ಕುಟ್ಟವಲಕ್ಕಿ – ಪ್ರಶಾಂತ್ ಅಡೂರ.
ಕೆಂಡಸಂಪಿಗೆಯಲ್ಲಿ ಬರುತ್ತಿದ್ದ ಮತ್ತು ಇನ್ನು ಕೆಲವು ವಿಜಯ ಕರ್ನಾಟಕ ದಲ್ಲಿ ಪ್ರಕಟಿತ ಬರಹಗಳ ಸಂಕಲನ.
ಉತ್ತರ ಕರ್ನಾಟಕ ಭಾಷೆ ನಮಗೆ ದಕ್ಷಿಣ ಕನ್ನಡದವರಿಗೆ ಸ್ವಲ್ಪ ಕಷ್ಟ. ಗಟ್ಟಿಯಾಗಿ ಓದಿದರೆ ಅದರ ಸ್ವಾದ ಇನ್ನೂ ಜಾಸ್ತಿ. ಇಡೀ ದಿನ ಪಟ್ಟಾಗಿ ಕೂತು ಓದಿದೆ.ಖುಷಿಪಟ್ಟೆ.
ಇಲ್ಲಿನ ಪ್ರಬಂಧಗಳ ಪಾತ್ರ ವರ್ಗ ಚಿಕ್ಕದು. ತಂದೆ,ತಾಯಿ,ಹೆಂಡತಿ ಮತ್ತು ನಿರೂಪಕ ಪ್ರಶಾಂತ.ನೇಪಥ್ಯದಲ್ಲಿ ಇಬ್ಬರು ಮಕ್ಕಳು. ಮಾಧ್ವ ಬ್ರಾಹ್ಮಣ ಕುಟುಂಬದ ಪರಿಸರ.
ಇವಿಷ್ಟು ಪೀಠಿಕೆ.
ಇಷ್ಟು ಮನಸಲ್ಲಿಟ್ಟುಕೊಂಡು ಪುಟ ತಿರುಗಿಸಿದರೆ…
ನಗುವಿನ ಮಾಲೆಪಟಾಕಿ ಶುರು. ಎಷ್ಟೂ ಅಂದರೆ ಮನೆಯಲ್ಲಿ ಹೆಂಡತಿ ಬಿಡಿ ,ಈಗೀಗ ಪದ ಉಚ್ಚರಿಸಲು ಕಲಿಯುತ್ತಿರುವ ಮಗಳೂ ನನ್ನ ನಗುವಿನ ನೋಡಿ ವಿಚಿತ್ರ ಪ್ರಾಣಿ ಯಂತೆ ನೋಡುವಷ್ಟು.
ಇಲ್ಲಿನ ಪ್ರಸಂಗಗಳೂ ಚಿಕ್ಕವೇ. ಕುಟುಂಬ ಪರಿಸರಕ್ಕೆ ಒಗ್ಗುವವು. ಮದುವೆ, ರೇಷನ್,ಮನೆ ನಿಭಾಯಿಸೋದು,ಪೂಜೆ,ಹೆಂಡತಿ ಹೊರಗಾಗುವುದು,ಸಂತಾನ ಇತ್ಯಾದಿ. ಅವನ್ನೆಲ್ಲ ನಕ್ಕು ನಕ್ಕು ಹೊಟ್ಟೆ ಹುಣ್ಣಾಗುವಂತೆ ಬರೆದ ಅಡೂರರಿಗೊಂದು ಸಲಾಮ್..
ಸ್ಯಾಂಪಲ್ ಗಾಗಿ ಇದೊಂದು
ಪ್ರಸ್ಥದ ರಾತ್ರಿ
“ಸರಿ ಅಷ್ಟರಾಗ ನನ್ನ ಹೆಂಡತಿ ಅತ್ಯಾ ಬಂದು ಒಂದ ಎರಡ ಫೂಟಿನ ‘ಸಮೆ’ ಅಂದರ ‘ದೀಪ’ ಹಚ್ಚಿ ಇಟ್ಟ,ಒಂದ ಡಬ್ಬಿ ತುಪ್ಪ ಇಟ್ಟ,
‘ಪ್ರಶಾಂವರ,ರಾತ್ರಿ ಬೆಳಾತನಕ ಇದಕ್ಕ ತುಪ್ಪ ಹಾಕೋತಿರ್ರಿ, ದೀಪ ಒಟ್ಟ ಶಾಂತ ಆಗಬಾರದು’ ಅಂದ್ರು.
‘ಯೇ,ದೀಪಾ ಯಾಕರಿ ಅತ್ಯಾ? ನಮ್‌ ಮನ್ಯಾಗ ಜೀರೋ ಬಲ್ಬ್ ಅದ.ಹಂಗ ಏನರ ಕಾಣಸವಲ್ತು, ಬೆಳಕ ಬೇಕ ಅನಿಸಿದರ ಹಚ್ಚಗೋತೇವಿ’ ಅಂದೆ.
‘ದೀಪಾ ಹಚ್ಚೋದು ನಿಮಗ ಕಾಣಿಸಲಿಕ್ಕ ಅಲ್ರಿ,ಇವತ್ತ ರಾತ್ರಿ ನೀವಿಬ್ಬರು ಈ ದೀಪ ಕಾಯಬೇಕು,ಅದು ಪದ್ದತಿ. ಇದನ್ನ ಒಟ್ಟ ಆರಲಿಕ್ಕೆ ಬಿಡಬ್ಯಾಡರಿ.ಮ್ಯಾಲಿಂದ ಮ್ಯಾಲೆ ತುಪ್ಪಾ ಹಾಕೋತ ಇರ್ರಿ’ಅಂದ್ರು. ಅಯ್ಯೋ ದೇವರ ನಾ ಎಲ್ಲಂತ ಲಕ್ಷಾ ಕೊಡಲಿ?’ ನಂಬದ ಪ್ರಸ್ಥ ಮುಖ್ಯನೋ ಇಲ್ಲಾ ರಾತ್ರಿ ಬೆಳತನಕಾ ದೀಪಾ ಕಾಯೋದು ಮುಖ್ಯಾನೋ ಒಂದೂ ತಿಳೀಲಿಲ್ಲ”

ಓದಿ ನೋಡಿ.ನಕ್ಕು ಹಗುರಾಗಿ.

– ಪ್ರಶಾಂತ್ ಭಟ್

 

Advertisements