ಎರಡು ಭಾಗಗಳ ಪುಸ್ತಕ. ಇದರಲ್ಲಿನ ರವಿ ಕಾಣದ್ದು ಭಾಗದ ಹಲ ಲೇಖನಗಳು ಅದೇ ಹೆಸರಲ್ಲಿ ಪ್ರತ್ಯೇಕ ಪುಸ್ತಕವಾಗಿ ಲಭ್ಯವಿದೆ.
ಇದು 1997 ರ ಪುಸ್ತಕ. ಹಾಯ್ ಬೆಂಗಳೂರ್ ಆರಂಭದ ದಿನಗಳ ಕಾಲದ್ದು. ರವಿ ಬೆಳಗೆರೆ ಅರ್ಧ ಪತ್ರಕರ್ತನಂತೆ,ಅರ್ಧ ರೋಚಕವಾಗಿ ಬರೆಯುತ್ತಿದ್ದ ಕಾಲ(ಅವರ ಖಾಸ್ಬಾತ್ 96 ಕೂಡ ಓದಿದರೆ ನಿಮಗೆ ಗೊತ್ತಾಗ್ತದೆ) ಇದಾದ ಬಳಿಕ ಓದುಗನ ಸೆರೆ ಹಿಡಿವ ಶೈಲಿ ರವಿ ಬೆಳಗೆರೆಗೆ ರೂಢಿಸಿತು.ಆದರೆ ರವಿ ಬೆಳಗೆರೆ ಬೋರು ಹೊಡೆಸಲು ಶುರುವಾಗಿ ಸುಮಾರು ಸಮಯವಾಗತೊಡಗಿದ್ದರಿಂದ ಈ ಬರಹಗಳು ಬೆಂಗಳೂರಿನ ಬಗ್ಗೆ ಕೆಲ ಒಳ್ಳೆಯ ಒಳನೋಟಗಳಿವೆ ಅಂತ ಬಿಟ್ಟರೆ ಸಾಧಾರಣ ಬರಹಗಳು. ಹುಡುಗರಿಗೆ ಸಲಹೆಗಳು ಅಂತ ಪಟಾಯಿಸಲು ಕೊಂಚ ಸಲಹೆಗಳು,ಪ್ರೇಮಪತ್ರಗಳು,ಮೆಜೆಸ್ಟಿಕ್, ಲಾಲ್ಬಾಗ್ ಕುರಿತಾದ ಒಳ್ಳೆಯ ಲೇಖನಗಳು ಇವಿಷ್ಟು ಇಲ್ಲಿಯ ಹೂರಣ. ಇನ್ನೂ ಬೆಳಗೆರೆ ಅಭಿಮಾನಿಗಳಾಗಿ ಉಳಕೊಂಡವರಿಗೆ ಇದು ಚಿನ್ನ.
ಇನ್ನೊಂದು ಭಾಗ ರವಿ ಕಾಣದ್ದು. ಜೋಗಿ ಹಾಯ್ ಬೆಂಗಳೂರ್ ಮೊದಲು ಬರೆಯಲು ಶುರು ಮಾಡಿದ ಕಾಲದ್ದು. ಹಾಗಾಗಿ ಮೊದಲೆರಡು ಮಾತುಕತೆಯ ಧಾಟಿಯ ಬರಹಗಳು ಆಮೇಲಿನ ಕೆಲ ಅತ್ಯುತ್ತಮ ಬರವಣಿಗೆಗೆ ಸಾಕ್ಷಿಯಾಗಿವೆ. ಸ್ವಗತ,ಸಾಹಿತ್ಯ, ನಗರಜೀವನದ ಏಕಾಕಿತನ,ಬದುಕು,ಪ್ರೇಮ ವೈಫಲ್ಯ ಹೀಗೆ ಜೋಗಿ ಟ್ರೇಡ್ ಮಾರ್ಕ್ ಬರವಣಿಗೆಯ ಬೇರುಗಳು ಇಲ್ಲಿವೆ.
ಈ ಸಾಲು ಗಮನಿಸಿ. ‘ಹಣದ ವ್ಯಾಮೋಹ ಅಂತದ್ದು.ಒಂದು ಹಂತ ತಲುಪಿದ ನಂತರ,ಬರುವ ಹಣದ ಹೊಳೆಯೆಲ್ಲ ದಾಹ ಹೆಚ್ಚಿಸೀತು ಅಷ್ಟೇ. ಒಂದೇ ಸಲ ಎರಡು ಕಾರಿನಲ್ಲಿ ಹೋಗಲಾರದ, ಎರಡು ಟಿ.ವಿ.ನೋಡಲಾರದ ಮನುಷ್ಯ ಅಪಾರ ದಾಹದ, ಅಪಾರ ಹಸಿವಿನ ವಿಚಿತ್ರ ಪ್ರಾಣಿ. ಎಂತಹ ಅದ್ಬುತ ಸುಗ್ರಾಸ ಭೋಜನವನ್ನಾದರೂ, ತನ್ನ ಹಸಿವೆ ತೀರಿದ ನಂತರ ತಿನ್ನಲಾಗದ ಈ ದೇಹಕ್ಕೆ ಅದೆಂಥ ಹಂಬಲಗಳು.ದೇಹಕ್ಕೆ ಹಿಡಿಸದ್ದನ್ನು ಫ್ರಿಜ್ ನಲ್ಲಿ,ಬೀರುಗಳಲ್ಲಿ,ಬಾಟಲ್ ಗಳಲ್ಲಿ ಕೂಡಿಡುವ ಆಶೆ.’

ಇದು ಒಂದು ಕಾಲಕ್ಕೆ ಹುಚ್ಚೆಬ್ಬಿಸಿದ್ದ ಜೋಗಿ ಬರಹದ ಸ್ಯಾಂಪಲ್.
ಹಳೆಯ ಓಣಿಗಳಲ್ಲಿ ಮತ್ತೆ ನಡೆದಂತೆ.ನೆನಪುಗಳಿಗೆ ಮತ್ತೊಮ್ಮೆ ‘ರಿಫ್ರೆಶ್’ ಒತ್ತಿದಂತೆ.

-Prashanth Bhat
Advertisements