿ ಪುನಿತಾಯಮ್ಮನಿಗೆ ಅವ ’ಮೊಳಕ್ಕನ್’.
ಇನ್ನುಳಿದ ನಾಲ್ಕು ದಕ್ಷಿಣ ಭಾರತೀಯ ರಾಜ್ಯಗಳ ನಾಗರೀಕ ಕುಲಕೋಟಿಗೆ ಅವ ’ದಿಂತಿ ಜೋರ’, ’ನರಹಂತಿಗ’……
18ನೇ ಜನವರಿ 1952ರಂದು ಹುಟ್ಟಿದಂದಿನಿಂದ 18 ಅಕ್ಟೋಬರ್ 2004ರಂದು ಸಾಯುವವರೆಗೆ ಅವ, ಈ ಸಭ್ಯ (?) ಸಮಾಜ ’ಅನೀತಿಯುತ’ ಅಂತ ವಿಂಗಡಿಸಿರುವ ಎಲ್ಲಾ ಪುನೀತ ವಿದ್ಯೆಗಳನ್ನೂ ಪ್ರದರ್ಶಿಸಿದ್ದ.

ಪೂರ್ತಿ ಹೆಸರು “ಕೂಸೆ ಮುನಿಸಾಮಿ ವೀರಪ್ಪನ್ ಗೌಂಡರ್”
ಅಲಿಯಾಸ್ “ವೀರಪ್ಪನ್” !!

ಈ ನಾಗರಹೊಳೆ ನ್ಯಾಷನಲ್ ಪಾರ್ಕು, ಬಂಡೀಪುರ ನ್ಯಾಷನಲ್ ಪಾರ್ಕು, ಮಧುಮಲೈ ನ್ಯಾಷನಲ್ ಪಾರ್ಕು, ವಯನಾಡು ಫಾರೆಸ್ಟು, ಸತ್ಯಮಂಗಲ ಫಾರೆಸ್ಟು, ಇವುಗಳಿಗೆ ತಾಗಿಕೊಂಡ ಇತರ ಹುಡಿಪುಡಿ ಹಸಿರು ಚಾದರ, ಇವೆಲ್ಲದರ ಉದ್ದಗಲಗಳನ್ನೆಲ್ಲ ಅಳೆದು ತೂಗಿದರೆ ಸರಿಸುಮಾರು 6000 ಚದುರ ಕಿಲೋಮೀಟರುಗಳಾಗುತ್ತದೆ. ಅಂದರೆ ಹೆಚ್ಚು ಕಡಿಮೆ ನಮ್ಮ ದಾವಣಗೆರೆ ಜಿಲ್ಲೆಯಷ್ಟು. ಅದಷ್ಟಕ್ಕೂ ಅವ ಅನಭಿಶಕ್ತ ದೊರೆಯಾಗಿದ್ದವ.

ಟಿ. ಗುರುಮೂರ್ತಿಯವರ ’ನರಹಂತಕನ ರುದ್ರನರ್ತನ’ಕ್ಕೆ ಅವನೇ anti ಹೀರೋ.
ಕರ್ನಾಟಕದ ಮಾಜಿ ಡಿಜಿಪಿ ಸಿ. ದಿನಕರ್ ಅವರ “ವೀರಪ್ಪನ್ಸ್ ಪ್ರೈಸ್ ಕ್ಯಾಚ್: ರಾಜ್ಕುಮಾರ್” ಕನ್ನಡಾನುವಾದ “ರಾಜರಹಸ್ಯ” ಕ್ಕೂ ಅವನೇ ದುಷ್ಟನಾಯಕ. ಕೃಪಾಕರ-ಸೇನಾನಿಯವರ ’ಆ ಹದಿನಾಲ್ಕು ದಿನಗಳ’ಲ್ಲೂ ಅವನದೇ ಮುಖ್ಯಭೂಮಿಕೆ.
ಅಂಥಾ ಕಾಲಮಾನವನಿಗೇ ಕಾಲನಾದ ತಮಿಳುನಾಡು ಡೀಜೀಪಿ ಕೆ. ವಿಜಯ್ ಕುಮಾರ್ ಅವರ ’ವೀರಪ್ಪನ್: ಚೇಸಿಂಗ್ ದ ಬ್ರಿಗ್ಯಾಂಡ್’ ನಲ್ಲೂ ಅವನೇ…….. ಹೀಗೆ ಅವನ ಕಥೆಗಳನ್ನು ಹಾಳೆಗಳಲ್ಲಿ ಹಲವರು ಕಡೆದಿತ್ತಿದ್ದಾರೆ.

