Poetry

 

ಸಂಸ್ಕೃತ ಕಾವ್ಯಮೀಮಾಂಸೆಯಲ್ಲಿ ಭಾಮಹ -“ಶಬ್ಧಾರ್ಥೌ ಸಹಿತೌ ಕಾವ್ಯಂ” ಎಂದು ಹೇಳಿದ್ದಾನೆ. ಅಂದರೆ ಶಬ್ಧಾರ್ಥ ಸಹಿತವಾದುದು ಕಾವ್ಯ ಎಂದರ್ಥ. ಆದರೆ ಅರ್ಥ ಅಷ್ಟೇ ಅಲ್ಲ. ಕಾವ್ಯ ಶಬ್ಧಗಳ ನೇರ ಅರ್ಥವನ್ನಲ್ಲದೆ ವಿಡಂಬನೆ, ಅಂತರಾರ್ಥಗಳ ವಿಶೇಷಾಭಿವ್ಯಕ್ತಿ. ಗದ್ಯದಕ್ಕಿಂತ ವಿಭಿನ್ನ ರೀತಿಯಲ್ಲಿ ಅನುಭವನ್ನು ಕೊಡುವ, ಯೋಚನೆಯನ್ನು ಭಿನ್ನ ರೀತಿಯಲ್ಲಿ ಪ್ರಚೋದಿಸುವ ಶಕ್ತಿ ಕಾವ್ಯಕ್ಕಿದೆ. ಅದೇ ರೀತಿ ಆನಂದ ವರ್ಧನ “ಕಾವ್ಯಸ್ಯಾತ್ಮ ಧ್ವನಿ” ಎಂದು ಕಾವ್ಯಸ್ವರೂಪವನ್ನು ಸೂತ್ರೀಕರಿಸಿದ್ದಾನೆ. ಧ್ವನಿಯೇ ಕಾವ್ಯದ ಆತ್ಮ ಎಂದು ಹೇಳುವಾಗ – ಕಾವ್ಯದ ಒಳಗಿರುವ ಅರ್ಥವನ್ನು ಹುಡುಕಲು ಸೂಚಿಸುತ್ತಾನೆ. ಕಾವ್ಯಕ್ಕೆ ಕೇವಲ ವಾಕ್ಯಾರ್ಥವಲ್ಲದೇ ವ್ಯಂಗಾರ್ಥವೂ (ಧ್ವನಿ) ಇರುವುದನ್ನು ಎತ್ತಿ ತೋರಿಸುತ್ತಾನೆ. ಅಂದರೆ ಕವಿ ಧ್ವನಿಯನ್ನು ನೇರವಾಗಿ ಹೇಳಿರುವುದಿಲ್ಲ, ಪರೋಕ್ಷವಾಗಿ ಹೇಳಿರುತ್ತಾನೆ; ಹೇಳಿ ಮ್ಮುಗಿಸಿರುವುದಕ್ಕಿಂದ ಹೇಳದೆ ಬಿಟ್ಟಿರುತ್ತಾನೆ. ಆ ಹೇಳದೇ ಬಿಟ್ಟಿರುವುದನ್ನು ಓದುಗನು ಕಲ್ಪಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿರುತ್ತಾನೆ. ಅದನ್ನೇ ಇಲ್ಲಿ “ಧ್ವನಿ” ಎನ್ನುವುದು. ಆ ಧ್ವನಿಯನ್ನು ಕವಿತೆಯನ್ನು ಬರೆಯುವಾಗ ಕವಿ ಸಾಕ್ಷಾತ್ಕರಿಸಿಕೊಂಡಿರುತ್ತಾನೆ. ಹಾಗೆಯೇ ಓದುಗನೂ ಸಾಕ್ಷಾತ್ಕರಿಸಿಕೊಳ್ಳಲು ಬಯಸುತ್ತಾನೆ. ಡೇವಿಡ್ ಕಾನ್ಸ್ಟಾಂಟಿನ್ ತಮ್ಮ ಈ ಪುಸ್ತಕ “ಪೊಯಟ್ರಿ” ಯಲ್ಲಿಕೂಡ ಕವಿತೆಯ ಬೆಳವಣಿಯೆನ್ನು ಒಂದು ಸಾಕ್ಷಾತ್ಕಾರದ ಪ್ರಕ್ರಿಯೆ ಎಂದು ಹೇಳುತ್ತ, ಇಂದು

