GIFT

ಒಂದು,ಎರಡು,ಮೂರು ಅಂತ ಒಂದೊಂದೇ ಬಿಲ್ಲೆಯನ್ನು ಎತ್ತಿಡುತ್ತಿದ್ದಳು ಡೆಲ್ಲಾ.ಮೂರು ಮೂರು ಬಾರಿ ಜಾಗರೂಕತೆಯಿಂದ ಆಸ್ಥೆವಹಿಸಿ ಎಣಿಸಿದಾಗ ಅವಳ ಬಳಿ ಇದ್ದದ್ದು ಒಟ್ಟು ಒಂದು ಡಾಲರ್ ಎಂಬತ್ತೇಳು ಸೆಂಟ್ಸ್ ಅಷ್ಟೇ.ಮರುದಿನವೇ ಕ್ರಿಸ್ಮಸ್ ಇದ್ದುದರಿಂದ ಮಾಂಸದ ತುಂಡನ್ನೂ, ಸಾಂಬಾರ ಪದಾರ್ಥಗಳನ್ನೂ ಮತ್ತು ತನ್ನ ಮುದ್ದು ಪತಿರಾಯನಿಗೆ ಉಡುಗೊರೆಯೊಂದನ್ನು ಕೊಳ್ಳುವ ತುರ್ತು ಆಕೆಗೆ ಇತ್ತು.ಅದಕ್ಕಾಗಿಯೇ ಆಕೆ ತನ್ನ ಬಳಿ ಇರುವ ಒಟ್ಟು ಹಣದ ಮೊತ್ತವನ್ನು ಖಚಿತಪಡಿಸಿಕೊಳ್ಳಲು ಮೂರ್ಮೂರು ಬಾರಿ ಎನಿಸಿದಳು.ಈ ಪುಡಿಗಾಸಿನಿಂದ ಬಹಳ ಎಂದರೆ ಮಾಂಸದ ತುಂಡನ್ನು ಕೊಳ್ಳಬಹುದಾಗಿತ್ತಷ್ಟೇ ಹೊರತು ಇನ್ನೇನೂ ಕೊಳ್ಳಲು ಸಾಧ್ಯವಿರಲಿಲ್ಲ.ಇದರಿಂದ ಮಾನಸಿಕವಾಗಿ ವಿಚಲಿತಳಾದ ಡೆಲ್ಲಾ ಹಾಸಿಗೆಯ ಮೇಲೆ ಬೋರಲಾಗಿ ಬಿದ್ದು ಅಳತೊಡಗಿದಳು.ಪಾಪ ಆಕೆಗೆ ಅಳುವುದು ಬಿಟ್ಟರೆ ಗತ್ಯಂತರವಿರಲಿಲ್ಲ.ಕಥೆ ಮುಂದುವರೆದಂತೆ ಡೆಲ್ಲಾ ನಮ್ಮನ್ನು ಮೌನವಾಗಿ ಆವರಿಸುವ ಮೊದಲು ಆಕೆಯ ಮನೆಯನ್ನೂ ಮತ್ತು ಆರ್ಥಿಕ ದುಸ್ಥಿತಿಯನ್ನೂ ನೋಡಿಕೊಂಡು ಬರೋಣ ಬನ್ನಿ.

ವಾರಕ್ಕೆ ಎಂಟು ಡಾಲರ್ ಬಾಡಿಗೆಯ,ಚಿಕ್ಕ ಕೋಣೆಗಳನ್ನು ಒಳಗೊಂಡ ಪುಟ್ಟ ಮನೆ ಆಕೆಯದ್ದು. ಆರ್ಥಿಕವಾಗಿ ಸುಸ್ಥಿಯಲ್ಲಿಲ್ಲದಿದ್ದರೂ ಆ ಅರಮನೆಗೆ ಆಕೆಯೇ ಮಹಾರಾಣಿ. ಮುರುಕು ಕುರ್ಚಿ, ಸೀಳು ಮೇಜೂ ಉಂಟು. ಅವುಗಳನ್ನೇ ಅಲ್ಪ ಸ್ವಲ್ಪ ರಿಪೇರಿ ಮಾಡಿಕೊಂಡು ಉಪಯೋಗಿಸುತ್ತಿದ್ದಾರೆ. ಹಜಾರದಲ್ಲಿ ಒಂದು ಪೋಸ್ಟ್ ಡಬ್ಬಿ ಇದೆ. ಆ ಡಬ್ಬದ ನಾಲಿಗೆ ಪತ್ರವನ್ನು ನುಂಗಿ ಅದೆಷ್ಟು ದಿನವಾಗಿದೆಯೋ ಆ ದೇವನೇ ಬಲ್ಲ. ಮನೆಯ ಹೊರಗಡೆ ಮುಖ್ಯ ದ್ವಾರದ ಬಾಗಿಲ ಬಳಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಒಂದು ಡೋರ್ ಬೆಲ್ ಇದೆ. ಮೌನವ್ರತವನ್ನು ಪ್ರಾರಂಭಿಸಿ ಅದ್ಯಾವ ಕಾಲವಾಗಿದೆಯೋ ಅದಕ್ಕೇ ಗೊತ್ತು. ಅದೂ ಅಲ್ದೆ ಮುಖ್ಯ ದ್ವಾರದ ಮೇಲೆ ” ಮಿಸ್ಟರ್. ಜೆಮ್ಸ್ ಡಿಲ್ಲಿಂಗಮ್ ಯಂಗ್ ” ಎಂದು ಮನೆಯ ಒಡೆಯನ ಹೆಸರನ್ನು ಹೊತ್ತಿರುವ ನೇಮ್ ಫ್ಲೇಟ್ ಒಂದಿದೆ. ಆ ಪ್ಲೇಟ್ ಅನ್ನು ಅಲ್ಲಿ ತೂಗುಹಾಕುವ ಹೊತ್ತಿಗೆಲ್ಲ ಜೇಮ್ಸ್ ವಾರಕ್ಕೆ ಭರ್ತಿ ಮೂವತ್ತು ಡಾಲರ್ ಹಣ ಗಳಿಸುತ್ತಿದ್ದ. ಆದ್ರೆ ಈಗ ಆತನ ಗಳಿಕೆ ಇಪ್ಪತ್ತು ಡಾಲರಿಗೆ ಇಳಿದಿದೆ ಪಾಪ. ಏನೂ? ಇಪ್ಪತ್ತೇ ಡಾಲರ್ರಾ…ಅಷ್ಟೇ ಅಷ್ಟು ಸಂಪಾದನೆ ಮಾಡುವವನಿಗೆ ಅಷ್ಟುದ್ದದ ಹೆಸರೇ?. ” ಮಿ.ಜೇಮ್ಸ್.ಡಿ.ವಾಯ್” ಅಂತ ಇದ್ದಿದ್ರೆ ಸಾಕಿತ್ತಪ್ಪ ಅಂತ ನಿಮಗೆ ಅನಿಸಬಹುದೇನೋ?. ಇರಿ…. ಇರಿ… ಅಷ್ಟೊಂದು ಆತುರ ಏತಕ್ಕೆ ಆತನ ಹೆಸರನ್ನು ತುಂಡು ಮಾಡೋದಕ್ಕೆ?.ನೀವು ಎಷ್ಟು ಚಿಕ್ಕದಾಗಿ ಆತನ ಹೆಸರನ್ನು ತುಂಡು ಮಾಡಬೇಕೆಂದುಕೊಂಡಿದ್ದೀರೊ, ಆತ ಮನೆಯನ್ನು ಪ್ರವೇಶಿಸುತ್ತದ್ದಂತೆ ಅದಕ್ಕಿಂತಲೂ ಹೆಚ್ಚು ತುಂಡಾಗಿ ಆತನ ಹೆಸರು ಚಿಕ್ಕದಾಗಿ ” ಜಿಮ್ ” ಅಂತ ಇಷ್ಟೇ ಇಷ್ಟು ತುಣುಕಾಗುತ್ತದೆಂದರೆ ನೀವು ನಂಬಲೇಬೇಕು.ಹೌದು, ಆತನ ಮುದ್ದು ಮಡದಿ ಡೆಲ್ಲಾ ಆತ ಮನೆಯ ಬಾಗಿಲ ಒಳಗೆ ಹೆಜ್ಜೆ ಇಡುತ್ತಿದ್ದಂತೆ ಅದಾವ ಮಾಯದಲ್ಲೊ ದಿಢೀರ್‌ ಪ್ರತ್ಯಕ್ಷಳಾಗಿ ಆತನನ್ನು ಬಿಗಿದಪ್ಪಿ “ಜಿಮ್” ಎಂದು ಕರೆದು ಮುದ್ದು ಮಾಡಿ ಸ್ವಾಗತಿಸುತ್ತಾಳೆ.

