25289262_1751341318218533_4808092650988506567_n

ಬೇಕಾಗುವ ಪದಾರ್ಥಗಳು:
ಸಣ್ಣಗೆ ಹೆಚ್ಚಿಕೊಂಡ ಒಂದಷ್ಟು ಸನ್ನಿವೇಶಗಳು, ಉದ್ದಕ್ಕೆ ಹೋಳಾದ ಎರಡು ಸಂಸಾರಗಳು, ಹಾಸ್ಯ ಒಂದು ಕಪ್, ’ನಮ್ಮ ಊರಿನ ರಸಿಕರು’ ಎರಡೂವರೆ ಟೀಸ್ಪೂನ್, ’ಹಳ್ಳಿಯ ಹತ್ತು ಸಮಸ್ತರು’ ನಾಲ್ಕು ಟೀಸ್ಪೂನ್, ಮುನ್ನುಡಿಯೆಂಬ ಎಣ್ಣೆ ೩-೪ ಚಮಚೆಯಷ್ಟು, ’ಮರಳಿ ಮಣ್ಣಿಗೆ’ ಒಂದು ೨೦೦ ಗ್ರಾಂನಷ್ಟು, ನಿಂಜೂರರ ಮೇಧಾಶಕ್ತಿ ಸುಮಾರು ಎರಡು ಲೀಟರ್, ಕಥೆಯ ಚಾಣಾಕ್ಷತೆ ಅರ್ಧ ಲೀಟರು, ಕಥನಕ್ಕೆ ಬೇಕಾದ ಪಾತ್ರವರ್ಗ ೧೪-೧೫ ಚಿಟಿಕೆ, ಪರಊರ ವಿವರಣೆ ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ:
ಮೊದಲು ಕಾದಂಬರಿ ಬಾಣಲೆಗೆ ೨ ಚಮಚೆ ಮುನ್ನುಡಿಯೆಂಬ ಎಣ್ಣೆಗೆ ೧೪-೧೫ ಚಿಟಿಕೆ ಕಥನಕ್ಕೆ ಬೇಕಾದ ಪಾತ್ರವರ್ಗವನ್ನು ಹಾಕಿ ಬಂಗಾರದ ಬಣ್ಣಬರುವವರೆಗೆ ಹುರಿದು ಬೇರೆಯೇ ತೆಗೆದಿಡಿ. ನಂತರ ಕಾದಂಬರಿ ಬಾಣಲೆಗೆ ಇನ್ನುಳಿದ ೨ ಚಮಚೆ ಮುನ್ನುಡಿಯೆಂಬ ಎಣ್ಣೆಯನ್ನು ಹಾಕಿ, ಅದಕ್ಕೆ ಸೊಲ್ಪ ಸಣ್ಣಗೆ ಹೆಚ್ಚಿಕೊಂಡ ಸನ್ನಿವೇಶಗಳು ಮತ್ತು ಉದ್ದಕ್ಕೆ ಹೋಳಾದ ಎರಡು ಸಂಸಾರಗಳನ್ನು ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ’ನಮ್ಮ ಊರಿನ ರಸಿಕರು’ ಎರಡೂವರೆ ಟೀಸ್ಪೂನ್ ಮತ್ತು ನಾಲ್ಕು ಟೀಸ್ಪೂನ್ ’ಹಳ್ಳಿಯ ಹತ್ತು ಸಮಸ್ತರು’ ಅನ್ನು ಹಾಕಿ ಇನ್ನೊಂದು ಎರಡು ನಿಮಿಷ ಬಿಸಿಮಾಡಿ. ತರುವಾಯ, ೨೦೦ ಗ್ರಾಂನಷ್ಟು ’ಮರಳಿ ಮಣ್ಣಿಗೆ’ ಯನ್ನು ಸೇರಿಸಿ ಕದಡಿರಿ. ಐದು ನಿಮಿಶ ಬಿಟ್ಟು, ಒಂದು ಕಪ್ ಹಾಸ್ಯ, ಎರಡು ಲೀಟರ್ ನಿಂಜೂರರ ಮೇಧಾಶಕ್ತಿ, ಅರ್ಧ ಲೀಟರು ಕಥೆಯ ಚಾಣಾಕ್ಷತೆ, ರುಚಿಗೆ ತಕ್ಕಷ್ಟು ಪರಊರ ವಿವರಣೆ ಹಾಕಿ, ಸುಮಾರು ೧೦-೧೨ ನಿಮಿಷ ಈ ಮಿಶ್ರಣವನ್ನು ಒಲೆಯ ಮೇಲೆ ಕುದಿಯಲು ಬಿಡಿ. ಹೀಗೆ ತಯಾರಾದ ರಸಪಾಕಕ್ಕೆ, ನೀವು ಈಗಾಗಲೇ ಹುರಿದಿಟ್ಟಿರುವ ಕಥನಕ್ಕೆ ಬೇಕಾದ ಪಾತ್ರವರ್ಗವನ್ನು ಮಿಶ್ರಮಾಡಿ.
ಈಗ ನಿಮಗೆ ಏಕಾಂತದಲ್ಲಿ ಸವಿಯಲು ಅಥವಾ ನಿಮ್ಮ ಇತರೇ ಬಂಧು ಮಿತ್ರರೊಡಗೂಡಿ ಸವಿಯಲು ರುಚಿಕಟ್ಟಾದ ’ತೆಂಕನಿಡಿಯೂರಿನ ಕುಳವಾರಿಗಳು’ ರೆಡಿ !

