UK

ಎಸ್. ಎಲ್. ಭೈರಪ್ಪನವರ ಉತ್ತರಕಾಂಡ ಬಿಡುಗಡೆಯಾದ ಕೆಲವು ದಿನಗಳಲ್ಲೇ ನನ್ನ ಕೈಸೇರಿದ್ದರಿಂದ ಇನ್ನಿಲ್ಲದ ಉತ್ಸಾಹದಿಂದ ಓದಲು ಆರಂಭಿಸಿದ್ದೆ, ಆದರೆ ಕೆಲವು ಪುಟಗಳನ್ನು ಓದುವುದರಲ್ಲೇ ನೀರಸ ಅನ್ನಿಸಿತು.
ಸೀತೆಯ ಅದೇ ಕಷ್ಟ, ನೋವುಗಳು. ಸಂಸಾರದ ಜಂಜಡಗಳನ್ನು ಹೇಳಿಕೊಂಡು ಕಣ್ಣೀರಿಡುವ ಹೆಣ್ಣು ಮಕ್ಕಳಿಗೆ, ಸೀತೆಯಂತ ಸಾಧ್ವಿಗೂ ಕಷ್ಟಗಳು ತಪ್ಪಿದ್ದಲ್ಲ ಎನ್ನುವ ನಮ್ಮ ಹಿರಿಯರ ಸಮಾಧಾನದ ಮಾತುಗಳನ್ನು ಕೇಳುತ್ತಲೇ ಬೆಳೆದಿದ್ದೇವೆ. ಅದರಲ್ಲಿ ಹೊಸತೇನಿದೆ ಎಂಬುವುದರ ಜೊತೆಗೆ ಪ್ರತಿ ಪುಸ್ತಕದಲ್ಲೂ ಹೊಸತೇನನ್ನೋ ಹುಡುಕುವ ಯತ್ನ.
ಆದರೂ ಮನದ ಮೂಲೆಯಲ್ಲಿ, ಕಾದಂಬರಿ ಪೂರ್ಣ ಓದದೇ ಬಿಟ್ಟುಬಿಟ್ಟೆ ಎಂಬ ಹುಳು ಕೊರೆಯುತ್ತಲೇ ಇತ್ತು, ಇತ್ತಿಚೆಗೆ ಗೆಳೆಯರೊಬ್ಬರು ಒಮ್ಮೆ ಪೂರ್ಣವಾಗಿ ಓದಿ ನೋಡಿ ಎಂದಾಗ ಮತ್ತೆ ಮೊದಲಿಂದ ಆರಂಭಿಸಿದೆ.
ತ್ರೇತಾಯುಗವಾದರೂ ಪುಷ್ಪಕ ವಿಮಾನ, ಯಾಗಗಳನ್ನು ಮಾಡಿ ಮಕ್ಕಳನ್ನು ಪಡೆಯುವುದು, ಅಹಲ್ಯೆ ಶಾಪದಿಂದ ಕಲ್ಲಾದಳು ಎಂಬ ನಂಬಲು ಸಾಧ್ಯವಾಗದ ಘಟನೆಗಳಿರುವ ರಾಮಾಯಣ, ನಿಜಕ್ಕೂ ನಡೆದಿದೆಯಾ ಎಂದು ಯೋಚಿಸುವವರು ಉತ್ತರಕಾಂಡವನ್ನು ಓದಿನೋಡಿ, ಇವೇ ಘಟನೆಗಳಿಗೆ ಅವರು ಒದಗಿಸುವ ದೃಷ್ಟಿಕೋನ, ನಂಬಲೇಬೇಕೆನ್ನುವಂತೆ ಮಾಡುತ್ತದೆ.
ಉತ್ತರಕಾಂಡ, ರಾಮಾಯಣದ ಕಥೆಗೆ ಹೊಸ ಆಯಾಮ ನೀಡುತ್ತದೆ.
ರಾಮ, ಸೀತೆಯರಿಲ್ಲಿ ರಾಜರಾಣಿಯರಾದರೂ ದೇವರಲ್ಲ, ಸಾಮಾನ್ಯ ಮನುಷ್ಯರು. ರಾಮಾಯಣದಲ್ಲಿ ಬರುವ ಘಟನೆಗಳನ್ನು ಕಾದಂಬರಿಯಲ್ಲಿ ಎಷ್ಟು ನೈಜವಾಗಿ, ಸಹಜವಾಗಿ ಚಿತ್ರಿಸಿದ್ದಾರೆಂದರೆ ಇದು ಸೀತೆಯ ಕಥೆ ಎನ್ನುವುದನ್ನು ಮರೆತುಬಿಡುತ್ತೇವೆ, ಅವಳನ್ನು ಒಬ್ಬ ಸಾಮಾನ್ಯ ಸ್ತ್ರೀಯನ್ನಾಗಿಸಿ ಜೀವನದ ತೊಳಲಾಟಗಳನ್ನು, ಎಲ್ಲ ಕಷ್ಟವನ್ನೂ ನುಂಗುತ್ತ, ಯಾವುದಕ್ಕೂ ಮಣಿಯದ ಗಟ್ಟಿತನದ ಜೊತೆಗೆ ಅವಳ ಮಾನಸಿಕ ವೇದನೆಯನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ.
