Kanaka

ಪತ್ತೆದಾರಿ ಹಾಗೂ ರೋಮಾಂಚಕ ಶೈಲಿಯಲ್ಲಿ ವಿಜ್ಞಾನ, ಐತಿಹಾಸಿಕ ಘಟಣೆಗಳು ಹಾಗೂ ಆಧುನಿಕ ತಂತ್ರಜ್ಞಾನವನ್ನು ಒಟ್ಟಿಗೆ ಬಳಿಸಿಕೊಂಡು ಕಾದಂಬರಿ ರಚಿಸುವ ವಿರಳ ಕಥೆಗಾರರಲ್ಲಿ ಗಣೇಶಯ್ಯನವರು ಒಬ್ಬರು. ಟೈಮ್-ಪಾಸ್ ಓದಿಗೆ ಸೀಮಿತವಾಗಿದ್ದ ಕನ್ನಡದ ಪತ್ತೆದಾರಿ ಶೈಲಿಗೆ ಒಂದು ಹೊಸ ರೂಪ ಕೊಟ್ಟವರು ಇವರು. ಇಂಗ್ಲೀಷ್’ನಲ್ಲಿ ಪತ್ತೆದಾರಿ ಹಾಗೂ ರೋಮಾಂಚಕ ಶೈಲಿಯಲ್ಲಿ ಕಾದಂಬರಿ ರಚಿಸುವವರು ಅದಕ್ಕಾಗಿ ಸುಮಾರು 5-6 ವರ್ಷ ತಯಾರಿ ನಡೆಸುತ್ತಾರಂತೆ ಕನ್ನಡದಲ್ಲಿ ಅದು ಕಾಣಸಿಗುವುದು ತುಂಬಾ ಅಪರೂಪ. ಕೆಲವೊಂದು ಗಂಬೀರವಾದ ವಿಷಯ ಹೊಂದಿರುವ ಕಾದಂಬರಿಗಳನ್ನು ಯಾವುದೇ ತಯಾರಿಯಿಲ್ಲದೆ ಅವಸರವಾಗಿ ರಚಿಸಿಬಿಡುಗಡೆಯಾದ ಕೆಲವು ದಿನಗಳಲ್ಲಿಯೇ ಆ ಕೃತಿ ಅಪ್ರಸ್ಥುತವಾಗುವ ಈ ಕಾಲದಲ್ಲಿ (ಬಹುಷಃ ಎಲ್ಲಾ ಕಾಲದಲ್ಲಿ) ಪತ್ತೆದಾರಿ ಹಾಗೂ ರೋಮಾಂಚಕ ಶೈಲಿಯಲ್ಲಿ ಕಾದಂಬರಿ ಹಾಗೂ ಕಥೆಗಳನ್ನು ಬರೆದು ಗಂಭೀರವಾಗಿ ಓದುವಂತೆ ಮಾಡುವುದು ಕನ್ನಡದ ಮಟ್ಟಿಗಂತೂ ಶ್ರೇಷ್ಟವಾದ ಕೆಲಸವೇ. ಪತ್ತೆದಾರಿ ಶೈಲಿಯಲ್ಲಿ ವಿಶೇಷವಾದ ಕಥಾ ವಸ್ತು, ವಿಷಯಗಳನ್ನು ಕೊಡುವಲ್ಲಿ ಮೇಲುಗೈ ಸಾದಿಸಿರುವ ಇಂಗ್ಲೀಷ್ ಸಾಹಿತ್ಯದ ಯುಗದಲ್ಲಿ ನಮ್ಮ ಭಾಷೆಯಲ್ಲೂ ಇಂಥಹ ಕೃತಿಗಳನ್ನು ರಚಿಸುವವರು ಇದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಂತೆ ಮಾಡುವ ಕಾದಂಬರಿಕಾರ ಡಾ.ಕೆ.ಎನ್.ಗಣೇಶಯ್ಯ.

