36609588._UY2598_SS2598_

ಹೊಸ ಓದುಗರು ಯಾರಾದರು ಒಳ್ಳೆಯ ಪುಸ್ತಕ ಅಥವಾ ಲೇಖಕರ ಹೆಸರು ಕೇಳಿದರೆ ನನಗೆ ಯೋಚಿಸದೇ ನೆನಪಿಗೆ ಬರುವ ಹೆಸರು ವಸುಧೇಂದ್ರ ( Vasudhendra Chanda). ಕಾರಣ ಒಂದೇ ಸಾಲಿನಲ್ಲಿ ಹೇಳಬೇಕೆಂದರೆ ಅವರ ತಮ್ಮ ಪ್ರಬಂಧ ಹಾಗೂ ಕತೆಗಳಲ್ಲಿ ಗಟ್ಟಿಯಾದ ವಿಚಾರಗಳನ್ನು ಸುಲಭ ಭಾಷೆಯಲ್ಲಿ ಎಂತ ಮಟ್ಟದ ಓದುಗರಿಗೂ ಮನಮುಟ್ಟುವಂತೆ ವಿವರಿಸುತ್ತರೆ. (ಯಾವುದೇ ಹಿಡನ್ ಅಜೆಂಡಾ ಇಲ್ಲದ, ಸಾಮಾಜಿಕ ಸಮಸ್ಯೆಗಳಿಗೆ ತಮ್ಮದೇ ಬಣ್ಣಬಳಿದು ಅದಕ್ಕೆ ತಾವು ಅಂದುಕೊಂಡ ಪರಿಹಾರದಿಂದ ಮಾತ್ರ ಆ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ ಎಂಬುವುದನ್ನು ಇಟ್ಟುಕೊಳ್ಳದ, ಬಗೆಹರಿಯದ ಹಳಸಲು ವಿಚಾರಗಳ ಬಗ್ಗೆ ತೌಡು ಕುಟ್ಟದ ಸಮಕಾಲಿನ ವಿರಳ ಕತೆಗಾರರಲ್ಲಿ ವಸುಧೇಂದ್ರ ಪ್ರಮುಖರಾದವರು.) ಜಾತಿವಾದ, ಮಹಿಳಾವಾದ ಇವರಡನ್ನು ಬಿಟ್ಟು ಬೇರೆ ಸಮಸ್ಯೆಗಳು ಈ ಸಮಾಜದಲ್ಲಿ ಇಲ್ಲವೆನೋ ಎಂಬುದನ್ನು ಮನಗಂಡಂತಿರುವ ಈಗ ಬರುತ್ತಿರುವ ಕನ್ನಡ ಕಥಾ ಜಗತ್ತಿಗೆ ವಸುಧೇಂದ್ರ ಅವರ ಹೊಸ ಕಥಾಸಂಕನ “ವಿಷಮ ಭಿನ್ನ ರಾಶಿ” ಒಂದು ಉತ್ತಮ ಕೊಡುಗೆ. ಇದನ್ನು ಎರಡು ಭಾಗಗಳನ್ನಾಗಿ ಲೇಖಕರು ವಿಭಾಗಿಸಿದ್ದಾರೆ, ಅವೇ ಅಂಶ ಮತ್ತು ಛೇದ. ಅಂಶವು ನಾವು ನೋಡಿದ, ನೋಡುತ್ತಿರುವ ಸಮಾಜದ ವಿಶ್ಲೇಷಣೆಯಾದರೆ ಛೇದವು ನಾವು ನೋಡಿರದ, ಹೆಚ್ಚಿನ ಜನರು ನೋಡಲು ಇಷ್ಡಪಡದ ಜನತ್ತಿನ ಅನಾವರಣ.
