SB

ಇದು ಕೃಷಿ ವಿಜ್ಞಾನಿ ಡಾ. ಕೆ. ಎನ್. ಗಣೇಶಯ್ಯರವರ ಎಂಟು ಸಣ್ಣ ಕತೆಗಳುಳ್ಳ ಕಥಾಸಂಕಲನ. ಈ ಕಥೆಗಳಲ್ಲಿರುವ ಬರುವ ಬಹುತೇಕ ಊರುಗಳು, ಪಾತ್ರಗಳು, ವಿಷಯಗಳು ನಮ್ಮ ಸುತ್ತ ಮುತ್ತ ನಡೆಯುವುದೇ ಆಗಿವೆ. ಕತೆಗಳನ್ನು ಓದಿದ ನಂತರ “ಹೌದಲ್ಲವೇ? ಇದು ಮೊದಲೇ ನನಗೆ ಯಾಕೆ ಹೊಳೆಯಲಿಲ್ಲ” ಅಂತನ್ನಿಸದೇ ಇರದು. ಒಂದು ಸಣ್ಣ ವಿಜ್ಞಾನದ ವಿಸ್ಮಯವನ್ನಿಟ್ಟುಕೊಂಡು ಅದರ ಸುತ್ತ ಒಂದು ಅದ್ಭುತವಾದ ಕತೆಯನ್ನು, ಆಸಕ್ತಿಕರವಾದ ಪಾತ್ರಗಳನ್ನು ಹೆಣೆದು ಸಾಮಾನ್ಯರಿಗೂ ಅರ್ಥವಾಗುವಂತೆ ಅತಿ ಚಿಕ್ಕ ವಿವರಗಳನ್ನೂ ಸೂಕ್ಷ್ಮವಾಗಿ ನೀಡುವುದು ಗಣೇಶಯ್ಯರವರ ಕಥನ ಶೈಲಿ. ಶಾಲಭಂಜಿಕೆ, ನಂಜಾದ ಮಧು, ಎದೆಯಾಳದಿಂದೆದ್ದ ಗೋವು, ಶಿಲಾವ್ಯೂಹ, ಪಿರಮಿಡ್ಡಿನ ಗರ್ಭದಲ್ಲಿ, ಹುಲಿಯ ಮಡಿಲ ಹುಳು, ಇಮ್ಮಡಿಯ ಗೋಪುರಗಳು, ಪರಾಗತ್ಯಾಗ ಇವು ಇಲ್ಲಿರುವ ಕಥೆಗಳು.

