HS

ವಸುಧೇಂದ್ರ ಅವರ ಹರಿಚಿತ್ತ ಸತ್ಯ ಒಂದೇ ಬಾರಿಗೆ ಓದಿ ಮುಗಿಸಿಬಿಡಬಹುದಾದ, ಅಷ್ಟೇ ಸುಲಭವಾಗಿ ಓದಿಸಿಕೊಂಡು ಹೋಗುವ ಕಾದಂಬರಿ.
ಮಾಧ್ವ ಬ್ರಾಹ್ಮಣರ ಸಂಪ್ರದಾಯ,ಬದುಕಿನ ರೀತಿ, ಮಡಿ ಮೈಲಿಗೆಗಳ ಜೊತೆಗೆ ಬಳ್ಳಾರಿ ಜಿಲ್ಲೆಯ ಸುತ್ತು ಕಥೆ ಹೆಣೆದಿರುವುದರಿಂದ ಅಲ್ಲಿಯ ಭಾಷೆಯನ್ನು ರಸವತ್ತಾಗಿ ಚಿತ್ರಿಸಿದ ಅವರ ನಿರೂಪಣೆ ಅದ್ಭುತವಾಗಿದೆ.
ಕಥಾ ನಾಯಕಿ ಪದ್ದಿಯ ವಧು ಪರೀಕ್ಷೆಯ ಹಾಸ್ಯಮಯ ಘಟನೆಗಳು, ತಾಯಿ ರಂಗಮ್ಮನ ವಿಧವಾ ಜೀವನ, ಕಂಡ ಕಂಡ ದೇವರಿಗೆ ಕೈ ಮುಗಿದು ಅದರಿಂದಲೇ ಹೆಸರಾದ ಶ್ರೀಪತಿ ದಂಪತಿಗಳು,ರಾಘವೇಂದ್ರನ ಸರಳ ವ್ಯಕ್ತಿತ್ವ, ಗುಡೇಕೋಟಿ ಗೋವಿಂದಾಚಾರ್ಯರ ವಧು ಪರೀಕ್ಷೆಯ ವಿಧಾನಗಳಂತೂ ನಕ್ಕು ನಕ್ಕು ಸುಸ್ತಾಗುವಂತೆ ಮಾಡುತ್ತದೆ.
ಕಾದಂಬರಿಯಲ್ಲಿ ಸುಂದರ ಪಾತ್ರವಾಗುವ ಪದ್ದಿ, ಅವಳ ಬದುಕಿನಲ್ಲಿ ಸಂಭವಿಸುವ ಏರಿಳಿತಗಳು, ನಿರಾಕರಿಸಿದ ವ್ಯಕ್ತಿಯನ್ನೇ ಮತ್ತೆ ಸ್ವೀಕರಿಸುವಂತೆ ಮಾಡುವ ವಿಧಿಯ ನಿಯಮ, ಎಲ್ಲವನ್ನೂ ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ.
ಬಳ್ಳಾರಿ ಎಂಬ ಹೆಸರು ಕೇಳಿದ ತಕ್ಷಣ ಹರಿಚಿತ್ತ ಸತ್ಯ ಕಾದಂಬರಿ ಎದುರು ಬಂದು ನಿಲ್ಲುವುದರಲ್ಲಿ ಸಂಶಯವಿಲ್ಲ. ಸುಂದರ ಕಥೆಯ ಜೊತೆಗೆ ಸರಳ ನಿರೂಪಣೆ.
ಧನ್ಯವಾದಗಳು….

– ಕವಿತಾ ಭಟ್

Advertisements