ಇವಿಷ್ಟರಲ್ಲಿ ಮೊನ್ನೆ ಮೊನ್ನೆ, ಟಿ. ಗುರುಮೂರ್ತಿಯವರ ’ನರಹಂತಕನ ರುದ್ರನರ್ತನ’ ಮತ್ತು ಕರ್ನಾಟಕದ ಮಾಜಿ ಡಿಜಿಪಿ ಸಿ. ದಿನಕರ್ ಅವರ “ವೀರಪ್ಪನ್ಸ್ ಪ್ರೈಸ್ ಕ್ಯಾಚ್: ರಾಜ್ಕುಮಾರ್”ನ ಕನ್ನಡಾನುವಾದ “ರಾಜರಹಸ್ಯ” ಎರಡನ್ನೂ ಓದೋಣವಾಯ್ತು.

ಒಂದೆರಡು ಪೋಲೀಸ್ ಸಿನಿಮಾಗಳನ್ನೋ ಇಲ್ಲಾ ಥ್ರಿಲ್ಲರ್ ಸಿನಿಮಾಗಳನ್ನೋ ನೋಡಿದ ತರುವಾಯ ಇವೆರಡು ಹೊತ್ತಗೆಗಳನ್ನು ಕೈಗೆತ್ತಿಕೊಂಡರೆ ಹೊತ್ತು ಸರಿದದ್ದು ತಿಳಿಯಲಾರದು.

ಸಿ. ದಿನಕರ್ ಅವರ ಪುಸ್ತಕವನ್ನು ನೀಟಾಗಿ ಕನ್ನಡಕ್ಕೆ ಭಾವಾನುವಾದ ಮಾಡಿದ್ದಾರೆ ರವಿಬೆಳಗೆರೆ. ಹಾರ್ಟ್ ಅಟ್ಯಾಕ್ ಆಗುವಷ್ಟು ರೋಚಕವಾದ ತೆರೆಮರೆಯ ವಿವರಗಳೊಂದಿಗೆ ಸುಲಲಿತವಾಗಿ ಓದಿಸಿಕೊಳ್ಳುತ್ತದೆ. ರಾಜ್ಕುಮಾರ್ ಅಪಹರಣದ 108 ದಿನಗಳ, ಸರಕಾರೀ ಪ್ರಣೀತ 108 ನಾಟಕಗಳನ್ನೆಲ್ಲಾ ಬಿಡಿ ಬಿಡಿಯಾಗಿ ಬಿಡಿಸಿಟ್ಟಿದ್ದಾರೆ ದಿನಕರ್. ಎಸ್ ಎಂ ಕೃಷ್ಣರ ಎಡಬಿಡಂಗಿತನವನ್ನು ಬಟಾಬಯಲಾಗಿಸಿದ ಕೀರ್ತಿ ದಿನಕರ್ ಅವರಿಗೆ ಸಿಕ್ಕಿದೆ.

“ಕೃಷ್ಣ ಬೆಕ್ಕಿರಬಹುದು, ಆದರೆ ನಾನು ಬೆದರಿದ ಇಲಿ ಅಲ್ಲ” ಅಂತ ದಿನಕರ್ ಬರೆಯುತ್ತಾರೆ. ಮುಂದುವರಿದು “ನನಗೆ ಬೆದರಿಕೆ ಕರೆಗಳು ಬಂದಿವೆ. ನನಗೆ ಕೊಟ್ಟಿದ್ದ ರಕ್ಷಣೆಯನ್ನು ಕೃಷ್ಣ ವಾಪಸು ಪಡೆದಿದ್ದಾರೆ. ಅಡ್ಡಿಯಿಲ್ಲ. ನಾನು ಅರವತ್ತು ವರ್ಷಗಳ ತುಂಬು ಸಾರ್ಥಕ ಜೀವನ ಜೀವಿಸಿದ್ದೇನೆ. ಅದು ಭಾರತೀಯರ ಸರಾಸರಿ ವಯಸ್ಸು. ಅದಕ್ಕಿಂತ ಬದುಕಿದರೆ ಅದು ಬೋನಸ್ಸು. ಕೊನೆಗೆ ನೆಮ್ಮದಿಯ ಸಾವು ಸಾಯುತ್ತೇನಾ ? ಕೊಲ್ಲಲ್ಪಡುತ್ತೇನಾ ? ಕಟ್ಟಿಕೊಂಡು ನನಗೇನಾಗಬೇಕಿದೆ ? ಭಯವೆಂಬುದು ನನಗೆ ಅಪರಿಚಿತ” ಅಂತ ಕುಟುಕಿದ್ದಾರೆ.

