OMS

‘Old man and the sea’ ಹೆಮಿಂಗ್ ವೇದ್ದು ಮೊದಲು ಓದಿದ್ದು ಈಗಲೂ ನೆನಪಿದೆ. ನಮ್ಮ MRPL ಲೈಬ್ರರಿಯಲ್ಲಿ ಎರಡು ದಪ್ಪ ಪುಸ್ತಕಗಳ ನಡುವೆ ಮಲಗಿತ್ತು. ಇಷ್ಟು ಚಿಕ್ಕ ಪುಸ್ತಕ ನೂರೈದು ಪುಟ ಸಹಿತ ಇಲ್ಲ. ಇದಕ್ಯಾರು ಮಾರ್ರೇ ನೊಬೆಲ್ ಕೊಟ್ಟೋರು ಅಂತ ಆಶ್ಚರ್ಯಪಡುತ್ತಾ ‘ಇರಲಿ ನೋಡುವಾ’ ಅಂತ ತಗೊಂಡೆ. ನಮ್ಮ ಇಂಗ್ಲೀಷ್ನ ಹಣೆಬರಹ ಆಗ ಅಕ್ಷರಮಾಲೆ ಕಲಿವಷ್ಟೇ! ಈಗೇನೂ ಭಾರೀ ಅಂತಲ್ಲ ಈಗ ಹೇಗೋ ಓದಬಹುದು ಅಂತಷ್ಟೇ. ಸರಿ. ಹೆಂಗೂ ಅವತ್ತು ರಾತ್ರಿ ಪಾಳಿ. ತಗೊಂಡು ಹೋಗಿ ಪುಟ ತಿರುಗಿಸತೊಡಗಿದೆ. ಕಷ್ಟಪಟ್ಟು ಆರು ಪುಟ ಓದುವಾಗ ಕಣ್ಣು ಎಳೆಯತೊಡಗಿತು. ಸುಮ್ಮನೆ ಎದ್ದು ಹೊರ ಹೋದರೆ ಸ್ಯಾಂಟಿಯಾಗೋನದ್ದೇ ನೆನಪು. ಆಮೇಲೆ ಓದು ಕುದುರಿಕೊಂಡಿತು. ರಾತ್ರಿಯ ಏಕಾಂತ, ವಾತಾವರಣವೂ ಪೂರಕವೇ ಅನ್ನಿ. ನದಿಯೊಂದು ಹರೀತಿರುವಾಗ ಅದರ ದಂಡೇಲಿ ಕೂತು ಕಾಲು ಅದರಲ್ಲಿ ಅದ್ದಿ ಕೂತರೆ ಏನನಿಸುತ್ತೆ? ಆ ಭಾವ!
ತುಂಬ ಬಾಯಾರಿಕೆ ಅಂತ ತಣ್ಣಗಿನ ನೀರು ಕುಡಿದಾಗ ಆ ನೀರು ಗಂಟಲಲ್ಲಿ ಒಂದು ತಂಪು ಕೊಡುತ್ತಲ್ಲ ಆ ಥರಾ!
ಹೆಮಿಂಗ್ ವೇ ಇಷ್ಟವಾದ ಮತ್ತು ಕಷ್ಟವೂ! ಯಾಕೆಂದರೆ ಅವನ‌ ಓದಲು ಆರಾಮ ಕುರ್ಚಿ, ಬಿಸಿಲು ಮತ್ತು ಚಡ್ಡಿ ಅಂಗಿಯ ಆರಾಮ ಬೇಕೆಂದು ಗಾಢವಾಗಿ ಅನಿಸಿತು. ಇದಾದ ಬಳಿಕ ಭಗವಾನ್ ಅನುವಾದದ ‘ಮುದುಕ ಮತ್ತು ಸಮುದ್ರ’ ಸಿಕ್ಕಿತು. ಐದು ಪೈಸೆ ಅರ್ಥವಾಗಲಿಲ್ಲ. ಅಲ್ಲದೆ ಅನುವಾದಕರ ಮೇಲೆ‌ ನಖ ಶಿಖಾಂತ ಸಿಟ್ಟು ಬೇರೆ.

ಆಮೇಲೆ ಇವತ್ತು ಗೆಳೆಯ ಶ್ರೀಶೈಲರು ‘ಸಿದ್ಧರಾಜ ಪೂಜಾರಿ’ ಯವರ ಅನುವಾದದ ‘ವೃದ್ಧ ಸ್ಯಾಂಟಿಯಾಗೋ ಮತ್ತು ಸಮುದ್ರ’ ಕೊಟ್ಟರು. ಎಂತಹ ಅನುವಾದ ಅಂತೀರಿ! ಹೆಮಿಂಗ್ ವೇ ಕತೆಗಳ ಚಂದವಾಗಿ ನಮ್ಮ ಗುರುರಾಜ ಕೋಡ್ಕಣಿ ಅನುವಾದ ಮಾಡಿದ್ದಾರೆ. ಆದರೆ ಈ ಕಾದಂಬರಿಯೂ ಸುಂದರವಾಗಿ ಬಂದಿದೆ. ಬಹಳ ಇಷ್ಟವಾಯ್ತು. ಹೆಮಿಂಗ್ ವೇಯ ಅನುವಾದ ಸುಲಭವಲ್ಲ. ಭಾಷೆ ಅವನ ಶಕ್ತಿ. ಹಾಗಾಗಿ ಅನುವಾದ ಕೊಂಚ ಹದ ತಪ್ಪಿದರೂ ವರದಿಯಾಗಿಬಿಡುವ ಅಪಾಯವಿದೆ. ಇನ್ನು ಕನ್ನಡದ ಪಂಡಿತೋತ್ತಮರು ತಮ್ಮ ಭಾಷಾ ಪ್ರೌಢಿಮೆ ಮೆರೆಯಲು ಮಾಡುವ ಅನುವಾದಗಳೋ ದೇವರಿಗೇ ಪ್ರೀತಿ. ಮೂಲದ್ದೂ ,ಕನ್ನಡದ್ದೂ ಒಟ್ಟಿಗೆ ಶಿರಚ್ಛೇದನ ಮಾಡಿಬಿಡುತ್ತಾರೆ.

