TY

ಈ ಮಾಟ, ಮಂತ್ರ, ವಶೀಕರಣ, ಸ್ಥಂಬನ, ಪ್ರಚೋದನೆ, ಕ್ಷುದ್ರತೆ, ತಂತ್ರ ಇನ್ನೂ ಹಲವು ಸಂಗತಿಗಳ ಬಗ್ಗೆ ನಮಗೆ ಗೊತ್ತಿರುವ ರೋಚಕ ಕಥೆಗಳು, ರೋಮಾಂಚನಗೊಳಿಸೋ ಅದರ ಕಲ್ಪನೆಗಳು, ಭಯ ಹುಟ್ಟಿಸೋ ತಾಂತ್ರಿಕರ ಆಚಾರ ವಿಚಾರ, ಅವರ ನಡೆನುಡಿ ಪದ್ಧತಿ, ಅಗೋಚರ ಜೀವನ.. ಎಲ್ಲವೂ ಬೆರಗು ಮೂಡಿಸುವಂತದ್ದೇ ಆಗಿದೆ. ಸಾಮಾನ್ಯ ಜನರಲ್ಲಿ ತಂತ್ರದ ಬಗ್ಗೆ, ತಾಂತ್ರಿಕರ ಬಗ್ಗೆ ನಂಬಿಕೆಗಿಂತ ಅಪನಂಬಿಕೆಗಳೇ ಹೆಚ್ಚು. ಅನುಭವಕ್ಕೆ ಬಾರದ, ತಿಳುವಳಿಕೆಗೆ ಎಟುಕದ ಈ ತಂತ್ರದ ಬಗ್ಗೆ ಜನರಲ್ಲಿ ಅನುಮಾನಗಳಿವೆ. ತಾಂತ್ರಿಕನನ್ನು ನೋಡುವ ರೀತಿಯೇ ಬೇರಿದೆ. ತಂತ್ರ ಕೂಡ ನಮ್ಮ ನಡುವೆ ನಡೆಯುವ ಸಾಮಾನ್ಯ ಸಂಗತಿಯಲ್ಲವೇನು? ಕೇವಲ ವೇದಪುರಾಣಗಳಿಗೆ ಶಾಸ್ತ್ರ ಮನ್ನಣೆ ನೀಡಿ, ವೇದಕಾಲದಿಂದಲೂ ಅದರ ಒಂದು ಭಾಗವಾಗಿರುವ, ಸಮಸ್ತವನ್ನೂ ತನ್ನೊಳಗೆ ಅಡಗಿಸಿಕೊಂಡಿರುವ ತಂತ್ರಕ್ಕೇಕೆ ಅಮಾನ್ಯತೆ? ಇಷ್ಟಕ್ಕೂ ತಂತ್ರ ಎಂದರೇನು? ತಾಂತ್ರಿಕರು ಯಾರು? ತಾಂತ್ರಿಕ ಲೋಕ ಹೇಗಿರುತ್ತದೆ? ಹೇಗಿರಬೇಕು? ಹೀಗೆ ಹತ್ತು ಹಲವು ನಮಗೆ ತಿಳಿಯದ ತಂತ್ರಲೋಕದ ಬಗ್ಗೆ ಪರಿಚಯ ಮಾಡಿಕೊಡುವ ಕೃತಿಯೇ ಸತ್ಯಕಾಮರು ಬರೆದ “ತಂತ್ರಯೋನಿ”.

ಹೆಸರೇ ಸೂಚಿಸುವಂತೆ ಇದು ತಂತ್ರಕ್ಕೆ ಸಂಬಂಧಿಸಿದ್ದು. ಬರೆದ ಎಲ್ಲವನ್ನೂ ಹೇಗೆ ಹೇಳಲಾಗುವುದಿಲ್ಲವೋ ಹಾಗೆ ಇದನ್ನು ಒಂದು ನಿಟ್ಟಿನಲ್ಲಿ ಹಿಡಿದಿಡಲಾಗುವುದಿಲ್ಲ. ಇದರ ಬಗ್ಗೆ ಬಹಳ ವಿಸ್ತ್ರುತವಾಗಿ ಚರ್ಚಿಸಿದ್ದಾರೆ ಸತ್ಯಕಾಮರು. ಓರೆ ಹಚ್ಚಿ ತಮ್ಮ ಅನುಭವವನ್ನು ಧಾರೆ ಎರೆದು ಅಕ್ಷರ ರೂಪಕ್ಕಿಳಿಸಿದ್ದಾರೆ. ಅದನ್ನು “ಹೀಗೇ”, “ಇಷ್ಟೇ” ಎಂದು ಫಾರ್ಮಾನು ಹೊರಡಿಸಲು “ನಮಗೆ” ಅನುಭವ ಸಾಲದು. ಆದರೂ ಕೈಗೆಟುಕಿದ್ದಷ್ಟು, ಬುದ್ದಿ ತಲೆಯೊಳಗೆ ಹೊಕ್ಕಷ್ಟು ಅವರದೇ ಅಧ್ಯಾಯಗಳನ್ನಿಲ್ಲಿ, ಅವರದೇ ಮಾತುಗಳಲ್ಲಿ ಸಂಕ್ಷಿಪ್ತವಾಗಿ ಹೇಳುವ ಪ್ರಯತ್ನ ಮಾಡಿರುವೆ. ಇದರಲ್ಲಿ ಮೂಲ ಕೃತಿಗೂ ನನ್ನ ಅಭಿಪ್ರಾಯಕ್ಕೂ ಅಭಾಸವುಂಟಾದಲ್ಲಿ ಅದರ ನೇರ ಹೊಣೆ ನನ್ನದೇ. ಪ್ರಸ್ತುತಪಡಿಸುವ ಇಲ್ಲವೇ, ನಾನು ಪರಿಭಾವಿಸಿದ ರೀತಿ ದೋಷವುಳ್ಳದ್ದೆಂದು ಅಂಗೀಕರಿಸುವೆ. ಇದರ ವ್ಯಾಪ್ತಿ ದೊಡ್ಡದು. ಆದ್ದರಿಂದ ಈ ಪ್ರಯತ್ನ ಎರಡು ಮೂರು ಭಾಗಗಳಾಗಿ ಬರುತ್ತದೆ.

ಭಾಗ 1

“ತಂತ್ರ ಎಂದರೆ ಏನು?”
ತಂತ್ರವೆಂದರೆ ಏನೂ ಅಲ್ಲ, ಬೇರೆಲ್ಲೋ ಅಡಗಿರುವುದಲ್ಲ. ಪ್ರತಿ ಅಣುರೇಣುವಲ್ಲೂ ಸುಪ್ತವಾಗಿ ಅಡಗಿ ಕುಳಿತಿರುವ ಸಾಧನ. ಮಗು ಅತ್ತಾಗ ತಾಯಿ ಮೊಲೆಯೂಡಿಸುವುದು, ಅರಳುವ ಹೂವಿನಲ್ಲಿ ಜೇನು ತುಂಬಿ ಕಣ್ಣ್ಮನ ತಣಿಸುವುದು, ಸೂರ್ಯಚಂದ್ರರ ಆಗಮನ ನಿರ್ಗಮನ, ಸೃಷ್ಟಿಯ ನಿರಂತತೆ, ಪ್ರಕೃತಿಯ ಚೆಲುವು, ಸಾಗರದ ಭೋರ್ಗರೆತ..ಹೀಗೆ ಎಲ್ಲದರಲ್ಲೂ ಅಡಗಿ ಕುಳಿತಿರುವುದು ತಂತ್ರವಲ್ಲದೇ ಮತ್ತಿನ್ನೇನು? ನಮ್ಮ ಪ್ರತಿ ಆಲೋಚನೆಯಲ್ಲಿ, ಮಾಡುವ ಕೆಲಸದಲ್ಲಿ ಹೆಜ್ಜೆಹೆಜ್ಜೆಗು ಒಡಮೂಡುವುದು ತಂತ್ರವೇ. ಅದು ಅರಿವಿಗೆ ಬರುವ ಮುನ್ನ ಅಘೋಚರ, ಅನುಭವಕ್ಕೆ ಬಂದರೆ ದೇವರು, ಅನುಭವವನ್ನೂ೨ ಮೀರಿದ ತಿಳುವಳಿಕೆ ಅದು – ತಂತ್ರ. ನಡೆಯುವ ಕಾಲು ಎಡವಬಲ್ಲದೇ ಎನ್ನುವುದು ಆಲೋಚನೆಯಾದರೂ ಅದು ತಂತ್ರದ ಇನ್ನೊಂದು ಮಗ್ಗುಲೇ. ಮಾಡುವ ಕಾಯಕ ನಿಶ್ಚಿತವಾದರು ಅದನ್ನು ಮುನ್ನಡೆಸುವುದು ತಂತ್ರವೇ. ನಿರ್ಧಾರ ಪ್ರತಿಫಲಿಸಿದರು ಅದಕ್ಕೆ ಮನಸ್ಸಿನ ಒಡಂಬಡಿಕೆಯ ತಂತ್ರವೇ ಕಾರಣ. ತಂತ್ರವಿಲ್ಲದೆ ಲೋಕವಿಲ್ಲ, ಲೋಕದ ಎಲ್ಲರಿಗೂ ತಂತ್ರ ತಿಳಿಯುವುದಿಲ್ಲ. ಬೆಳಕಿಗೆ ಕತ್ತಲಿನಾಸರೆ ಹೇಗೋ, ಕತ್ತಲಿಗೂ ಬೆಳಕಿನಾಸರೆ. ತಂತ್ರ ಅದು ಪ್ರತಿಯೊಬ್ಬನಲ್ಲಿ ಹುಟ್ಟುತ್ತಲೇ ಸ್ಥಾಪಿತವಾಗಿರುವ ಬೆಳಕು, ಅದನ್ನು ತಿಳಿಯದ ಅಜ್ಞಾನವೇ ಕತ್ತಲು. ಅಜ್ಞಾನದಿಂದ ಅಜ್ಞಾನವನ್ನು ತೊಳೆದುಕೊಳ್ಳಲಾಗದು, ಅದಕ್ಕೆ ಜ್ಞಾನದ ದೀವಟಿಗೆ ಬೇಕು. ಅದುವೇ ತಂತ್ರ.

“ತಂತ್ರ ವಿಭಿನ್ನವೇನಲ್ಲ”
ತಂತ್ರವೆನ್ನುವುದು ನೀರಿನಂತೆ. ನೀರು ಎಲ್ಲ ಖಾಯಿಲೆಯನ್ನೂ ವಾಸಿ ಮಾಡುವ ಗುಣ ಉಳ್ಳದ್ದು. ಹಾಗಂತ ಕೆರೆಯ ಮಲಿನ ನೀರನ್ನು ಕುಡಿದು ಆರೋಗ್ಯ ಕಾಪಾಡಿಕೊಳ್ಳಲಾದೀತೆ? ಅದನ್ನು ಕೆಡುವಂತೆ ಮಾಡಿದವರು ನಾವು. ತಂತ್ರವೂ ಇದಕ್ಕಿಂತ ಭಿನ್ನವಾಗೇನಿಲ್ಲ. ನಮ್ಮಲ್ಲಿರುವ ಆಲಸ್ಯ, ಆಸೆಬುರುಕತನ ನೀರನ್ನು ಮಲಿನವಾಗಿಸಿದೆ, ಜೊತೆಗೆ ಅಜ್ಞಾನವೂ ಸೇರಿ ತಂತ್ರವನ್ನು. ಒಂದು ವ್ಯವಸ್ಥೆಯನ್ನು ಕಂಡುಕೊಂಡರೆ ಮಲಿನ ಶುದ್ದವಾಗುವುದು. ಆ ವ್ಯವಸ್ಥೆಯೇ ತಂತ್ರ. ತಂತ್ರ ಇರುವುದು ಮಾನವನ ಕುಲೋದ್ಧಾರಕ್ಕೆ. ಅನಗತ್ಯವಾಗಿ ಇದನ್ನು ಮೂಲೆಗುಂಪು ಮಾಡಲಾಗುತ್ತಿದೆ.

“ತಂತ್ರದ ಕೆಲಸ”
ತಂತ್ರದ ಬಗ್ಗೆ ತಿಳುವಳಿಕೆಗಿಂತ ತಪ್ಪು ಗ್ರಹಿಕೆಯೇ ಹೆಚ್ಚು. ತಂತಕ್ಕೂ ಕೆಲವು ವಾರಸುದಾರರು ಹುಟ್ಟಿದರು. ಈ ಅನಿಷ್ಟದಿಂದಲೇ ತಂತ್ರ ತನ್ನ ಐಶ್ವರ್ಯವನ್ನು ಕಳೆದುಕೊಂಡು ಹಗರಣದ ವಸ್ತುವಾಯಿತು. ಯಾವುದು ಬದುಕನ್ನು ಬೆಳೆಯುವಂತೆ ಮಾಡುತ್ತದೋ ಅದು ಬೆಳಕಿಗೆ ಸಮಾನ. ತಂತ್ರ ಬೆಳಕನ್ನು ದೋರುವ ದಾರಿಯಷ್ಟೇ, ಮತ್ತೇನಲ್ಲ. ತಂತ್ರವನ್ನು ಒಂದು ಮಾರ್ಗ ಎಂದವರುಂಟು. ಇದು ಅತಂತ್ರ ಎಂದೂ ಅಂದಿದ್ದಾರೆ. ಆದರೆ ಬದುಕೆಲ್ಲವೂ ತಂತ್ರ. ತಂತ್ರದ ಸಂದೇಶ ಸಾಮಾಜಿಕತೆ ಅಲ್ಲ, “ತನಗಾಗಿ ಎಲ್ಲವನ್ನೂ ತೊರೆ”, ಇದು ತಂತ್ರದ ಪ್ರಕ್ರಿಯೆ. ಆದರೆ ತಾಂತ್ರಿಕರು ತಮ್ಮ ಉನ್ನತಿಗಾಗಿ ಹೊಲಸುಗೆಟ್ಟು ಅದನ್ನು ಜಗತ್ತಿನ ಕಣ್ಣಿಗೆ ಕಲ್ಮಷಗೊಳಿಸಿದರು. ಸರಿಯಾದ ದಾರಿ ಇದ್ದರೂ ಅದನ್ನು ತಪ್ಪಿಸುವವರೂ ಇದ್ದಾರೆ. ತಪ್ಪು ದಾರಿ ತುಳಿದವರನ್ನು ಸರಿ ದಾರಿಗೆ ಒಯ್ಯುವುದೇ ತಂತ್ರದ ಕೆಲಸ.