ಈ ವೀರಪ್ಪ ನಡೆದಾಡಿದ ಕಾಡುಮೇಡಿನಲ್ಲಿ, 1947ಕ್ಕೂ ಮುಂಚೆ ’ಮಲೆಯೂರು ಮಾಂಬಟ್ಟಿಯಾನ್’ ಅಂತೊಬ್ಬ ರಾಬಿನ್ ಹುಡ್ ಇದ್ದ. ಉಳ್ಳವರನ್ನು ದೋಚಿ ಇಲ್ಲದವರಿಗೆ ಹಂಚುವ ಪರಿಪಾಠದವ. ಅವನನ್ನು ಮದರಾಸು ಪ್ರಾಂತ್ಯದ ಬ್ರಿಟೀಷು ಸರಕಾರ ಬೇಟೆಯಾಡಬಯಸಿ ಭಾರೀ ಪ್ರಯತ್ನಪಟ್ಟು ಕೊನೆಗೆ ಅವ ತಿನ್ನುವ ಆಹಾರದಲ್ಲಿ ವಿಷ ಹಾಕಿ ಸಾಯಿಸಿತು. ಆಳುವ ಸರಕಾರದಿಂದ ಒಂದಷ್ಟು ಫೀಸು ಪೀಕಿ, ಹಾಗೆ ಮಾಂಬಟ್ಟಿಗೆ ವಿಷ ಹಾಕಿದ್ದು ಇದೇ ವೀರಪ್ಪನ್ ನ ಅಪ್ಪ ಕೂಸೆ ಮುನಿಸ್ವಾಮಿ. ಅವತ್ತು ಆ ಮಾಂಬಟ್ಟಿ ಬಂದು ಊಟ ಮಾಡಿದ್ದು ತಾನು ’ಇಟ್ಟುಕೊಂಡಿದ್ದ’ ಮುನಿಸಾಮಿಯ ತಂಗಿಯ ಮನೇಲಿ ! ಆಶ್ಚರ್ಯ ಆಯಿತಾ ? ಇಂಥ ಕೆಲವಷ್ಟು ಶಾಕ್’ಗಳೊಂದಿಗೆ ಗುರುರಾಜರ ’ನರಹಂತಕನ ರುದ್ರನರ್ತನ’ ಕಾಡುತ್ತದೆ.

(ಈ ಪುಸ್ತಕಗಳಲ್ಲಿ ದೊರೆಯದ ಒಂದು offline ಸುದ್ದಿ ತುಣುಕು: ನಿಮಗೆ ಕೆನ್ನೆತ್ ಆಂಡರ್ಸನ್ ಗೊತ್ತಿರಬೇಕು…… ಬೆಂಗಳೂರಿನಲ್ಲಿದ್ದು, ಕರ್ನಾಟಕದ ಕಾಡಿನಲ್ಲಿ ಹಲವು ನರಭಕ್ಷಕ ಚಿರತೆ ಮತ್ತು ಹುಲಿಗಳನ್ನು ಕೊಂದ ಬ್ರಿಟೀಷ್ ಪ್ರಜೆ. ಆತ, ಈ ಮಾಂಬಟ್ಟಿಯನ್ನು 2-3 ಬಾರಿ, ಮೇಲೆ ಹೆಸರಿಸಿದ ಮಲೆ ಸಾಲಿನಲ್ಲಿ ಭೆಟ್ಟಿಯಾಗಿದ್ದನಂತೆ. ಹಾಗಂತ ಅವನೇ ಬರೆದುಕೊಂಡಿದ್ದಾನೆ ತನ್ನ ಕಾಡಿನ ಕಥೆಗಳಲ್ಲಿ)