ಅಳು ಮುಗಿದ ಮೇಲೆ ತಾನು ಅತ್ತಿರುವ ಸುಳಿವು ಪತಿಗೆ ಸಿಗದಿರಲೆಂದು ಅದನ್ನು ಅಳಿಸಲು ನಾನಾ ವ್ಯರ್ಥ ಪ್ರಯತ್ನಗಳನ್ನು ಮಾಡಿದಳು. ಆದರೆ ಕೆಂಬಣ್ಣಕ್ಕೆ ತಿರುಗಿದ್ದ ಆಕೆಯ ಕಣ್ಣುಗಳು ಅತ್ತಿರುವ ಕುರುಹನ್ನು ಎತ್ತಿ ತೋರಿಸುತ್ತಿದ್ದವು.ಡೆಲ್ಲಾ ದಿಕ್ಕು ತೋಚದೆ ಕಿಟಕಿಯ ಎದುರು ವಿಷಣ್ಣಳಾಗಿ ಯೋಚಿಸುತ್ತಾ ನಿಂತಳು.ಈ ವಿಷಣ್ಣತೆ ತನ್ನ ಮುದ್ದು ಗಂಡನಿಗಾಗಿ ಒಂದು ಉಡುಗೊರೆ ತೆಗೆದುಕೊಳ್ಳಲಾಗುತ್ತಿಲ್ಲವಲ್ಲ ಎಂಬ ಅಸಹಾಯಕತೆಯಿಂದ ಮೂಡಿದ್ದಾಗಿತ್ತು.ಆಕೆಯ ಬಳಿ ಇರುವ ಒಂದು ಡಾಲರ್ ಎಂಬತ್ತೇಳು ಸೆಂಟ್ಸ್ ,ಪ್ರತಿ ತಿಂಗಳು ತರಕಾರಿ ಮತ್ತು ತಹರೆವಾರಿ ಸಾಮಾನುಗಳನ್ನು ಕೊಳ್ಳಲು ಕೊಡುತ್ತಿದ್ದ ಹಣದಲ್ಲಿ ಉಳಿಕೆ ಮಾಡಿ ಕೂಡಿಸಿದ್ದ ಹಣವಾಗಿತ್ತು.ಅವಳ ಹಣೆಬರಹಕ್ಕೆ ಪೇಟೆಯಲ್ಲಿ ಎಲ್ಲ ವಸ್ತುಗಳ ಧಾರಣೆ ಹೆಚ್ಚಿ ತುಟ್ಟಿಯಾಗಿದ್ದವು. ಈ ತರಹದ ಸನ್ನಿವೇಶಗಳು ಆಕೆಗೆ ಸರ್ವೇಸಾಮಾನ್ಯ ಎಂಬಂತೆ ಕಾಲ ಕಾಲಕ್ಕೆ ತಪ್ಪದೇ ಎದುರಾಗುತ್ತಿದ್ದವು. ಕೇವಲ ಒಂದು ಡಾಲರ್ ಎಂಬತ್ತೇಳು ಸೇಂಟ್ಸ್ ನಷ್ಟು ಚಿಕ್ಕ ಮೊತ್ತದಲ್ಲಿ ಜಿಮ್ಗೆ ಉಡುಗೊರೆ ಕೊಡಬೇಕಾದ ವಿಷಮ ಸ್ಥಿತಿಯನ್ನು ಆಕೆ ಎದುರಿಸುವಂತಾಗಿತ್ತು. ವರ್ಷಪೂರ್ತಿ ಅಸಾಧ್ಯದ ಮಾತಾಗಿರುವುದರಿಂದ, ಕಡೇಪಕ್ಷ ಕ್ರಿಸ್ ಮಸ್ ನ ಅದೊಂದು ದಿನವಾದರೂ ಜಿಮ್ ಜೊತೆ ಸಂತುಷ್ಟಳಾಗುವಷ್ಟು,ವರ್ಷಪೂರ್ತಿ ನೆನಪಿಡುವ ಹಾಗೆ ಕಾಲ ಕಳೆಯುವ ಯೋಜನೆಯನ್ನು ಆಕೆ ಹಾಕಿಕೊಂಡಿದ್ದಳು.ಜಿಮ್ ನ ಬಳಿ ಇರುವ, ಹಾಗೂ ಆತನ ಪ್ರೀತಿಗೆ ಪಾತ್ರವಾಗಿ ತನ್ನ ಗಣತೆ ಮತ್ತು ಮೌಲ್ಯವನ್ನು ಹೆಚ್ಚಿಸಿಕೊಂಡಿರುವ ವಸ್ತುವಿಗೆ ಪರ್ಯಾಯ ಎನಿಸುವಂತದ್ದನ್ನಲ್ಲದಿದ್ದರೂ, ಕಡೆ ಪಕ್ಷ ಅದರ ಹತ್ತತ್ತಿರ ಸರಿ ನಿಲ್ಲುವ ವಸ್ತುವನ್ನೊಂದನ್ನು ಉಡುಗೊರೆಯಾಗಿ ಕೊಡುವ ಹೆಬ್ಬಯಕೆಯನ್ನೂ ಮತ್ತು ಹಂಚಿಕೆಯನ್ನೂ ಆಕೆ ಹೊಂದಿದ್ದಳು.

ಕೋಣೆಯ ಕಿಟಕಿಗಳ ಮಧ್ಯದಲ್ಲಿ ಕನ್ನಡಿಯೊಂದಿತ್ತು.ಖಂಡಿತ ನೀವೆಲ್ಲ ನಿಮ್ಮ ಜೀವಮಾನದಲ್ಲೇ ಅಂತಹ ಕನ್ನಡಿಯನ್ನು ನೋಡಿರಲಿಕ್ಕೆ ಸಾಧ್ಯವಿಲ್ಲ ಬಿಡಿ. ಅಂತಹ ಕನ್ನಡಿಯನ್ನು ಅಲ್ಲಿ ತೂಗುಹಾಕಲಾಗಿತ್ತು. ಅಗಲಕ್ಕೆ ಅದು ತುಂಬ ಕಿರಿದಾಗಿತ್ತು. ಯಾರಾದರು ಅದಕ್ಕೆ ಅಭಿಮುಖವಾಗಿ ನಿಂತರೆ ಶರೀರದ ಸ್ವಲ್ಪ ಭಾಗವನ್ನು ಮಾತ್ರ ನೋಡಿಕೊಳ್ಳಬಹುದಾಗಿತ್ತು.ಒಂದು ವೇಳೆ ಅದರ ಎದುರು ನಿಂತ ವ್ಯಕ್ತಿ ಸಣಕಲಾಗಿದ್ದು , ಕನ್ನಡಿಯ ಆ ಬದಿಯಿಂದ ಈ ಬದಿಗೆ ಸರಕ್ಕನೆ ಚಲಿಸಬಲ್ಲವನಾಗಿದ್ದರೇ ಮಾತ್ರ ತನ್ನನ್ನು ತಾನು ಪೂರ್ತಿಯಾಗಿ ನೋಡಿಕೊಳ್ಳಬಹುದಾಗಿತ್ತು.ಡೆಲ್ಲಾ ಸಣಕಲು ಆಗಿದ್ದರಿಂದ ಆ ಕನ್ನಡಿಯನ್ನು ಯಾವುದೇ ತೊಂದರೆ ತಾಪತ್ರಯ ಇಲ್ಲದೇ ಆರಾಮವಾಗಿ,ಸರಾಗವಾಗಿ ನಿಭಾಯಿಸುತ್ತಿದ್ದಳು. ಆ ಕನ್ನಡಿಯನ್ನು ನಿಭಾಯಿಸುವ ಕಲೆಯಲ್ಲಿ ಅಕೆ ನಿಪುಣತೆ ಹೊಂದಿದ್ದಳು.

