ABH

ಒಂದು ಪುಸ್ತಕವನ್ನು ಮೌಲೀಕರಿಸುವುದು ಎಷ್ಟರ ಮಟ್ಟಿಗೆ ಸರಿಯೋ !ಅಥವಾ ತಪ್ಪೊ?
ಇಂದೊಂದು ವಿಮರ್ಶಾ ಲೋಕಕ್ಕೆ ಕಂಟಕ ,ಓದಿದಷ್ಟು ಬರೆಯಲಾಗದು, ಇನ್ನು ಬರೆದವರನ್ನು ನೀವು ಕೇಳಬೇಕು, ನೀವೇಕೆ ಬರೆಯುತ್ತೀರಿ ಅಂಥ ? ಉತ್ತರ ಹಲವು ಬಗೆಯಲ್ಲಿರುತ್ತದೆ. ಇನ್ನು ಜವಾಬ್ದಾರಿಯುತವಾಗಿ ಹೇಳುವ ಕೆಲವೇ ಲೇಖಕರನ್ನು ಕನ್ನಡದಲ್ಲಿ ಕಾಣಬಹುದು.

ಒಂದು ಪುಸ್ತಕ ಲೇಖಕನೊಳಗಿನ ಕಥೆಯಾಗಿರಬಹುದು,ಅಥವಾ ಹೊರಗಿನ ಕಥೆಯೂ ಆಗಿರಬಹುದು ,ಆದರೆ ಯಾವುದೇ ಕೃತಿ ಓದುಗನಿಗದು ತನ್ನೊಳಗೆ ನಡೆಯುವಂತಿದ್ದರೆ ಮಾತ್ರ ಸಾಹಿತ್ಯವಾಗಿ ಉಳಿಯಬಲ್ಲದು .
ಯಾವುದೇ ಸಾಹಿತ್ಯ ಬಗೆಯಾಗಿರಲಿ ,ಅಥವಾ ಲೇಖಕ ಯಾರೇ ಆಗಿರಲಿ ಅವನಿಂದ ಬರೆಸಿಕೊಂಡ ಪುಸ್ತಕ ಒಂದು ಕಾಲದ ಕೂಸಾಗಿ ಬೆಳೆಯುತ್ತದೆ .ಅದನ್ನು ಸರಿಯಾಗಿ ಬೆಳೆಸಲು ಮಾರ್ಗದರ್ಶನ ಬೇಕಾಗಬಹುದು, ಓದು ಈಗಾಗಲೇ ವರ್ಗೀಯವಾಗಿ ವಿಂಗಡನೆಯಾಗಿದೆ. ಅದಕ್ಕೆ ನಾನೂ ಹೊರತಾಗಿಲ್ಲ ,ಒಬ್ಬರು ಓದಿದ ಪುಸ್ತಕದ ಅಭಿಪ್ರಾಯ ಕೇಳಿ ನಾವು ಓದ್ತೀವಿ, ಹಾಗೇ ಕೆಲವು ಲೇಖಕರನ್ನು ವಿಂಗಡಿಸಿ ಓದುವುದನ್ನು ನಾವು ಅಂದರೆ ಇಂದಿನ ಪೀಳಿಗೆ ಕಲಿತುಬಿಟ್ಟಿದೆ.

