24312921_1748055371880461_2872493482931586257_n

ಧೃವತಾರೆಗೆ ಮನಸಾರೆ – ಪ್ರೀತಿಯಿಂದ, ನಿಮ್ಮ ನಾಗ್ತಿ !
=============================================
ನಾಗತಿಹಳ್ಳಿ ಚಂದ್ರಶೇಖರ್ !
ಹೆಸರೊಂದು ಸೋಜಿಗ……

ನಾನು ಓದಿದ ಅವರ ಪ್ರಥಮ ಪುಸ್ತಕ: ಹೊಳೆದಂಡೆ (ನನ್ನ ಗ್ರಹಿಕೆಯ ಈಜಿಪ್ಟ್).
ಅದು ಆವರಿಸಿದ ರಭಸಕ್ಕೆ, ನೈಲ್ ನದಿಯ ಬಗೆಗಿನ, ಈಜಿಪ್ಟ್ ಬಗೆಗಿನ, ಆಸ್ವಾನ್ ಅಣೆಕಟ್ಟೆಯ ಬಗೆಗಿನ ಇತ್ತೀಚಿನ ಗೂಗಲ್ ಪೇಜುಗಳನ್ನು ತಿಕ್ಕಲು ಹತ್ತಿದವನಂತೆ ಬಗೆದು ಹಾಕಿದ್ದೆ ! ನಾಗತಿಹಳ್ಳಿಯವರ ಲೇಖನಿ ನಮ್ಮನ್ನು ಸುತ್ತಿಕೊಳ್ಳುವ ಪರಿ ಅಂಥಾದ್ದು.

ಅವರ ಹುಟ್ಟು ಬಾಲ್ಯಗಳ ಬಗ್ಗೆ ಬರೆದು ತಲೆತಿನ್ನಲಾರೆ. ತಪ್ಪಾಗಿ ಬರೆದರೆ ಮೂದಲಿಕೆಯಾದೀತು. ಅವರ ಬಗೆಗಿನ ಇನ್ನುಳಿದ ವಿವರಗಳು ಗೂಗಲಿಸಿದರೆ ಲಭ್ಯವಿವೆ.

ಅವರ ಅಕ್ಷರಗಳನ್ನು ಹೇಗೆ ವರ್ಣಿಸಲಿ:
ಅದೊಂದು ಜುಳು ಜುಳು ಹರಿವ ಸಲಿಲ….
ಕಾನನದ ಸಕಲ ಚರಾಚರಗಳನ್ನೂ ತನ್ನಿರವಲ್ಲಿ ಮೀಯಿಸುವ ಕಾಡಬೆಳದಿಂಗಳು………
ಹಸಿರುವನರಾಜಿ ತುಂಬಿದ ಭವ್ಯ ಕಣಿವೆಗೆ ಮುಖಮಾಡಿನಿಂತ ನಿಶ್ಯಬ್ಧ ನಾವು…….
ಮಳೆನಿಂತ ನಂತರದ ನೀರವದಲಿ ಎಲೆತುದಿಯ ಹನಿ ಬೀಗಿ ತೊಟ್ಟಿಕ್ಕುವ ಸದ್ದು…….
ಆಷಾಡದ ಮಲೆನಾಡಿನ ಸಂಜೆ ಮೌನ…….
ಮಾಘಮಾಸದ ಚಳಿಯ ಕಣಬಿಡದ ನಡುಕ……
ಬಯಲನಾಡಿನ ಉಸ್ಸೆಂದು ನಿಡುಸುಯ್ಯುವ ಉದ್ದಾನುದ್ದ ಧೂಳ ಹಾದಿ……
ವೈಶಾಖದ ಸುಳಿಗಾಳಿಗೆ ಹುಚ್ಚು ಪದವಾಗುವ ವ್ಯಸ್ತ ಭಾವ…..
ಮಗು ತೊದಲುವ ಪಡೆನುಡಿಗಳ ಸೋಜಿಗ…….
ದೂರದ ಮರದ ನೆಳಲಲಿ ಆಡುವ ಚಿಣ್ಣರ ಗುಸುಗುಸು…….
ಯುಗಾದಿಗೆ ಮೊದಲು ಬಿದ್ದ ಮಳೆಗೆ ಪಕ್ಕಾಗಿ ಮತ್ತೇರಿಸುವ ಮಣ್ಣ ಮೃದ್ಗಂಧ…..
ಕೋಲೇ ಬಸವ ಕತ್ತಾಡಿಸುವ ಶಹನಾಯಿಯ ಸುಮಧುರ ಆಲಾಪ…..
ಪೊದೆಹೂವು ತುಂಬಿ ನಳನಳಿಸುವ ಮರದ ಸುತ್ತೆಲ್ಲಾ ಹಾಯುವ ಭ್ರಮಗಳ ಕೇಕೆ……
ಚೈತ್ರದ ನಡುಮಧ್ಯಾನ್ಹದ ಕುದಿ ಬಿಸಿಲಿಗೆ ಹಾಯುವ ಹೂವ ಪರಿಮಳ……..

