KS

ವಿಚಾರಶಕ್ತಿ, ಸಂವೇದನೆಯ ಜೊತೆಗೆ ತಾನು ಶಾಶ್ವತ ಎಂಬ ಅಮಲಿನಲ್ಲಿರುವ ಮನುಷ್ಯನಿಗೆ ಬದುಕಲು ಪ್ರಬಲವಾದ ಆಕರ್ಷಣೆ ಮುಖ್ಯ, ಅದು ಕಾಣದಿದ್ದಾಗ, ಸಾವಿನ ಆಕರ್ಷಣೆ ಬಲವಾಗಿ ಕಾಡುತ್ತದೆ. ಅದಕ್ಕೆ ಬೇಕಾದಷ್ಟು ಕಾರಣವನ್ನು ಕೊಡಬಲ್ಲ ಆದರೆ ಮುಖ್ಯ ಕಾರಣವೇನು? ಆತನ ಆತ್ಮಸ್ಥೈರ್ಯ, ಜೊತೆಗೆ ಬಾಳಿನುದ್ದಕ್ಕೂ ಇತರರಿಗಾಗಿ ಬದುಕಿ, ತನಗಾಗಿ ಬದುಕಿಲ್ಲವೆಂಬ ನೀರಸ ಭಾವ ಮೂಡಿದಾಗ ಸಾವಿನ ಆಕರ್ಷಣೆ ಪ್ರಬಲವಾಗುತ್ತೆ.
ಇಂತಹ ಒಂದು ಗಂಭೀರ ವಿಷಯವನ್ನು ಒಂದು ಕಾದಂಬರಿಯ ಮೂಲಕ ಸಾಯಿಸುತೆಯವರು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ.
ಬಾಲ್ಯದಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಳ್ಳುವ ಸುಭಾಷ್ ಅಕ್ಕನ ಮಕ್ಕಳ ಪಾಲನೆ ಪೋಷಣೆಯನ್ನು ಪ್ರೀತಿಯಿಂದ ಮಾಡುತ್ತಾ ತನ್ನ ಬಾಲ್ಯವನ್ನು ಅಲಕ್ಷಿಸಿರುತ್ತಾನೆ, ಇಂತಹ ಸ್ವಾರ್ಥ ಸಂಬಂಧಗಳಿಂದ ಹೊರ ಬಂದು ತಾನು ಕಳೆದುಕೊಂಡಿದ್ದು ಏನನ್ನು ಎಂದು ಯೋಚಿಸುವಷ್ಟರಲ್ಲಿ, ದೈಹಿಕವಾಗಿ ಆರೋಗ್ಯವಾಗಿದ್ದರೂ ಮಾನಸಿಕ ಬಂಧಗಳ ಬೆಂಬಲವಿಲ್ಲದೇ ಡೆತ್ ವಿಶ್ ನತ್ತ ಹೆಜ್ಜೆ ಹಾಕಿರುತ್ತಾನೆ. ಆಗ ಅವನ ಬದುಕಿಗೆ ಆಕರ್ಷಣೆಯನ್ನು ಹೊತ್ತು ತರುವ ಅಖಿಲಾ ಅದ್ಭುತ ಶಕ್ತಿಯಾಗಿ ನಿಲ್ಲುತ್ತಾಳೆ. ಲಕ್ಷ್ಮಿ, ಶ್ರೀನಿವಾಸಮೂರ್ತಿ ಅವರು, ತಮ್ಮ ಮಕ್ಕಳ ಹಾರೈಕೆಯ ಸ್ವಾರ್ಥಕ್ಕೆ ಬಿದ್ದು ಸುಭಾಷ್ ನ ಬದುಕನ್ನು ಸಂಕುಚಿತಗೊಳಿಸುವುದು, ಹೆತ್ತವರ ಅತಿಯಾದ ಪ್ರೀತಿ ಮಕ್ಕಳನ್ನು ಹೇಗೆಲ್ಲಾ ಹಾಳು ಮಾಡಬಹುದು ಎನ್ನುವುದಕ್ಕೆ ಸ್ಪಷ್ಟ ಉದಾಹರಣೆಯಂತಿರುವ ಸುಧಾ, ಪಿಳ್ಳೆ, ಡಾ. ಶ್ಯಾಮಸುಂದರ್, ಗೋಪಾಲರಾಯರು ಹೀಗೆ ಪ್ರತಿಯೊಂದು ಪಾತ್ರಗಳೂ ಒಂದೊಂದು ಪಾಠ ಕಲಿಸುತ್ತವೆ.
ಒಂದು ಕಾದಂಬರಿಯಲ್ಲಿ, ಸಾಮಾಜಿಕ ಕಳಕಳಿಯ ಜೊತೆಗೆ, ಬದಲಾಗುತ್ತಿರುವ ಸಂಬಂಧಗಳ ಮೌಲ್ಯಗಳು, ವ್ಯಕ್ತಿಗಳ ಮನಸ್ಥಿತಿ, ಸಮಾಜದ ಓರೆಕೊರೆಗಳನ್ನು ಚಿತ್ರಿಸಿ, ಓದುಗರನ್ನು ಚಿಂತನೆಗತ್ತಿಸುವ ಮೂಲಕ ಒಂದು ಸಂದೇಶ ಬಿತ್ತರಿಸುವುದು ಸಾಯಿಸುತೆಯವರ ಕೃತಿಗಳ ವಿಶೇಷ.
ಇನ್ನು ಅವರ ಸರಳ ನವಿರಾದ ನಿರೂಪಣೆ ಎಂದಿಗೂ ಆಪ್ತವೇ.
ಧನ್ಯವಾದಗಳು….

– ಕವಿತಾ ಭಟ್

Advertisements