ಮುಖ್ಯ ಪಾತ್ರವಾದ ಸೀತೆಯೇ ಇಲ್ಲಿ ಕಥೆಯನ್ನು ಹೇಳುತ್ತಾಳೆ, ರಾಮ ಕೇವಲ ಹಿನ್ನೆಲೆಯಲ್ಲಿ ಉಳಿಯುತ್ತಾನೆ.
ಅನಾಥ ಮಗುವಾಗಿ ಜನಕಮಹಾರಾಜನಿಗೆ ಸಿಕ್ಕ ಸೀತೆಯನ್ನು ರಾಣಿ ಸ್ವಂತ ಮಗಳಂತೆ ಕಂಡರೂ, ಊರ್ಮಿಳೆ ತಾಯಹಾಲು ಕುಡಿಯುವಾಗ, ಸೀತೆಗಾಗುವ ಅನಾಥಪ್ರಜ್ಞೆ, ಅವಳ ಬಾಲ್ಯ, ಯೌವನ, ಗುರುಪತ್ನಿಯಿಂದ ಕೇಳಿದ ರಾಮನ ಬಗ್ಗೆ ಅವಳ ಕಲ್ಪನೆ, ಕೈಕೇಯಿಯ ದರ್ಪ, ಕೌಸಲ್ಯ ಸುಭದ್ರೆಯರ ಸಾಮರಸ್ಯ, ಕೈಕೇಯಿಯ ಮುಂದೆ ತನ್ನ ವ್ಯಕ್ತಿತ್ವವನ್ನು ಕಳೆದುಕೊಳ್ಳುವ ದಶರಥ ಮಹಾರಾಜನ ನಿಸ್ಸಾಹಾಯಕತೆ, ಕೊಟ್ಟಮಾತನ್ನು ಎಂದೂ ಮುರಿಯದ ರಾಮ, ವಿಶಿಷ್ಟ ವ್ಯಕ್ತಿಯಾಗಿ ನಿಲ್ಲುವ ಲಕ್ಷ್ಮಣ, ಊರ್ಮಿಳೆಯು ಜೀವನವನ್ನು ನೋಡುವ ರೀತಿ, ಅರಣ್ಯವಾಸದಲ್ಲಿ ಎದುರಿಸುವ ಕಷ್ಟಗಳು, ರಾವಣನ ವ್ಯಕ್ತಿತ್ವ, ಮಹರ್ಷಿ ವಾಲ್ಮೀಕಿ ಆಶ್ರಮದಲ್ಲಿ ಲವಕುಶರ ಹುಟ್ಟು, ಮಣ್ಣಿನ ಮೇಲೆ ವಿಪರೀತ ವ್ಯಾಮೋಹವಿರಿಸಿಕೊಂಡ ಸೀತೆ, ತಾನೇ ಕೃಷಿಯಲ್ಲಿ ತೊಡಗಿ ದುಡಿಯುವ ಪರಿ ಅದ್ಭುತವಾದದ್ದು. ಅವಳ ಬಾಳಿನುದ್ದಕ್ಕೂ ಜೊತೆಗಿರುವ ಸುಕೇಶಿ, ರಾಮಸೀತೆಯರನ್ನು ಒಂದು ಮಾಡಲು ಮಹರ್ಷಿಗಳ ವಿಫಲಸಂಧಾನ.
ತನ್ನನ್ನು ತ್ಯಜಿಸಿದ ರಾಮನನ್ನು ತ್ಯಜಿಸಿ ಮಣ್ಣಿನಲ್ಲಿ ಮಣ್ಣಾಗುವ ಸೀತೆಯ ಸ್ವಾಭಿಮಾನ ಎಲ್ಲಾ ಕಾಲಕ್ಕೂ ಸ್ತ್ರೀಯರಿಗೆ ಸ್ಫೂರ್ತಿಯಾಗುವಂತದ್ದು.
ಕಥೆ ಹಳೆಯದಾದರೂ, ಅದನ್ನು ಹೇಳಿದ ರೀತಿ ಹೊಸದು, ಹೊಸದನ್ನು ಕೊಡುವುದರಲ್ಲಿ ಭೈರಪ್ಪನವರು ಸಿದ್ಧಹಸ್ತರು.
ಧನ್ಯವಾದಗಳು.

– ಕವಿತಾ ಭಟ್

Advertisements