“ತಂತ್ರದಲ್ಲಿ ಗುರುಶಿಷ್ಯರು”
ತಂತ್ರದ ಹಾದಿಯಲ್ಲಿ ಗುರುವಿನ ಪಾತ್ರವೆಂದರೆ, ಗುರು ದೊಡ್ಡವ. ದೊಡ್ಡವನಾದವನಿಗೆ ದೊಡ್ಡದನ್ನು ಮಾಡಬೇಕೆಂದರೆ ತನ್ನ ದೊಡ್ಡತನವನ್ನು ಸಜ್ಜನನಿಗೆ ಧಾರೆ ಎರೆಯುವುದು. ಹಾಗಾದರೆ ಸಜ್ಜನ ಯಾರು? ಯಾರು ದೊಡ್ಡದನ್ನು ಒಪ್ಪಿಕೊಳ್ಳಲು ಸಿದ್ಧರಿರುತ್ತಾರೋ ಅವರು ಅರ್ಥಾತ್ ಶಿಷ್ಯ. ಎಲ್ಲರನ್ನೂ ಶಿಷ್ಯರೆಂದು ಸ್ವೀಕರಿಸಲಾಗುವುದೇ? ಗುರುಪಾದ ಕಂಡಾಗ ತಲೆ ಬಗ್ಗಿಸುವನು ಶಿಷ್ಯನಾಗಬಲ್ಲ. ಗುರುವಿಗೆ ಶಿಷ್ಯನಿಂದ ಸೋಲೆಂಬುದು ಇಲ್ಲ. ಆ ಸೋಲನ್ನು ಗುರು ಸಾರ್ಥಕ್ಯವೆಂದು ಅನುಭವಿಸುತ್ತಾನೆ. ತಂತ್ರದಲ್ಲಿ ಗುರುವಿನ ಪಾತ್ರ ಅತ್ಯಂತ ಮಹತ್ವದ್ದು. ಗುರುವಿಲ್ಲದೆ ಅರಿವಿಲ್ಲ ಎಂಬುದು ಸತ್ಯ.

“ದೀಕ್ಷೆ”
ದೀಕ್ಷೆಯಿಲ್ಲದೆ ಜೀವನದಲ್ಲಿ ಹೊಸ ಬೆಳಕು, ಹೊಸ ಶಕ್ತಿ, ಹೊಸ ಬದುಕು ಇಲ್ಲ. ದೀಕ್ಷೆಯಾಗದೆ ಬದುಕಿಲ್ಲ, ಮುಖ್ಯವಾಗಿ ತಾಂತ್ರಿಕನಾಗ ಬಯಸುವನಿಗೆ. ದೀಕ್ಷೆಯೇನೆಂದರೆ ಅ‌ದೇನೋ ಸಾಧನೆ ಮಾಡಿದವನಿಗೆ ಗುರುವು ಮೆಚ್ಚಿ ಪುರಸ್ಕರಿಸುವ ಸಾಧು ಕೆಲಸವಲ್ಲ. ಗುರುವನ್ನು ಮೆಚ್ಚಿಸಿದವದೆಲ್ಲಾ ದೀಕ್ಷೆ ಪಡೆಯಲು ಆಗುವುದಿಲ್ಲ. ದೀಕ್ಷೆ ನೀಡಲು ಮತ್ತು ಪಡೆಯಲು ಶಿಷ್ಯನಿಗೆ ಹೇಗೆ ಅರ್ಹತೆಯಿರಬೇಕೋ ಹಾಗೆ ಅದನ್ನು ನೀಡುವ ಗುರುವಿಗೂ ಇರಬೇಕು. ಸುಮ್ಮನೆ ತಲೆ ಮೇಲೆ ಕೈಯಿಟ್ಟು ಮಂತ್ರ ಮಣಮಣಿಸುವುದಲ್ಲ ದೀಕ್ಷೆ. ಅದೊಂದು ತಪಸ್ಸು. ಪಾತ್ರನಿಗೆ
ಮಾತ್ರ ಸಲ್ಲಬೇಕಾದ ಶ್ರೇಯಸ್ಸು. ಅಪಾತ್ರನಿಗೆ ದೀಕ್ಷೆ ಸಲ್ಲದು. ದೀಕ್ಷೆಯಲ್ಲಿ ಮೂರು ವಿಧ : ಶಾಂಭವಿ, ಶಾಕ್ತೀ ಮತ್ತು ಮಾಂತ್ರೀ. ದೀಕ್ಷೆಯನ್ನೇನೋ ಗುರು ಕೊಡುತ್ತಾನೆ. ಆದರೆ ನಂತರದ ಬೆಳವಣಿಗೆ ಇಲ್ಲವೇ ಅವಸಾನ ಅದು ದೀಕ್ಷೆ ಪಡೆದವನ ಕೈಯ್ಯಲ್ಲಿದೆ, ಅವನ ನಡೆ ನುಡಿಯಲ್ಲಿದೆ, ಬದುಕುವ ರೀತಿಯಲ್ಲಿದೆ, ತಂತ್ರವನ್ನು ಬಳಸುವ ರೀತಿಯಲ್ಲಿದೆ, ಮುಖ್ಯವಾಗಿ ಧರ್ಮ ಕಾರ್ಯಕ್ಕಾಗಿ.

“ಮಂತ್ರ”
ತಂತ್ರದಲ್ಲಿ ಮುಖ್ಯವಾದ ಇನ್ನೊಂದು ಸಂಗತಿಯೆಂದರೆ ಮಂತ್ರ. ಅದು ನಾವು ತಿಳಿದಂತೆ ಅಷ್ಟು ಸುಲಭವಲ್ಲ. ಅದರ ಬೇರುಗಳಡಿಯಲ್ಲಿಯೇ ವಿಶ್ವ ನಿರ್ಮಾಣವಾಗಿದೆ. ಮಂತ್ರವೆಂದರೆ ಬರೀ ಪದಗಳ ಸಮುಚ್ಚಯವಲ್ಲ. ಹಾಗೆ ಅದನ್ನು ಪರಿಭಾವಿಸಿದರೆ ಅದರಿಂದ ಯಾವ ಉಪಕಾರವೂ ಇಲ್ಲ. ಅದರ ಮೂಲ ದ್ರವ್ಯವನ್ನು ತಾಂತ್ರಿಕ ಗಮನಿಸಿದೇ ಹೋದರೆ ಮಂತ್ರಗಳು ವ್ಯರ್ಥ. ಕೇವಲ ಬರಹ ಮಂತ್ರ ಆಗುವುದಿಲ್ಲ. ಪ್ರಾಣವಾಯು ನಮ್ಮೊಳಗೆ ಇರುವಂತೆ ಮಂತ್ರವನ್ನು ಅರಿತು ಅನುಸರಿಸುವುದರಲ್ಲೂ ತಲ್ಲೀನತೆ ಬೇಕು, ಕೇವಲ ಮಣಮಣಿಕೆ ಮಂತ್ರವಲ್ಲಷ್ಟೇ. ಕೇವಲ ಶಬ್ದದ ತುಣುಕನ್ನು ಓದಿದರೆ ಶಬ್ದ ಪುನರಾವರ್ತನೆ ಆಗುವುದೇ ಹೊರತು, ಮಂತ್ರದ ಅನುರಣನೆಯಲ್ಲ. ಏಕೆಂದರೆ ಅಲ್ಲಿ ಮಂತ್ರದ ಬಗ್ಗೆ ಇರುವ ಶಕ್ತಿ ತಂತ್ರದ ಸಂಬಂಧ ಇರುವುದಿಲ್ಲ. ಮಂತ್ರವನ್ನು ಕೇವಲ ಮಂತ್ರವೆಂದಷ್ಟೇ ಭಾವಿಸದೇ ತಾಂತ್ರಿಕ ಲೋಕದ ಉನ್ನತ ಶಿಖರಕ್ಕೊಯ್ಯುವ ಮೆಟ್ಟಿಲೆಂದು ತಿಳಿದಾಗಲೇ ತಾಂತ್ರಿಕ ಬೆಳೆಯುತ್ತಾನೆ.

“ಜಪ”
ಇನ್ನು ಮಂತ್ರ ಶುದ್ಧವಾಗಿ ಕಲಿತ ನಂತರ ಅದರ ಬಳಕೆ ಬಗ್ಗೆ ತಿಳಿದಿರಲೇ ಬೇಕು. ಮಂತ್ರವು ಕರ್ತವ್ಯನಿಷ್ಠನಿಗೆ ಸಹಾಯಕವೇ ಹೊರತು ಸ್ವಅಭಿವೃದ್ಧಿಯ ಸಾಧನವಲ್ಲ. ಹಾಗಾದನ್ನು ಬಳಸಲೂ ಬಾರದು. ಮಂತ್ರ ಸಾಧನೆಯಲ್ಲಿ ಮೊದಲು ತಾಂತ್ರಿಕನು ತನ್ನನ್ನು ತಾನು ಮಂತ್ರಕ್ಕೆ ಒಪ್ಪಸಿಕೊಳ್ಳಬೇಕು. ಆತ್ಮನಿವೇದನೆ ಮತ್ತು ದುರ್ಬಲತೆಯನ್ನು ಕಳೆದುಕೊಳ್ಳಬೇಕು. ಮಂತ್ರ ಸಾಧನೆಗೆ ಹಲವು ಮಾರ್ಗಗಳಿವೆ, ಎಲ್ಲಕ್ಕಿಂತ ಮುಖ್ಯವಾಗಿ ಜಪ. ಜಪವೆಂದರೆ ಅದು ಮುಂದುವರಿದ ಮಂತ್ರದ ಒಂದು ಭಾಗ.

“ಧ್ಯಾನ”
ಮಂತ್ರವನ್ನೇನೋ ಜಪದ ಮೂಲಕ ಮಾಡಬಹುದು. ಆದರೆ ಮುಖ್ಯವಾಗಿ ಬೇಕಾದುದು ಏಕಾಗ್ರತೆ. ಜಪವೋ ತಪವೋ ಧ್ಯಾನವೋ ಮಾಡಲು ಏಕಾಗ್ರತೆ ಬೇಕಾಗುತ್ತದೆ. ತಾಂತ್ರಿಕನ ಮನಸ್ಸು ಸಾಮಾನ್ಯ ಮನುಷ್ಯನಿಗಿಂತ ವಿಭಿನ್ನವೇನಲ್ಲ. ಏಕಾಗ್ರತೆ ಕೈಕೊಡುತ್ತದೆ. ಅದು ಎಲ್ಲಿಯೋ ಅಡಗಿರುವ ಸೂಕ್ಷ ದೇಹಿ ಅಲ್ಲ, ಒಳಗಡೆಯೇ ಇರುತ್ತದೆ, ಹೆಕ್ಕಿ ತರಬೇಕಷ್ಟೇ. ಒಂದು ಪಕ್ಷ ಬಿಗಿಹಿಡಿದು ಧ್ಯಾನಕ್ಕೆ ಕುಳಿತಿರೆನ್ನಿ? ಇಲ್ಲ ಸಲ್ಲದ ಯೋಚನೆ ಕಾಲಿಗೆ ಗಂಟು ಬೀಳುತ್ತವೆ. ಧ್ಯಾನ ಮಾಡುವರು ಮೊದಲು ತಿಳಿಯಬೇಕಾದ ವಿಷಯ, ಧ್ಯಾನವೆಂದರೆ ಏನಾದರೂ ಮಾಡುವುದಲ್ಲ. ಏನೂ ಮಾಡದೇ ಇರುವುದು. ಮನಸ್ಸನ್ನು ಇದ್ದ ಹಾಗೆ ಇರಲು ಬಿಟ್ಟುಬಿಡುವುದು. ಧ್ಯಾನದ ಅಗತ್ಯತೆಯನ್ನು ಅರಿತರೆ ಅದನ್ನು ಮಾಡಲು ಬೇಕಾದ ಏಕಾಗ್ರತೆ ಲಭಿಸುತ್ತದೆ. ಇಲ್ಲದಿದ್ದರೆ ಇಲ್ಲ. ಇರುವುದರಿಂದ ಹೊರಬರಬೇಕು, ಪಡೆದುದನ್ನು ಬರಿದು ಮಾಡಿಕೊಳ್ಳಬೇಕು. ಆ ಮನೋಸ್ಥಿಗೆ ತಲುಪಿದಾಗ ಧ್ಯಾನ ತಾಂತ್ರಿಕನ ಕೈ ಹಿಡಿಯುತ್ತದೆ.