ಸಮಾಜಕ್ಕೆ ಕಾವ್ಯದ ಅವಶ್ಯಕತೆಯ ಬಗ್ಗೆ ಬರೆದಿರುವ ತಮ್ಮ ಕೃತಿಯನ್ನು ಆರಂಭಿಸುತ್ತಾರೆ.
ಕವಿತೆಯನ್ನು ಬರೆರ್ಯುವಾಗ, ಆ ಕವಿತೆಯ ಸೃಷ್ಟಿ ಪ್ರಕ್ರ್‍ಇಯಯಲ್ಲೇ ಸ್ವತಃ ಕವಿ, ಕಾವ್ಯವು ಏನನ್ನು ಬೇಡುತ್ತಿದೆ? ಎಂದೂ ಕೂಡ ಮನಗಾಣುತ್ತಾನೆ. ಕವಿತೆ ತಾನು ಕಾಗದದ ಮೇಲೆ ಪೂರ್ಣಾವಾಗಿ ಮೂಡಿದ ಮೇಲೆಯೇ, ಕವಿಯೂ ಕೂಡ ಸಂಪೂರ್ಣವಾಗಿ ಅದನ್ನು ಅನುಭವಿಸುತ್ತಾನೆ ಎಂದು ಹೇಳುವಾಗ, ಇಲ್ಲಿ ಅನುಭವಿಸುತ್ತಿರುವುದು ಯಾವುದನ್ನು ? ಎಂಬ ಪ್ರಶ್ನೆಯನ್ನು ಮುಂದಿಡುತ್ತಾರೆ. “ಮೂರ್ತ ಸತ್ಯ” ವನ್ನು ಅಭಿವ್ಯಕ್ತಿಸುವುದೇ ಕಾವ್ಯದ ಗುರಿ ಎಂದು ಉತ್ತರಿಸುತ್ತಾರೆ ಕೂಡ. ವ್ಯಾವಾರಿಕ ಜೀವನದಲ್ಲಿ ಹಲವಾರು ಮುಖಗಳನ್ನು ಹೊದ್ದು ಕಾಣುವ ಸತ್ಯ, ಕವಿಯ ಕವಿತೆಯಲ್ಲಿ ತನ್ನ ನಿಜ ಸ್ವರೂಪವನ್ನು ಅನಾವರಣಗೊಳಿಸುತ್ತದೆ. ಇಲ್ಲಿ ಸತ್ಯವನ್ನು ಅನೇಕ ದೃಷ್ಟಿಕೋನಗಳಲ್ಲಿ ತೋರುವಂತೆ ಮಾಡಬೇಕಾಗಿರುವುದು ಕವಿಯ ಜವಾಬ್ದಾರಿ ಕೂಡ, ಎಂಬ ನಿಲುವನ್ನು ಅನೇಕ ಪೂರ್ವ ಕವಿಗಳ ಹೇಳಿಕೆಗಳಿಂದ ಸಮರ್ಥಿಸುತ್ತಾರೆ. ( ‘truth is concrete’). ಹಾಗೆಯೇ , “ಕಲೆಗಾಗಿ ಕಲೆ” ಎಂದು ವಿಚಾರವಂತರು “ಕಲೆ”ಯನ್ನು ತರ್ಕಿಸಿ ಮೂದಲಿಸುವಾಗ, “ನನಗಾಗಿ ಕಲೆ” ಎಂದು ಲಾರೆನ್ಸ್ ರ ವಾಖ್ಯಾನವನ್ನು ಉದ್ಧರಿಸಿ , ವ್ಯಕ್ತಿಯ ಮುಗಿಯದ ಬೆಳವಣಿಗೆಗೆ, ಒಳತೋಟಿಗಳ ಅಭಿವ್ಯಕ್ತಿಗೆ ಕಲೆ ಎಷ್ಟು ಅವಶ್ಯಕತೆ ಎಂಬುದನ್ನು ಒತ್ತಿಹೇಳುತ್ತಾರೆ.

