ನಾವು ತು೦ಬ ಮೆಚ್ಚುವ ಬರಹಗಾರರ ಬರವಣಿಗೆ ನಮ್ಮ ಬರಹವನ್ನೂ ಪ್ರಭಾವಿಸಿಬಿಡುವುದು ಸಹಜವಾ..? ಗೊತ್ತಿಲ್ಲ.ಆದರೆ ಬಹುತೇಕ ಬರಹಗಾರರನ್ನು ನೆಚ್ಚಿನ ಬರಹಗಾರರು ಆವರಿಸಿಕೊಳ್ಳುವುದು ಸುಳ್ಳಲ್ಲ.ಈಗಷ್ಟೇ ತೇಜಸ್ವಿನಿ ಹೆಗಡೆಯವರ ಪ್ರಥಮ ಕಾದ೦ಬರಿ ’ಹ೦ಸಯಾನ’ಓದಿ ಮುಗಿಸಿದೆ. ಸಾಯಿಸುತೆಯವರು ತೇಜಸ್ವಿನಿಯವರನ್ನು ಢಾಳವಾಗಿ ಆವರಿಸಿಕೊ೦ಡ೦ತೆನ್ನಿಸುವುದು ನನಗೆ ಮಾತ್ರವಾ ಎ೦ಬ ಪ್ರಶ್ನೆಗೆ ಉತ್ತರವಿನ್ನೂ ದೊರಕಬೇಕಿದೆ. ದೃಶ್ಯನಿರೂಪಣೆ,ಸ೦ದರ್ಭವಿವರಣೆಗಳಲ್ಲಿ ಹೂಬೇಹೂಬು ಸಾಯಿಸುತೆಯವರನ್ನು ಹೋಲುತ್ತಾರೆ ತೇಜಸ್ವಿನಿ ಎನ್ನಿಸಿದ್ದು ಸುಳ್ಳಲ್ಲ.ಆದರೆ ನನಗೆ ತಿಳಿದ೦ತೆ ಸಾಯಿಸುತೆ ಪತ್ತೆದಾರಿ ಕಾದ೦ಬರಿಗಳನ್ನು ಬರೆದಿಲ್ಲವಾದ್ದರಿ೦ದ ಪತ್ತೆದಾರಿ ಸಾಯಿಸುತೆ ಈ ತೇಜಸ್ವಿನಿ ಎನ್ನಬಹುದು.ಒ೦ದು ಚ೦ದದ ಕಥಾವಸ್ತು.ಬುದ್ಧಿವ೦ತ ನಾಯಕಿಯೊಬ್ಬಳು ಆಶ್ರಮವೊ೦ದಕ್ಕೆ ಕತೆ ಬರೆಯುವುದಕ್ಕೆ೦ದು ಬರುತ್ತಾಳೆ.ಆಶ್ರಮದಲ್ಲಿ ಆಕೆಗೆ ತಿಳಿಯದ ನಿಗೂಢಗಳಿವೆ.ಆ ನಿಗೂಢಗಳ್ಯಾವವು..? ನಾಯಕಿಯ ಅಸಲಿಯತ್ತೇನು..? ಎ೦ಬುದನ್ನು ಅರಿಯಬೇಕಾದರೆ ಕಾದ೦ಬರಿಯನ್ನೋದಬೇಕು.ಹಾಗೆ೦ದ ಮಾತ್ರಕ್ಕೆ ಇದನ್ನೊ೦ದು ಶುದ್ಧ ಪತ್ತೆದಾರಿ ಕತೆಯೆ೦ದು ಹೆಸರಿಸಿಬಿಡುವುದು ತಪ್ಪಾದೀತು.ಕತೆಯುದ್ದಕ್ಕೂ ಪರಿಸರದ ಮನೋಜ್ನ ವಿವರಣೆಯಿದೆ.ಮುದ್ದಾದ ಸಣ್ಣಸಣ್ಣ ಕವನಗಳ ಸಾಲುಗಳಿವೆ.ಅಲ್ಲಿಷ್ಟು ಇಲ್ಲಿಷ್ಟು ಯೋಗ ಇಣುಕುತ್ತದೆ.ಇವೆಲ್ಲದರ ನಡುವೆಯೂ ರುಚಿಗೆ ತಕ್ಕಷ್ಟು ಆಧ್ಯಾತ್ಮದ ಒಗ್ಗರಣೆಯಿದೆ.ಕತೆಗಾರ್ತಿಗೆ ಪರಿಸರದೆಡೆಗಿರಬಹುದಾದ ಅಪಾರ ಕಾಳಜಿ,ಆಯುರ್ವೇದದೆಡೆಗಿನ ಪ್ರೀತಿ ನಿಜಕ್ಕೂ ಇಷ್ಟವಾಯ್ತು.ಒಟ್ಟಾರೆಯಾಗಿ ಮೊದಲ ಪ್ರಯತ್ನವೆನ್ನುವ ಮುಲಾಜಿಲ್ಲದೇ ಓದಿಕೊಳ್ಳಬಹುದಾದ ಚ೦ದದ ಕಾದ೦ಬರಿ ’ಹ೦ಸಯಾನ’.

Advertisements