ಕಿಟಕಿಯ ಎದುರು ವಿಷಣ್ಣ ಮನಸ್ಕಳಾಗಿ ಯೋಚಿಸುತ್ತ ನಿಂತಿದ್ದ ಡೆಲ್ಲಾ, ತಲೆಗೆ ಏನೋ ಹೊಳೆದವಳಂತೆ ಕಿಟಕಿಯಿಂದ ಸರಿದು ಕನ್ನಡಿ ಎದುರು ನಿಂತಳು.ಅವಳ ಕಣ್ಣುಗಳು ಗೆಲುವಿನ ನಗೆ ಬೀರುತ್ತಾ ಗಾಢವಾಗಿ ಹೊಳೆಯತೊಡಗಿದ್ದವು.ಮುಖ ಮಾತ್ರ ಬಹಳ ಅತ್ತಿದ್ದರಿಂದ ಕಳೆಯನ್ನು ಕಳೆದುಕೊಂಡಿತ್ತು.ತಟಕ್ಕನೆ ತುರುಬು ಕಟ್ಟಿದ್ದ ಕೇಶರಾಶಿಯನ್ನು ಎಳೆದು ಇಳಿಬಿಟ್ಟಳು.

ಜೇಮ್ಸ್ ತನ್ನ ಯಜಮಾನಿಕೆಗೆ ಒಳಪಟ್ಟ ಎಲ್ಲ ವಸ್ತುಗಳಲ್ಲಿ ಎರಡು ವಸ್ತುಗಳ ಮೇಲೆ ಅತಿಯಾದ ಮೋಹ, ಹೆಮ್ಮೆ ಮತ್ತು ಅನೂಹ್ಯ ಪ್ರೀತಿಯನ್ನು ಇಟ್ಟುಕೊಂಡಿದ್ದ. ಒಂದು ಆತನ ಚಿನ್ನದ ವಾಚಿನ ಮೇಲೆ ,ಮತ್ತು ಎರಡು ದಟ್ಟ ಮತ್ತು ಸಮೃದ್ಧವಾಗಿರುವ ಡೆಲ್ಲಾಳ ಕೇಶರಾಶಿಯ ಮೇಲೆ.ಚಿನ್ನದ ಕೈ ಗಡಿಯಾರ ಆತನ ತಂದೆಗೆ ಸೇರಿದ್ದಾಗಿತ್ತು, ಅದಕ್ಕೂ ಮುಂಚೆ ಆತನ ತಾತನಿಗೆ ಸೇರಿದುದಾಗಿತ್ತು.ಪಿತ್ರಾರ್ಜಿತ ಅಸ್ತಿ ಅಂತ ಹೇಳಿಕೊಳ್ಳಲು ಆತನ ಬಳಿ ಇದ್ದದ್ದು ಆ ಗಡಿಯಾರ ಒಂದೇ.

ಒಂದು ವೇಳೆ ಯಾವುದಾದರೊಂದು ರಾಜ್ಯದ ಮಹಾರಾಣಿ ಡೆಲ್ಲಾಳ ಮನೆಯ ಹತ್ತಿರವೇ ತಂಗಿದ್ದು, ಡೆಲ್ಲಾಳ ಕೇಶರಾಶಿಯನ್ನು ನೋಡುವಂತಾಗಿದ್ದರೆ, ಡೆಲ್ಲಾ ಆ ಮಹಾರಾಣಿಯ ದೃಷ್ಟಿಗೆ ಬೀಳುವ ಹಾಗೆ ತನ್ನ ಕೇಶರಾಶಿಯನ್ನು ತೊಳೆದು , ಒಣಗಿಸಿ ಅಸೂಹೆ ಮೂಡಿಸಬಹುದಾಗಿತ್ತು. ಮಹಾರಾಣಿಯ ಐಶ್ವರ್ಯ, ವೈಡೂರ್ಯಗಳು ಆಕೆಯ ತನ್ನ ಕೇಶರಾಶಿಗೆ ಸಮವಾಗಲಾರವು ಎಂಬ ಸಣ್ಣ ಜಂಭ ಮತ್ತು ಅಹಂಕಾರ ಡೆಲ್ಲಾಗೆ ಇದ್ದವು. ಒಂದು ವೇಳೆ ರಾಜನೊಬ್ಬ ತನ್ನ ಎಲ್ಲ ಸಂಪತ್ತಿನೊಂದಿಗೆ ಅದೇ ಮನೆಯಲ್ಲಿ ಇರುವಂತಾಗಿದ್ದರೆ, ಜಿಮ್ ರಾಜನನ್ನು ಬೇಟಿಯಾದಾಗಲೆಲ್ಲ ತನ್ನ ಕೈ ಗಡಿಯಾರವನ್ನು ಆತನಿಗೆ ಕಾಣುವ ಹಾಗೇ ನೋಡಿಕೊಂಡು ಅಸೂಹೆ ಮೂಡಿಸಬಹುದಾಗಿತ್ತು. ಆತನ ಗಡಿಯಾರವನ್ನು ಯಾವ ರಾಜನ ಸಂಪತ್ತೂ ಮೀರಿಸಲಾರದು ಎಂಬ ಜಂಭ ಆತನಿಗೂ ಇತ್ತು.

ಡೆಲ್ಲಾಳ ಸುಂದರ ಕೇಶರಾಶಿ ವಿಸ್ತಾರವಾಗಿ ಹರಡಿಕೊಂಡಿವೆ. ಆಕೆಯ ಚೆಲುವು ಇನ್ನಷ್ಟು ಹೆಚ್ಚಲು ಅವು ಕಾರಣೀಭೂತವಾಗಿವೆ.ಸೂರ್ಯನ ಪ್ರಕಾಸಕ್ಕೆ ಸಿಲುಕಿ ಹೊಳೆಯುವ ನೀರಿನ ಝರಿಯಂತೆ ಹೊಳೆಯುತ್ತಿವೆ.ನಿತಂಬವನ್ನು ದಾಟಿ,ಮೀನಖಂಡದವರೆಗೆ ಕೇಶರಾಶಿ ಹಬ್ಬಿದೆ.ತೊಟ್ಟ ಬಟ್ಟೆಯಂತೆ ಅವು ಆಕೆಯನ್ನು ಮುಚ್ಚಿವೆ. ಡೆಲ್ಲಾ ಕಾತರದಿಂದ ಅವಸರವಸರವಾಗಿ ಮೊದಲಿನಂತೆ ತುರುಬು ಕಟ್ಟಿಕೊಂಡಳು. ಕಣ್ಣಿನಿಂದ ನೀರ ಹನಿಯೊಂದು ಕೆನ್ನೆಯನ್ನು ಬಳಸಿ ಇಳಿದು ಹೋಯಿತು.ಮನದ ವೇದನೆಯ ಕುರುಹು ಅದಾಗಿತ್ತು. ಸ್ವಲ್ಪ ಸಮಯ ತಟಸ್ಥವಾಗಿ ನಿಂತುಕೊಂಡು ಸಾವರಿಸಿಕೊಂಡು ತನ್ನ ಹಳೇಯ ಕಂದು ಬಣ್ಣದ ಕೋಟ್ ಅನ್ನು ಮತ್ತು ಕಂದು ಬಣ್ಣದ ಟೋಪಿಯನ್ನು ಧರಿಸಿ ಅವಸರವಸರವಾಗಿ ಹೊರಬಾಗಿಲನ್ನು ಬಳಸಿ ರಸ್ತೆಗೆ ಇಳಿದಳು.ಅವಳ ಕಣ್ಣುಗಳ ಹೊಳಪು ಕಡಿಮೆಯೇನೂ ಆಗಿರಲಿಲ್ಲ.