ಮಾನವೀಯತೆ ಕರಗುತ್ತಿರುವ ಇಂದಿನ ವಾಸ್ತವದಲ್ಲಿ, ಸಮಾಜದ ಸುಪ್ತ ಮನಸ್ಸನ್ನು ಪ್ರಶ್ನಿಸುವಂತೆ, ಅಲೋಚಿಸುವಂತೆ, ಮಾನವೀಯತೆಯನ್ನು ಪುನರುಜ್ಜೀವಿಸುವಂತೆ ಪ್ರಭಾವಬೀರುವಲ್ಲಿ, ಜನಜೀವನದಲ್ಲಿ ಕಾವ್ಯದ ಪಾತ್ರ ಬಹುಮುಖ್ಯವಾಗಿದೆ; ಅದಕ್ಕಾಗಿಯೆ ಇಂದು ಕಾವ್ಯ ಸಾವು, ನೋವು, ವಂಚನೆ, ನಿಷ್ಠತೆ, ಪ್ರ್‍ಏಮ, ದ್ವೇಶ, ವಾತ್ಸಲ್ಯ, ಅಸಹಾಯಕತೆ, ರಾಜಕೀಯ, ಮಾನಸಿಕ, ಅಧ್ಯಾತ್ಮಿಕ, ಸರ್ವೋದಯ, ಸಮನ್ವತೆ, ಲೋಕ ಕಲ್ಯಾಣ, ಯುದ್ಧ, ಪ್ರಕೃತಿ ವಿಕೋಪ ಇನ್ನೂ ಅನೇಕಾನೇಕ ವಿಷಯಗಳಲ್ಲಿ, ಅಷ್ಟು ಸುಲಭವಾಗಿ ಹೊರ ಜಗತ್ತಿಗೆ ಕಾಣದ ವಿಷಯಗಳನ್ನು ತನ್ನದೇ ರೀತಿಯಾಲ್ಲಿ ಅಭಿವ್ಯಕ್ತಿಸುತ್ತಿದೆ, ಎಂಬುದನ್ನು ಇಲ್ಲಿನ ಅನೇಕ ಕವಿತೆಗಳು ಹೇಳುತ್ತವೆ. ಅಷ್ಟಲ್ಲದೆ, ಒಂದು ಕವಿತೆಯನ್ನು ಬರೆಯುವ ಅಥವಾ ಓದುವ ವ್ಯಕ್ತಿ “ಬೇರೆಯ ಬದುಕಿನಲ್ಲಿ ನಿಂತು” ಜಗತ್ತನ್ನು ಅರಿಯಬೇಕು ಎಂಬುದನ್ನು ಸ್ಪಷ್ಟವಾಗಿ ಸಾರುತ್ತದೆ. ಕವಿತೆ ಒಮ್ಮೆ ಬರೆದು ಅದು ಹೊರ ಪ್ರಪಂಚವನ್ನು ಸೇರಿದ ಮೇಲೆ, ಆ ಕವಿತೆ ಕವಿಗಲ್ಲದೆ ಪ್ರಪಂಚಕ್ಕೆ ಸೇರುತ್ತದೆ. ಕಾಲಚಕ್ರದಲ್ಲಿ ಅನೇಕ ಬದುಕುಗಳಲ್ಲಿ ತನ್ನದೇ ಆದ ಅರ್ಥವನ್ನು ಮೂಡಿಸುತ್ತ, ಅನುಭಾವವನ್ನು ನೀಡುತ್ತ ಸಾಗುತ್ತದೆ. ಎಂದೂ ನಿಲ್ಲದೆ !! . ಅಂದು