Chitra

ಸ್ನೇಹಿತರೇ, ಮೊನ್ನೆಯಷ್ಟೇ ನಾ ಹಾಕಿದ ನನ್ನ ಪುಸ್ತಕಗಳ ಕುರಿತ ಮಾಹಿತಿಗೆ ನಿಮ್ಮಿಂದ ಸಿಕ್ಕ ಪ್ರತಿಕ್ರಿಯೆ ಬಹಳ ದೊಡ್ಡಮಟ್ಟದ್ದು …ನಿಮ್ಮೆಲ್ಲರ ಪ್ರೀತಿಗೆ ನಾನು ಬಹಳ ಆಭಾರಿ.. ಪ್ರತಿ ಪುಸ್ತಕದ ಕುರಿತು ನೀವೇ ಪರಿಚಯದ ಮಾಹಿತಿ ಕೊಟ್ಟರೆ, ಇಲ್ಲಿಯ ಪುಸ್ತಕಪ್ರೇಮಿಗಳು ತಮ್ಮಾಸಕ್ತಿಯ ಪುಸ್ತಕ ಖರೀದಿಸಲು ಸಹಾಯವಾಗತ್ತೆ ಎಂಬ ಗುರುಪ್ರಸಾದರ ಕೋರಿಕೆಗೆ ನನಗಾದ ಸಂತಸ ಅಸದಳ…ನನ್ನದೂ ಹೀಗೊಂದು ಯೋಚನೆ ಇದ್ದರೂ ಇಲ್ಲಿಯ ನಿಯಮಗಳು ಹೊಸಬಳಾದ ನನಗೆ ತಿಳಿದಿರಲಿಲ್ಲ.. ಇಂಥ ಅವಕಾಶ ಕೊಟ್ಟಿದ್ದಕ್ಕೆ ಇಲ್ಲಿಯ ಅಡ್ಮಿನ್ ಬಳಗದ ಎಲ್ಲರಿಗೂ ಧನ್ಯವಾದಗಳು…

ನನ್ನ ಬಳಿ ಹಿಂದೆ ತಿಳಿಸಿದ ಪುಸ್ತಕಗಳೆಲ್ಲವೂ ಲಭ್ಯವಿಲ್ಲ. ನಾನೇ ಪ್ರಕಾಶನ ಮಾಡಿದ ” ಚಿತ್ತ ತೂಗಿದಾಗ” ಎಂಬ ಕವನ ಸಂಕಲನವಿದೆ…ಇದರಲ್ಲಿ ಓದುವ ಕವಿತೆಗಳಷ್ಟಿದ್ದು, ಹಾಡುವ ಭಾವಗೀತೆಗಳು ಸುಮಾರು 140 ರಷ್ಟಿದೆ…ಮೂರು ಗೀತೆಗಳು ಇಂದೂ ವಿಶ್ವನಾಥ್, ಕಾಳಮಂಜಿಯವರ ರಾಗಸಂಯೋಜನೆಯಲ್ಲಿ ಇಂಪಾದ ಹಾಡಾಗಿ ಅನೇಕ ಸಹೃದಯಕಿವಿಗಳಿಗೆ ತಲುಪಿವೆ…ಆದರೆ, ನನಗೆ ಮಾರ್ಕೆಟಿಂಗ್ ಗೊತ್ತಿಲ್ಲದ ಕಾರಣ ಇನ್ನೂ ನೂರು ಪುಸ್ತಕ ಗಳು ಉಳಿದುಹೋಗಿವೆ…ಪುಸ್ತಕವನ್ನು ಬಹಳ ಪ್ರೀತಿ, ಮುತುವರ್ಜಿಯಿಂದ ಮಾಡಿದ್ದೆ…ಕವಿ ಲಕ್ಷ್ಮಣರಾವ್ ಕೂಡ ಪುಸ್ತಕವನ್ನು ಪ್ರಶಂಸಿಸಿದರು. ಆದರೆ, ಕವಿತೆಗಳು ಎಲ್ಲ ಓದುಗರಿಗೂ ಹಿಡಿಸಲಾರದು..ಅದನ್ನು ಓದುವ ಬಳಗವೇ ಬೇರೆ…ಇದರ ಬೆಲೆ 90 ರೂ…