ಪುಸ್ತಕಗಳನ್ನು ಓದಿದ ಮೇಲೆ ಅನಿಸತೊಡಗಿತು: ಸುಮಾರು 200ರಷ್ಟಿದ್ದ ವೀರಪ್ಪನ್ ಠೋಳಿಯನ್ನು 5-6 ಕ್ಕೆ ಇಳಿಸಿದ ಶಂಕರ ಬಿದರಿಯವರ ಟೀಂ, ಆ ಟೀಮಿನಲ್ಲಿ ಗುರುತರ ಪಾತ್ರವಹಿಸಿದ ಟೈಗರ್ ಅಶೋಕ್ ಕುಮಾರ್ ಅವರೂ, ಕೆಂಪಯ್ಯ ಅವರೂ, ದಾಳಿಗೊಳಗಾರೂ ಬದುಕುಳಿದ ಗೋಪಾಲ್ ಹೊಸೂರರೂ, ವೀರಾವೇಶದೊಂದಿಗೆ ಪ್ರಾಣದಾನ ಮಾಡಿದ ಕರ್ನಾಟಕ ಸ್ಪೆಷಲ್ ಟಾಸ್ಕ್ ಫೋರ್ಸ್ ಪೋಲೀಸರು………ಇಷ್ಟೆಲ್ಲಾ ಮಾಡಿದ ಮೇಲೆ, ವೀರಪ್ಪನ್ ನನ್ನು ತಮಿಳುನಾಡು ಸ್ಪೆಷಲ್ ಟಾಸ್ಕ್ ಫೋರ್ಸ್ ಪೋಲೀಸರು ಬೇಟೆಯಾಡಿದರು. ಶಂಕರ ಬಿದರಿಯವರನ್ನೇ ಇನ್ನೊಂದಾರು ತಿಂಗಳೋ ವರ್ಷವೋ, ಟಾಸ್ಕ್ ಫೋರ್ಸ್ನ ಕುರ್ಚಿಯಲ್ಲೇ ಕುಳ್ಳಿರಿಸಿದ್ದಿದ್ದರೆ, ವೀರಪ್ಪನ್ ನಾಮಾವಶೇಷ ಆಗಿರುತ್ತಿದ್ದ. ನಮ್ಮ ಆಳುವ ಸರಕಾರದ ಪಿರಿಕಿತನದಿಂದ ಕೀರ್ತಿ ಅವರ ಪಾಲಾಯಿತು. ಮನಸಿಗೆ ಪಿಚ್ಚೆನಿಸಿತು. ಹಾಗೆ ಕನ್ನಡನಾಡಿನ ಮಾನರಕ್ಷಿಸಹೋಗಿ ನಮ್ಮವರು ಆಳುವ ಸರಕಾರದ ರಾಜಕೀಯ ದಾಳಗಳಾಗಿ ಹೋದರು.

ಈ ಪುಸ್ತಕಗಳೊಂದಿಗೆ ಇನ್ನೆರಡು ಸಿನೆಮಾಗಳನ್ನೂ ನೋಡೋಣವಾಯಿತು: ಎ ಎಮ್ ಆರ್ ರಮೇಶ್ ನಿರ್ದೇಶನದ, ಕನ್ನಡದ, ’ಅಟ್ಟಹಾಸ’ ಮತ್ತು ರಾಮ್ ಗೋಪಾಲ್ ವರ್ಮನ ’ಕಿಲ್ಲಿಂಗ್ ವೀರಪ್ಪನ್’.

ಮೊದಲಿನದ್ದು ಉತ್ತಮ. ಎರಡೆಯದ್ದು ಅಧಮ. ಕಿಶೋರ್ ಅಬ್ಬರಕ್ಕೆ, ನಟನಾ ಕೌಶಲ್ಯಕ್ಕೆ ’ಅಟ್ಟಹಾಸ’ ಸಿನಿಮಾ ಅಸೀಮ.
ಕಿಶೋರ್ ಮುಂದೆ ರಾಮ್ಗೋಪಾಲನ ವೀರಪ್ಪನ್ ಪಾತ್ರಧಾರಿ ಬರಿಯ ಶುಂಠಿ ಪೆಪ್ಪರ್ಮೆಂಟು !! ಅಳುಮುಂಜಿ ಥರ ಕಾಣುತ್ತಾನೆ ಆತ.

’ಕಿಲ್ಲಿಂಗ್ ವೀರಪ್ಪನ್’ ಸಿನಿಮಾ ನೋಡಿದ ಮೇಲೆ ಪುಸ್ತಕಗಳನ್ನೋದಬೇಡಿ. ಹಾಗೇನಾದರೂ ಆದರೆ ನೀವು ತಲೆ ಚಚ್ಚಿಕೊಳ್ಳುವುದು ಖಚಿತ.

ಪುಸ್ತಕಗಳನ್ನು ಓದಿದ ಮೇಲೆ ’ಅಟ್ಟಹಾಸ’ ನೋಡಿದಿರೆಂದರೆ ಓದಿದ್ದು ಕಣ್ಣಿಗೆ ಕಟ್ಟುತ್ತದೆ. ತಲೆಗೆ ಹತ್ತುತ್ತದೆ, ಬುದ್ಧಿಗೆ ಮೆತ್ತುತ್ತದೆ !

– ಸುಧೀರ್ ಪ್ರಭು

Advertisements