ಇದರೊಂದಿಗೆ ನಿಮ್ಮಲ್ಲಿ ಕನ್ನಡ ಕರಾವಳಿ ಭೇಟಿಯ ನೆನಪುಗಳಿದ್ದರೆ ಅವನ್ನು ಸಣ್ಣಗೆ ಪುಡಿಮಾಡಿ ಈ ಪಾಕದ ಮೇಲೆ ಹರವಿದರೆ, ಸವಿಯಲು ಇನ್ನೂ ರುಚಿ.

[ವಿ. ಸೂ. : ಈ ಮೇಲೆ ಹೆಸರಿಸಿದ ಅನ್ಯ ಲೇಖಕರ ಕೃತಿಗಳು ಕೇವಲ ಉಪಮೆಗೆ ಬಳಸಿದ್ದೇ ವಿನಃ, ಈ ಸದರೀ ಕೃತಿಯ ಕರ್ತೃ ಆ ಅನ್ಯ ಕೃತಿಗಳ ಸರಕನ್ನು ದೋಚಿದ್ದಾರೆ ಎಂಬರ್ಥದಲ್ಲಿ ಅಲ್ಲ]

ಈ ಪುಸ್ತಕದ ಬಗ್ಗೆ ದಶದೆಸೆಗಳಿಂದ ವಿಮರ್ಶೆ ಕೇಳಿದ್ದೆ, ಕೆಲವೊಮ್ಮೆ ಓದಿದ್ದೆ. ಆದರೆ ಇದು ನಿಜವಾಗಿಯೂ ಚೆನ್ನಾಗಿದೆ ಅನಿಸಿದ್ದು ಓದಿದ ಮೇಲೆಯೇ !
ನಿರಾಸೆಗೊಳಿಸದ ಕಥನ ಕುತೂಹಲ ಇದರದ್ದು.

ಲೇಖಕ, ಕಥೆಯ ಹರಿವನ್ನು ಸರಾಗ ಗೊಳಿಸಲು ಇಲ್ಲವೇ ಅಜ್ಞಾತ ಕೊಂಡಿಗಳನ್ನು ವಿವರಿಸಲು ಕಥೆಯ ನಡುವಲ್ಲಿ ಬಂದು ನಿರೂಪಣೆ ನೀಡುವುದು ಎಲ್ಲರಿಗೆ ತಿಳಿದ ವಿಧಾನ.