ಇನ್ನು ನನ್ನ ಪೌರಾಣಿಕ ಕಾದಂಬರಿ ” ಪ್ರೇಮ ತಪಸ್ವಿನಿ ಚಿತ್ರಾಂಗದೆ” .. ಬಹಳ ಸದಭಿರುಚಿಯ ಪುಸ್ತಕ… ಇದಕ್ಕೆ ಸಾಹಿತಿ ಅ.ರಾ.ಮಿತ್ರ ಅವರು ಮುನ್ನುಡಿ ಬರೆದಿದ್ದಾರೆ.. ಅವರು ಕೃತಿಯನ್ನು ಬಹಳ ಮೆಚ್ಚಿಕೊಂಡಿದ್ದಾರೆ..ಅದರ ಫೋಟೋಗಳನ್ನು ಇಲ್ಲಿ ಪ್ರಸ್ತುತ ಪಡಿಸಿರುವೆ..ಇದರ ಪ್ರಕಾಶಕರಾದ ರಾಮನಾಥ್ ಅವರೂ ಇಷ್ಟು ಸಮರ್ಥವಾಗಿ ಪೌರಾಣಿಕ ಕಾದಂಬರಿ ಬರೆಯೋದು ಸುಲಭವಲ್ಲ ಅಂದಿದ್ದಾರೆ..
ಇದರ ಕತೆ ಹೀಗಿದೆ.. ನೀವೆಲ್ಲರೂ ಅರ್ಜುನ, ಚಿತ್ರಾಂಗದೆ, ಬಬ್ರುವಾಹನರ ಕತೆ ಕೇಳಿರಬಹುದು…ಲಕ್ಷ್ಮೀಶನ ಜೈಮಿನಿ ಭಾರತ ದ ಕತೆಯಿಂದ ಪ್ರೇರಿತರಾಗಿ ರವೀಂದ್ರನಾಥ ಠಾಗೋರರು ” ಚಿತ್ರ” ಎನ್ನುವ ನಾಟಕ ಬರೆದರು…ಇದರಿಂದ ಪ್ರೇರಿತರಾದ ಕವಿ ಕುವೆಂಪು ಅವರು ” ಚಿತ್ರಾಂಗದ” ಎನ್ನುವ ಖಂಡಕಾವ್ಯ ಬರೆದರು.. ಇದು ನನಗೆ ಬಿ.ಎ. ಓದುವಾಗ ಪಠ್ಯಪುಸ್ತಕವಾಗಿತ್ತು…ಆಗಿನಿಂದ ನನ್ನಲ್ಲಿ ಚಿತ್ರಾಂಗದೆ ಒಳಗೇ ಅಂತರ್ಗತವಾಗಿದ್ದಳು…ನಾನು ಬರವಣಿಗೆ ಶುರುಮಾಡಿದ್ದು ಬಹಳ ತಡವಾಗಿ..ಆಗ, ಚಿತ್ರಾಂಗದೆ ನನ್ನ ಕಾಡಿದಳು..ಒಂದು ಸಾಮಾಜಿಕ ಕಾದಂಬರಿ ಬರೆದಿದ್ದೆ…ಬಹಳ ಪತ್ರಿಕೆಗಳಿಗೆ ಕತೆ, ಕವನ, ಲೇಖನ, ಪ್ರವಾಸಲೇಖನ ಬರೆಯುತ್ತಿದ್ದೆ..