ಅಂಶದಲ್ಲಿ ಐದು ಕತೆಗಳಿದ್ದು ಇದರಲ್ಲಿ ಅಮೃತ ಸೊಪ್ಪು ಕತೆ ಅಜ್ಜಿ ತನ್ನ ಮೊಮ್ಮಗನನ್ನು ತನ್ನ ಮಡಿಲಲ್ಲಿ ಕುಳಿಸಿಕೊಂಡು ಹೇಳುವ ಕತೆಯಂತೆ ಆಪ್ತವಾಗಿದೆ. ವಾಹಿನಿ ಹಾಗೂ ವಿಷಮ ಭಿನ್ನ ರಾಶಿ ಇವೆರಡು ಸಮಾಜದಲ್ಲಿ ನಿತ್ಯ ನೋಡುವ ಕೌಟುಂಬಿಕ ಜೀವನದ ಸಮಸ್ಯೆ, ಮಾನಸಿಕ ತೊಳಲಾಟ, ತುಮುಲಗಳನ್ನು ಹಿಡಿದಿಟ್ಟಿದೆ. ನಿಯಮ ಬಾಹಿರ ಕತೆ ಹಿಂದೊಮ್ಮೆ ಮಯೂರದಲ್ಲಿ ಓದಿದ್ದರೂ ಮತ್ತೊಮ್ಮೆ ಅಷ್ಟೇ ಹೊಸತನವನ್ನು ಕಾಯ್ದುಕೊಂಡಂತೆ ಓದಿಸಿತು. ಈ ಭಾಗದಲ್ಲಿ ಎಲ್ಲಕ್ಕಿಂತ ಇಷ್ಟವಾದ ಕತೆ ಎಂದರೆ ಡೆವಿಲ್ ಡಾಗ್, ಸಂಗೀತದ ರಾಗಗಳನ್ನು ಅರ್ಥಮಾಡಿಕೊಂಡು ಎಂತ ಕ್ಲಿಷ್ಟಕರವಾದ, ವಿಶೇಷವಾದ ರಾಗವಿದ್ದರೂ ಅದನ್ನು ಹಾಡುವವರು ಅಪಸ್ವರವನ್ನು ನುಡಿದಾಗ ಗುರುತಿಸುವ ಒಂದು ವಿಶೇಷ ನಾಯಿಯ ಬಗ್ಗೆ ಇರುವ ಈ ಕತೆ. ಅದನ್ನು ಶ್ರೀಮಂತನೊಬ್ಬ ಕೊಳ್ಳಲು ಪ್ರಯತ್ನಿಸಿದಾಗ ಓಡಿಹೊಗುತ್ತದೆ. ಆಗ “ಅಪಸ್ವರ ಎನ್ನುವುದು ಬರೀ ಸಂಗೀತದಲ್ಲಷ್ಟೇ ಇರಲ್ಲ, ಬದುಕಿನಲ್ಲೂ ಇರುತ್ತದೆ. ದುಡ್ಡುಕೊಟ್ಟು ವಿಧ್ವತ್ತನ್ನು ಕೊಳ್ಳುವ ನಿನ್ನ ಧಣಿ, ದುಡ್ಡಿಗೆ ವಿಧ್ವತ್ತನ್ನು ಮಾರುವ ನಿನ್ನ ಅಪ್ಪ, ಇಬ್ಬರ ವ್ಯಕ್ತಿತ್ವದಲ್ಲೂ ಅಪಸ್ವರ ಇದೆ ಎಂದು ಗುರುತಿಸಿ ಬಿಟ್ಟಿತು” ಎನ್ನುವ ಮಾತು ಬಂದಾಗ ಮನುಷ್ಯ ತನ್ನ ಸ್ವಾರ್ಥತೆ ಎದುರು ತಾನೇ ತಲೆತೆಗ್ಗಿಸುವ ಅನುಭವಾಗುತ್ತದೆ.
ಇನ್ನು ಕಥಾಸಂಕಲನದ ಇನ್ನೊಂದು ಭಾಗ ಛೇದ. ಇಲ್ಲಿ ಒಟ್ಟು ಮೂರು ಕತೆಗಳಿವೆ. ಸ್ವಚ್ಚಂದ ಕಾಮವನ್ನೇ ಸಾಹಿತ್ಯದಲ್ಲಿ ತಂದಾಗ (ಆಶ್ಲೀಲತೆ ಬಿಟ್ಟು) ಇರುಸು ಮುರುಸಾಗುವ, ಮುಕ್ತತೆಯಿಂದ ಚರ್ಚಿಸದ ಮಟ್ಟಿಗೆ ಇನ್ನೂ ಬೆಳೆಯದ ನಮ್ಮ ಸಮಾಜ ಸಲಿಂಗ ಕಾಮವನ್ನು ಅರಗಿಸಿಕೊಳ್ಳುವುದು ಕಷ್ಟವೇ ಸರಿ. ಆದರೆ ಸಾಹಿತ್ಯ ವಸ್ತುವಿಗೆ ಯಾವುದೇ ಮಿತಿಯಿಲ್ಲ. ಅದು ಎಲ್ಲವನ್ನು