ಡೆಲ್ಲಾ , ” ಮಿಸೆಸ್. ಸೋಪ್ರೊನಿ ಕೇಶ ವಿನ್ಯಾಸ ಅಂಗಡಿ ” ಎಂಬ ಅಕ್ಷರಗಳನ್ನು ಟಂಕಿಸಿದ್ದ ಹಲಗೆಯನ್ನು ಹೊತ್ತು ನಿಂತಿರುವ ಅಂಗಡಿಯೆದುರು ನಿಂತಳು.ಎರಡನೇ ಮಹಡಿಯಲ್ಲಿ ಅಂಗಡಿ ಇತ್ತು. ಬೇಗ ತಲುಪಲು ಹವಣಿಸಿದ ಡೆಲ್ಲಾ , ಅವಸರವಸರವಾಗಿ ಪಾವಟಿಗೆಗಳನ್ನು ಹತ್ತಿ ಅಂಗಡಿ ತಲುಪುವ ಹೊತ್ತಿಗಾಗಲೇ ಎದುರುಸಿರು ಬಿಡತೊಡಗಿದ್ದಳು.ಮಿಸೆಸ್ ಸೋಪ್ರೊನಿ ಬೆಳ್ಳಗಿನ, ತುಸು ದಪ್ಪಗಿನ, ಮಧ್ಯ ವಯಸ್ಕ ಹೆಣ್ಣುಮಗಳು. ಡೆಲ್ಲಾಳ ಕಡೆಗೆ ತಣ್ಣಗಿನ ದೃಷ್ಟಿಯೊಂದನ್ನು ಬೀರಿದಳು.
” ನೀವು ನನ್ನ ತಲೆಗೂದಲನ್ನು ಕೊಳ್ಳುವಿರೋ?” (ಡೆಲ್ಲಾ).
” ಖಂಡಿತ ಕೊಳ್ಳುವಾ, ಎಲ್ಲಿ ನಿಮ್ಮ ಟೋಪಿಯನ್ನು ತೆಗೆಯಿರಿ ನೋಡೋಣ. ನಾನು ನಿಮ್ಮ ತಲೆಗೂದಲನ್ನು ಒಂದ್ಸಾರಿ ನೋಡ್ಬೇಕು ” ( ಸೋಪ್ರೊನಿ).
( ದಿಢೀರನೆ ಕಂದು ಬಣ್ಣದ ಜಲಪಾತವೊಂದು ಹರಿದಂತಾಯಿತು).
“ಇಪ್ಪತ್ತು ಡಾಲರ್ ” ( ಸೋಪ್ರೊನಿ, ಡೆಲ್ಲಾಳ ಕೂದಲುಗಳನ್ನು ಎತ್ತುತ್ತಾ )
” ಬೇಗ ಬೇಗ ಕೊಡಿ ಹಾಗಿದ್ರೆ ” ( ಡೆಲ್ಲಾ).

ಡೆಲ್ಲಾ ಮುಂದಿನ ಎರಡು ಗಂಟೆಗಳ ಕಾಲ ಜಿಮ್ ಗೆ ಉಡುಗೊರೆಯೊಂದನ್ನು ಕೊಳ್ಳಲು ಕಾಲಿಗೆ ಚಕ್ರ ಕಟ್ಟಿಕೊಂಡವಳಂತೆ ಒಂದು ಅಂಗಡಿಯಿಂದ ಮತ್ತೊಂದು ಅಂಗಡಿಗೆ ಪುರುಸೊತ್ತಿಲ್ಲದೆ ಓಡಬೇಕಿತ್ತು.ಕೊನೆಗೂ ಆಕೆ ಉಡುಗೊರೆಯೊಂದನ್ನು ಹರಸಾಹಸ ಮಾಡಿ ಹುಡುಕಿದಳು. ಅದು ಜಿಮ್ ಗೆ ಹೇಳಿ ಮಾಡಿಸಿದಂತಿತ್ತು.ಅದು ಅವನಿಗಾಗಿಯೇ ಕಾದು ಕುಳಿತಿದೆಯೇನೋ ಎಂಬಂತಿತ್ತು. ಇದ್ದಬದ್ದ ಅಂಗಡಿಗಳನ್ನು ಎಡತಾಕಿ ತಡಕಾಡಿ ಹುಡುಕಿದರೂ ಈಗ ದೊರೆತಿರುವ ಉಡುಗೊರೆಯನ್ನು ಮೀರಿಸುವಂತದ್ದಾವುದೂ ಇರಲಿಲ್ಲ. ಚಿನ್ನದಿಂದ ಮಾಡಿದ ಕೈ ಗಡಿಯಾರದ ಬೆಲ್ಟು ಅದಾಗಿತ್ತು. ಆಡಂಬರದ ಅಲಂಕಾರಿಕ ಕೆತ್ತನೆ ಇಲ್ಲದ ಸರಳವಾದ ಬೆಲ್ಟು ಅದಾಗಿತ್ತು. ಅದರ ಪರಿಶುದ್ಧತೆ ಅದರ ಮೌಲ್ಯವನ್ನು ಸಾರಿ ಹೇಳುತ್ತಿತ್ತು.ಒಳ್ಳೆಯವು, ಮಹತ್ತರವು ಎನಿಸುವ ವಸ್ತುಗಳೂ ಮಾತ್ರ ಹೀಗೆ ನಿರಾಡಂಬರವಾಗಿಯೂ, ನಿರಾಲಂಕರವಾಗಿಯೂ,ಪರಿಶುದ್ಧವಾಗಿಯೂ ಇರುತ್ತವೆ. ಡೆಲ್ಲಾ , ಬೆಲ್ಟನ್ನು ನೋಡಿದ ಕ್ಷಣವೇ ಅದಕ್ಕೆ ವಶೀಕರಿಸಲ್ಪಟ್ಟಿದ್ದಳು. ಆ ಬೆಲ್ಟು ಜಿಮ್ ಗಾಗಿಯೇ ಮಾಡಲ್ಪಟ್ಟಿದೆ, ಅದು ಆತನ ಹತ್ತಿರ ಇರಲೇಬೇಕು ಎಂದು ನಿರ್ಧರಿಸಿದಳು. ನಿರಾಡಂಬತೆ ಮತ್ತು ಪರಿಶುದ್ಧತೆ ವಿಷಯದಲ್ಲಿ ಬೆಲ್ಟು ಜಿಮ್ ನನ್ನು ಸರಿಗಟ್ಟಿತ್ತು.ಡೆಲ್ಲಾ ಇಪ್ಪತ್ತೊಂದು ಡಾಲರ್ ಹಣವನ್ನು ಪಾವತಿಸಿ ಬೆಲ್ಟು ಮತ್ತು ಎಂಬತ್ತೇಳು ಸೆಂಟ್ಸ್ ನೊಂದಿಗೆ ಅರ್ಧಮನಸ್ಕಳಾಗಿ ಅವಸರವಸರವಾಗಿ ಮನೆಯತ್ತ ಧಾವಿಸಿದಳು.