ಈಗ ಚಿತ್ರಾಂಗದೆ ಬರೆವ ತುಡಿತ ಹೊತ್ತಿತು..ಅಯೋಮಯದಲ್ಲೇ ಶುರುಮಾಡಿದೆ…ಪೌರಾಣಿಕಕ್ಕೆ ಮೂಲಸಾಮಗ್ರಿ ಸಿದ್ಧವಿರುತ್ತದೆ.. ಆದರೂ, ಠಾಗೋರರು ತಮ್ಮ ಛಾಪು ಒತ್ತಿ ಒಂದಿಷ್ಟು ಬದಲಾವಣೆ ಮಾಡಿದರು.. ಕುವೆಂಪುರವರು ಎರಡು ಆಕರಗಳನ್ನು ಆಧಾರವಾಗಿಸಿಯೂ ತಮ್ಮದೇ ಸ್ವತಂತ್ರ ಕೃತಿಯಾಗಿಸುವ ನಿಟ್ಟಿನಲ್ಲಿ ಮಾರ್ಪಾಡು ಮಾಡಿ ಯಶಸ್ವಿಯಾದರು…ಇದಂತೂ ಅದ್ಭುತಕೃತಿ..ಆದರೆ ಇದು ಕಾವ್ಯರೂಪದಲ್ಲಿದ್ದು ಹಳಗನ್ನಡ ನಡುಗನ್ನಡ ಹೊಸಗನ್ನಡಗಳ ಮಿಶ್ರವಾಗಿರುವುದರಿಂದ ಇದನ್ನು ಗದ್ಯವಾಗಿಸಿದರೆ ಬಹುಜನರನ್ನು ತಲುಪುವುದೆಂಬ ಅಭೀಪ್ಸೆ ಕಾಡಿತು….
ಧೈರ್ಯ ಮಾಡಿದೆ…ಚಿತ್ರ ನಾಟಕ, ಚಿತ್ರಾಂಗದೆ ಕಾವ್ಯ, ಲಕ್ಷ್ಮೀಶಕವಿಯ ಭಾರತ , ಮತ್ತೆ ಸಣ್ಣಪುಟ್ಟ ಆಕರಗಳನ್ನೆಲ್ಲ ತಕ್ಕಮಟ್ಟಿಗೆ ಓದಿದೆ…ನನ್ನ ಕಥಾಹಂದರ ಸಿದ್ಧಮಾಡಿ, ಒಂದಿಷ್ಟು ಕಾಲ್ಪನಿಕ ಹೊಸತನ್ನು, ಬದಲಾವಣೆಗಳನ್ನು ಮಾಡಿ ರಕ್ತಮಾಂಸ ತುಂಬುವ ಶ್ರಮ ವಹಿಸಿದೆ…ಅನಿವಾರ್ಯಮೂಲಗಳನ್ನು ಇಟ್ಟುಕೊಂಡು ನನ್ನತನವನ್ನೂ ಧಾರಾಳವಾಗಿ ಬೆರೆಸಿ ಮೂಲಕ್ಕೆ ಚ್ಯುತಿ ಬಾರದಂತೆ ಪುಸ್ತಕ ಬರೆದೆ…ಇದಕ್ಕೆ ಸರಿ ಎನ್ನುವ ಮುದ್ರೆ ಒಬ್ಬ ಸಮರ್ಥ ಸಾಹಿತಿಯಿಂದ ಬರಬೇಕಲ್ಲ…!!! ಆಗ ಅ.ರಾ.ಮಿತ್ರರಿಗೆ ಕಳಿಸಿದೆ.. ಅವರು ಒಪ್ಪಿದ್ದು ಮಾತ್ರವಲ್ಲ, ತುಂಬಾ ಚೆನ್ನಾಗಿ ಬರೆದೆಯೆಂದು ಬೆನ್ನು ತಟ್ಟಿದರು…