ಈಗಾಗಲೇ ಹಲವು ಭಾಷೆಗಳಲ್ಲಿ ಬರಹಗಾರರು ಒಬ್ಬರಿಗೊಬ್ಬರು ಸಾಹಿತ್ಯ ಬಗೆಗಳು ಗೊತ್ತಿಲ್ಲದಿದ್ರೂ ಜಿದ್ದಿಗೆ ಬಿದ್ದು ಬರೆಯುವುದನ್ನ ಈ ಕಾಲದಲ್ಲಿ ಕಾಣಬಹುದು,ಓದೆಂಬುದು ಬರಹಕ್ಕೆ ಬೇಕಾದ ಇಂಧನ ಸಾಗುವಳಿ ಮಾಡುವ ರೀತಿ ಭಿನ್ನವಾಗಿರಬಹುದು, ಅದಕ್ಕೂ ಹೆಚ್ಚಾಗಿ ಹೇಳಬಹುದಾದರೆ ಓದಿದಷ್ಟು ನೀರಾಡದ ಕಣ್ಣು ನೂರು ಪುಟಗಳ ಪುಸ್ತಕವನ್ನು ಮೂರು ಗಂಟೆಯೊಳಗೆ ಓದಿ ಮುಗಿಸುವ ನನಗೆ ಹತ್ತು ಸಾಲುಗಳನ್ನು ಬರೆಯುವಷ್ಟರಲ್ಲಿ ಆ ಸ್ಥಿರತೆಯೆಂಬುದು ಕೈ ಬೆರಳ ಬಿಟ್ಟು ಓಡಿ ಹೋಗಿರುತ್ತದೆ,ಇದರಿಂದಲೇ ತಿಳಿದಿದ್ದು ಬರಹವೆಂಬುದು ಉದಾಸೀನಕ್ಕಿರುವ ಮದ್ದಲ್ಲ, ಲೋಕಾಂತದೊಳಗಿನ ಏಕಾಂತಧ್ಯಾನ. ಇಂಥ ಓದುವ ಸೌಭಾಗ್ಯ ಕೊಟ್ಟ ಎಲ್ಲಾ ಲೇಖಕರಿಗೊಂದು ಸಲಾಂ ಹೊಡಿಬೇಕನ್ಸತ್ತೆ.

ಸಾಮಾನ್ಯವಾಗಿ ವಿಮರ್ಶಕರು ತಮ್ಮ ಸುರಕ್ಷಿತ ನೆಲೆಯಲ್ಲಿ ಈಗಾಗಲೇ ಸ್ಥಾಪಿತವಾಗಿರುವ ಬರಹಗಾರರನ್ನು ಕುರಿತು ಹೆಚ್ಚಿಗೆ ಬರೆಯುತ್ತಾರೆ, ಅಜ್ಞಾತ ಹಾಗೂ ಹೊಸ ಬರಹಗಾರರನ್ನು ಗುರುತಿಸಿ ಅವರ ಬಗೆಗೆ ಬರೆಯುವ ಗೋಜಿಗೆ ಹೋಗುವುದೇ ಇಲ್ಲಾ, ಸಾವಿಗೂ‌ ಮದುವೆಗೂ ಮುಯ್ಯಿ ತೀರಿಸುವ ಹಾಗೆ ಜೊತೆಯಾಗುವ ಜನ ಕೇವಲ ತಾವು ಬರೆದ ಕೃತಿಯನ್ನು ಓದಿದವರ ಕೃತಿಗಳನ್ನು ಓದಿ‌, ಬೆನ್ನು‌ ತಟ್ಟಿದವರ ಬೆನ್ನನ್ನ ತಟ್ಟಿ‌ ಖುಷಿಪಡುವ ಬರಹಗಾರರು ಅವರವರ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುವುದು‌ ದೊಡ್ಡ ವಿಪರ್ಯಾಸ, ಇದು ಭಾಷೆ ಬೆಳೆಸುವ,ಅಥವಾ ಉಳಿಸುವ ಕೆಲಸವಲ್ಲ, ಕೊರಗಿಸುವ ಕೆಲಸವಾಗಬಹುದು.