ಆ ಬೆಲ್ಟಿನೊಂದಿಗೆ ಗಡಿಯಾರವನ್ನು ಧರಿಸಿ ಜಿಮ್ ಸಮಯ ಪ್ರಜ್ಞೆಯನ್ನು ಕಲಿಯಲಿ ಮತ್ತು ಮೆರೆಯಲಿ ಎಂದು ಆಕೆಯ ಅಪೇಕ್ಷೆಯಾಗಿತ್ತು. ವಾಚು ಅಷ್ಟೊಂದು ಅಂದವಾಗಿದ್ದರೂ ಅದಕ್ಕೊಂದು ಅಂದವಾದ ಬೆಲ್ಟು ಇರಲಿಲ್ಲ. ಜಿಮ್ ಸುತ್ತಲು ಯಾರೂ ಇಲ್ಲದಿದ್ದ ಸಂದರ್ಭದಲ್ಲಿ ಮಾತ್ರ , ಜನರ ಕಣ್ತಪ್ಪಿಸಿ ವಾಚನ್ನು ಜೇಬಿನಿಂದ ಹೊರ ತೆಗೆದು ಸಮಯವನ್ನು ನೋಡಿಕೊಳ್ಳುತ್ತಿದ್ದ. ತನಗೆ ಬೇಕಾದ ಸಮಯದಲ್ಲಿ ನಿರ್ಜನತೆ ಇರದ ಕಾರಣ ಜಿಮ್ ಸಮಯವನ್ನು ಸರಿಯಾಗಿ ನೋಡಿಕೊಳ್ಳಲಾಗದೆ ಸಮಯ ಪ್ರಜ್ಞೆಯನ್ನು ಅನಿವಾರ್ಯವಾಗಿ ಉಪೇಕ್ಷಿಸುವಂತಾಗಿತ್ತು.

ಡೆಲ್ಲಾ ಮನೆಗೆ ಬರುವ ಹೊತ್ತಿಗಾಗಲೆಲ್ಲ ಮನಸ್ಸು ಸ್ವಲ್ಪ ಮಟ್ಟಿಗೆ ನಿಶ್ಚಿಂತವಾಗಿತ್ತು. ಉಡುಗೊರೆ ಕೊಂಡ ಖುಷಿ ಒಂದಾದರೆ, ಕೇಶವನ್ನು ಕಳೆದುಕೊಂಡ ಕ್ಲೇಶ ಒಂದು ಕಡೆ. ಅರ್ಧ ಮನಸ್ಕಳಾಗಿದ್ದ ಡೆಲ್ಲಾ ಅವ್ಯಕ್ತ ಸ್ಥಿತಿಯೊಂದನ್ನು ಅನುಭವಿಸುತ್ತಿದ್ದಳು.

ಆಕೆ ತನ್ನ ಈ ವಿಲಕ್ಷಣ ಸ್ಥಿತಿಯನ್ನು ಹೋಗಲಾಡಿಸುವ ವ್ಯರ್ಥ ಪ್ರಯತ್ನ ಮಾಡಿದಳು. ಅಗಾಧವಾದ ಪ್ರೀತಿ ಮತ್ತು ಹೃದಯ ವೈಶಾಲ್ಯತೆ ಎರಡೂ ಒಟ್ಟಿಗೆ ಸೇರಿದಾಗ ಆಳವಾದ ಮತ್ತು ಅಳಿಸಲಾರದ ಗುರುತುಗಳನ್ನು ಉಳಿಸಿಬಿಡುತ್ತವೆ.ಅದು ಸುಖವಾಗಿರಬಹುದು ಇಲ್ಲಾ ದುಃಖವಾಗಿರಬಹುದು. ಡೆಲ್ಲಾಳ ಸ್ಥಿತಿಯೂ ಅದೇ ಆಗಿತ್ತು. ನಲ್ವತ್ತು ನಿಮಿಷಗಳಲ್ಲಿ ಆಕೆ ತನ್ನ ತಲೆಗೂದಲನ್ನು ತಹಂಬದಿಗೆ ತಂದು ತನಗೆ ಒಪ್ಪುವ ವಿನ್ಯಾಸವನ್ನು ಮಾಡಿಕೊಂಡಳು. ಆ ಚಿಕ್ಕ ಕೂದಲುಗಳಲ್ಲಿ ಆಕೆ ಅಂದವಾದ ಸ್ಕೂಲು ಹುಡುಗನ ತರಹ ಕಾಣುತ್ತಿದ್ದಳು. ಕನ್ನಡಿ ಎದುರು ನಿಂತುಕೊಂಡು ಬಹಳ ಹೊತ್ತು ತನ್ನನ್ನು ತಾನು ನೋಡಿಕೊಂಡು, ” ಜಿಮ್ ನನ್ನನ್ನು ಕೊಲ್ಲದೆ ಇರಲಿ” ಎಂದು ಮನದಲ್ಲೇ ಗುಣುಗಿಕೊಂಡಳು. ” ಎರಡನೇ ಬಾರಿ ನೋಡುವಷ್ಟೊತ್ತಿಗೆ ಜಿಮ್ ಖಂಡಿತವಾಗಿ ದುಡ್ಡಿಗಾಗಿ ಹಾಡಿ ಕುಣಿಯುವ ಹುಡುಗಿ ತರ ಕಾಣಿಸುತ್ತಿದ್ದೀಯ ಅಂತ ಅಂದೇ ತೀರುವನು” ಎಂದು ಡೆಲ್ಲಾ ಮನದಲ್ಲಿ ಮುಂದೆ ನಡೆಯಬಹುದಾದ ಕಾಲ್ಪನಿಕ ಚಿತ್ರಣವನ್ನು ಕಲ್ಪಿಸಿಕೊಳ್ಳತೊಡಗಿದಳು. ಆ ಕಲ್ಪನೆಗಳೆಲ್ಲ ಆಕೆಯನ್ನು ಸ್ವಲ್ಪ ಸ್ವಲ್ಪವೇ ಎದೆಗುಂದಿಸಿ ವಿಷಣ್ಣತೆಗೆ ದೂಡಹತ್ತಿದ್ದವು.

ಸಂಜೆ ಏಳುಗಂಟೆ, ಜಿಮ್ ಗಾಗಿ ಅಡುಗೆ ತಯಾರಾಗಿದೆ.ಕ್ರಿಸ್ಮಸ್ ಇದ್ದುದರಿಂದ ಆತ ಕೂಡ ತಡಮಾಡಲಿಲ್ಲ. ಆತನಿಗಾಗಿ ಕಾಯುತ್ತ ಬಾಗಿಲ ಬಳಿ ಕೈಯಲ್ಲಿ ಚಿನ್ನದ ಬೆಲ್ಟನ್ನು ಹಿಡಿದು ನಿಂತಿದ್ದಾಳೆ ಆಕೆ. ಗೇಟಿನ ಚಿಲಕದ ಕರ್…ಕರ್….ಎಂಬ ಸಪ್ಪಳವನ್ನು ಕೇಳಿದೊಡನೆ , ಮುಂದೆ ನಡೆಯಬಹುದಾದ ಪ್ರಸಂಗವನ್ನು ಊಹಿಸಿ ಮುಜುಗರದಿಂದ ಬಿಳುಚಿಕೊಂಡಳು ಡೆಲ್ಲಾ. ಒಡನೆಯೇ ಮುಖ್ಯದ್ವಾರದ ಪಕ್ಕ ಅಡಗಿ ನಿಂತು, ” ದೇವರೇ, ಎಲ್ಲ ದಿನಗಳಂತೆ ಈ ದಿನವೂ ಸಾಂಗವಾಗಿ ನಡೆಯಲಪ್ಪ ಮತ್ತು ದಯವಿಟ್ಟು ಆತನ ಬಾಯಿಂದ ನೀನು ಈಗಲೂ ಮುದ್ದಾಗಿಯೇ ಕಾಣುತ್ತಿದ್ದೀಯಲ್ಲೆ ” ಅಂತ ಹೇಳಿಸು ತಂದೆ ಎಂದು ಮನದಲ್ಲಿ ದೇವರನ್ನು ಬೇಡಿಕೊಳ್ಳತೊಡಗಿದಳು.