“ಉಪಾಸನೆ”
ತಾಂತ್ರಿಕನಾಗಬಯಸುವನು ಮೊದಲು ಉಪಾಸಕನಾಗಬೇಕು. ಹಾಗೆಂದರೇನು ಅಂತ ಕೇಳಿದರೆ ಉತ್ತರ : ಒಬ್ಬನು ತನಗಿಂತ ದೊಡ್ಡದಿದೆ ಎಂದು ನಂಬುತ್ತಾನೆ. ತಾನು ಯಾರನ್ನೂ ಚಿಕ್ಕವನನ್ನಾಗಿ ಮಾಡಲು ಬಿಡುವುದಿಲ್ಲ, ಜೊತೆಗಿರುವರನ್ನು ಮೇಲಕ್ಕೆತ್ತುವ ಕೆಲಸ ಮಾಡುವನು. ತನ್ನನ್ನು ಪೂರ್ತಿಯಾಗಿ ಕೊಟ್ಟುಕೊಳ್ಳದೆ ತಾನು ಪೂರ್ತಿಯಾಗುವುದಿಲ್ಲ. ಸಮರ್ಪಣೆ ಅವನ ಜೇವನ ಧೋರಣೆಯಾಗಿರುತ್ತದೆ. ತನ್ನ ಬೆಳವಣಿಗೆ ಯಾವುದೋ ಮಹಾ ಬೆಳವಣಿಗೆಯ ಒಂದು ಭಾಗ ಎಂದು ತಿಳಿದಿರುತ್ತಾನೆ. ತನ್ನ ದಾರಿ ಸಾಗಿದೆ ಎಂಬ ಅನುಭವ ಆತನನ್ನು ಕೆಡಿಸದು, ತನ್ನ ಬಲವೇನಿದ್ದರೂ ಅದು ದುರ್ಬಲರಿಗಾಗಿ. ತನ್ನ ಮುನ್ನಡೆ ತನಗೆ ತಿಳಿಯುತ್ತದೆ, ಅರಿವು ದಾರಿ ತೋರಿಸುತ್ತದೆ. ಇದನ್ನೆಲ್ಲಾ ಮಾಡುವುದು ತಾಂತ್ರಿಕೋಪಾಸನ ಮಾತೃಭೂಮಿಕೆಯಾಗಿರುತ್ತದೆ. ಉಪಾಸನೆಯ ಮೂಲ ಉದ್ದೇಶ ತ್ಯಾಗ ಮತ್ತು ಸಾಮೀಪ್ಯ. ತ್ಯಾಗದಿಂದ ಎಲ್ಲರ ಗೆಲ್ಲುವುದು, ಎಲ್ಲರ ಸಾಮೀಪ್ಯದಿಂದ ಒಂದಾಗುವುದು. ಅಷ್ಟೇ. ಬದುಕಿನಲ್ಲಿ ಸಹಜತೆಯನ್ನು ಅನುಭವಿಸಬೇಕು. ಶಾಸ್ತ್ರ ಮುಖ್ಯವಲ್ಲ. ತಾನು ಹಿಗ್ಗುವುದು, ಹಿಗ್ಗನ್ನು ಬಯಸಿದವರಿಗೆ ಅದನ್ನು ಹಂಚುವುದು ಉಪಾಸಕನ ಕರ್ತವ್ಯ.

ಭಾಗ 2

“ಮಾತು ಮತ್ತು ಮೌನ – ಯಾವುದು ಎಷ್ಟಿರಬೇಕು? ”
ಮೌನ ಅರ್ಥವಾಗಬೇಕಾದರೆ ಮೊದಲು ಮಾತಿನ ವ್ಯರ್ಥತೆ ಅರಿವಾಗಬೇಕು. ಮಾತು ಅರ್ಥವತ್ತಾಗಿದ್ದರೆ, ತನ್ನ ಶಕ್ತಿಯನ್ನು ಉಳಿಸಿಕೊಂಡಿದ್ದರೆ ಮೌನದ ಅಗತ್ಯವೇ ಇರುತ್ತಿರಲಿಲ್ಲವೇನೋ? ಮೌನಕ್ಕೆ ಮಾತನ್ನು ಹೆರುವ ತವಕ, ಮಾತಿಗೋ ಮೌನದ ಗರ್ಭ ಸೀಳುವ ಪುಳಕ. ಮೌನವು ಅಂತರಂಗದ ಅಗತ್ಯ, ಮಾತು ಬಹಿರಂಗದ ಕರ್ತವ್ಯ. ಮಾತು ಮತ್ತು ಮೌನದ ನಡುವೆ ಅಂತರ ತಿಳಿದವನು ಮಾತ್ರ ನಿಜವಾದ ಜ್ಞಾನಿಯಾಗಬಲ್ಲ. ತಾಂತ್ರಿಕನಾಗುವುದೆಂದರೆ ಜ್ಞಾನಿಯಾಗುವುದು ಎಂದರ್ಥ. ಮಾತಿನಿಂದ ತನ್ನ ಶಕ್ತಿ ಸವೆಯುವುದು ಆತನ ಅರಿವಿಗೆ ಬರಬೇಕು. ಬರೀ ಮಾತಿನಿಂದ ಮೋಡಿಗೊಳಪಡಿಸಿ ಜನರನ್ನು ದಾರಿ ತಪ್ಪಿಸುವ ಕೆಲಸ ಆತನಿಂದ ಆಗಬಾರದು. ಅದಾಗಬಾರದೆಂದರೆ ಇರುವ ದಾರಿ ಮೌನ. ಮೌನವೆಂದರೆ ಮಾತನ್ನು ಹತ್ತಿಕ್ಕುವುದಲ್ಲ, ಮಾತನ್ನು ಸರಿಯಾಗಿ ಬೆಳೆಯುವಂತೆ ಮಾಡಲು ಕಲ್ಪಿಸುವ ಅವಕಾಶ. ತಾಂತ್ರಿಕ ಇದನ್ನು ಗಮನಿಸಬೇಕು. ಮಾತುಗಳು ತಾಂತ್ರಿಕನ ಮೌನ ಕೋಟೆಯೊಳಗೆ ಬೆಳೆಯಬೇಕು. ಇಲ್ಲದಿದ್ದರೆ ನಡೆಗೂ ನುಡಿಗೂ ವ್ಯತ್ಯಾಸ ಬರುವುದು ಆಗಲೇ. ಮೌನ ಬಯಲು, ಮಾತು ಅದರಲ್ಲಿ ಕಟ್ಟಿದ ಮನೆ.

“ಜ್ಞಾನ ಎಂದರೆ ಏನು?”
ಜ್ಞಾನ ಎಂದರೆ ಒಂದು ಬಗೆಯ ಇಂದ್ರಿಯಾನುಭವದ ಮೂಲಕ ಪಡೆಯುವ ಸತ್ಯದರ್ಶನ. ಅದು ಬೆಳಕು. ಅಲ್ಲಿ ಕತ್ತಲಿಲ್ಲ. ಕತ್ತಲಿನಲ್ಲಿ ಜ್ಞಾನ ಅರಳುವುದೂ ಇಲ್ಲ. ಜ್ಞಾನವನ್ನು ಅರಿಯಬೇಕಾದರೆ ಮಾತನ್ನೂ ಮೀರಬೇಕು, ಅನುಭವಗಳನ್ನೂ ದಾಟಬೇಕು. ಒಬ್ಬ ವ್ಯಕ್ತಿ ತನಗೆ ಜ್ಞಾನವಿದೆ ಅಥವಾ ಇಲ್ಲ ಎಂಬುದನ್ನು ನಿರ್ಣಯಿಸಲು ಇರಬೇಕಾದುದು ಸ್ವತಂತ್ರ ಮತ್ತು ನಿರ್ಭಯತೆ. ಜ್ಞಾನದ ಮೂಲಗಳೇ ಇವು. ಯಾರಲ್ಲಿ ಸ್ವತಂತ್ರ ಮತ್ತು ನಿರ್ಭಯತೆ ಇರುತ್ತದೋ ಆತನಿಗೆ ಜ್ಞಾನದ ಪರಿಚಯವಾಗುತ್ತದೆ. ಅಲ್ಪಜ್ಞಾನದ ಉಪಯೋಗವೇ ಅಜ್ಞಾನ. ತಾಂತ್ರಿಕನು ಒಂದೆರೆಡು ಮೆಟ್ಟಿಲು ಏರಿ ಜ್ಞಾನಿಯಾದೆ ಎನ್ನಬಾರದು. ಜ್ಞಾನಕ್ಕೆ ಕೊನೆಯಿಲ್ಲ, ಅಜ್ಞಾನಕ್ಕೆ ತುಂಬ ತಪ್ಪು ಹೆಜ್ಜೆ ಇಡಬೇಕಿಲ್ಲ. ತಿಳಿದಷ್ಟೂ ಜ್ಞಾನವೇ, ಮೊಗೆದಷ್ಟೂ ಅನುಭವವೇ. ಜ್ಞಾನ ಅದು ಕ್ಷಿತಿಜ. ಅರೆಬೆಂದ ಮನಸ್ಸಿನಿಂದ ಸ್ಥಾನಪಲ್ಲಟ, ಅಜ್ಞಾನ ಆವಾಹನೆಯಾದಂತೆಯೇ ಸರಿ. ಜ್ಞಾನ ಸಂಪಾದಿಸಲು ಎಲ್ಲಿಗೂ ಹೋಗಬೇಕಿಲ್ಲ. ಹೋದರೆ ಸಿಗುತ್ತದೆ ಎಂದರೆ ಅದು ಜ್ಞಾನವೂ ಆಗಿರುವುದಿಲ್ಲ. ಅದು ನಮ್ಮೊಳಗಿರುವ ಸುಪ್ತಚೇತನ. ಅದನ್ನು ನಾವೇ ಸ್ವಪ್ರಯತ್ನದಿಂದ ಅರಿಯಬೇಕು. ತಾಂತ್ರಿಕನು ಇದನ್ನು ಮನಗಾಣಬೇಕು. ಜ್ಞಾನ ಸಂಪಾದನೆಯ ಅನುಕೂಲ ಮಾರ್ಗಗಳು ಜಪ ತಪ ಮತ್ತು ಯೋಗ.

“ಯೋಗ ಮತ್ತು ಕಾಮ”
ಅಭ್ಯಾಸ ಎನ್ನುವುದು ಒಂದು ಗತಿ. ಒಂದು ನಿರಂತರ ಪ್ರಕ್ರಿಯೆ. ಈ ನಿರಂತರ ಪ್ರಕ್ರಿಯೆಯ ಒಂದು ಭಾಗವೇ ಯೋಗ ಮತ್ತು ಕಾಮ. ಯೋಗದ ನಿರ್ವಾಹಕ ಶಕ್ತಿಯೇ ಕಾಮವಾಗಿದೆ. ಕಾಮವು ಇಂದ್ರಿಯಾಧೀನ ಪ್ರಕ್ರಿಯೆಯಲ್ಲ, ಇಂದ್ರಿಯಾದೀತ ಸಂಚಲನೆ. ಯೋಗವೆಂದರೆ ಇನ್ನೇನೂ ಅಲ್ಲ, ಮನಸ್ಸಿಗೆ ಕಾಲ – ದೇಶವನ್ನು ಮೀರುವ ವೇಗವನ್ನು ತರುವುದೇ ಆಗಿದೆ. ಕಾಮವು ಇಂದ್ರಿಯವನ್ನು ದಾಟದೆ ಮನಸ್ಸಿಗೆ ಕಾಲ ದೇಶವನ್ನು ಮೀರುವ ಯೋಗ ಬರುವುದಿಲ್ಲ. ಯೋಗ ಕಾಮವನ್ನು ಇಂದ್ರಿಯದ ಆಚೆಗೆ ಒಯ್ಯಲು ಸಾಧ್ಯವಾದರೆ ಮಾತ್ರ ಅದು ವಿಸ್ತಾರವನ್ನು ಪಡೆಯುತ್ತದೆ. ಇಂದ್ರಿಯಗಳಿಂದ ಕಾಮವನ್ನು ಮುಕ್ತ ಮಾಡುವುದೇ ಯೋಗವಾಗುತ್ತದೆ. ಹೇಗೆ ಯೋಗ ಒಬ್ಬ ವ್ಯಕ್ತಿಯನ್ನು ಸಧೃಢನನ್ನಾಗಿಸುವುದೋ ಹಾಗೆ ಕಾಮವೂ ಒಬ್ಬನನ್ನು ಬಲಿಷ್ಠನನ್ನಾಗಿಸುತ್ತದೆ. ಒಂದೇ ನಾಣ್ಯದ ಎರಡು ಮುಖದಂತೆ ಇವು. ಇಂದ್ರಿಯವನ್ನು ತಡೆದು ಕಾಮವನ್ನು ಒತ್ತರಿಸಿ ಯೋಗಿಯಾಗಿ ಸಾಧಿಸಬೇಕಾದುದು ಏನೂ ಇಲ್ಲ. ಭೋಗಿಯಾಗಿದ್ದುಕೊಂಡೇ ಯೋಗಿಯಾಗಬಹುದು. ಆದರೆ ಯೋಗ ಮತ್ತು ಕಾಮದ ಬಳಕೆಯ ಪರಿಮಾಣ ಮತ್ತು ಅದರ ಬಳಕೆ ಸ್ಪಷ್ಟವಾಗಿ ತಾಂತ್ರಿಕನಿಗೆ ತಿಳಿದಿರಬೇಕು.

