bheemakaaya1959ರಲ್ಲಿ ಪ್ರಕಟವಾದ ಈ ಪುಸ್ತಕ ಭೈರಪ್ಪನವರ ಮೊತ್ತಮೊದಲ ಕಾದಂಬರಿಯೂ ಹೌದು. ಭೈರಪ್ಪನವರು ತಮ್ಮ ಹದಿನೆಂಟನೆಯ ವಯಸ್ಸಿನಲ್ಲಿ ಈ ಕಾದಂಬರಿಯನ್ನು ಬರೆದಿದ್ದಾರೆ. ಹೆಸರೇ ಹೇಳುವಂತೆ ಕಾದಂಬರಿಯಿರುವುದು ಒಬ್ಬ ಕುಸ್ತಿಪಟುವಿನ ಜೀವನದ ಬಗ್ಗೆ. ಕುಸ್ತಿಪಟುವಿನ ಜೀವನಕ್ರಮ, ಅವರ ಅಭ್ಯಾಸಗಳು, ಸಾಧನೆಗಳು, ಅದಕ್ಕಾಗಿ ಅವರು ಪಡುವ ಶ್ರಮ, ಅವರಿಗಿರಬೇಕಾದ ಏಕಾಗ್ರತೆ, ಅವರ ಸಹಪಟುಗಳು ಅವರನ್ನು ನೋಡುವ ರೀತಿ, ಕೊಡುವ ಪ್ರೋತ್ಸಾಹ, ಕುಸ್ತಿಪಟುವಿನ ಆಹಾರಕ್ರಮ, ಮನೋದಾರ್ಢ್ಯತೆ, ಗುರುವಿನ ಬಗೆಗಿನ ಅಗಾಧವಾದ ಭಕ್ತಿ, ಕಿರಿಯಪಟುಗಳ ಬಗೆಗಿನ ಪ್ರೀತಿ, ಪೈಲ್ವಾನನ ಗರಡುಮನೆಯ ಜೀವನ, ವೈಯಕ್ತಿಕ ಜೀವನಕ್ರಮ, ಎದುರಿಸಬೇಕಾದ ಸವಾಲುಗಳು, ಸೋಲುಗಳು, ಗೆಲುವುಗಳು ಇವೆಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ಬರೆದಿದ್ದಾರೆ ಲೇಖಕರು.

ಉಸ್ತಾದ್ ಮುನಿಸ್ವಾಮಪ್ಪನವರ ಗರಡಿಯಲ್ಲಿ ಸಾಧನೆಗಿಳಿಯುವ ಸುಬ್ಬು ಕಾದಂಬರಿಯ ಕಥಾನಾಯಕ. ಶಿಂಗಪ್ಪ, ರಾಮೋಜಿ, ರಾಚಯ್ಯ ಅದೇ ಗರಡಿಯ ಪಟುಗಳು. ಚಂದ್ರು ಸುಬ್ಬುವಿನ ಸಹಪಾಠಿ. ಅಂಥೋಣಿ ಸುಬ್ಬುವಿಗೆ ಬೆಂಗಳೂರಿನ ಗೆಳೆಯ. ಸುಬ್ಬು ಕಷ್ಟಪಟ್ಟು ಸಾಧನೆ ಮಾಡಿ ಮೈಸೂರು ಪ್ರಾಂತ್ಯದಲ್ಲೇ ಸೋಲಿಲ್ಲದ ಸರದಾರನಾಗಿರುತ್ತಾನೆ. ಅದೇ ಸಮಯದಲ್ಲಿ ರಾಜಮ್ಮ ಎಂಬ ಹೆಣ್ಣಿನ ಚಪಲಕ್ಕೆ ಬಿದ್ದು ತನ್ನ ಕುಸ್ತಿಬದುಕನ್ನೇ ಹಾಳುಮಾಡಿಕೊಳ್ಳುತ್ತಾನೆ. ಸುಬ್ಬುವಿನ ಗರಡಿಮನೆಯೆಡೆಗಿನ ವಿಮುಖತೆಯನ್ನು ಅರಿತ ಅವನ ಸ್ನೇಹಿತರು ಅವನನ್ನು ಮತ್ತೆ ಕುಸ್ತಿಯೆಡೆಗೆ ಕರೆತರುವ ಪ್ರಯತ್ನ ಮಾಡುತ್ತಾರೆ. ಆ ಪ್ರಯತ್ನದಲ್ಲಿ ಅವರು ಸಫಲರಾಗುತ್ತಾರಾ? ಅದನ್ನು ಓದಿಯೇ ಸವಿಯಬೇಕು. ತಾಯಿಯ ಒತ್ತಡಕ್ಕೆ ಸಿಲುಕಿ ವೇಶ್ಯೆಯಾಗಿದ್ದ ರಾಜಮ್ಮ, ತನ್ನನ್ನು ತಾನು ಬದಲಿಸಿಕೊಂಡು, ಸುಬ್ಬುವಿನ ಪಾಲಿಗೆ ಅಕ್ಷರಶಃ ದೇವತೆಯಾಗುತ್ತಾಳೆ. ಕಾದಂಬರಿಯ ಅತ್ಯದ್ಭುತ ಪಾತ್ರಗಳಲ್ಲೊಂದು ರಾಜಮ್ಮನದು.

ಕೋರಾಪಿಟ್, ಷಾಗಿರ್ದು, ಕಳಾವರ್ ಜಂಗ್ ಇನ್ನೂ ಮುಂತಾದ ಕುಸ್ತಿಗೆ ಸಂಬಂಧಿಸಿದ ಪದಗಳು ಕಾದಂಬರಿಯಲ್ಲಿ ಸಾಕಷ್ಟು ಬಳಕೆಯಾಗಿದೆ. ಭೈರಪ್ಪನವರು ಒಬ್ಬ ಪೈಲ್ವಾನನ ದೇಹದಲ್ಲಿ ಪರಕಾಯಪ್ರವೇಶ ಮಾಡಿ ಈ ಕಾದಂಬರಿ ಬರೆದಿರುವಂತಿದೆ. ನೀವೇನಾದರೂ ಗರಡಿಮನೆಗೆ ಅಥವಾ ವ್ಯಾಯಾಮಶಾಲೆಗೆ ಹೋಗಿ ಅಲ್ಲಿನ ಪರಿಸರದ ಅರಿವಿರುವವರಾದರಂತೂ ಈ ಕಾದಂಬರಿ ನಿಮಗೆ ಅತೀ ಆಪ್ಯಾಯಮಾನವೆನಿಸುತ್ತದೆ. ಮರೆಯಲಾರದ ಅನುಭೂತಿ ನೀಡುವ ಅದ್ಭುತವಾದ ಕಾದಂಬರಿಯಿದು. ನೀವೂ ಓದಿ. ನಮಸ್ಕಾರ.

-Rampura Raghothama

Advertisements