ಉಫ್………. ಸಾಕಿಷ್ಟು.

ಅವರ ’ಪ್ರೀತಿಯ ಹುಡುಗಿ’ ಗಿಂತ ಅವರ Travelogueಗಳು ಮನಕ್ಕೆ ಮುದನೀಡುವಂಥವು.

ಅವರ ಸ್ಥಳ ವಿವರಣೆಗಳನ್ನು ಓದಿಯೇ ಸವಿಯಬೇಕು. ಉಪಮೆ, ರೂಪಕಗಳ ನಿರೂಪಣೆಗೆ ಮನಸೋಲಬೇಕು.

ಈ postಗೆ ಕಾರಣವಾದ ’ದಕ್ಷಿಣ ಧೃವದಿಂ’ ಬಗ್ಗೆ ನಾನು ಹೇಳುವುದಕ್ಕಿಂತ ನೀವು ಓದಿನೋಡಿದರೇನೇ ಅದು ಸೊಗಸು. ಆಸ್ಟ್ರೇಲಿಯಾಗಿಂತ ಹೆಚ್ಚಾಗಿ ನ್ಯೂಜಿಲ್ಯಾಂಡನ್ನು ಪೇಜು ಪೇಜಾಗಿ ಬಿಚ್ಚಿಡುವ ನಾಗ್ತಿ, ಕೊನೆಯ ಪುಟಕ್ಕೆ ಬರುವ ಹೊತ್ತಿಗೆ ನಿಮ್ಮನ್ನು Kempegowda International Airportನ ಯಾವುದೋ ಅಜ್ಞಾತ ಟರ್ಮಿನಲ್ ಬಳಿ ತಂದಿಳಿಸಿದ ಭಾವ ಕಾಡುತ್ತದೆ !
ಇದು ಉತ್ಪ್ರೇಕ್ಷೆ ಅಲ್ಲವೇ ಅಲ್ಲ.
‘ಹೊಳೆದಂಡೆ’ಯೂ ಇದಕ್ಕೆ ಹೊರತಲ್ಲ. ಇದೇ ಭಾವಕ್ಕೆ ಪಕ್ಕಾದ ಕೃತಿ.

ಅವರ ಹಲಕೆಲವು ವೈಯಕ್ತಿಕ ನಿಲುವುಗಳು ನನಗಾಗದು. ಆದರೆ ಅವರ Travelogueಗಳೆಂದರೆ ನಿಂತಲ್ಲೇ ಕರಗಿಹೋಗುವಷ್ಟು ಹುಚ್ಚು.

ಪ್ರೀತಿಸೋದು ಅಂದ್ರೆ ಅದು unconditional ಅಲ್ಲವೇ…….. So ಅವರೆಲ್ಲಾ ಭಾನಗಡಿ, ಭಂಡತನಗಳನ್ನೂ ಮೀರಿ I like him a lot for his Travelogues !

ಈಗ ನೋಡಿ:
ಫ್ರಾನ್ಸ್’ನ ಕಟ್ಟಿಕೊಡುವುದಕ್ಕೆ – ’ಆಯನ’
ಅಮೇರಿಕಾದ ಬೆರಗಿಗೆ – ’ಅಮೇರಿಕಾ ! ಅಮೇರಿಕಾ !’
ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾದ ಅದ್ಭುತರಮ್ಯ ವಿವರಕ್ಕೆ – ’ದಕ್ಷಿಣ ಧೃವದಿಂ’
ಈಜಿಪ್ಟ್ ನ ನೈಲ್ ನದಿ ಪ್ರವಾಸದ ಬಗ್ಗೆ – ’ನನ್ನ ಗ್ರಹಿಕೆಯ ಈಜಿಪ್ಟ್’ (ಹೊಳೆದಂಡೆ)
ನೇಪಾಳದ landscape ಪರಿಚಯಕ್ಕೆ – ’ನನ್ನ ಗ್ರಹಿಕೆಯ ನೇಪಾಳ’
ಸಿಕ್ಕಿಂನಲ್ಲಿ ಸಿಕ್ಕಿದ ಅನುಭೂತಿಗೆ – ’ನನ್ನ ಗ್ರಹಿಕೆಯ ಸಿಕ್ಕಿಂ’
ಅಲಾಸ್ಕಾದ ಒಳಹೊರಗುಗಳಿಗೆ – ’ನನ್ನ ಗ್ರಹಿಕೆಯ ಅಲಾಸ್ಕಾ’

ಹೀಗೆ ಛಪ್ಪನ್ನಾರು ದೇಶಗಳ ಪರಿಚಯ ಅವರ ಲೇಖನಿಯಿಂದಾದದ್ದು ಒಂದು ಪೂರ್ವ ಸುಕೃತವೆನ್ನಬೇಕೇ ? ತಿಳಿಯದು…

ಹಲವರು ಪ್ರವಾಸ ಕಥನ ಬರೆಯುತ್ತಾರೆ ಅಥವಾ ಹಾಗೆ ಹವಣಿಸುತ್ತಾರೆ. ಎಲ್ಲೋ ಕೆಲವರವು ಇಷ್ಟವಾಗುತ್ತವೆ. ಇನ್ನುಳಿದವು ನೀರಿಳಿಯದ ಗಂಟಲ ಕಡುಬು !