“ಮದ್ಯದ ಇತಿ ಮಿತಿ, ಮಾನಿನಿಯ ಸ್ಥಿತಿಗತಿ”
ಬದುಕಿಗೆ ನೀತಿಯ ಕೋಟೆ ಕಟ್ಟಿ ಅದರ ಮೌಲ್ಯಗಳನ್ನು ರಕ್ಷಿಸುವ ಕೆಲಸ ಹಿಂದಿನಿಂದಲೂ ನಡೆದು ಬಂದಿದೆ. ಮದ್ಯವನ್ನು ಕೆಟ್ಟದೆಂದು ಕರೆಯುವುದು ಮದ್ಯವನ್ನು ಮುಂದಿಟ್ಟುಕೊಂಡೇ ಎನ್ನುವುದು ಎಲ್ಲ ಬಲ್ಲವರ ವಿಚಾರ. ಮಧ್ಯದಿಂದ ಮದ. ಇಷ್ಟಕ್ಕೂ ಮದವೆಂದರೆ ಸುಖ ಎನ್ನುವ ಅರ್ಥ ಬರುತ್ತದೆ. ಬದುಕಿನ ಅರ್ಹತೆಗೆ ಮದವೆಂದು ಹೆಸರು. ಬದುಕನ್ನು ಹಿಗ್ಗಿಸುವ ಸತ್ವಕ್ಕೆ ಮದ ಎನ್ನುವರು. ಅದು ಗಾಳಿಯಲ್ಲಿದೆ, ಬೆಳಕಿನಲ್ಲಿದೆ, ರಸ ನೀರಸದಲ್ಲಿದೆ, ವ್ಯಾಮೋಹ ವ್ಯಾಕುಲತೆ, ಸ್ನೇಹ ಪ್ರೀತಿ ಪ್ರೇಮ, ಮೋಸ ವಂಚನೆ.. ಎಲ್ಲದರಲ್ಲಿಯೂ ಇದೆ. ಅನುಭವಕ್ಕೆ ಬಂದಷ್ಟು ಮದ, ಅದು ಒಳ್ಳೆಯದಾಗಿರಬಹುದು ಯಾ ಕೆಟ್ಟದಾಗಿರಬಹುದು. ಅದಿಲ್ಲದ ಯಾವ ವಸ್ತುವೂ ಭೂಮಿ ಮೇಲಿಲ್ಲ. ಅದು ಬದುಕಿನ ಅಗತ್ಯ. ಮದವನ್ನು ಕೊಡುವುದೆಲ್ಲ ಮದ್ಯವಾಗಿದೆ. ಎಲ್ಲ ವಸ್ತುವಿನಲ್ಲೂ ಬದುಕನ್ನು ವಿಸ್ತರಿಸುವ ಸತ್ವವಿದೆ. ಆ ಸತ್ವವೇ ಮದ. ಕೇವಲ ಕುಡಿತದ ಮದವೊಂದೇ ಅಲ್ಲ ಬೇಕಾದುದು ತಾಂತ್ರಿಕನಿಗೆ. ಎಲ್ಲವನ್ನೂ ಮೀರಿದ ತಿಳುವಳಿಕೆ ಬೇಕಾಗುತ್ತದೆ. ತಿಳುವಳಿಕೆ ಎನ್ನುವುದು ತಾಂತ್ರಿಕನ ಅನುಭವಕ್ಕೆ ಬಿಟ್ಟ ಮದವಾಗಿರುತ್ತದೆ. ಯಾವುದಕ್ಕೆ ಎಷ್ಟು ಪ್ರಾಪ್ತಿಯೋ ಅಷ್ಟು. ಅಂದಮಾತ್ರಕ್ಕೆ ಕುಡಿದು ಮದವೇರಿರಿ ಎಂದರ್ಥವಲ್ಲ. ತಂತ್ರ ಸಾಧನೆಗೆ ಎಷ್ಟು ಮುಖ್ಯವೋ ಅಷ್ಟಿದ್ದರೆ ಸಾಕು. ಅದನ್ನು ಮೀರಿ ಸದಾ ಅದರಲ್ಲಿ ಮುಳುಗೇಳುವುದು ಸರಿಯಲ್ಲ.

“ಅನುಭವ ನೀಡುವ ಸಾಕ್ಷಾತ್ಕಾರ”
ಅನುಭವ ತುಂಬಾ ದೊಡ್ಡದು. ಜ್ಞಾನ ಸಮುದ್ರದಂತೆ, ಅನುಭವ ಅದರ ಒಂದು ಹನಿ. ಹನಿಗೆ ಹನಿ ಕೂಡಿದರೆ ಸಮುದ್ರವಾಗಲಿಕ್ಕಿಲ್ಲ. ಸಮುದ್ರದಲ್ಲಿ ಹನಿ ಹೇಗೆ ಇದ್ದೂ ಇಲ್ಲವೋ ಹಾಗೆ ಜ್ಞಾನದಲ್ಲಿ ಅನುಭವ ಇದ್ದೂ ಇಲ್ಲದಂತೆ ಇರುತ್ತದೆ. ಅನುಭವಕ್ಕೆ ಎರಡು ಮೈ. ಒಂದು ಇಂದ್ರಿಯದ ಮೂಲಕ ಹರಿದು ಬರುವುದು ಇನ್ನೊಂದು ಮನಸ್ಸಿಗೆ ಮುಟ್ಟಿ ಇಂದ್ರಿಯವನ್ನು ತಲುಪುವುದು. ಅನುಮಾನದಿಂದಲೂ ಅನುಭವ ಪಡೆಯಬಹುದು. ಅನುಮಾನ ಬದುಕನ್ನು ವಿಸ್ತರಿಸುತ್ತದೆ, ಅನುಭವ ಎತ್ತರಿಸುತ್ತದೆ. ಬೆಳೆಯುವ ಇಚ್ಚೆ ಯಾರಲ್ಲಿ ಸದಾ ಜಾಗೃತವಾಗಿರುತ್ತದೋ ಅವನಿಗೆ ಅನುಭವ ಆಗುವುದಿಲ್ಲ, ಅದು ಸಿದ್ಧಿಸುತ್ತದೆ. ಬೇಡಿ ಹೋದರೆ ಅದು ಅನುಭವವಲ್ಲ, ಕೇವಲ ವ್ಯರ್ಥ ಪ್ರಯತ್ನವಷ್ಟೇ. ಅನುಭವ ಎನ್ನುವುದು ದಿವ್ಯ ಸಾಕ್ಷಾತ್ತ್ಕಾರವೇ ಸರಿ. ಬೆಳೆಯುವ ಶಕ್ತಿ ಒಳಗಿಂದಲೂ ಉದಯಿಸಿ ಅದು ಹೊರಗಿನಿಂದಲೂ ಒಬ್ಬನನ್ನು ಅರಸಿ ಬಂದಾಗ ಅನುಭವವಾಗುತ್ತದೆ. ಅರಿವಿಗೆ ಬಂದಿದ್ದೆಲ್ಲಾ ಅನುಭವವಲ್ಲ. ಅದು ಕೇವಲ ಘಟನೆಗಳು. ಘಟನೆ ಅನುಭವವಲ್ಲ. ನಡೆಯುವ ಕಾಲಿಗೆ ತಲೆಯೊಂದು ಯಂತ್ರದಂತೆ ಅಗತ್ಯ. ತನ್ನ ಯಂತ್ರದ ಬಗ್ಗೆ ಸ್ಪಷ್ಟ ತಿಳುವಳಿಕೆ ತಾಂತ್ರಿಕನಿಗಿರಬೇಕು. ಆಗ ಅನುಭವ ಆತನಿಗೆ ಸಿದ್ಧಿಸುತ್ತದೆ. ಸಮತೋಲಿತ ಮನಸ್ಸು, ಸ್ವಚ್ಚ ಯೋಚನೆ, ಸಮಾಜದ ಹಿತ ಚಿಂತನೆಯ ಬಗ್ಗೆ ತಾಂತ್ರಿಕನಿಗಿರಬಹುದಾದ ಕಲ್ಪನೆಯೇ ಆತನಿಗೆ ಅನುಭವ ಸಾಕ್ಷಾತ್ತ್ಕಾರ ಘಟಿಸುವಂತೆ ಮಾಡುವ ಪ್ರಮುಖ ಅಂಶಗಳು.

ಈ ಎಲ್ಲಾ ಅರ್ಹತೆಗಳಿದ್ದ ಯಾರಾದರೂ ತಂತ್ರಲೋಕವನ್ನು ಪ್ರವೇಶಿಸಬಹುದು. ತಾಂತ್ರಿಕರಾಗಬಹುದು. ತಂತ್ರ ಅದು ಸಮಾಜದ ಒಳಿತಿಗಾಗಿಯೇ ಇರುವ ಅಸ್ತ್ರ. ಅದನ್ನು ಬಳಸುವ ರೀತಿ ಮತ್ತು ದಾರಿ ಮುಖ್ಯ ಅಷ್ಟೇ. ತಂತ್ರ ಬೇರೇನೂ ಅಲ್ಲ. ಅದೊಂದು ಅರ್ಹತೆ, ಸಂಯಮ, ಸಮರ್ಪಣೆಗಳ ಪರಿಪಾಕ. ನಡೆಯುವವ ಎಡವುತ್ತಾನೆ. ಅದನ್ನು ತಡೆದು ಬಲಿಷ್ಠನಾದವನು ನುಗ್ಗುತ್ತಾನೆ. ಇದೇ ತಂತ್ರ. ತಂತ್ರ ನಡೆಯುವವರ ದಾರಿಯೇ ಹೊರತು ಕಟ್ಟು ಕಥೆಯಲ್ಲ. ದೇವರು ತುಂಬಾ ಸವೆದು ಹೋದರು ಹೆಚ್ಚು ಚಲಾವಣೆಯಲ್ಲಿರುವ ನಾಣ್ಯ. ಇದಕ್ಕೆ ಎರಡು ಮೈ. ಒಂದು ಕಾಣುವುದು ಇನ್ನೊಂದು ಕಾಣದ್ದು. ಕಾಣುವುದು ಎಲ್ಲರೂ ಒಪ್ಪಿರುವ ಶಿಷ್ಟಾಚಾರವಾದರೆ ಕಾಣದ್ದು ತಂತ್ರ. ಒಂದು ಹೊರ ಮೈ, ಇನ್ನೊಂದು ಒಳ ಮೈ.

ತಂತ್ರದ ಬಗ್ಗೆ ಎಷ್ಟು ಒಳ್ಳೆಯ ಮಾತು ಇದೆಯೋ ಅಷ್ಟು ಕೆಟ್ಟ ಕಥೆಯೂ ಇದೆ. ತಂತ್ರ ಕಾಶ್ಮೀರ ಶೈವಾಗಮಗಳಿಂದ ಹುಟ್ಟಿ ಒಂದು ಕಾಲಕ್ಕೆ ತನ್ನ ಉನ್ನತ ಸ್ಥಾಯಿಯನ್ನು ಪಡೆದಿದ್ದ ಅದು ಐತಿಹಾಸಿಕ ಕಾರಣದಿಂದಾಗಿ ಹಿಂದೆ ಸರಿಯಿತು, ಸಮಾಜದ ಅವಜ್ಞೆಗೆ ಈಡಾಯಿತು, ತಂತ್ರ ವಿದ್ಯೆಯ ರಹಸ್ಯಮಯತೆಯಿಂದಾಗಿ ಹೆಚ್ಚು ಆಲಕ್ಷ್ಯಕ್ಕೊಳಪಟ್ಟಿತು. ಯಾವುದನ್ನು ತಿಳಿದುಕೊಂಡರೆ ಎಲ್ಲವನ್ನೂ ತಿಳಿದುಕೊಂಡಂತಾಗುವುದೋ ಅದರ ಮೂಲವಿರುವುದೇ ತಂತ್ರದಲ್ಲಿ. ಒಂದು ವರ್ಗದ ಕುತಂತ್ರಿಕರ ದುರಾಸೆಯ ಫಲವಾಗಿ ಅದು ನಮ್ಮಲ್ಲನೇಕರಲ್ಲಿ ಭಯದ ವಾತಾವರಣ ಮೂಡಿಸಿದೆ. ಹೀಗಾಗಿ ವೇದೋಪನಿಷತ್ತಿನಂತೆ ಇರಬೇಕಾದ ವಿದ್ಯೆ ಮೂಲೆಗುಂಪಾಗಿಯೂ ಮತ್ತು ರಹಸ್ಯಮಯವಾಗಿಯೂ ಆಯಿತು. ಹಾಗೆ ನೋಡಿದರೆ ತಂತ್ರದಲ್ಲಿ ರಹಸ್ಯವನ್ನುವುದು ಏನೂ ಇಲ್ಲ, ಮುಚ್ಚಿಡುವಂತದ್ದು ಇಲ್ಲವೇ ಇಲ್ಲ. ಮುಚ್ಚಿಡುವುದು ತಂತ್ರವಲ್ಲ. ತೆರೆಯುವುದಷ್ಟೇ ತಂತ್ರ.

ತಂತ್ರ ಬದುಕಿನ ಅಗತ್ಯ, ಅನಿವಾರ್ಯ. ಅದು ದೇಶದ ಸೊತ್ತಲ್ಲ. ಕಾಲದ ಅಧೀನವಲ್ಲ. ಅದಕ್ಕೆ ವರ್ಣದ ವ್ಯವಸ್ಥೆ ಇಲ್ಲ. ಅದು ಶಕ್ತಿ, ಬದುಕಿನ ಗತಿ.

ವಿ.ಸೂ. ಸತ್ಯಕಾಮರು ಇನ್ನೂ ಹಲವು ವಿಷಯಗಳ ಬಗ್ಗೆ, ತಂತ್ರ ಮತ್ತದರ ವಿಸ್ತೀರ್ಣವನ್ನು ಮೀರಿ ಆಧ್ಯಾತ್ಮಿಕವಾಗಿ ತಮ್ಮ ಈ ಕೃತಿಯಲ್ಲಿ ಬರೆದಿದ್ದಾರೆ. ಅದೆಲ್ಲಾ ಅಪ್ರಸ್ತುತ ಅಂತಲ್ಲ, ಆದರೆ ಅವಶ್ಯಕತೆ ಇಲ್ಲದ್ದರಿಂದ ಅದರ ಬಗ್ಗೆ ಇಲ್ಲಿ ಪ್ರಸ್ತುತ ಮಾಡಿಲ್ಲ.