ಒಂದು ಪುಸ್ತಕದ ಪರಿಚಯಕ್ಕೆ ಇಷ್ಟೆಲ್ಲಾ ಹೇಳುವ ಅವಶ್ಯಕತೆ ಬಹುಶಃ ಇಲ್ಲ. ಸೇತುರಾಮ್ ಅವರ `ನಾವಲ್ಲ’ ಕಥಾ ಸಂಕಲನ ಸದ್ದಿಲ್ಲದೇ ಮೂರನೇ ಮುದ್ರಣಗೊಂಡಿದೆ , ಲೇಖಕರ ಪ್ರಸ್ತಾವನೆ ನುಡಿಯಲ್ಲಿ ದೀಪ್ತಿ ಭದ್ರಾವತಿಯವರ ಬೆವರ ಸಂತೆಯನ್ನು ಓದಿ ಕತೆ ಕಟ್ಟುವ ತುಡಿತ ಸೆಳೆತವಾಯ್ತು ,ಅದರಿಂದ ದೀಪ್ತಿಯವರಿಗೆ ಕೃತಜ್ಞತೆ ಸಲ್ಲಿಸಿ ಅವರ ಹೆಸರನ್ನು ಬರೆದಿದ್ದಾರೆ,ಸೃಜನಶೀಲ ಕೃತಿಯೊಂದು ಕಾಲ ದೇಶಾತೀತವಾಗಿ ಉಳಿಯಬಲ್ಲದಾದರೆ ಅದು ಕನಿಷ್ಠ ಓದುಗನ್ನಾದರೂ ತಲುಪಬೇಕು ,ಆದರೆ ಇವರ ಪುಸ್ತಕ ಕೈ ಸೇರುವುದರೊಳಗೆ ವರ್ಷವಾಗಿಬಿಟ್ಟಿತ್ತು ,ಆದ್ದರಿಂದ ಈ ಮೇಲಿನಂತೆ ವಿಷಯಗಳನ್ನ ಪ್ರಸ್ತಾಪ ಮಾಡುವಂತಾಯ್ತು ‌

`ಆ ಬದಿಯ ಹೂವು’ ,ಇದು ದೀಪ್ತಿ ಭದ್ರಾವತಿ ಅವರ ಮೊದಲ ಕಥಾ ಗುಚ್ಚ. ಈ ಮೊದಲೇ ಇವರ `ಕಾಗದದ ಕುದುರೆ’ ಕವನ ಸಂಕಲನದ ಬಂದಿದ್ದು, ಎಲೆ ಮರೆಕಾಯಿಯಂತೆ ಅಲ್ಲೊಂದು ಇಲ್ಲೊಂದು ಮಯೂರ ,ತುಷಾರದಂಥ ಮಾಸಿಕ ಪತ್ರಿಕೆಗಳಲ್ಲಿ ಇವರ ಕತೆಗಳನ್ನು ಓದಿದ್ದೆ,ಪಟ್ಟಾಗಿ ಕುಳಿತು ಒಟ್ಟಾಗಿ ಕಥೆಗಳನ್ನು ಓದುವ ಭಾಗ್ಯವನ್ನು ಗೀತಾಂಜಲಿ ಪ್ರಕಾಶನ ಮಾಡಿ ಕೊಟ್ಟಿದೆ. ಇಂಥ ಭಾಗ್ಯವನ್ನ ಚಿತ್ತಾಲರ ನಂತರ ಸೃಜನಾತ್ಮಕವಾಗಿ ಬರೆವ ಶ್ರೀನಿವಾಸ ವೈದ್ಯ , ಜಯಂತ್ ಕಾಯ್ಕಿಣಿ ,ಅಬ್ದುಲ್ ರಶೀದ್ ,ನಂತರ ಬಂದ ಲೇಖಕಿಯರಲ್ಲಿ ಭರವಸೆ ತುಂಬುವ ಕಥೆಗಾರ್ತಿಯರಾಗಿ ಶಾಂತಿ.ಕೆ ಅಪ್ಪಣ್ಣ ಸಿಂಧೂರಾವ್ ಅವರಲ್ಲಿ ಕಂಡುಕೊಂಡಿದ್ದೆ. ಇತ್ತೀಚೆಗೆ ಆ ಸಾಲಿಗೆ ಹೊಸ ಸೇರ್ಪಡೆ ದೀಪ್ತಿ ಭದ್ರಾವತಿ ಅವರು. ಸರಳ ಭಾಷೆಯಲ್ಲಿ ಬರೆದ ಹನ್ನೊಂದು ಕಥೆಗಳನ್ನ ಈ ಒಂದು ಪುಸ್ತಕದಲ್ಲಿ ಕಾಣಬಹುದು.ಇಲ್ಲಿರುವ ಯಾವುದೇ ಕಥೆಗಳಿಗೆ ಮುಕ್ತಾಯವೆಂಬುದಿಲ್ಲ; ಕಥೆಯಾಚೆ ಓದುಗನಿಗೆ ಕೈಲಿಡಿದ ಪುಸ್ತಕ ಕನ್ನಡಿಯಂತೆ ಕಾಣುತ್ತದೆ.