ತನ್ನ ತೆಕ್ಕೆಗೆ ತಗೆದುಕೊಂಡು ಅದನ್ನು ವಿಶ್ಲೇಷಿಸಿ, ವಿಮರ್ಶಿಸಿ, ಸಂಸ್ಕರಿಸಿ ಆಸ್ವಾದಿಸುವವರಿಗೆ ಒಗ್ಗುವಂತೆ ಮಾಡುವಂತದ್ದು. ಈ ಮಟ್ಟಿಗೆ ನೋಡುವುದಾದರೆ ಇಲ್ಲಿ ಲೇಖಕರು ವಸ್ತುವಿನ ಬಗ್ಗೆ ಇರುವ ಆಶಯ, ಅದರ ಆಯ್ಕೆ, ನಿರೂಪಣೆ ಈ ಮೂವರಲ್ಲಿ ಗೆದ್ದಿದ್ದಾರೆ. ಈ ಕಥೆಗಳನ್ನು ಓದುವಾಗ ಜಗತ್ತಿನ ಬೇರೆ ಸಮಸ್ಯೆಗಳಲ್ಲಿ ಸಲಿಂಗಿಗಳ ಸಮಸ್ಯೆ ಕೂಡ ಹೊರತಾಗಿಲ್ಲ. ಅದನ್ನು ಪೂರ್ವಗ್ರಹವಾಗಿ ನೋಡದೆ, ಸಾಮಾನ್ಯ ದೃಷ್ಟಿಯಿಂದ ನೋಡಿ ಅಲ್ಲೂ ಸಮಸ್ಯೆ ಇದೆ ಎಂದು ತೋರಿಸಿ ಅದನ್ನೂ ಬೆಳಕು ಚಲ್ಲುತ್ತಾರೆ. ಈ ಮೊದಲು ವಸುಧೇಂದ್ರ ಅವರು ತಮ್ಮ ಪ್ರಬಂಧ ಹಾಗೂ ಕತೆಗಳನ್ನು ಸಲಿಂಗ ಕಾಮದ ಬಗ್ಗೆ ಚರ್ಚಿಸಿದ್ದಾರೆ. ಹಾಗೂ ಅದರ ಬಗ್ಗೆ ಮೊಹನಸ್ವಾಮಿ ಎನ್ನುವ ಪುಸ್ತಕವನ್ನೇ ಬರೆದಿದ್ದಾರೆ. ಈ ಕತೆಗಳಲ್ಲಿ ಬರುವುದು ಕೂಡ ಮೋಹನ ಸ್ವಾಮಿಯೆ.
ಸಮಾಜದಲ್ಲಿ ಅಪಥ್ಯವಾಗುವ ವಿಷಯಗಳನ್ನು ಸಾಹಿತ್ಯದಲ್ಲಿ ತರುವುದು ತುಂಬಾ ಹಿಂದಿನಿಂದ ಬೆಳದುಬಂದುದಾಗಿದೆ. ಎಪ್ಪತ್ತನೇ ದಶಕದಲ್ಲಿ ಭೈರಪ್ಪನವರು ನೆಲೆ ಕಾದಂಬರಿಯನ್ನು ಬರೆದಾಗ ಅಲ್ಲಿ Living together ನ್ನು ತಂದಿದ್ದಾರೆ. ಸದ್ಯದ ಆದುನಿಕ ಸಮಾಜದಲ್ಲಿ ಅದು ವಿಶೇಷವೆಗೂ ಅನ್ನಿಸದು. ಆದರೆ ಎಪ್ಪತ್ತರ ದಶದಲ್ಲಿ ಭಾರತಿಯರು Living together ನೋಡುವುದಿರಲಿ ಅದರ ಕಲ್ಪನೆ ಕೂಡ ಭಾರತದಲ್ಲಿ ಇರಲಿಲ್ಲ. ನಂತರ ಅದೂ ಕೂಡ ಸಾಹಿತ್ಯದ ಹಾಗೂ ಸಮಾಜದ ಸಾಮಾನ್ಯ ವಿಷಯವಾಗಿಬಿಟ್ಟಿತು. ಹೀಗೆ ವಸುಧೇಂದ್ರ ಅವರು ಎಲ್ಲರೂ ಗುರುತಿಸದ, ಯಾರೂ ಗುರುತಿಸಲು ಬಯಸದ ಕಥಾವಸ್ತುವನ್ನು ಇಟ್ಟುಕೊಂಡು ಈ ಕತೆಗಳನ್ನು ಬರೆದಿದ್ದಾರೆ. ಮುಂದೆ ಇದರ ಬಗ್ಗೆ ಎಲ್ಲರೂ ಮುಕ್ತತೆಯಿಂದ ಚರ್ಚಿಸುವ ಕಾಲ ಬರಬಹುದೆನೋ?

ವಿಮರ್ಶಕರು: Shreeshail Magadum

Advertisements