ಕನಕ ಮುಸುಕು ಗಣೇಶಯ್ಯನವರ ಮೊದಲ ಕಾದಂಬರಿ. ಅವರದೇ ಶೈಲಿಯಂತೆ ಇತಿಹಾಸದಲ್ಲಿ ಅಡಗಿಕೂಡ ಕೆಲವೊಂದು ಸತ್ಯ(?)ಗಳನ್ನು ಹೊರತಗೆದು ವರ್ತಮಾನಕ್ಕೆ ಬೆಸೆದು ಕಲಾತ್ಮಕವಾಗಿ ತೋರಿಸುತ್ತಾ ಹೋಗುತ್ತದೆ. ಐತಿಹಾಸಿಕ ಜೈನ ಸಂಸ್ಕೃತಿ, ವಿಜಯ ನಗರ ಸಾಮ್ರಾಜ್ಯ, ಹೊಯ್ಸಳರ ರಾಜ ವಿಷ್ಣುವರ್ಧನ (ಬಿಟ್ಟಿದೇವ), ನಾಟ್ಯರಾಣಿ ಶಾಂತಲಾ, ದೇವಾಲಯ ಹಾಗೂ ಬಸದಿಗಳ ವೈಶಿಷ್ಟ್ಯತೆ ಎಲ್ಲವೂ ಕಣ್ಣಮುಂದೆ ತಂದು ನಿಲ್ಲಿಸುತ್ತಾರೆ ಲೇಖಕರು. ರೇಖಾಚಿತ್ರಗಳು, ಸಂಖ್ಯೆ ಸೂತ್ರಗಳು, ಶಾಸನಗಳು, ಇತಿಹಾಸದ ಪುರಾತನ ಅವಶೇಷಗಳ ಚಿತ್ರ, ಮಾಹಿತಿ ಆಕರ ಗ್ರಂಥಗಳು, ವೆಬ್’ಸೈಟ್ ವಿವರ ಇತ್ಯಾದಿಗಳನ್ನು ನೀಡಿ ಓದುಗರಿಗೆ ನಿಖರತೆಯನ್ನು ಹೆಚ್ಚಿಸಿ ಓದುಗರನ್ನು ಹೊಸ ಹುಡುಕಾಟಕ್ಕೆ ಹಚ್ಚುತ್ತಾರೆ. ಇತಿಹಾಸ ಸಂಶೋಧಕರು, ಜೈನ ಸಂಸ್ಕೃತಿ ರಕ್ಷಕರು ಹಾಗೂ ನಿಧಿಗಾಗಿ ಹುಡುಕಾಡುವ ಅಂತರಾಷ್ಟ್ರೀಯ ಕಳ್ಳತನದ ಜಾಲ ಹೀಗೆ ಈ ಮೂರು ಆಯಾಮಗಳಲ್ಲಿ ಈ ಕಾದಂಬರಿ ಸಾಗುತ್ತದೆ. ಗಣೇಶಯ್ಯನವರ ಕಾದಂಬರಿಗಳ ಒಂದು ವೈಶಿಷ್ಟ್ಯವೆಂದರೆ ಅಸಡ್ಡೆಯಿಂದ ನಿರ್ಲಕ್ಷಿಸಿದ ಶಿಲಾಸಾಕ್ಷಿಗಳು ಹಾಗೂ ಸಂಶೋಧಕರ ಬಗ್ಗೆ ಹೆಮ್ಮೆ ಮೂಡುವಂತೆ ಮಾಡುವ ಹಾಗೂ ಐತಿಹಾಸಿಕ ಘಟನೆಗಳ ಅದ್ಯಯನ ವರ್ತಮಾನಕ್ಕೆ ಎಷ್ಟು ಅವಶ್ಯಕ ಎನ್ನುವುದನ್ನು ಪರೋಕ್ಷವಾಗಿ ತೋರಿಸಿಕೊಡುತ್ತಾರೆ.
ನಾಗೇಶ ಹೆಗಡೆ ಅವರು ಹೇಳುವಂತೆ ಗಣೇಶಯ್ಯ ಅವರು ಕನ್ನಡಕ್ಕೆ ದಕ್ಕಿದ ಆಸ್ತಿ.

– ಶ್ರೀಶೈಲ ಮಗದುಮ್ಮ

Advertisements