ಬಾಗಿಲು ತೆರೆಯಿತು, ಜಿಮ್ ನ ಪ್ರವೇಶವಾಯಿತು. ತೀರಾ ಸಣಕಲಾಗಿದ್ದ ಆತನ ಮುಖ ನಗುವಿನ ಚಿಕ್ಕ ಗೆರೆಯನ್ನೂ ಹೊದ್ದಿರಲಿಲ್ಲ. ಅದು ಹೇಗೆ ನಕ್ಕಾನು ಪಾಪ?, ಆತನಿಗೆ ಈಗ ತಾನೇ ಇಪ್ಪತ್ತೇರಡು ವರ್ಷ ವಯಸ್ಸು. ವಯಸ್ಸಲ್ಲದ ವಯಸ್ಸಿನಲ್ಲಿ ತನ್ನನ್ನು ಮತ್ತು ತನ್ನನ್ನು ನಂಬಿ ಬಂದ ಮಡದಿ ಡೆಲ್ಲಾಳನ್ನು ಸಾಕಬೇಕು. ಅದಕ್ಕಾಗಿ ಹೊತ್ತುಗೊತ್ತಿಲ್ಲದೆ ನಿದ್ರೆ, ಅಹಾರದ ಕಬರು ಇಲ್ಲದೆ ದುಡಿಯಬೇಕು.ಆರ್ಥಿಕ ದುಸ್ಥಿತಿಯಲ್ಲಿ ಬೆಂದು ಬಳಲಿದ ದೇಹ ಅದು. ಇಂತಹ ಸ್ಥಿತಿಯಲ್ಲಿ ಅತನ ಮೊಗ ನಗುವನ್ನು ಹೇಗೆ ತಾನೆ ಹೊದ್ದು ನಿಂತೀತು?.ಚಳಿಯಿಂದ ರಕ್ಷಿಸಿಕೊಳ್ಳಲು ಹೊಸ ಕೋಟು ಮತ್ತು ಕೈಗವಸಗಳನ್ನು ಕೊಳ್ಳಲಾಗದೆ ಹರಿದ ಹಳೆಯದವುಗಳಲ್ಲೇ ಜೀವನವನ್ನು ನಿಭಾಯಿಸುತ್ತಿದ್ದಾನೆ.