ಭಾಗ 3

ಸತ್ಯಕಾಮರ “ತಂತ್ರಯೋನಿ” ಕೇವಲ ತಂತ್ರ, ತಾಂತ್ರಿಕರ ಲೋಕದ ವಿಧಿವಿಧಾನವನ್ನು ಆಡ್ಯವಾಗಿ ತಿಳಿಸುವ ಕೃತಿಯಾದರೂ ಓದುವವರು ಗಮನಿಸಿದರೆ ಪ್ರತಿ ಪುಟದಲ್ಲೂ ಇಡೀ ಜೀವನ ದೃಷ್ಟಿಕೋನವನ್ನು ಬದಲಾಯಿಸುವ ಸಂಗತಿಗಳಿವೆ. ಒಬ್ಬ ವ್ಯಕ್ತಿಯ ಉಗಮಕ್ಕೆ ಕಾರಣವಾಗಬಲ್ಲ ಹಲವು ಸಾಲುಗಳಿವೆ. ಇದನ್ನು ನೀವು ವ್ಯಕ್ತಿತ್ವ ವಿಕಸನದ ಪಾಠಗಳೆನ್ನಿ, ಜ್ಞಾನದ ಇನ್ನೊಂದು ರೂಪವೆನ್ನಿ, ಅಂತರ್ದರ್ಶನವೀಯ್ವ ಬೆಳಕೆನ್ನಿ – ಎಲ್ಲವೂ ಆಗುತ್ತದೆ. ಒಮ್ಮೆ ಓದಲು ಶುರು ಮಾಡಿದರೆ ಸತ್ಯಕಾಮರು ಹೇಳಿರುವ ಪ್ರತಿಯೊಂದು ಮಾತುಗಳು ಜೀವನದ ಸತ್ಯಗಳನ್ನು ಬಹು ಸರಳವಾಗಿ ಹೇಳಿರುವುದು ಓದುಗರ ಅನುಭವಕ್ಕೆ ಬರುತ್ತದೆ. ನನಗೆ ಹಿಡಿಸಿದ ಕೆಲವು ಸಾಲುಗಳನ್ನಿಲ್ಲಿ ಪ್ರಸ್ತಾವಿಸಿದ್ದೇನೆ. ಒಮ್ಮೆ ಓದಿ ನೋಡಿ, ಯಾವ ಮಹಾನ್ ಗುರುವಿಗಿಂತಲೂ, ಭೋಧಕನಿಗಿಂತಲೂ, ತತ್ವಜ್ಞಾನಿಗಿಂತಲೂ ಸರಳವಾಗಿ ಜ್ಞಾನ ಮತ್ತು ಸತ್ಯದ ದರ್ಶನ ಮಾಡಿಸಿದ್ದಾರೆ ಸತ್ಯಕಾಮರು.

ನಮ್ಮ ಮೇಲೆ ಬಳಿದುಕೊಳ್ಳುವ ಕತ್ತಲೆಯನ್ನೇ ಬೆಳಕಿನ ಹಬ್ಬ ಎನ್ನುತ್ತೀವಿ. ಅಜ್ಞಾನದಿಂದ ಅಜ್ಞಾನವನ್ನು ಕಳೆದುಕೊಳ್ಳಲಾಗುವುದಿಲ್ಲ. ಜ್ಞಾನದೀಪ ಬೇಕು.

ತಮ್ಮ ಮನೆ ದೊಡ್ಡದೆನ್ನುವರು ಅ‌ದು ಹೊರ ಬಯಲಿಗಿಂತ ಚಿಕ್ಕದೆನ್ನುವುದನ್ನು ಮರೆತಿರುತ್ತಾನೆ.

ನಾವು ದೊಡ್ಡವರಾಗದೇ ನಮ್ಮದಾವುದೂ ದೊಡ್ಡದಾಗುವುದಿಲ್ಲ.
ಯಾವುದು ದೊಡ್ಡದು? ಯಾವುದು ತಾನು ಚಿಕ್ಕದು ಆಗಿದೆಯೋ, ಇತರು ಯಾವುದನ್ನು ಚಿಕ್ಕದು ಮಾಡಲಾರರೋ ಅದು ದೊಡ್ಡದು.

ಎಲ್ಲದರಲ್ಲಿ ನೀನು ಬೆರಿ. ನಿನ್ನಲ್ಲಿ ಎಲ್ಲವನ್ನು ಬೆರೆಸಿಕೊ.

ಜೀವವಿಲ್ಲದ್ದು ಬೆಳೆಯಲಾರದು. ಬೆಳೆಯುವುದೆಲ್ಲಾ ಜೀವದಿಂದ ಇರುವುದೇ. ಇಲ್ಲಿ ಇರುವುದೆಲ್ಲಾ ಬೆಳೆಯಲೆಂದೇ.

ಬೇರೆ ಎಂದು ಕಾಣುವುದರಲ್ಲಿ ಇರುವಿಕೆ ಒಂದೇ.

ದಾರಿ ಎಲ್ಲಿದೆ? ನಡೆದಾಟ ಇದ್ದಲ್ಲಿ ಅಲ್ಲವೇ? ಹಾದಿಗಿಂತ ಮೊದಲು ಹಾಯ್ದಾಟ; ಇದ್ದ ಕಾಲು ಕಿತ್ತು ಇನ್ನೆಲ್ಲಿಯೋ ಇಟ್ಟರೆ ಹಾದಿಯಾಗದು. ತಲುಪುವ ದಿಕ್ಕಿನತ್ತ ಕಾಲಿಡಬೇಕು. ಹೋಗುವುದು ಮೊದಲು ಗೊತ್ತಾಗಬೇಕು. ಗೊತ್ತಾಗದೆ ಹೋಗುವವ ಬರೀ ಕಾಲಿದ್ದವ. ತಲೆ ಇಲ್ಲದವನ ಕಾಲು ‘ಕೆಳಗಿನ’ ಕೆಲಸ ಮಾಡುತ್ತದೆ.

ಕೈಗೆತ್ತಿಕೊಂಡಿದ್ದನ್ನು, ಕಾಲಿಟ್ಟು ಸಾಗುವುದನ್ನು ದೊಡ್ಡದಾಗಿ ಕಾಣುತ್ತೇವೆ. ಹೊರಗೆ ಇರುವುದೆಲ್ಲಾ ಒಳಗಿದೆ. ತುಂಬ ದೊಡ್ಡವರಾದವರಿಗೆ ಒಳ ಹೊರಗು ಎಂಬ ಎರಡು ಇರುವುದಿಲ್ಲ.

ನಮ್ಮದು ನಮ್ಮೊಳಗಿದೆ. ಅದು ಎಂದೂ ಚಿಕ್ಕದಲ್ಲ. ತುಂಬ ದೊಡ್ಡದೇ ಸರಿ. ಅದನ್ನು ಚಿಕ್ಕದು ಮಾಡಿದ್ದು ಹೊರಗಿನದನ್ನು ಒಳಗಿರಿಸಿಕೊಂಡಿದ್ದಕ್ಕಲ್ಲ. ಅದು ಒಳಗಿರಲಿ ಎಂದು ಕಟ್ಟಿದ ಗೋಡೆಗಳು ಅದನ್ನು ಚಿಕ್ಕದು ಮಾಡಿವೆ.

ನಮ್ಮ ತಲೆಗೆ ಮೂಡಿದ ಕೋಡು ಇತರರನ್ನು ಇರಿಯಲು ಅಲ್ಲ. ಅರಿಯಲು. ಇರವಿಗೆ ಇಂಬು ಕಲ್ಪಿಸಲು. ಅರಿವನ್ನು ಆಹಾರ ಮಾಡಿಕೊಂಡು ತಾನು ಬೆಳೆಯಲು.

ಸಿದ್ಧತೆ ಇಲ್ಲದೆ ಏರಿದರೆ ಉಸಿರು ಸಾಲದು. ಮುಂದುವರಿದರೆ ಅದು ನಿಂತು ಬಿಡುತ್ತದೆ. ತಿಳುವಳಿಕೆ ಇಲ್ಲದ ಏರಿಕೆ ಮರಣಕ್ಕೆ ಕಾರಣ.

ನಡೆಯುವನಿಗೆ ತಡೆ ಒಂದು ನೋವು. ಮುನ್ನಡೆಯುವ ಬಯಕೆಯಿಂದ ಅದನ್ನು ತಡೆದುಕೊಳ್ಳುತ್ತಾನೆ. ನೋವಿನಿಂದ ಸೋರಿದ್ದನ್ನು ಮತ್ತೆ ತುಂಬಿಕೊಂಡು ಹುರಿಗೊಳ್ಳುತ್ತಾನೆ. ಮುಂದೆ ನಡೆಯುತ್ತಾನೆ. ನಿಲ್ಲುವುದಿಲ್ಲ. ಹಿಂದಂತೂ ಸರಿಯುವುದೇ ಇಲ್ಲ.

ಕಡಲ ಹನಿಗೆ ಕಡಲಿನ ಕಸುವಿದೆ. ಅದು ಕಡಲಿನಲ್ಲಿದೆ. ಹೊರಗಿದ್ದ ಒಂಟಿ ಹನಿಗೆ ಚಿಕ್ಕತನದ ಭಯವಿದೆ. ಭಯ ಬೆಳೆದರೆ ವಿನಾಶ. ವಿನಾಶ ನೀಗಬೇಕಾದರೆ ದೊಡ್ಡದರಲ್ಲಿ ಇರಬೇಕು. ಇಲ್ಲವೆ ದೊಡ್ಡದೇ ಆಗಿರಬೇಕು.

ಲೋಕದ ಅಶಕ್ತತೆಗೆ ತಾಯಿಯೇ ಚುಂಬಕ ಶಕ್ತಿ.

ನಮ್ಮನ್ನು ಹೆತ್ತವರ ಹಾಗೆ ಜಗತ್ತಿನ ತಂದೆತಾಯಿಗಳು ಎರಡು ವ್ಯಕ್ತಿಗಳಲ್ಲ. ತಂದೆ ಸ್ವತಂತ್ರವಾದ ಒಂದು ಪದಾರ್ಥವಲ್ಲ, ತಾಯಿಯೂ ಅಷ್ಟೇನೆ. ಒಬ್ಬರಿಲ್ಲದೆ ಇನ್ನೊಬ್ಬರಿಗೆ ಅರ್ಥವಿಲ್ಲ. ಪೂರ್ಣತೆಯಿಲ್ಲ. ಒಂದು ಪೂರ್ಣವಲ್ಲ. ಎರಡು ಅರ್ಥಗಳ ಕೂಡಿಕೆ. ಒಂದರಿಂದ ಏನೂ ಆಗುವುದಿಲ್ಲ. ಎರಡು ಸುಮ್ಮನಿರುವುದಿಲ್ಲ.

ನಮಗೆ ಕತ್ತಲಾದಾಗ ದೊಡ್ಡವರ ಮಾತು ಬೆಳಕಾಗುತ್ತದೆ. ಬೆಳಕು ತಂದ ಮಾತು ಕೊಳೆ ಕಳೆದುಕೊಂಡಿರುತ್ತದೆ.

ಮನಸ್ಸಿಗೆ ಬೆಳಕಿಗಿಂತ ಹೆಚ್ಚು ವೇಗವಿರುವುದನ್ನು ಮನಸ್ಸಿನ ಆಚೆ ಹೋದವರು ಹೇಳುತ್ತಾರೆ. ಅರಿತಿದ್ದಾರೆ.

ತಾಯಿ ತನ್ನನ್ನು ಹೊರಗೆ ನೋಡಬೇಕೆಂಬುದರ ಫಲವೇ ಮಗು. ಮಗುವನ್ನುಳಿದು ತಾಯಿ ಒಂದು ಚಣ ಇರಲಾರಳು. ಇದು ಒಂದು ಚಕ್ರನೇಮಿ ಕ್ರಮ.

ಅರಳಬೇಕು; ಮರುಳು ಸಾಕು. ಇದು ಬದುಕಿನ ತುಡಿತ. ದೊಡ್ಡದನ್ನು ಬದುಕು. ಸಣ್ಣದನ್ನು ಎತ್ತಿ ಕರೆದುಕೋ. ಚಿಕ್ಕದು ಯಾರಲ್ಲಿದ್ದರೂ ಅದನ್ನು ತೊಡೆ.

ಆಡಿದ್ದನ್ನು ನಾವು ಏಕೆ ಮಾಡುವುದಿಲ್ಲ? ಒಪ್ಪಿದ್ದನ್ನು ನಡೆಯುವುದಿಲ್ಲ? ಯಾಕೆ? ಕಾರಣ ಅತ್ಯಂತ ಸ್ಪಷ್ಟವಿದೆ. ನಮ್ಮಲ್ಲಿ ಅನೇಕ ನಿಟ್ಟುಗಳಿವೆ, ಮೈಗಳಿವೆ, ವಿಭಾಗಗಳಿವೆ. ಅವುಗಳಿಗೆ ಅದರದೇ ಆದ ಸ್ವತಂತ್ರ ವ್ಯವಸ್ಥೆ ಇದೆ. ಆದರೆ ಅದರ ಹೊಣೆ ನಮ್ಮ ಕೇಂದ್ರಕ್ಕಿಲ್ಲ.