ಗ್ವಾಲಿಯರ್ ನ ವಸ್ತುಸಂಗ್ರಹಾಲಯದಲ್ಲಿರುವ ಒಂದು ಶಿಲಾಪ್ರತಿಮೆಯೇ “ಶಾಲಭಂಜಿಕೆ” ಕತೆಗೆ ಕಥಾವಸ್ತು. ಆ ಶಾಲಭಂಜಿಕೆಯ ನಗು, ಮುಖದಲ್ಲಿನ ಸೌಂದರ್ಯ ಮತ್ತು ಅದರ ಅಕರ್ಷಕ ಭಂಗಿಗೆ ಮನಸೋತ ಲೇಖಕರು, ಆ ಶಿಲಾಬಾಲಿಕೆಯು ರೂಪುಗೊಳ್ಳಲು ಕಾರಣ, ಅದರ ಸೃಷ್ಟಿಕರ್ತ, ಅದರ ಇತಿಹಾಸ, ಶಿಲ್ಪಿಯ ಮನೆತನದ ಬಗ್ಗೆ ಸಂಶೋಧನೆ ನಡೆಸಿ ರಚಿಸಿದ ರಮಣೀಯವಾದ ಕತೆಯಿದು. ಒಂದು ಜೇನುನೊಣ ಹೂವಿನ ಮಧುವನ್ನು ಹೀರಿ, ಮಕರಂದವನ್ನು ಸಂಗ್ರಹಿಸಿಕೊಂಡು ಗೂಡಿಗೆ ವಾಪಸಾದಾಗ, ತನ್ನ ಗೂಡಿನ ಇತರೆ ಜೇನುನೊಣಗಳಿಗೆ ತಾನು ಭೇಟಿಯಿತ್ತ ಸಸ್ಯ ಇರುವ ದಿಕ್ಕು ಮತ್ತು ಇತರೆ ಮಾಹಿತಿ ರವಾನಿಸುತ್ತದೆ ಎಂಬ ವಿಷಯದ ಸುತ್ತ ಹೆಣೆದ ಕಥೆ “ನಂಜಾದ ಮಧು”. ಸೋಮನಾಥಪುರದ ಚನ್ನಕೇಶವ ದೇವಾಲಯದ ವಿಷ್ಣುವಿನ ಮೂರ್ತಿಯಲ್ಲಿ ಬಸವನ ಮುಖ ಕಾಣುವುದರ ಹಿಂದಿನ ರಹಸ್ಯ ಭೇದಿಸಿ ಹೊಸ ಲೋಕಕ್ಕೆ ನಮ್ಮನ್ನು ಕರೆದೊಯ್ಯುತ್ತಾರೆ “ಎದೆಯಾಳದಿಂದೆದ್ದ ಗೋವು” ಮೂಲಕ. ಕೋಲಾರದ ಹಲ್ಲಿಕುಂಟೆಯ ಬೆಟ್ಟದ ಬಳಿಯಿರುವ ಪಾಂಡವರ ಕಲ್ಲುಗಳ ಬಗ್ಗೆ, ಅದರ ಐತಿಹ್ಯದ ಕುರಿತಾಗಿ ಬರೆದಿರುವ ಕತೆ “ಶಿಲಾವ್ಯೂಹ”, ಬಟ್ಟೆಯ ಚೀಲದಲ್ಲಿ ಗೋಧಿ ಮತ್ತು ಬಾರ್ಲಿ ಬೀಜಗಳನ್ನು ಹಾಕಿ, ಅದರ ಮೇಲೆ ಹೆಂಗಸು ಮೂತ್ರ ಮಾಡಬೇಕು. ಎರಡೂ ಬೆಳೆದರೆ ಆಕೆ ಗರ್ಭಿಣಿ. ಗೋಧಿ ಬೆಳೆದರೆ ಗಂಡು, ಬಾರ್ಲಿ ಬೆಳೆದರೆ ಹೆಣ್ಣು. ಎರಡೂ ಬೆಳೆಯದಿದ್ದರೆ ಆಕೆ ಗರ್ಭವತಿಯಲ್ಲ. ಈ ಸಂಪ್ರದಾಯ ಇಂದಿಗೂ ಈಜಿಪ್ಟ್ ನಲ್ಲಿದೆಯೇ? “ಪಿರಮಿಡ್ಡಿನ ಗರ್ಭದಲ್ಲಿ” ಕತೆಯೇ ಈ ಪ್ರಶ್ನೆಗೆ ಉತ್ತರ. ಭಾರತದ ಕಾಫಿ ಉದ್ಯಮ, ಕಾಫಿ ಹಣ್ಣು ಕೊರೆಯುವ ಹುಳು, ಆ ಹುಳುವನ್ನು ನಿಯಂತ್ರಿಸಲು ಜೈವಿಕ ಶತೃ, ಇವುಗಳಿಂದ ಭಾರತಕ್ಕಾಗುವ ಆರ್ಥಿಕ ಹಾನಿ, ಇದರಲ್ಲಿ ಎಲ್.ಟಿ.ಟಿ.ಇಯ ಪಾತ್ರ ಇವುಗಳ ಕುರಿತಾದ ರೋಮಾಂಚನಕಾರಿ ಕತೆ “ಹುಲಿಯ ಮಡಿಲ ಹುಳು”. ಬೆಂಗಳೂರಿನಲ್ಲಿ ಕೆಂಪೇಗೌಡರು ಕಟ್ಟಿಸಿರುವ ನಾಲ್ಕು ಗೋಪುರಗಳು ಇವೆ. ಈ ಗೋಪುರಗಳನ್ನು ಕಟ್ಟಿರುವ ಉದ್ದೇಶವೇನು? ಅದರ ಹಿಂದಿನ ಇತಿಹಾಸವೇನು? ಇದರಲ್ಲಿ ಕೆಂಪೇಗೌಡರ ಸೊಸೆಯ ಪಾತ್ರವೇನು? ಹಳೆಯ ಬೆಂಗಳೂರು ಯಾವುದು? ಈ ವಿವರಗಳನ್ನೊಳಗೊಂಡ ಕತೆ “ಇಮ್ಮಡಿಯ ಗೋಪುರಗಳು”. ಅಂಡಮಾನ್ ನಲ್ಲಿ ನಡೆಯುವ ತಾಳೆಮರಗಳ ಪರಾಗಕ್ರಿಯೆಯ ಸಂಚಿನ ಬಗ್ಗೆ ರಚಿತವಾಗಿರುವ ಕತೆ “ಪರಾಗತ್ಯಾಗ”.

ಸಂಶೋಧನೆ ಮಾಡುವ ಮನಸ್ಸಿನವರಿಗೆ ಈ ಪುಸ್ತಕದ ಪ್ರತೀ ಕತೆಯೂ ರಸದೌತಣವಾಗಿವೆ. ಪುಸ್ತಕ ಕೈಗೆತ್ತಿಕೊಂಡರೆ ಮುಗಿಸದೆ ಕೆಳಗಿಳಿಸಲಾರಿರಿ. ಅದ್ಭುತವಾದ ಪುಸ್ತಕ. ನೀವೂ ಓದಿ. ನಮಸ್ಕಾರ.

– ರಾಂಪುರ ರಘೋತ್ತಮ

Advertisements