ಮೊದಲ ಕಥೆ ತಿಮ್ಮಯ್ಯ ಮಾರ್ಕೆಟ್,ಯಾವುದೇ ನಗರಪ್ರದೇಶಗಳಲ್ಲಾದರೂ ವಲಸೆ ಬಂದವರು ವ್ಯಾಪಾರಸ್ಥರಾಗುತ್ತಾರೆ ಸ್ಥಳೀಯರು ಕೊಂಡು, ನಗರ ಮತ್ತು ವಲಸಿಗರನ್ನು ಜೀರ್ಣೋದ್ಧಾರ ಮಾಡುತ್ತಾರೆ
ಇಲ್ಲೂ ಹಾಗೆ ಭದ್ರಾವತಿಯ ತುಂಬು ಬಿಸಿಲನ್ನು ಹೊತ್ತು ತಂದ ಬೆಂಕಿಪುರಕ್ಕೆ ಇಳಂಗೋವನ್ ಎಂಬ ವ್ಯಕ್ತಿ ತಮಿಳುನಾಡಿನಿಂದ ಬಂದು ತಿಮ್ಮಯ್ಯ ಮಾರ್ಕೆಟಿನಲ್ಲಿ ಸಣ್ಣದೊಂದು ಅಂಗಡಿ ತೆರೆದು ವ್ಯಾವಹಾರಿವಾಗಿ ತನ್ನ ಚಾಣಾಕ್ಷತನದಿಂದ ಮುಂದೆ ಬಂದು ಕೆಲವರ ದ್ವೇಷ ಕಟ್ಟಿಕೊಂಡು ಎದುರು ಅಂಗಡಿಯ ಮಲ್ಲೇಶನಿಂದ ವ್ಯಾಪಾರದ ಜಿದ್ದಿನ ಜಗಳದಲ್ಲಿ ಕೊಲೆಯಾಗುತ್ತಾನೆ,ಕೊಲೆ ಮಾಡಿದ ಮಲ್ಲೇಶ ಜೈಲ್ ಸೇರಿದ್ರೆ ಇತ್ತ ಇಳಂನ ಹೆಂಡತಿ ಮಾರಿಮುತ್ತು ಮಾರುಕಟ್ಟೆಗೆ ಯಾವುದೇ ವ್ಯಾಪಾರದ ಅನುಭವವಿಲ್ಲದೆ ವ್ಯವಹಾರದ ಜ್ಞಾನವೂ, ಇಲ್ಲದೇ ಕಾಲಿಡುತ್ತಾಳೆ. ಅತ್ತ ಮಲ್ಲೇಶನ ಹೆಂಡತಿ ಜಾಂಬವತಿ ಗಂಡನ ಬದಲಿಗೆ ವ್ಯಾಪಾರ ಮಾಡುತ್ತಾಳೆ ,ಇದೊಂದು ಕಥೆ ನಾಲ್ಕು ಪಾತ್ರಗಳಿಂದ ತುಂಬಿದ್ರು ನಗರದ ಜೀವನ ಬಹುಪಾಲು ಮಾರುಕಟ್ಟೆಯನ್ನೇ ಅವಲಂಬಿಸಿರುತ್ತೆ
ಇದೊಂದೇ ಅಲ್ಲಾ , ಮನುಷ್ಯನ ಯಾಂತ್ರಿಕ ಜೀವನ ಮಾರುಕಟ್ಟೆಯಲ್ಲಿ ಸಿಗುವ ವಸ್ತುಗಳ ಬೆಲೆ ಏರಿಳಿತಗಳಂತೆ ಜೀವನವೂ ಅದರ ತಕ್ಕಡಿ ಬಟ್ಟಿನಂತೆ ಕಾಣುತ್ತವೆ , ಕಥೆ ಇಷ್ಟು ಬೇಗ ಮುಗಿದೆ ಹೋಯಿತು ಎನ್ನುವುದರೊಳಗೆ ಎದುರು ನಿಂತು ಕರೆವ ರಸ್ತೆ ಬದಿಯ ಹೂವಿನಂತೆ ಮತ್ತೊಂದು ಕಥೆ ಆರಂಭವಾಗುತ್ತದೆ.