ನಮ್ಮನ್ನು ನಮ್ಮಷ್ಟು ಯಾರೂ ತಿಳಿದಿಲ್ಲ. ತಿಳಿಯುವುದೂ ಇಲ್ಲ. ಈ ಮಾತು ಅರ್ಧೆ ಸತ್ಯ. ನಮ್ಮಲ್ಲಿ ನಾವು ತಿಳಿಯದೆ ಇದ್ದದ್ದೂ ಸಾಕಷ್ಟಿದೆ. ನಮ್ಮಲ್ಲಿಯದು ಹಲವು ಸಲ ತಪ್ಪು ತಿಳಿದಿದೆ.

ಮನಸ್ಸಿನ ಪ್ರತಿಯೊಂದು ಭಾಗವನ್ನು ತೊಡಗಿಸುವುದಕ್ಕೊಂದು ಅಳತೆ, ತೂಕ ಇದೆ. ಹೀಗೆ ಹೇಳಿದರೆ ಅಚ್ಚರಿಯಾಗುತ್ತದೆ. ನಮ್ಮನ್ನು ನಾವು ಒಮ್ಮೆಯೂ ತೂಗಿಲ್ಲ. ಅಳೆದಿಲ್ಲ.

ನಾವೆಷ್ಟು ದೊಡ್ಡವರು? ನಮ್ಮೊಳಗಿರುವುದು ಎಷ್ಟು ದೊಡ್ಡದಿದೆ? ತಂತ್ರ ಸ್ವಾತಂತ್ರವನ್ನು ಬಯಸುತ್ತದೆ. ನಿರ್ಭಯತೆಯನ್ನು ಪ್ರತಿಪಾದಿಸುತ್ತದೆ. ಸ್ವಾತಂತ್ರ ಇನ್ನೊಬ್ಬರದನ್ನು ಕಸಿಯುವುದಲ್ಲ. ನಿರ್ಭಯ ಇನ್ನೊಬ್ಬರನ್ನು ಹೆದರಿಸಲಿಕ್ಕಲ್ಲ.

ನೀರು ಮಧುರ ನಿಜ. ಎಲ್ಲ ಔಷಧಿಗಳು ಅದರಲ್ಲಿರೋದು ನಿಜ. ಆದರೆ ನೀರನ್ನು ನಾವು ಮಲಿನ ಮಾಡಿದ್ದೀವಿ. ನಮ್ಮ ಅಜ್ಞಾನ, ಆಲಸ್ಯ, ಆಸೆಬುರುಕತನ ಅದನ್ನು ಮಲಿನಗೊಳಿಸಿದೆ. ನಾವು ಅಮಲಿನದಿಂದಿದ್ದರೆ, ಶುದ್ಧ ಮಾಡಿದರೆ, ವ್ಯವಸ್ಥೆ ಕಾಯ್ದುಕೊಂಡರೆ ಎಲ್ಲವೂ ಶುದ್ಧವೇ.

ಅನರ್ಹತೆ ಒಂದು ಅಪರಾಧ. ಅನರ್ಹತೆಯನ್ನು ಮುಚ್ಚಿ, ಅದನ್ನು ಅರ್ಹತೆ ಎಂದು ಮುದ್ರೆಯೊತ್ತಿ ನಡೆಯುವುದು ಮಹಾಪರಾಧ. ಅಪರಾಧಿಯನ್ನು ಕ್ಷಮಿಸಬಹುದು. ಆದರೆ ನಿರಪರಾಧಿಗಳಿಗೆ ತೊಂದರೆಯಾಗಬಾರದು.

ಬರೆದವರೆಲ್ಲಾ ಎತ್ತರಕ್ಕೇರಿದವರು ಇರಲಿಕ್ಕಿಲ್ಲ. ಎಲ್ಲ ಪುಸ್ತಕಗಳನ್ನು ತಲೆಯ ಮೇಲೆ ಹೊತ್ತಿಕೊಳ್ಳುವುದೂ ಕುಸಿಯುವ ಕೆಲಸವೇ. ಪುಸ್ತಕ ಬದುಕಿದವನ ಬೆಳಕು. ಮುಂದಿನವರಿಗೆ ಆಸರೆ. ಕತ್ತಲೆಯಿಂದ ತೊಳಲುವವನಿಗೆ ಅದು ಬೇಕು.

ಇಲ್ಲಿ ಒಳ್ಳೆಯದು ಬೀಡು ಬಿಟ್ಟಂತೆ ಕೆಟ್ಟದ್ದೂ ಬೀಡು ಬಿಟ್ಟಿದೆ. ಪ್ರಾಮಾಣಿಕತೆ ಇದೆ. ವಂಚನೆಯೂ ಇದೆ. ನನಗೆ ಇದು ತಿಳಿದಿದೆ ಎಂದು ಹೇಳುವನಿಗೆ ಅದು ತಿಳಿದಿರಲಿಕ್ಕಿಲ್ಲ. ಹೇಳದೇ ಇರುವನಿಗೆ ತಿಳಿದಿರಬಹುದು. ಎಂದಿನಿಂದಲೂ ಇದರ ಬಗ್ಗೆ ದೊಡ್ಡವರು ತಮ್ಮ ಅನುಭವವನ್ನು ಹೇಳಿಯೇ ಇದ್ದಾರೆ. ಇದು ನಿಜ. ಯಾವ ಕಾಲಕ್ಕೂ ಅಷ್ಟೇ. ಅದು ಕಾಲದ ವಶವಲ್ಲ. ಕಾಲವೇ ಅದರ ಅಧೀನ.

ನೀನು ಚೆನ್ನಾಗಿ ತಿಳಿದಿದ್ದೀ ಎಂದಾದರೆ ಕೊಂಚವೇ ತಿಳಿದಿರುವೆ. ಏಕೆಂದರೆ ತಿಳಿದುಕೊಳ್ಳಬೇಕಾಗಿರುವುದು ನೀನು ತಿಳಿದಿರುವುದಕಿಂತ ದೊಡ್ಡದಿದೆ.

ಹಕ್ಕು ಅಪೇಕ್ಷಣೀಯವಾದರೆ, ಹೊಣೆ ಅನಿವಾರ್ಯ. ಬರೀ ಹಕ್ಕುದಾರನೆಂದವ ದಿಕ್ಕುಗೆಡುತ್ತಾನೆ. ಹೊಣೆಯೊಂದನ್ನೇ ಅರಿತವ ಪ್ರಾಣಿಗೆ ಸಮ. ಅಂತರಂಗ ಬಹಿರಂಗ ಶುದ್ಧ ಇಲ್ಲದವನು ಎಂದೂ ಬೆಳಕನ್ನು ಪಡೆಯಲಾರ. ಬೆಳಕಿಲ್ಲದೆ ಒಳಗಿನ ಕತ್ತಲೆ ಹೋಗದು.

ಪ್ರಾಮಾಣಿಕತೆ ಎಲ್ಲರಿಗೂ ಬೇಕಾಗಿದ್ದರೂ ಅದನ್ನು ಹಾಸಿ ಹೊದ್ದ ಯಾರೂ ಸುಖಿಗಳಾಗಿಲ್ಲ. ಸುಖವು ದುಃಖದ ವಿರೋಧಿ ಎಂಬ ತಿಳುವಳಿಕೆಯೇ ಇದಕ್ಕೆ ಮೂಲ ಕಾರಣ.

ದುಃಖವನ್ನು ತರದ ಸುಖವನ್ನು ದುರ್ಬಲರು ಎಂದಿಗೂ ಪಡೆಯಲಾರರು.

ನಮಗೆ ಎಲ್ಲವೂ ಸಿಗಬೇಕು, ದಕ್ಕಬೇಕು ಎಂಬ ಗರ್ವದ ಕುದಿ ಇದೆ. ಹಾಗೆಯೇ ನಾವು ಧರ್ಮವನ್ನು ತೆಕ್ಕೆ ಹಿಡಿದು ಹಿಂದೆ ಎಳೆಯುತ್ತಿದ್ದೀವಿ. ಸಿಕ್ಕಿದಾಗ ಕೈ ಚಿಕ್ಕವು ಎಂಬ ತಿಳಿವು ಬರದು. ಧರ್ಮ ಸಿಕ್ಕುವುದಿಲ್ಲ ಎಂದು ಮಾತ್ರ ತಿಳಿಯುತ್ತೇವೆ. ತನ್ನ ಚಿಕ್ಕತನ ತಿಳಿಯದೆ ಯಾರೂ ದೊಡ್ಡವರಾಗುವುದಿಲ್ಲ.

ಇಲ್ಲಿ ವಿವೇಕ ಬೇಕು. ಬಳಸುವ ಭರದಲ್ಲಿ ಹಳಸಿದ್ದನ್ನು ತಿನ್ನುತ್ತೇವೆ. ಹಳಸಿದ್ದು ಉಪಯುಕ್ತ ನಿಜ. ಆದರೆ ಎಸೆಯಲಿಕ್ಕೆ ಹೊರತು ಬಳಸಲಿಕ್ಕಲ್ಲ. ಬದುಕಿನಲ್ಲಿ ಎಸೆಯುವುದೂ ಎತ್ತಿಕೊಳ್ಳುವ ಒಂದು ನಿಷೇಧಾತ್ಮಕ ಅಗತ್ಯವೇ.

ಬದುಕು ಬೆಳೆಯುತ್ತಿದ್ದರೆ ಮಾತ್ರ ಬಳಸುವ ವಸ್ತು ಧರ್ಮವಾಗಿರುತ್ತದೆ. ಇಲ್ಲದಿದ್ದರೆ ಕಸ.

ಮನುಷ್ಯ ತನ್ನ ಬಗ್ಗೆ ತಲೆ ಕೆಡಿಸಿಕೊಂಡಷ್ಟು ಇನ್ನಾವ ವಸ್ತು ತಲೆ ಕೆಡಿಸಿಕೊಂಡಿದೆ? ಇದೆ ಎಂದರೆ ಮುಗಿಯಲಿಲ್ಲ. ತಿಳಿಯುವುದು ಇಲ್ಲ ಎಂದರೆ ತುಡಿತ ತೀರುವುದಿಲ್ಲ. ಇರುವುದರ ಸುತ್ತಲೂ ಇರುವಿಕೆಯೊಳಗೇ ಒಂದು ರಹಸ್ಯವಿದೆ. ಈ ಬದುಕಿನ ರಹಸ್ಯ ಉಸಿರಾಗಿದೆ. ಹಸಿವೂ ಆಗಿದೆ.

ಬದುಕು ಬರಿದಾಗಿಲ್ಲ. ಇದು ರಹಸ್ಯವಾಗಿ ಉಳಿದಿಲ್ಲ. ಏನು ತುಂಬಿದೆ ಎಂಬುದೇ ರಹಸ್ಯ. ತಿಳಿದಿದೆ ಎಂಬ ಅನುಭವದಲ್ಲಿ ತಿಳಿದಿಲ್ಲ ಎನ್ನುವುದೇ ರಹಸ್ಯ. ರಹಸ್ಯ ಬೆಳೆದಾಗ ಬದುಕು ತನ್ನಿಂದ ತಾನೇ ದೂರಾಗುತ್ತದೆ. ರಹಸ್ಯ ಹೆಚ್ಚಾದರೆ ಅದು ಆಸಕ್ತಿಯ ಕೇಂದ್ರವಾಗುತ್ತದೆ. ರಹಸ್ಯದ ಒಂದು ಬಿಂದು ಅಜ್ಞಾನವಾದರೆ ಇನ್ನೊಂದು ತಿಳುವಳಿಕೆ.

ಮನುಷ್ಯ ನಡೆಯಬೇಕು. ನಡೆಯುವುದಕ್ಕೆ ದಾರಿ ಅಗತ್ಯ. ದಾರಿಗಿಂತ ಕಾಲು ಅಗತ್ಯ. ದಾರಿ ಇಲ್ಲದಿದ್ದರೂ ನಡೆ ನಿಲ್ಲುವುದಿಲ್ಲ. ಎಲ್ಲ ನಡೆಗೂ ಗುರಿಯೇ ಅಂತ್ಯವಲ್ಲ. ನಡೆಯುವವರಿಗಾಗಿ ದಾರಿ ನಿರ್ಮಿಸುವುದೂ ಒಂದು ಬಗೆಯ ನಡೆಯೇ. ಗುರಿ ಮುಟ್ಟಿದವ ಏನು ಪಡೆಯುತ್ತಾನೋ ದಾರಿ ನಿರ್ಮಿಸಿದವನೂ ಅದನ್ನೇ ಹೊಂದುತ್ತಾನೆ. ರಹಸ್ಯ ಗುರಿಯೂ ಅಲ್ಲ, ದಾರಿಯೂ ಅಲ್ಲ. ಅದು ನಡೆ.

ಮನುಷ್ಯ ಬೆಳಕನ್ನು ಆಶ್ಚರ್ಯಕರವಾಗಿ ಕಾಣುತ್ತಾನೆ. ಇದರ ಕಾರಣ ಅವನ ಮನದ ಮೂಲೆಯಲ್ಲಿ ತುಂಬಿದ ಕತ್ತಲು.

ಬದುಕಿನಲ್ಲಿ ಜ್ಞಾನ ಕಾಲೂರಿ, ನೆಲೆಯೂರಿ ನಿಲ್ಲಬೇಕಾದರೆ ಪುಸ್ತಕದ ಇರುಬೆಯಿಂದ ತಲೆ ಹೊರಗೆ ತರಬೇಕು. ವಿಶ್ವದ ಯಾವ ಭಾಷೆಯಲ್ಲೂ ಬದುಕಿನಷ್ಟು ವಿಸ್ತಾರವಾದ ಪುಸ್ತಕ ಇನ್ನೂ ಅಚ್ಚಾಗಿಲ್ಲ.