ಜಿಮ್ ಬಾಗಿಲ ಬಳಿ ಹಕ್ಕಿಗಾಗಿ ಹೊಂಚುಹಾಕುವ ಬೇಟೆನಾಯಿಯಷ್ಟೇ ಮೌನವಾಗಿದ್ದಾನೆ. ಎಂದಿನಂತೆ ಡೆಲ್ಲಾ ಬಂದು ಅಪ್ಪಿ, ಮುತ್ತಿಕ್ಕಿ ಸ್ವಾಗತಿಸುವಳು ಎಂಬುದು ಆತನ ನಿರೀಕ್ಷೆ. ಯಾವಾಗ ಆತನ ನಿರೀಕ್ಷೆ ಹುಸಿಯಾಯಿತೋ, ಮನೆಯ ಎಲ್ಲ ದಿಕ್ಕುಗಳತ್ತ ಮೆಲ್ಲಗೆ ಕಣ್ಣುಹಾಯಿಸತೊಡಗಿದ. ಡೆಲ್ಲಾ ಆತನ ಕಣ್ಣಿಗೆ ಬಿದ್ದ ಮರುಕ್ಷಣ ಆತನ ನೋಟ ವಿಲಕ್ಷಣವಾಗಿ ಮಾರ್ಪಟ್ಟಿತು. ಆ ಅಸಹಜ ವಿಲಕ್ಷಣ ನೋಟದಲ್ಲಿ ಆನಂದ,ಆಕ್ರೋಶ,ಅಸಹನೆ,ನಿರ್ಲಿಪ್ತತೆ,ಆಶ್ಚರ್ಯ,ಅಣಕು,ಗಾಬರಿ ಇದಾವ ಭಾವಗಳೂ ಹೊಮ್ಮುತ್ತಿಲ್ಲ. ಆ ವಿಲಕ್ಷಣ ನೋಟ ಆಕೆಯ ಬುದ್ದಿಗೆ ನಿಲುಕದ ಭಾವಗಳನ್ನು ಹೊರಹಾಕುತ್ತಿತ್ತು. ಇದರಿಂದ ದಿಗಿಲುಗೊಂಡ ಡೆಲ್ಲಾ, ಆ ವಿಲಕ್ಷಣ ನೋಟವನ್ನು ಎದುರಿಸಲಾಗದೆ ಆತನನ್ನು ಸಮೀಪಿಸಿ ಗಟ್ಟಿಯಾಗಿ ಬಿಗಿದಪ್ಪಿ, ” ಜಿಮ್ ನನ್ನ ಮುದ್ದು ಬಂಗಾರ ” ಎನ್ನುತ್ತ ಬಿಕ್ಕಲು ಶುರುಮಾಡಿದಳು.
” ನನ್ನನ್ನು ಆ ರೀತಿ ನೋಡಬೇಡ, ನಾನು ನನ್ನ ಕೂದಲುಗಳನ್ನು ಕತ್ತರಿಸಿದ್ದೀನಿ. ಇಪ್ಪತ್ತು ಡಾಲರ್ ಗೆ ಮಾರಾಟ ಕೂಡಾ ಮಾಡಿದ್ದೀನಿ.ನಿನಗೆ ಉಡುಗೊರೆ ಕೊಡಲು ಆಗದಿರುವ ಕ್ರಿಸ್ಮಸ್ ಹಬ್ಬವನ್ನು ನಾನು ಕನಸಲ್ಲೂ ನೆನೆದುಕೊಳ್ಳಲಾಗಲಿಲ್ಲ. ಓ ನನ್ನ ಮುದ್ದು ಬಂಗಾರ ಇಲ್ಲಿ ಕೇಳು , ನನ್ನ ಕೂದಲು ಮತ್ತೆ ಬೇಗ ಬೆಳೆಯುತ್ತೆ , ಅವುಗಳ ಕುರಿತು ಚಿಂತೆ ಬೇಡಾ ಪ್ಲೀಸ್.ಇವತ್ತು ಕ್ರಿಸ್ಮಸ್ ಇದೆ, ಖುಷಿ ಖುಷಿಯಾಗಿರು ಡಿಯರ್. ನಿನಗೆ ಗೊತ್ತಾ ?, ನಿನಗೋಸ್ಕರ ನಾನು ಎಷ್ಟು ಸುಂದರವಾದ ಉಡುಗೊರೆ ತಂದಿದ್ದೀನಿ ಅಂತ?” ಎಂದು ಡೆಲ್ಲ ಸಕಾರಣಗಳನ್ನು ನೀಡಿ ಆತನನ್ನು ಸಹಜ ಸ್ಥಿತಿಗೆ ತರಲು ಪ್ರಯತ್ನಿಸಿದಳು.
” ಏನೂ…..?, ನೀನು ಕೂದಲುಗಳನ್ನು ಕತ್ತರಿಸಿದ್ದೀಯಾ….?”( ಜಿಮ್ ಗಂಟಲು ಕಟ್ಟಿ ಮೆಲ್ಲಗೆ ಉಸುರಿದ. ಆತನಿಗೆ ಏನೂ ನಡೆದಿದೆ ಎಂದು ಅರ್ಥೈಸಿಕೊಳ್ಳಲು ಕಷ್ಟವಾಗುತ್ತಿತ್ತು ).
” ಹೌದು ಕತ್ತರಿಸಿ ಮಾರಿದ್ದೀನಿ, ನೀನು ನನ್ನನ್ನು ಇಷ್ಟಪಡೋದಿಲ್ವಾ?, ಇಲ್ನೋಡು ಇದು ನಾನೇ ನಿನ್ನು ಮುದ್ದು ಡೆಲ್ಲಾ, ಕೂದಲಿಲ್ಲಾ ಅಷ್ಟೇ ” (ಆತಂಕದಿಂದ ಮತ್ತು ಅಭದ್ರತೆಯ ಭಾವದಿಂದ ಡೆಲ್ಲಾ ನುಡಿದಳು).
“ನೀನು ಜಡೆಯನ್ನು ಕತ್ತರಿಸಿದ್ದೀನಿ ಅಂದೆ ಅಲಾ?” ( ಜಿಮ್ ಸಾವರಿಸಿಕೊಂಡು, ಮೆಲ್ಲಗೆ ವಾಸ್ತವ ಸ್ಥಿತಿಗೆ ಬರುತ್ತಾ ಉಸುರಿದ. ಆಕೆಯ ಕೇಶ ರಾಶಿಯನ್ನು ಹುಡುಕುವವನಂತೆ ಕೋಣೆಯ ಎಲ್ಲ ದಿಕ್ಕುಗಳತ್ತ ದೃಷ್ಟಿ ಬೀರತೊಡಗಿದ).
” ನೀನು ಅವುಗಳನ್ನು ಹುಡುಕುವ ಅಗತ್ಯತೆ ಇಲ್ಲ ಜಿಮ್, ನಾನು ಅವುಗಳನ್ನು ಮಾರಿದ್ದೀನಿ. ನನ್ನ ಮೇಲೆ ದಯೆ ತೋರು.ನಾನು ಈ ಕೃತ್ಯ ಮಾಡಿದ್ದು ನಿನಗೋಸ್ಕರವೇ ಹೊರತು ಮತ್ತಾವೂದಕ್ಕೂ ಅಲ್ಲ. ನನ್ನ ಕೂದಲುಗಳ ಸಂಖ್ಯೆಯನ್ನು ಅಳೆಯಬಹುದೇ ಹೊರತು, ನಾನು ನಿನ್ನ ಮೇಲಿಟ್ಟಿರುವ ಪ್ರೀತಿಯನ್ನಲ್ಲ ಚಿನ್ನು, ಅರ್ಥ ಮಾಡ್ಕೋ. ಈಗ ಊಟಕ್ಕೆ ಹೋಗೋಣ ಬಾ”. ( ಡೆಲ್ಲಾ ಜಿಮ್ ನ ಮನೋಸ್ಥಿತಿಯನ್ನು ಅರ್ಥೈಸಿಕೊಂಡು ಕೂಡಲೇ ಜಾಗೃತಳಾಗಿ ನುಡಿದಳು. ಆಕೆಯ ಮನದಲ್ಲಿ ಇನ್ನೂ ಅಭದ್ರತೆಯ ಭಾವ ಹಾಗೇ ಇತ್ತು).
ಜಿಮ್ ಆಕೆಯ ನಡುವನ್ನು ಬಳಸಿ ಜೋರಾಗಿ ತಬ್ಬಿಕೊಂಡ. ಟಾಕು ಠೀಕಾದ ಕಾಗದದಲ್ಲಿ ಸುತ್ತಿದ್ದ ಪೊಟ್ಟಣವೊಂದನ್ನು ಕೋಟಿನ ಜೇಬಿನಿಂದ ಎಳೆದು ಮೇಜಿನ ಮೇಲೆ ಎಸೆದ. ಮುಂದುವರೆದು, ” ಡೆಲ್ಲಾ ನೀನು ನನ್ನನ್ನು ಇನ್ನಷ್ಟು ಅರ್ಥ ಮಾಡಿಕೊಳ್ಳಲು ಬಯಸ್ತೀನಿ.ಯಾವ ತರಹದ ಕೇಶವಿನ್ಯಾಸವೂ ನಾನು ನಿನ್ನನ್ನು ಕಡಿಮೆ ಪ್ರೀತಿಸುವಂತೆ ಮಾಡಲಾರವು. ಆದ್ರೆ, ನಿನಗೆ ಗೊತ್ತಾ? ನಾನು ಮನೆಯ ಒಳಬರುತ್ತಲೇ ನಿನ್ನ ಬಿಚ್ಚುಗೂದಲು ಹೇಗೆ ಅವ್ಯಕ್ತ ಭಾವಾಲೋಕಕ್ಕೆ ಕರೆದೊಯ್ಯುತ್ತಿದ್ದವು ಅಂತ?” ಎಂದು ಗದ್ಗದಿತನಾಗಿ ನುಡಿದ.

ಟೇಬಲ್ಲಿನ ಮೇಲೆ ಡೆಲ್ಲಾ ಬಹಳ ದಿನಗಳ ಹಿಂದೆ ಅಂಗಡಿಯೊಂದರಲ್ಲಿ ನೋಡಿ, ಬಹಳ ಇಷ್ಟಪಟ್ಟು, ಕೊಳ್ಳಲಾಗದೆ ಬಿಟ್ಟುಬಂದಿದ್ದ ಬಾಚಣಿಗೆಗಳಿದ್ದವು. ಎಂತಹ ಅದ್ಭುತ ಬಾಚಣಿಗೆಗಳವು!, ಕುಶಲಕರ್ಮಿಗಳ ಕೌಶಲ್ಯವನ್ನು ಹೊದ್ದು ನಿಂತಿರುವ ಅವು, ಶಿಲ್ಪಿ ಜಕಣಾಚಾರಿಯ ಕೈಯಲ್ಲಿ ಅರಳಿ ನಿಂತಂತಿದ್ದವು.ಆಕೆಯ ಕೇಶರಾಶಿಗೆ ಹೇಳಿ ಮಾಡಿಸಿದಂತಿದ್ದವು.ಡೆಲ್ಲಾಗೆ ಅವು ಬಹಳ ದುಬಾರಿ ಎಂದು ಗೊತ್ತಿತ್ತು.ಭವಿಷ್ಯದಲ್ಲಿ ಅವುಗಳಲ್ಲೊಂದನ್ನು ಕೊಳ್ಳಬಹುದು ಎಂಬ ಸಣ್ಣ ಆಶಾಕಿರಣವನ್ನೂ ಉಳಿಸಿಕೊಳ್ಳದೆ, ಮನಸಾರೆ ನೋಡಿ, ಆನಂದಿಸಿ ಬಿಟ್ಟು ಬಂದಿದ್ದಳು. ಈಗ ನೋಡಿದ್ರೆ ಅದೇ ಬಾಚಣಿಗೆಗಳೇ ಮೇಜಿನ ಮೇಲಿವೆ.ಆದರೆ ವಿಧಿ ಲಿಖಿತ ಎನ್ನುವಂತೆ ಕೇಶ ರಾಶಿಯೇ ಇಲ್ಲವಲ್ಲ.