ಶಾರಿಯೆಂಬ ಯುವಕಿ ವಯಸ್ಸಿನ ಬಯಕೆಗೆ ಕಟ್ಟಿಕೊಂಡ ಸೀರೆ ಸೆರಗು ಜಾರಿದ ಪ್ರೀತಿಗೆ ಅನುಭವಿಸುವ ನೋವು ಇಂದಿಗೂ ನಾನು ನಗರದಲ್ಲಿ ಅನೇಕ ಮಂದಿಯನ್ನು ನೋಡಿದ್ದೆನೆ. ಕಥೆ ಓದಲು ಆರಂಭಸಿದರೆ ಸದ್ದಿಲ್ಲದೆ ಕಣ್ಣಿನ ಪಸೆಯೊಡೆದು ಕಣ್ಣೀರು ಮಾತನಾಡುತ್ತದೆ ,ಪ್ರೀತಿ ಮಾಯೆಗೆ ಸಿಲುಕಿ ಮೈ ಮರೆತವಳಿಗೆ ಇದೀಗ ಮೈ ಮೇಲ್ಲೊಂದು ಹೂವಾಗುವ ಮೊಗ್ಗು ಬೆಳೆಯಲು ಆರಂಭಿಸಿದೆ , ಪ್ರೀತಿಸಿದವ ಕೈ ಹಿಡಿದು ಎಲ್ಲೋ ಬದಿಯಲ್ಲಿದ್ದ ಮನೆಯೊಳಗೆ ಬಿಟ್ಟು ಓಡಿ ಹೋಗಿದ್ದಾನೆ ,ತಂದೆ ತಾಯಿ ಬಿಟ್ಟು ವಯಸ್ಸನ್ನು ಮಾರಿಕೊಂಡವಳಿಗೆ ತಾನು ಬೇಲಿ ಈ ಬದಿಯ ಹೂವಾದೆ ಎಂಬ ಕೊರಗು ,ತನ್ನ ಹೊಟ್ಟೆಯಲ್ಲಿರುವ ಮಗು ಯಾವ ಬದಿಯ ಹೂವಾಗುತ್ತದೆ ಎನ್ನುವ ಪ್ರಶ್ನೆ ಅ ಪ್ರಶ್ನೆಯಲ್ಲೆ ಅಂಕುರಿಸಿದ ಬೀಜವನ್ನು ಕಿತ್ತಾಕಲು ಪಡುವ ಹರ ಸಾಹಸ ಡಾಕ್ಟರ್ ಬಳಿ ಹೋದರೆ ಗಂಡನಿಲ್ಲದೆ ತೆಗೆದು ಹಾಕಿದರೆ ಬೆಲ್ಲಕ್ಕೆ ಹಣದ ವಾಸನೆ ತಾಕಿದರೆ ನೊಣದಂತೆ ಕಾಡಿಸುವ ಡಾಕ್ಟರ್ಗಳ ಮಾತು ಇವೆಲ್ಲದರ ನಡುವೆ ಶಾರಿ ಪಡುವ ಪಾಡು ಯಾರಿಗೂ ಬೇಡವೆನ್ನಿಸುತ್ತದೆ .