ಹಾಗೆ ಇಷ್ಟವಾಗುವ ಕೆಲವರಲ್ಲಿ ಒಬ್ಬರು ಈ ಚಂದ್ರಶೇಖರರು !

ಅಂದಹಾಗೆ, ಇವತ್ತಿನ ವಿಶೇಷ ಇದಾವುದೂ ಅಲ್ಲ.
ಅವರು ತಮ್ಮ ’ದಕ್ಷಿಣ ಧೃವದಿಂ’ ಕೃತಿಯ ಪ್ರಥಮ ಮುದ್ರಣದ ಗೌರವ ಪ್ರತಿಯನ್ನು ಕನ್ನಡ ಚಿತ್ರರಂಗದ ಧೃವತಾರೆಗೆ ಗೌರವಪೂರ್ವಕವಾಗಿ ಕೊಟ್ಟ ಪುಸ್ತಕ ಈಗ ನನ್ನ ವಶದಲ್ಲಿರುವ ಬಗ್ಗೆ !

ಆತ ಹೀಗೆ ಬರೆಯುತ್ತಾರೆ “ಹಿರಿಯ ಕಲಾವಿದ ಡಾII ರಾಜ್ ಕುಮಾರ್ ಅವರಿಗೆ 77ನೇ ಜನ್ಮದಿನದ ನೆನಪಿಗೆ, ಪ್ರೀತಿಯಿಂದ”.

ಬೇರಾವ ಗುಣವಿಶೇಷಣಗಳನ್ನೂ ಸೇರಿಸಿಲ್ಲ. ಹೊಗಳಿ ಹೊನ್ನ ಶೂಲಕ್ಕೇರಿಸಿಯೂ ಇಲ್ಲ !

ರಾಜಣ್ಣನವರನ್ನು ’ಇಂದ್ರ-ಚಂದ್ರ’, ’ಏಕಮೇವಾದ್ವಿತೀಯ’ ಅಂತೆಲ್ಲಾ (of course I admire ರಾಜ್ಕುಮಾರ್. ಆದರೆ ಕಂಡಕಂಡಲ್ಲಿ ಹಾರತುರಾಯಿಗಳನ್ನೆಲ್ಲಾ ಸೇರಿಸಿ ಹುಯ್ದುಕೊಳ್ಳುವುದು ಸರಿಯಲ್ಲವೆಂದೇ ನನ್ನ ಅಭಿಪ್ರಾಯ) ಹೊತ್ತುಗೊತ್ತಿಲ್ಲದೇ ಹೊಗಳುವವರ ನಡುವೆ ಈ ಇಂಥಾ neutral ಮಾತುಗಳನ್ನು ಉಡಾಫೆ ಎನ್ನಲೋ ಇಲ್ಲಾ ಅಹಂ ಎನ್ನಲೋ ?

No way…….
ಈ ವಾಕ್ಯ ನಿಜವಾಗಿಯೂ ನನ್ನನ್ನು ಸೆಳೆಯಿತು. ಅನ್ಯರನ್ನು ಹೊಗಳಹೋಗಿ ನಾವು ಸಣ್ಣವರಾಗುವುದೇಕೆ ? ಇದನ್ನು ಸ್ವಾಭಿಮಾನ ಎನ್ನುವುದೇ ಸರಿ.
ಯಾವ ಆಡಂಬರಗಳಿಲ್ಲ. ಗಾಂಭೀರ್ಯದಿಂದ, ಪ್ರಶಾಂತವಾಗಿ ಹರಿವ ನದಿಯಂತೆ.
ಅಣ್ಣಾವ್ರ ಗೌರವವೇನೂ ಸೂರೆಯಾಗಲಿಲ್ಲ. ಬದಲಿಗೆ ಒಂದು decent and implied ’ಕೊಡು-ಕೊಳ್ಳು’ವ processಗೆ ಒಳಗಾಗಿ, ಮೇರುವಾಯಿತು.

ಅದೇನೋ ಗೊತ್ತಿಲ್ಲ: ಈ ಪುಸ್ತಕ ಓದಿದ ಮೆಲೆ, ಅದನ್ನು ಅಣ್ಣಾವ್ರಿಗೆ ನೀಡಿದ ನಾಗತಿಹಳ್ಳಿಯವರ ಬಗ್ಗೆಯೂ, ಅದನ್ನು ಪಡೆದ ಅಣ್ಣಾವ್ರ ಬಗ್ಗೆಯೂ ಅರೆಪಾವಿನಷ್ಟು ಗೌರವ ಹೆಚ್ಚಾಯಿತು.

 

ವಿಮರ್ಶಕರು: Sudheer Prabhu

Advertisements