ಈ ಪುಟ್ಟ ಕಾದಂಬರಿಯ ಕತೆ ಸರಳ. ಸ್ಯಾಂಟಿಯಾಗೋ ಎಂಬ ಮುದುಕ ಮೀನು ಹಿಡಿಯುವವ. ಎಂಬತ್ತನಾಲ್ಕು ದಿನ ಪ್ರಯತ್ನ‌ಮಾಡಿದರೂ ಅವನಿಗೆ ಫಲ ಸಿಕ್ಕಿರುವುದಿಲ್ಲ. ಆರಂಭದಲ್ಲಿ ಜೊತೆ ಬಂದ ಹುಡುಗ, ಆಮೇಲೆ ಆ ಹುಡುಗನ ತಂದೆ ತಾಯಿ ಈ ಮುದುಕ ದುರದೃಷ್ಟವಂತ ಅಂತ ಅವನ‌ ಬೇರೆಯವರ ಜೊತೆ ಮೀನು ಹಿಡಿಯಲು ಕಳಿಸುತ್ತಾರೆ. ಆದರೂ ಹುಡುಗ ಮತ್ತು ಮುದುಕ ಮಿತ್ರರು. ಮುದುಕ ಒಬ್ಬಂಟಿಯಾಗಿ ಕೂತು ಬೀಚುಗಳ ಕುರಿತು,ಆಫ್ರಿಕಾದ ಸಿಂಹಗಳ ಕುರಿತು ಕನಸು ಕಾಣುತ್ತಾನೆ ಹೊಟ್ಟೆಗೆ ಏನಿಲ್ಲದಿದ್ದರೂ ! ಆದರೂ ಛಲ ಬಿಡದೆ ಮತ್ತೆ ಮೀನು ಹಿಡಿಯಲು ಹೊರಟು ಮಾರ್ಲಿನ್ ಎಂಬ ಹದಿನೆಂಟು ಅಡಿ ಉದ್ದದ ಬಲಾಢ್ಯ ಮೀನೊಂದರ ಜೊತೆ ಸೆಣಸಾಡುತ್ತಾನೆ. ಸೋತೆನೆನ್ನುವಾಗ ಅದನ್ನು ಹಿಡಿದು ಗೆಲ್ಲುತ್ತಾನೆ.ಅವನ‌ ದುರದೃಷ್ಟಕ್ಕೆ ಅದನ್ನು ತೀರಕ್ಕೆ ತರುವಾಗ ಶಾರ್ಕ್ ಗಳ ದಾಳಿಗೆ ತುತ್ತಾಗಿ ಮೀನಿನ ಅಸ್ಥಿಪಂಜರ ಮಾತ್ರ ಅವನಿಗುಳಿಯುತ್ತದೆ. ತೀರದಲ್ಲಿ ಅವನಿಗೆ ಒಳ್ಳೆಯ ಸ್ವಾಗತ ದೊರೆಯುತ್ತದೆ. ಗೆದ್ದರೂ ಫಲ ಸಿಗದ ವೀರ ಸ್ಯಾಂಟಿಯಾಗೋ ಮಲಗಿಕೊಂಡು ಆಫ್ರಿಕಾದ ಸಿಂಹಗಳ ಕುರಿತು ಕನಸು ಕಾಣುತ್ತಾನೆ.

ಇದನ್ನು ಓದುವ ಮೊದಲು, ಕೊಂಚ ಈ ಕಡೆ ಬಂದು, ನಮ್ಮ ತೇಜಸ್ವಿಯವರ ಅಲೆಮಾರಿಯ ಅಂಡಮಾನ್ ನ ಇನ್ನಿಂಗ್ಸ್ ಡಿಫೀಟ್ ಅಧ್ಯಾಯ ಓದಿ. ಪರಿಸರದ ಕತೆಯ ಕೆರೆಯ ದಡದಲ್ಲಿ ಅಧ್ಯಾಯ ಓದಿ. ಜುಗಾರಿ ಕ್ರಾಸ್ ಅಲ್ಲಿ ಸುರೇಶ ಮೀನು ಹಿಡವ ಪ್ರಸಂಗ ಓದಿ.ಕುವೆಂಪು ಅವರ ಮಲೆನಾಡಿನ ಚಿತ್ರಗಳು ಓದಿ. ಇವಿಷ್ಟು ಮುಗಿದ ಬಳಿಕ ತಣ್ಣಗೆ ಕೂತು ಈ ಪುಸ್ತಕ ಓದಿ.

ಇಷ್ಟಾಗಿಯೂ ಹೆಮಿಂಗ್ ವೇ ಎಲ್ಲರ ರುಚಿಯ ಅಡುಗೆ ಅಲ್ಲ. ಅವನೊಂದು ತರಹಾ. ಹಿಂದೂಸ್ಥಾನಿ ಸಂಗೀತದ ಹಾಗೆ. ರುಚಿ ಹತ್ತಿದರೆ ಬಿಡಲಾಗದು. ರುಚಿ ತಿಳಿವ ಮೊದಲು ಬರೇ ‘ಆ.. ಆ..’ ಅಷ್ಟೇ.

ಇವೆಲ್ಲ ಈ ಕ್ಷಣಕ್ಕೆ ಹೊಳೆದದ್ದು.

– ಪ್ರಶಾಂತ್ ಭಟ್

Advertisements