ಕವಿಗೆ ಸಿಕ್ಕ ಅನುಭೂತಿಯೇ ಬೇರೆಯಿದ್ದಿರಬಹುದು, ಆದರೆ ಇಂದು ಹೊಸ ಓದುಗನಿಗೆ ಸಿಗುವ ಅನುಭೂತಿಯೆ ಬೇರೆಯಿರಬಹುದು ( “ನೀ ಹಿಂಗ ನೋಡಬೇಡ ನನ್ನ” ಎಂಬ ಬೇಂದ್ರೆಯವರ ಕವಿತೆಯಂತೆ).
ಒಟ್ಟಿನಲ್ಲಿ ಇಂದು ಕಾವ್ಯ ಬದುಕಿಗೆ ಅವಶ್ಯಕ. ಕಲೆ ಬದುಕಿಗಾಗಿ. ಸಂಸ್ಕೃತಿಯನ್ನು ಬೆಳೆಸುವುದಕ್ಕೆ; ವಿಚಾರಪರತಿಂದ ಸಮಾಜವನ್ನು, ಜನಮನವನ್ನು ಎಚ್ಚರಿಸುವುದಕ್ಕೆ. ಡೇವಿಡ್ ರ ಈ “ಪೊಯಟ್ರಿ” ಪುಸ್ತಕದಲ್ಲಿ ಕಾವ್ಯದ ಅವಶ್ಯಕತೆಯನ್ನು ನಿರೂಪಿಸುವ ಅನೇಕ ಬರಹಗಳಿವೆ. ಮನಃಶಾಸ್ತ್ರ, ರಾಜಕೀಯ, ಚರಿತ್ರೆ, ಕ್ರಾಂತಿಗಳನ್ನು ಪ್ರತಿಬಿಂಬಿಸುವ ಕವನಗಳ ಮೂಲಕ, ಅಂದು ಇತಿಹಾಸ ಕಾಲದಲ್ಲಿ ಪ್ರಭಾವಬೀರಿದ ಕಾವ್ಯವನ್ನು, ಸಮಾಜಸ್ಥಿತಿಯನ್ನು ಇಂದು ನಮ್ಮ ಮುಂದೆ ಪುನರ್ನಿರ್ಮಿಸುತ್ತಾರೆ. ಒಂದು ಸಮಾಜದ ಕಾವ್ಯವನ್ನು ಇನ್ನೊಂದು ಸಮಾಜದ ಓದುಗರಿಗೆ ಸಿಗಬೇಕಾದರೆ, ಅದಕ್ಕೆ ಬೇಕಾದ ಅನುವಾದದ ಅಗತ್ಯವನ್ನು, ರೂಪರೇಷೆಗಳನ್ನು ವಿಶ್ಲೇಷಿಸುತ್ತಾರೆ. ಬರಿಯ ಕವಿಗಲ್ಲದೇ ಎಲ್ಲರಿಗೂ ಬೇಕಾದ ಕಾವ್ಯದ ಕುರಿತು, ಕವಿತೆಯ ಜವಾಬ್ಧಾರಿಯ ಕುರಿತು, ಅದು ಹೇಗೆ ನಮ್ಮ ಇಂದಿನ ಸ್ಥಿತಿಯಲ್ಲಿ ಸಹಾಯವಾಗಬಲ್ಲದು ಎಂದು ಮನಗಾಣುವಂತೆ ತಿಳಿಹೇಳುತ್ತಾರೆ.

– ಚಂದ್ರಶೇಖರ್ ಬಿ ಸಿ

 

Advertisements