ಸದ್ದಿಲ್ಲದೆ ಪುಟ ತಿರುವಿ ಹಾಕಿದರೆ ಮತ್ತೊಂದು ಕಥೆ ಆರಂಭವಾಗುತ್ತದೆ ,ಜಾಗತೀಕರಣದಲ್ಲಿ ಮಾನವೀಯತೆಯನ್ನು ಮರೆತು ತನ್ನಷ್ಟಕ್ಕೆ ಬದುಕುತ್ತಿರುವ ಮನುಷ್ಯರ ಅನೇಕ ರೂಪಗಳನ್ನ ಉಳಿದ ಅಂಚು ಮತ್ತು ಗ್ರಾಸ ಕಥೆಗಳಲ್ಲಿ ಕಾಣಬಹುದು. ಹಣಕ್ಕಾಗಿಯೇ ಕೆಲವು ಮನುಷ್ಯರಿಂದ ಬಾಯ್ಬಾಯಿ ಬಿಡುವ ಆಸ್ಪತ್ರೆಗಳ ನಡುವೆ ಕೆಲವೇ ಮಂದಿ ಸಂಜಾತ ವ್ಯಕ್ತಿಗಳನ್ನು ಕಾಣಬಹುದೆಂಬುದನ್ನ ಮನವರಿಕೆ ಮಾಡಿಕೊಟ್ಟಿದ್ದಾರೆ ,ಕೈಮಾಕ್ಸ್ ಎಂಬ ಕಥೆಯಲ್ಲಿ ಮಗುವಿನ ಅನಾರೋಗ್ಯಕ್ಕೆ ಚಿಕಿತ್ಸೆ ಕೊಡಿಸುವುದಕ್ಕೆ ಹಣವಿಲ್ಲದೆ ಚಲನಚಿತ್ರವೊಂದರ ಪಾತ್ರಕ್ಕಾಗಿ ದಿನದ ಬಾಡಿಗೆಯಂತೆ ತಾಯಿ ಮಗುವನ್ನು ಕೊಡುವುದು ಮಗು ಹಸಿದು ಕಿರುಚಾಡುವುದು ,ಹಣ ನಮ್ಮೀ ಜೀವನಕ್ಕೆ ಅದೆಷ್ಟು ಅಮೂಲ್ಯ ,ಅವಶ್ಯಕ ಎಂಬುದರ ನಡುವೆ ಭಾವನಾತ್ಮಕವಾಗಿ ಓದುಗನನ್ನ ಬಂಧಿಸುತ್ತಾರೆ.
ಸೃಜನಶೀಲತೆಯ ಹುಡುಕಾಟ ಶೋಧನೆ ಮತ್ತು ತನ್ನ ಅಪ್ರಜ್ಞಾವಸ್ಥೆಯಲ್ಲಿ ಮುಖ ಮುಚ್ಚಿಕೊಂಡು ಕೂತ ಪ್ರತಿಬಿಂಬಗಳನ್ನು ಅಕ್ಷರಗಳ ತೆಕ್ಕೆಗೆ ಒಡ್ಡುವ ಬರವಣಿಗೆಯೆಂಬಂತೆ ಇನ್ನೊಂದು ಸಾಕ್ಷಿಯೆನ್ನಬಹುದಾದ ಕಥೆಯಿದೆ. ನಿರ್ಜೀವ ವಸ್ತುಗಳ ದಿನಚರಿ ,ಅವುಗಳ ಮಾತು ,ನಿಜಕ್ಕೂ ಆಶ್ಚರ್ಯ ಹುಟ್ಟಿಸುತ್ತವೆ.ಲೇಖಕಿಗೆ ಈ ಕಥೆ ಹುಟ್ಟಿದ ಬಗೆಯಾದರೂ ಹೇಗಿರಬಹುದೊ?! ಸಾವನ್ನು ಮತ್ತು ಶವಾಗಾರವನ್ನ ಮುಖಾಮುಖಿಯಾಗಿಸಿ ಇವೆರಡರ ದಿನನಿತ್ಯದ ಮಾತುಕತೆಯನ್ನು ಗ್ರಾಮೀಣ ಪ್ರದೇಶಗಳ ಭಾಷೆಯಲ್ಲಿ ವ್ಯಕ್ತಪಡಿಸುವ ವೈಖರಿ ಪ್ರಸ್ತುತ ದಿನಗಳಲ್ಲಿ ನಾವು ನೋಡುವ ಸಾವು ನೋವುಗಳನ್ನ ಓದುಗನೊಳಗೆ ಚರ್ಚೆ ಮಾಡುವಂತೆ ಮಾಡುತ್ತದೆ ,