ಉಪದೇಶವನ್ನು ತಲೆಯಲ್ಲಿ ಹೊತ್ತು ಕುಸಿಯದಿರಬೇಕು. ಮುಳ್ಳುದಾರಿಯಲ್ಲಿ ಅದನ್ನು ಪಾದರಕ್ಷೆ ಮಾಡಿಕೊಂಡು ಮುಂದುವರೆಯಬೇಕು.

ತಲೆಯಲ್ಲಿ ಹೊತ್ತ ಮಾತು ಕಾಲಿಗೆ ಬಂದು ಬದುಕಿನ ದಾರಿ ಸಮೆಯದಿದ್ದರೆ ಏನು ಪ್ರಯೋಜನ?

ಅಂಗವನ್ನು ಮರೆತಾಗ ಲಿಂಗ ಉಳಿಯುತ್ತದೆ.

ಕೊಡುವುದನ್ನು ಉಳಿಸಿಕೊಂಡವನು ಪಡೆಯುವುದೂ ಅಲ್ಪವೇ. ಎಲ್ಲವನ್ನು ಕೊಟ್ಟ ಬಳಿಕ ಪಡೆಯುವುದೇ ಉಳಿಯುವುದಿಲ್ಲ.

ಒಬ್ಬನನ್ನು, ಎಲ್ಲರನ್ನು ಪ್ರೀತಿಸಲು ನಿಮಗೆ ಬರದಿದ್ದರೆ ನಿಮ್ಮನ್ನಾದರೂ ಪ್ರೀತಿಸಿ. ಅದೂ ಬರದಿದ್ದರೆ ನಿಮಗೆ ಬದುಕುವ ಅರ್ಹತೆ ಇಲ್ಲ. ಯಾವ ದಾರಿಯಿಂದಾದರೂ ಯಾರನ್ನಾದರೂ ಪ್ರೀತಿಸಿ, ಸಾಧ್ಯವಿದ್ದರೆ ಎಲ್ಲರನ್ನೂ ಪ್ರೀತಿಸಿ. ತನಗೆ ತಿಳಿದ ಹಾಗೆ ಯಾರಿಗೆ ಇರಲು ಬರುವುದಿಲ್ಲವೋ ಇತರರಿಗೆ ತಿಳಿಯುವ ಹಾಗೆ ಅವನಿಗೆ ಇರಲೂ ಬರುವುದಿಲ್ಲ.

ವಿಚಾರವನ್ನು ಹೆರದೆ ಇರುವ ಒಪ್ಪಿಗೆ ನಂಬಿಕೆಯಾಗುವುದಿಲ್ಲ.

ಕಣ್ಣನ್ನೇ ತೆರೆಯದಿದ್ದವನಿಗೆ ಬೆಳಕಿದ್ದರೇನು, ಇರದಿದ್ದರೇನು? ತೆರೆದಾಗಲೇ ಹೊರಗಿನದು ಒಳಗೆ ಸೇರುತ್ತದೆ. ಹೊರಗೆ ಹೋಗಬೇಕಾದರೆ ಒಳಗಿನದೂ ಹೋಗುತ್ತದೆ. ನೀನು ಇನ್ನೊಂದರೊಳಗೆ ಪ್ರವೇಶ ಮಾಡದಿದ್ದರೆ ಇನ್ನೊಂದು ನಿನ್ನೊಳಗೆ ಸೇರುವುದಿಲ್ಲ. ಬದುಕು ರಿಕ್ತವಾಗಬಾರದು, ತುಂಬಿರಬೇಕು.

ಪುಸ್ತಕದಲ್ಲಿ ಬದುಕನ್ನು ತುರುಕುವವನು ಪಾಪ ಮಾಡುತ್ತಾನೆ. ತನ್ನ ಶಿಷ್ಯರನ್ನು ತನಗಿಂತ ದೊಡ್ಡವರನ್ನಾಗಿ ಮಾಡದೇ ಇರುವವನು ಗುರುವಾಗಲಾರ. ಸೃಷ್ಟಿಯಾದ ತಾನು ಸೃಷ್ಟಿಕರ್ತನೂ ಹೌದು.

ಶರಣರು ಪುಸ್ತಕ ನೀಡಲಿಲ್ಲ. ತಾವೇ ಪುಸ್ತಕಗಳಾದರು. ದಾಸರೂ ಆದರು. ಇವರಿಗೆ ಪುಸ್ತಕದ ಆಲಂಬನವಿಲ್ಲದ ನಿರಾಲಂಬತೆ ಇರಲಿಲ್ಲ. ನಾಲಗೆ ಹಾಗು ಹೃದಯಕ್ಕೆ ಭೌಗೋಲಿಕ ಅಂತರ ಇದ್ದದ್ದು ಸ್ಪಷ್ಟ.

ಕಣ್ಣು ಅಗಲಿಸಿರಿ. ಇಂದ್ರಿಯಗಳನ್ನು ವಿಸ್ತರಿಸಿರಿ. ಒಂದರಲ್ಲಿ ಎಲ್ಲವೂ ಇದೆ. ಎಲ್ಲದರಲ್ಲಿ ಒಂದೇ ಇದೆ. ಎಡ ಬಲ ನೋಡದಿರಿ. ಬಲದ ಬೇರು ಬದುಕಿನಲ್ಲಿ ಬಲವಾಗಿ ಇಳಿಯಲಿ. ಚಕಿತರಾಗಬೇಡಿ. ನೀವು ಬೆಳಕಾದರೆ ನಿಮ್ಮ ನೆರೆಗಿರುವರೂ ಬೆಳಗಿಯಾರು.

ತಿಳಿದರೆ ಸಾಕು. ಹೇಳುವ ತವಕ ಬೇಡ. ಹೇಳುವುದರಿಂದ ನಾಲಗೆ ಉದ್ದವಾಗುತ್ತದೆ. ಎದೆ ಸಂಕುಚಿತವಾಗುತ್ತದೆ. ಅರಿತವನ ನಾಲಗೆ ತುಟಿಯೊಳಗೆ ಇರುತ್ತದೆ. ಅರಿವು ಹರವಾದರೂ ಎದೆಯ ಗವಿಯೊಳಗೆ ಅವಿತಿರುತ್ತದೆ. ಜ್ಞಾನ ಉಂಡು ಸುಖಿಸುವ ಪದಾರ್ಥ. ಗಾಜಿನ ಪೆಟ್ಟಿಗೆಯ ಪ್ರದರ್ಶನ ಅದಕ್ಕೆ ಬೇಡ.

ದೊಡ್ಡದನ್ನು ನಾವು ಹುಡುಕಬೇಕು. ಅದೂ ನಮ್ಮನ್ನು ಅರಸಿ ಬರುತ್ತಿದೆ. ತಲೆ ಬಾಗಲು ಬರದವನಿಗೆ ಅದನ್ನು ಎತ್ತಲು ಬರುವುದಿಲ್ಲ.

ಸಾಮಾನ್ಯವಾಗಿ ಎಲ್ಲರ ಮನಸ್ಸೂ ತೂತು ಬಿದ್ದ ಪಾತ್ರೆಯೇ. ತುಂಬಿದ್ದು ಕಣ್ಣು ತೆಗೆಯುವುದರೊಳಗೆ ಸೋರಿ ಹೋಗುವುದೇ ಹೆಚ್ಚು.

ತನ್ನ ಮನಸ್ಸು ಗಟ್ಟಿಗೊಳ್ಳಬೇಕೆಂಬ ಬಯಕೆ ಮೊದಲು ನೆಲೆಯೂರಬೇಕು. ಮನಸ್ಸು ಗಟ್ಟಿಗೊಂಡರೆ ಮುಂದಿನ ದಾರಿ ಸುಗಮ. ಹೀಗೆ ಹೇಳಿದವರು ಸಾವಿರ ಜನ. ಆದರೆ ಇದನ್ನು ಸಾಧಿಸಿದವರು ಕೆಲವರು. ದೊಡ್ಡವರೆಂದು ಹಲವರು ಕಾಣುತ್ತಾರೆ. ಕೆಲವೇ ಜನ ಮಾತ್ರ ದೊಡ್ಡವರಿರುತ್ತಾರೆ. ದೊಡ್ಡವರು ಹುಟ್ಟುವುದಿಲ್ಲ. ಬೆಳೆಯುತ್ತಾರೆ. ಅವರು ಬೆಳೆಯಬೇಕಾದವರನ್ನು ಹುಡುಕುತ್ತಾರೆ.

ಹೃದಯದಲ್ಲಿ ದೇವನನ್ನು ನಂಬಿದ ಹಾಗೆಯೇ ಗುರುವನ್ನು ಪ್ರೀತಿಸಿದರೆ ಮಾತೆಅ ಜ್ಞಾನದ ಬೆಳಕು ಬೆಳಗುತ್ತದೆ.

ಚಿಕ್ಕ ಮನಸ್ಸು, ಕ್ಷುದ್ರ ಚೇತನ ಗುರುವನ್ನು ಶಂಕಿಸುತ್ತದೆ. ಅದರ ಪರಿಣಾಮ ಸಂಶಯಾತ್ಮಾ ವಿನಶ್ಯತಿ. ಈ ಲೋಕದಲ್ಲಿ ಎಲ್ಲಕ್ಕಿಂತ ದೊಡ್ಡದಿರುವ ವಸ್ತುವಿಗೆ ಗುರು ಎಂದು ಹೆಸರು.

ಗುರುವಿಲ್ಲದೆ ಅಜ್ಞಾನ ಕಳೆಯದು. ಜ್ಞಾನದ ಬಾಗಿಲು ತೆರೆಯದು. ಗುರುವಿನ ತಲೆ ಬೆಳ್ಳಗಾಗಬೇಕೆಂಬ ನಿಯಮವಿಲ್ಲ.

ಅವಸರ ಎನ್ನುವುದು ಅಜ್ಞಾನದ ಕೆಲಸ. ಜ್ಞಾನಕ್ಕೆ ವೇಗವೇ ನಡತೆ. ಗುರುವು ಜ್ಞಾನಿ ವೇಗವಂತ.

ಗುರುವಿನಿಂದ ಪಶ್ಚಾತ್ತಾಪವಿಲ್ಲ. ತಪ್ಪು ಮಾಡುವವ, ತಪ್ಪಿಗೆಳೆಯುವವ ಗುರುವೇ ಅಲ್ಲ. ಎತ್ತರವಾಗಿ ಬೆಳೆದುದೇ ಬೆಟ್ಟ.

ಬೆಳೆಯುವವ ತಲೆ ಎತ್ತಿ ಗುರುವಿನ ಕಾಲು ಮುಟ್ಟುತ್ತಾನೆ. ದೊಡ್ಡವರು ಎಲ್ಲರೊಡನೆ ಉಣ್ಣುತ್ತಾರೆ. ಹಸಿದವರನ್ನು ಮುಂದೆ ಕರೆದು ತಾನು ಉಂಡದ್ದನ್ನು ಹಂಚುತ್ತಾರೆ. ಅನ್ನ, ಅದು ಬೆಳೆಯುವವನಿಗೆ ಇದೆ. ಕೊಬ್ಬಿದವನಿಗಲ್ಲ. ಬೆಳೆಯುವವ ಅನ್ನ ಪಡೆಯಿತ್ತಾನೆ. ಕೊಬ್ಬುವವ ಅದನ್ನು ಕದಿಯಿತ್ತಾನೆ. ಅನ್ನ ಜ್ಞಾನವೂ ಹೌದು.

ಬೆಟ್ಟ ಏರುವವ ಅದು ತನ್ನದೆನ್ನಿಸಿ ಹಿಗ್ಗುತ್ತಾನೆ. ತನ್ನನ್ನು ಹತ್ತಿ ಬರುವವನನ್ನೂ ಬೆಟ್ಟ ಕರೆದು ಬರಿಸುತ್ತದೆ. ಮತ್ತೊಬ್ಬ ಹತ್ತಿ ಬಂದರೆ ಬೆಟ್ಟಕ್ಕೂ ಹಿಗ್ಗು.

ದಾರಿ ತಪ್ಪಿದವ, ತಪ್ಪಿಸುವವ ಗುರುವಲ್ಲ. ತಪ್ಪಿನಿಂದ, ಜಾಡ್ಯದಿಂದ ನಾವು ಮುಂದೆ ನಡೆಯದೆ ಇರಬಹುದು. ನಮ್ಮನ್ನು ನಡೆಸುವ ಹೊಣೆ ಮುಂದೆ ನಡೆದ ಗುರುವಿನದು. ಹಿಂದುಳಿದವರನ್ನು, ಅಶಕ್ತರನ್ನು, ಬಲಹೀನರನ್ನು ನಡೆಸುವಾತನೇ ನಿಜವಾದ ಗುರು.

ಮೃತ್ಯುವನ್ನು ದಾಟಿದ, ಅಶಕ್ತತೆಯನ್ನು ಅರಿಯದ ತನ್ನನ್ನು ಅರಸುಕೊಂಡು ಬಂದವನಿಗೆ ತನ್ನಲ್ಲಿರುವುದೆಲ್ಲವನ್ನು ಕೊಡುವವ, ಎಂದೂ ಚಿಕ್ಕವನಾಗಿರದವನೇ ಗುರುವಾಗಿರುತ್ತಾನೆ. ದೊಡ್ಡದು ಎಂಬ ಕಲ್ಪನೆ ನಮ್ಮಲ್ಲಿ ಎಷ್ಟಿರುತ್ತದೆಯೋ ಅಷ್ಟರ ಮಟ್ಟಿಗೆ ಗುರುದರ್ಶನ.