ಮಣಿಪುರದ ರಾಜಕುವರಿ ಚಿತ್ರಾಂಗದೆ ಗಂಡಿನಂತೇ ಬೆಳೆದವಳು, ತೀರ್ಥಯಾತ್ರೆಗೆಂದು ಬಂದ ಅರ್ಜುನನನ್ನು ಕಂಡು ಸ್ರೀತ್ವಕ್ಕೆ ಬದಲಾದವಳು ಅವನನ್ನು ಕಂಡು ಮೋಹಿತಳಾಗುತ್ತಾಳೆ…ಅವನಲ್ಲಿ ಪ್ರೇಮನಿವೇದನೆ ಮಾಡಿ ತಿರಸ್ಕೃತಳಾಗುತ್ತಾಳೆ…ಕ್ಷಣಿಕವಾದರೂ ಸರಿ ಅವನನ್ನು ಹೊಂದಲೇಬೇಕೆಂದು ಮನ್ಮಥನನ್ನು ಕುರಿತು ತಪಗೈಯ್ಯುವುದು, ಅಲ್ಪಕಾಲದ ಅಸಮಾನರೂಪದ ವರ ಪಡೆಯುವುದು…ಮುಂದೆ ಅರ್ಜುನನೇ ಅವಳಿಗಾಗಿ ಹಾತೊರೆಯುವುದು…ಹೀಗೆ ಸಾಗುವ ಕತೆ ಬಹಳ ರಸವತ್ತಾಗಿದೆ…
ಸ್ನೇಹಿತರೇ, ಈ ಪುಸ್ತಕ ಎಲ್ಲರೂ ಓದಬಹುದಾದ ಕೃತಿ…ಇದು ” ಮಂಗಳ ವಾರಪತ್ರಿಕೆ” ಯ ಸಂಪಾದಕರು ಬಹಳ ಇಷ್ಟಪಟ್ಟಿದ್ದರಿಂದ ಅಲ್ಲಿ ಧಾರಾವಾಹಿಯಾಗಿ ಒಂದು ವರ್ಷ ಕಾಲ ಓದುಗರನ್ನು ರಂಜಿಸಿತು… ಇದರ ಬೆಲೆ 140 ರೂ.ಗಳು..
ಹೀಗೆ ಎರಡು ಕೃತಿಗಳು ಲಭ್ಯವಿದೆ…ನಿಜಕ್ಕೂ ಓದುವ ತುಡಿತದವರು ಬಹುಮಂದಿ ಇದ್ದರೆ ದಯವಿಟ್ಟು ತಿಳಿಸಿ..ನಾನು ಪ್ರಕಾಶಕರಿಂದ ತರಿಸಿ ನಿಮಗೆ ಅಂಚೆ ಮೂಲಕ ತಲುಪಿಸುವ ಏರ್ಪಾಡು ಮಾಡುತ್ತೇನೆ…ಒಳ್ಳೆಯ ಪುಸ್ತಕ ಒಳ್ಳೆಯ ಓದುಗರನ್ನು ತಲುಪಿದರೆ ಲೇಖಕರು ಬರೆದ ಸಾರ್ಥಕತೆ ಕಂಡುಕೊಳ್ಳುತ್ತಾರೆ…
ಇದಕ್ಕೆ ತಮ್ಮೆಲ್ಲರ ಪ್ರತಿಸ್ಪಂದನೆಯನ್ನು ಬಯಸುತ್ತೇನೆ.. ಕೊಂಡುಕೊಳ್ಳಿರೆಂಬ ಬಲವಂತ ಖಂಡಿತಾ ಇಲ್ಲ.. ಓದುವ ಆಸಕ್ತಿಯಿದ್ದಲ್ಲಿ ತೆಗೆದುಕೊಳ್ಳಬಹುದು..
ತಮ್ಮೆಲ್ಲರ ಪ್ರೀತಿ, ವಿಶ್ವಾಸ, ಅಕ್ಷರಪ್ರೀತಿಗೆ ಧನ್ಯವಾದಗಳು…

–  ಎಸ್.ಪಿ.ವಿಜಯಲಕ್ಷ್ಮಿ

Advertisements