ಪ್ರಹ್ಲಾದ ಅಗಸನಕಟ್ಟೆಯವರ ವಿಮರ್ಶಾ ಕೃತಿ ಅನುಸರಣದಲ್ಲಿ ಕಥೆಗಾರ ಸಂತನೂ ‌ಅಲ್ಲ ಸುಧಾರಕನೂ ಅಲ್ಲ ಕ್ರಾಂತಿಕಾರನೂ ಅಲ್ಲ ಜೀವನ್ನಾಟಕದ ಚಲನೆಯ ಸೂಕ್ಷ್ಮ ವಿಕ್ಷಣ ವಿವರಣೆಕಾರ ವಿವೇಚನಕಾರ ಎಂಬುದನ್ನ ವ್ಯಕ್ತಪಡಿಸುತ್ತಾರೆ, ಈ ಪುಸ್ತಕದಲ್ಲಿ ನನಗೆ ಇಷ್ಟವಾಗಿದ್ದು ಅದೇ, ಇಲ್ಲಿ ಯಾವ ಉಪದೇಶವೂ ಇಲ್ಲ ಉಪದ್ರವವೂ ಇಲ್ಲ ದಾರ್ಶನಿಕರಂತೆ ನಿದರ್ಶನಗಳಿಲ್ಲ ಎಲ್ಲವನ್ನು ತಮ್ಮಂತೆ ಅನುಕರಿಸಿ ಓದುಗನ ಕೈಯೊಳಗಿಂದ ಮೆದುಳಿಗೆ ಹಾಕುವ ಅಕ್ಷರಗಳಾಗಿವೆ.

ಹಳೆಯ ವಸ್ತು ವಿಚಾರಗಳಿದ್ದರೂ ಹೇಳುವ ಬಗೆ ಮಾತ್ರ ನವೀನವಾಗಿದೆ
ಗದ್ಯ ಬರೀ ಗದ್ಯವೇ ಆದರೆ ನೀರಸವಾಗುತ್ತದೆ ಪದ್ಯರೂಪಕ್ಕೆ ಹತ್ತಿರವಾದರೆ ಕೃತಕವಾಗುತ್ತದೆ ಇವೆಲ್ಲವನ್ನು ಮೀರಿ ಕಥೆಗಾರ್ತಿ ವೈವಿಧ್ಯಪೂರ್ಣವಾದ ನಾದಗತಿ ಸಿದ್ದಿಸುವಂತೆ ಪದಯೋಜನೆಯನ್ನು ಅಳವಡಿಸಿಕೊಂಡಿದ್ದಾರೆ.
ತೀವ್ರತೆ ವೇಗ ಚಡಪಡಿಕೆಗಳ ನಡುವೆ ಕಥೆಗಳು ಬಹಳಷ್ಟು ಹಿಡಿಸಿದವು ,ಪ್ರಚಾರದ ಹಪಹಪನದಿಂದ ದೂರ ಉಳಿದು ಕೇವಲ ಸಾಹಿತ್ಯದ ಒಳ ಚಿತ್ತಗಳತ್ತ ಗಮನಕೊಡುತ್ತಿರುವ ಲೇಖಕಿ ಕನ್ನಡದ ಬರಹಗಾರ್ತಿಯರಲ್ಲಿ ಅನರ್ಘ್ಯ ರತ್ನವಾಗಿ ಕಾಣುತ್ತಾರೆ .

ಇನ್ನು ಪುಸ್ತಕಕ್ಕೆ ನೇರ ನಿಷ್ಠವಾದ ನಾ ಡಿಸೋಜ ಅವರ ಮುನ್ನುಡಿಯಿದೆ. ಸೃಜನ ಪಕ್ಷಪಾತವಾಗಿ ನೋಡುವ ಅವರ ಹಿತ ದೃಷ್ಟಿ ಸಾಹಿತ್ಯದ ಹಳಹಳಿಕೆಯನ್ನು ಉಳಿಸುವ ಭರವಸೆ ಮಾತುಗಳನ್ನು ,ಹೊತ್ತಿಗೆಯಲ್ಲಿ ನೋಡುವುದಕ್ಕೆ ಖುಷಿಯಾಗುತ್ತದೆ .ಇದಲ್ಲದೆ ಜಯಂತ ಕಾಯ್ಕಿಣಿಯವರ ಬೆಚ್ಚನೆಯ‌ ಬೆನ್ನುಡಿಯಿದೆ, ಕಥಾ ಹಂದರವನ್ನು ಅವರ ದೃಷ್ಟಿಯಲ್ಲಿ ನೋಡುವ ಬಗೆ ಇನ್ನಷ್ಟು ಕೃತಿಗೆ ಮೌಲ್ಯವನ್ನು ಹೆಚ್ಚಿಸುತ್ತದೆ ,

– ರಾಜುಗೌಡ

Advertisements