ಆದರೆ ’ತೆಂಕನಿಡಿಯೂರಿಗೆ’ ಒಂದು ವಿಶೇಷ ಕೌತುಕವನ್ನು ಲೇಖಕರು ಪರಿಚಯಿಸಿದ್ದಾರೆ. ಇಲ್ಲಿ ನಿರೂಪಕನಿಗೆ ಕಾದಂಬರಿಯ ಪಾತ್ರಗಳೇ ಬಂದು ತಮ್ಮನ್ನು ಇನ್ನಷ್ಟು ಪರಿಚಯಿಸಿಕೊಂಡು ಕಥೆ ಮುಂದುವರಿಸಲು ಆಜ್ಞಾಪಿಸುತ್ತವೆ ! ನನ್ನ ತಿಳಿವಿಗೆ ನಿಲುಕಿದಂತೆ, ಕನ್ನಡದ ಮಟ್ಟಿಗೆ ಈ ಪ್ರಕಾರ ಹೊಸದು. ಅಥವಾ ಇದ್ದರೂ ನನ್ನ ಕಣ್ಣಿಗೆ ಇನ್ನೂ ಬಿದ್ದಿಲ್ಲ.

ಪರಶುರಾಮ ಕ್ಷೇತ್ರದವನಾಗಿ ನನಗೆ ಇಲ್ಲಿನ ಪಾತ್ರಗಳು ಎಷ್ಟು ಆಪ್ತವೆಂದರೆ: ತನಿಯ, ಚಿಕ್ಕು, ಬೊಗ್ರ, ಕಿಟ್ಟಪ್ಪು, ಶಂಭು, ಕೆ ಶಿವರಾಮ ರಾವ್, ದುಗ್ಗಪ್ಪ ಹೆಗ್ಡೆ, ದುಗ್ಗಪ್ಪ ಶೆಟ್ಟಿ, ತಟ್ಟಿ ಹೋಟ್ಲು, ನರಸಿಂಹ, ರುಕ್ಕು ಶೆಡ್ತಿ ಇತ್ಯಾದಿಯರೆಲ್ಲಾ ಮೊನ್ನೆ ಮೊನ್ನೆ ಊರ ಕಾರ್ತೀಕ ದೀಪಕ್ಕೆ ಹೋದಾಗ ಕಟ್ಟೆಪುಣಿಯಲ್ಲೋ, ಪೇಟೆಯಲ್ಲೋ ಸಿಕ್ಕಷ್ಟು. ಶೇಖರ, ಸುಂದರ, ಮಂಗೇಶ ಧಾಬಡೆ, ಚಂದು ಶೆಟ್ಟಿ, ಬಾಬಣ್ಣರೆಲ್ಲಾ ಯಾವುದೋ ಸ್ವಪ್ನಗಮ್ಯದಲ್ಲಿ ಸಿಕ್ಕ ಮುಖಗಳಂತೆ !

ಪುಸ್ತಕ ಕೈಗೆತ್ತಿಕೊಂಡು ಓದಲಾರಂಭಿಸುತ್ತಿದ್ದಂತೆ ಮನಸಿಗೆ ತಾಗುವ ಕಾದಂಬರಿಯ ಆತ್ಮದ ಹುಡಿ, ಮುಗಿಸಿ ಕೆಳಗಿಟ್ಟಾಗ ಕೊಡವಲೂ ಮನಸಾಗದಂತೆ ಕಾಡುತ್ತದೆ.

ಧೇನಿಸಿದಂತೆ ಓದಿಸಿಕೊಳ್ಳುತ್ತದೆ. ಅದು ಕೃತಿಯ ಹಿರಿಮೆ-ಗರಿಮೆ.

ಸಾಧ್ಯವಾದರೆ ಒಮ್ಮೆ ಓದಿ. ಮಕ್ಕೀಕಾಮಕ್ಕಿ ಪುಸ್ತಕಗಳಿಗಿಂತಾ ನೂರು ಪಾಲು ಮೇಲು. ’ಕ್ಲಾಸಿಕ್’ ಗಳ ಸಾಲಿಗೆ ಸೇರಿಸಬಹುದಾದ ಹೊತ್ತಗೆ.

ವಿಮರ್ಶಕರು: Sudheer Prabhu

Advertisements