ಡೆಲ್ಲಾ ಅವುಗಳನ್ನು ಎದೆಗೆ ಬಾಚಿ ತಬ್ಬಿಕೊಂಡು ಮುಖ ಮೇಲೆತ್ತಿ, ” ನನ್ನ ಕೂದಲು ಬೆಳೆಯುತ್ತೆ ಬಿಡು ಜಿಮ್” ಎಂದು ಉಮ್ಮಳಿಸಿ ಬಂದ ದುಃಖವನ್ನು ತಡೆಹಿಡಿಯಲು ಪ್ರಯತ್ನಿಸಿ ಸೋತಳು.

ಮೆಲ್ಲಗೆ ತನ್ನ ಕೈಯಲ್ಲಿದ್ದ ಚಿನ್ನದ ಬೆಲ್ಟನ್ನು ಆತನ ಎದುರು ಹಿಡಿದಳು. ಅದು ಆಕೆಯ ಅಗಾಧವಾದ ಪ್ರೀತಿ ಮತ್ತು ಹೃದಯ ವೈಶಾಲ್ಯತೆ ಎಂಬ ಮೂಸೆಯಲ್ಲಿ ಅದ್ದಿ ತೆಗೆಯಲ್ಪಟ್ಟು, ಮೊದಲಿಗಿಂತ ಹೆಚ್ಚು ನುಣುಪುಗೊಂಡು ಹೊಳೆಯುತ್ತಿದೆಯೇನೊ ಎಂದು ಅನಿಸುತ್ತಿತ್ತು.
” ಅದ್ಭುತವಾಗಿದೆಯಲ್ವಾ ಜಿಮ್? ” ( ಆತನ ಧನಾತ್ಮಕ ಪ್ರತಿಕ್ರಿಯೆ ನಿರೀಕ್ಷಿಸುತ್ತಾ, ಕಾತರದಿಂದ ನುಡಿದಳು). ಮುಂದುವರೆದು, ” ಎಲ್ಲ ಅಂಗಡಿಗಳನ್ನು ಎಡತಾಕಿ, ತಡಕಾಡಿ , ಹುಡುಕಿ ತಂದಿದ್ದೀನಿ. ನೀನು ಇನ್ಮೇಲೆ ನಿನ್ನ ಗಡಿಯಾರವನ್ನು ನೂರು ನೂರು ಬಾರಿ ನೋಡ್ಕೊಬೇಕು ಗೊತ್ತಾಯ್ತಾ?. ಎಲ್ಲಿ ನಿನ್ನ ವಾಚ್ ಕೊಡು ನೋಡೋಣ, ಇವೆರಡು ಒಟ್ಟುಗೂಡಿದರೆ ಹೇಗೆ ಕಾಣ್ತವೆ ಅಂತ?” ಎಂದು ನುಡಿದಳು.( ಡೆಲ್ಲಾ ತನ್ನ ಮನದಲ್ಲಿ ಇನ್ನೂ ಅಲ್ಪ ಸ್ವಲ್ಪ ಉಳಿದಿದ್ದ ಅಭದ್ರತೆಯ ಭಾವವನ್ನು ಸಂಪೂರ್ಣ ತೊಡೆದು ಹಾಕಲು, ತಾನು ಪಟ್ಟ ಪರಿಪಾಟಲನ್ನು ವಿವರಿಸಿದಳು. ಅದರಿಂದ ಜಿಮ್ ತನ್ನನ್ನು ಇನ್ನೂ ಹೆಚ್ಚು ಪ್ರೀತಿಸುವಂತಾಗಲಿ ಎಂಬ ಇಂಗಿತ ಆಕೆಯ ಮನದ್ದಾಗಿತ್ತು).

ಡೆಲ್ಲಾ ಆತನ ವಾಚ್ ಕೇಳಿದ ತಕ್ಷಣ, ಆತ ಮತ್ತೆ ವಿವರಿಸಲಾಗದ ಅಸಹಜ ಭಾವದೊಂದಿಗೆ ಸಾವಕಾಶವಾಗಿ ಗೋಡೆಗೆ ಒರಗಿ ಕೂತು, ಸಣ್ಣ ಕಿರುನಗೆಯೊಂದನ್ನು ಬೀರಿದ. ಮುಂದುವರೆದು, ” ಡೆಲ್ಲಾ, ಸಧ್ಯಕ್ಕೆ ನಮ್ಮ ಉಡುಗೊರೆಗಳನ್ನು ತೆಗೆದಿಡು. ಈಗಿಂದೀಗಲೇ ಉಪಯೋಗಿಸುವಷ್ಟು ಅವು ಚೆನ್ನಾಗಿವೆ. ಆದರೆ ವಿಧಿಲಿಖಿತ ಬೇರೆನೇ ಇದೆ, ನಾನು ಬಾಚಣಿಗೆಗಳನ್ನು ಕೊಳ್ಳುವ ಸಲುವಾಗಿ ವಾಚನ್ನು ಮಾರಿ ಆಗಿದೆ.ಈಗ ನಾವು ಊಟಕ್ಕೆ ಹೊರಡುವುದು ಒಳ್ಳೆಯದು” ಎಂದ.

ನಿಮಗೆಲ್ಲ ಗೊತ್ತಿರುವಂತೆ ” ಮಜಾಯ್” ಒಬ್ಬ ಅದ್ಭುತ ಬುದ್ಧಿವಂತ. ಯಾರಿಗೆ ಯಾವ ಉಡುಗೊರೆ ಕೊಡಬೇಕೆಂಬ ಆತನ ವಿವೇಚನೆ, ಎಂತವರನ್ನೂ ಬೆರಗುಗೊಳಿಸದಿರಲಾರದು.ಆಗ ತಾನೇ ಹುಟ್ಟಿದ ಕ್ರಿಶ್ಚಿಯನ್ ಹಸುಗೂಸಿಗೆ ಮೊದಲ ಉಡುಗೊರೆ ಅಂತ ಹೊರಡೋದು ಮಜಾಯ್ ನಿಂದಲೇ. ಆತನ ಉಡುಗೊರೆ ಆತನ ಚತುರತೆಯನ್ನು ಪ್ರತಿನಿಧಿಸುವಂತಿರುತ್ತವೆ. ಇಲ್ಲಿ ನಾನು ಹೇಳಿರುವ ಕಥೆಯ ಎರಡೂ ಹಸುಳೆಗಳು ನಿಸ್ಸಂಶಯವಾಗಿ ಪೆದ್ದರು. ಇಬ್ಬರೂ ತಮ್ಮ ಅತ್ಯಮೂಲ್ಯವಾದ ವಸ್ತುಗಳನ್ನು ಉಡುಗೊರೆಗಾಗಿ ಕಳೆದುಕೊಂಡಿರುವರು.ಆದರೆ ಒಂದು ಮಾತಂತೂ ಸತ್ಯ, ಎಲ್ಲ ಉಡುಗೊರೆಗಳಲ್ಲಿ ಇವರಿಬ್ಬರ ಉಡುಗೊರೆಗಳು ಶ್ರೇಷ್ಠತೆಯ ಸಾಲಿನಲ್ಲಿ ಅಗ್ರ ಕ್ರಮಾಂಕದಲ್ಲಿ ನಿಲ್ಲತ್ತವೆ. ಉಡುಗೊರೆ ಕೊಡುವ ಮಹಾನ್ ಬುದ್ಧಿವಂತ ಜನರ ಮಧ್ಯದಲ್ಲಿ, ಇವರಿಬ್ಬರು ಅಗ್ರಪಂಕ್ತಿಯಲ್ಲಿ ಮೊದಲು ನಿಲ್ಲುತ್ತಾರೆ.

– ಸತೀಶ್ ರೆಡ್ಡಿ ಹಳೇಮನಿ

Advertisements