ಗುರುವು ನಮಗೆ ದೊರೆತಿರಲಿಕ್ಕಿಲ್ಲ. ಆದರೆ ನಮ್ಮನ್ನು ಗಮನಿಸುತ್ತಲೇ ಇರುತ್ತಾನೆ. ನಮ್ಮ ಅನರ್ಹತೆ ಅವನ ದೂರಕ್ಕೆ ದೊಡ್ಡ ಕಾರಣ. ತಲೆ ಇದ್ದವರು ಗುರುವಿನ ಬಗ್ಗೆ ಗುಡ್ಡದೆತ್ತರ ಬರೆದಿದ್ದಾರೆ. ಕಂಡದ್ದು ಕಣ್ಣೊಳಗೆ. ಉಂಡದ್ದು ಮೈಯೊಳಗೆ ಹರಿಯುವುದು.

ಒಂದು ವಸ್ತು ಯಾವಾಗ ದೊಡ್ಡದಾಗುತ್ತದೆ? ಇತರರೊಡನೆ ಬೆರೆತಾಗ. ತನ್ನಂತೆ ಇರುವ ಇತರರನ್ನು ಮಾಡುವ ಶಕ್ತಿ ಇದ್ದ ವಸ್ತುವನ್ನು ನಾವು ಈ ಲೋಕದಲ್ಲಿ ದೊಡ್ಡದು ಎನ್ನುತ್ತೇವೆ. ಗುರುವು ಇಂಥವನು.

ಸಿಕ್ಕವರನ್ನು ತಲೆಯ ಮೇಲೆ ಹೇರಿಕೊಳ್ಳಲು ತನ್ನ ತಲೆ ಚಿಕ್ಕದು ಎಂದು ತಿಳಿದಿರಬೇಕು. ದೊಡ್ಡವರ ಕಾಲಿಗೆ ತಲೆ ಹಚ್ಚುವ ಮೃದುತನ ತನಗಿರಬೇಕು. ನಂಬಿಕೆ ಬೇಕು. ತನ್ನ ನಂಬಿಕೆ ತನ್ನನ್ನು ತಿಳಿ ಮಾಡುತ್ತಿರುವುದನ್ನು ತಿಳಿಯಬೇಕು.

ಎಲ್ಲವೂ ಎಲ್ಲರಿಗೆ ಬೇಡ ಎನ್ನುವುದು ಎಷ್ಟು ಕ್ರೂರವೋ, ತಾನು ಎಲ್ಲರಿಗೆ ಅಲ್ಲ, ಎಲ್ಲರಿಗೆ ಇಲ್ಲ ಎನ್ನುವನಿಗೆ ಎಲ್ಲ ದೊರೆಯುವುದೂ ಅಷ್ಟೇ ಅನ್ಯಾತ, ಅಧರ್ಮ.

ನೋಡಿದರೆ ಕಂಡಂತಲ್ಲ. ನಡೆದರೂ ದಾರಿ ಸಾಗುವುದಿಲ್ಲ. ಕಣ್ಣು ಮುಚ್ಚಿದರೂ ತೋರುತ್ತದೆ. ನಿಂತರೂ ಸನಿಹವಾಗುತ್ತದೆ.

ನಡೆಯುವನಿಗೆ ಬಲವಿದ್ದಷ್ಟು ದಾರಿ. ಬೆಳೆವವನಿಗೆ ನೆಲವೆಲ್ಲಾ ಹೊಲವಿದ್ದಂತೆ.

ನಿಮ್ಮನ್ನು ನೀವು ಅಳೆದುಕೊಳ್ಳುವಾಗ ಬಹಳಷ್ಟು ಕಳೆದುಕೊಳ್ಳಬೇಕು. ಹೆಚ್ಚು ಕೆಳೆದುಕೊಂಡಾಗಲೇ ಮತ್ತಷ್ಟು ಕೂಡುತ್ತದೆ.

ದೃಷ್ಟಿ ಇರುವಷ್ಟು ಸೃಷ್ಟಿ.

ತನಗಿಂತ ದೊಡ್ಡದಿದ್ದುದಕ್ಕೆ ತನ್ನನ್ನು ಒಪ್ಪಿಸುವುದೇ ಇನ್ನೂ ದೊಡ್ಡದಾಗುವ ಒಳ್ಳೆಯ ದಾರಿ.

ನಿಮ್ಮ ಮನಸ್ಸು ವ್ಯಗ್ರವಾಗಿದ್ದರೆ ಅದು ಏಕಾಗ್ರವಾಗುವುದಿಲ್ಲ. ಮನಸ್ಸಿನ ಮೇಲೆ ಅಪ್ರಿಯವಾಗುವ ಘಟನೆಗಳನ್ನು ಹೇರಿ ಅದನ್ನು ದಣಿಸಿದರೆ, ಅದು ಏಕಾಗ್ರವಾಗಲು ಸಾಧ್ಯವೇ ಇಲ್ಲ.

ಕುರುಡುತನ, ಅಜ್ಞಾನಗಳು ಮನಸ್ಸನ್ನು ಬೆಳೆಸುವುದಿಲ್ಲ. ಬೆಳೆಯಲಾರದೆ ಮನಸ್ಸಿಗೆ ಏಕಾಗ್ರತೆ ಬರುವುದಿಲ್ಲ. ಆದ್ದರಿಂದ ಏನೇ ಮಾಡಿ ಮನಸ್ಸನ್ನು ಬೆಳೆಸಿರಿ. ದೊಡ್ಡದು ಮಾಡಿ. ಮನಸ್ಸು ಬೆಳೆಯಬೇಕಾದರೆ ಇನ್ನೊಬ್ಬರನ್ನು ಇನ್ನೊಂದನ್ನು ಪ್ರೀತಿಸಿರಿ. ಸಾಯುವರನ್ನು ಪ್ರೀತಿಸಿ ನೀವು ನಿತ್ಯ ಸಾವು ತಂದುಕೊಳ್ಳುತ್ತಿರಿ. ನೀವು ಪ್ರೀತಿಸುವರು ಸಾಯುವುದಿಲ್ಲ ಎಂಬ ಖಚಿತತೆ ನಿಮಗಿಲ್ಲದಿದ್ದರೆ ನೀವು ಮಾಡುವ ಪ್ರೀತಿಯೇ ಮರಣಾಧೀನವಾಗುತ್ತದೆ.

ಬೇಡಿದರೆ ಬೇಡಿಕೆಯ ಅಭ್ಯಾಸವಾಗುತ್ತದೆ. ಮನಸ್ಸಿನ ಹಲವು ಬಾಗಿಲು ತೆರೆದಿಡಿ. ಬರುವುದನ್ನು ಗಮನಿಸಿ. ಹೋಗುವುದಕ್ಕೆ ಲೆಕ್ಕವಿರಲಿ. ಕುದಿ ಎಸರು ಬರಬೇಕು, ಪರಿಪಾಕಕ್ಕೆ ಸಿದ್ಧರಾದರೆ ಸಾಕು.

ನಮ್ಮ ಮುಂದಿರುವ ದೊಡ್ಡ ಸಮಸ್ಯೆಯೆಂದರೆ ಮನಸ್ಸಿಗೆ ಏಕಾಗ್ರತೆ ಇಲ್ಲ ಎನ್ನುವುದು. ‘ಏಕಾಗ್ರತೆ’ ನಿಮಗೆ ಬೇಕಾಗಿದ್ದೇ ಬೇರೆ, ಸಿವುವುದೇ ಬೇರೆ.

ಆಡಂಬರ ಎನ್ನುವುದು ಬರಿ ಸಾಮಾಜಿಕ ಪ್ರದರ್ಶನದ ಯೋಗ್ಯತೆಯ ಮಾತು ಹೊರತು ಇನ್ನೇನೂ ಹೆಚ್ಚಿನ ಮಹತ್ವ, ಸತ್ವಗಳನ್ನು ಹೊಂದಿಲ್ಲ. ಅನೇಕ ಸಲ ನೀವು ಬಹಿರಂಗವಾಗಿ ಅಸಭ್ಯವಾಗಿ ನಡೆದುಕೊಳ್ಳುವುದಕ್ಕಿಂತ ಹೆಚ್ಚು ಅಸಭ್ಯತೆಯನ್ನು ಅಂತರಂಗದಲ್ಲಿ ಏಕಾಂತದಲ್ಲಿಯೇ ತೋರಿಸುತ್ತೀರಿ.

ನಿಮಗೆ ಇಂದ್ರಿಯಗಳಿವೆ. ಅವುಗಳಿಗೆ ಅವುಗಳದೇ ಆದ ಪ್ರಧಾನ ಉಂಟು. ನೀವು ಅವುಗಳ ಮೇಲೆ ಒತ್ತಾಯದಿಂದ ಸವಾರಿ ಮಾಡಿದರೆ ಅವು ಕೊಸರಿಕೊಂಡು ತಮ್ಮದೇ ದಾರಿ ಹಿಡಿಯುತ್ತವೆ. ಯಾವುದನ್ನೂ ನೀವು ನಿಮ್ಮನ್ನು ಕೊಟ್ಟುಕೊಳ್ಳದೆ ಪಡೆದು ಕೊಳ್ಳಲಾರಿರಿ.

ಧ್ಯಾನ ಸುಗಮವಾಗಿ ನಡೆಯದೇ ಇರಲಿಕ್ಕೆ ದೊಡ್ಡ ಪ್ರತಿಬಂಧ ನಾವು ಧ್ಯಾನ ಮಾಡಲೆಂದೇ ಕೂಡುವುದಾಗಿದೆ. ಧ್ಯಾನವೆಂದರೆ ಏನಾದರೂ ಮಾಡುವುದಲ್ಲ. ಏನೂ ಮಾಡದೇ ಇರುವುದು. ಬಿಟ್ಟು ಬಿಡಲು ಅಭ್ಯಾಸ ಮಾಡಬೇಕು.

ಧ್ಯಾನ ಎಂದರೆ ಶಾಂತಿ ಎಂದಾದರೆ, ಅದರಲ್ಲಿ ಮಾಡಬೇಕಾದದ್ದು ಏನೂ ಇರುವುದಿಲ್ಲ. ಏನಾದರೂ ಇದ್ದರೆ ಮಾಡುವುದನ್ನು ಬಿಟ್ಟುಕೊಡುವುದಿದೆ.

ಮೂಲಭೂತವಾಗಿ ನೀವು ಮರೆತದ್ದು ಧ್ಯಾನದ ಅಗತ್ಯತೆಯನ್ನು. ಧ್ಯಾನ ಹೊರಗಿನಿಂದ ಹೇರಿದ್ದಾಗಿದೆ. ನಿಮ್ಮ ಸ್ವಂತದ ಅಗತ್ಯವಾಗಿಲ್ಲ. ಅದಾಗದ ಹೊರತು ಧ್ಯಾನ ಧ್ಯಾನವಲ್ಲ, ಅದು ನಿಮಗೆ ನೀವು ನೀಡುವ ಶಿಕ್ಷೆ. ತನ್ನನ್ನು ತಾನು ಬರಿದು ಮಾಡಿಕೊಳ್ಲಲು ಬಾರದವನಿಗೆ ಧ್ಯಾನ ಬರುವುದೇ ಇಲ್ಲ.

ಸಾಧಕ ಯಾವಾಗಲೂ ತೇಲಬಾರದು, ಸೆಳೆತಕ್ಕೆ ಸಿಕ್ಕಬೇಕು. ಧ್ಯಾನದಲ್ಲಿ ತೇಲುವಿಕೆ ಅಷ್ಟೇ ಇದ್ದರೆ ಅದು ಅಸುಖ. ಧ್ಯಾನ ಸೆಳೆತವಾಗಬೇಕು. ನಾನು ದೊಡ್ಡದರಿಂದ ಸೆಳೆಯುವೆನು. ಇಲ್ಲವೆ ದೊಡ್ಡದರ ಗಮನ ಸೆಳೆಯುವ ಅಲ್ಪತೆಯುಳ್ಳವನು. ಇದು ನಿಮ್ಮ ಅನುಭವದಲ್ಲಿ ಬಂದಿದೆಯೋ, ಧ್ಯಾನಕ್ಕಾಗಿ ನಿಮಗೆ ಅರ್ಹತೆ ಇದೆ ಎಂಬುದು ಅರಿಯಿರಿ.

ಹೀಗೆ ಹತ್ತುಹಲವು ಸಾಲುಗಳನ್ನು ತಮ್ಮ ಕೃತಿಯಲ್ಲಿ ಪ್ರಸ್ತಾವಿಸಿ ಓದುಗನನ್ನು ತಮ್ಮ ಕೃತಿಯ ಜೊತೆಗೆ ಮನೋವಿಕಸನವನ್ನೂ ಮಾಡಿರುವ ಸತ್ಯಕಾಮರು ಕನ್ನಡ ಸಾಹಿತ್ಯ ಲೋಕದ ಧ್ರುವತಾರೆ ಎಂದರೆ ಅತಿಶಯೋಕ್ತಿಯಾಗಲಾರದೇನೋ. ಇಲ್ಲಿ ಹಾಕಿರುವುದು ಕೇವಲ ಸ್ಯಾಂಪಲ್, ಇಡೀ ಪುಸ್ತಕವನ್ನೊಮ್ಮೆ ಓದಿ ನೋಡಿ. ಜೀವನವನ್ನು ನೋಡುವ ನಿಮ್ಮ ದೃಷ್ಟಿಕೋನವೇ ಬದಲಾದೀತು.

ಮುಗಿಯಿತು.

ನಮಸ್ಕಾರ.

ಮೋಹನ್ ಕುಮಾರ್ ಡಿ ಎನ್

 

 

Advertisements