kadadida kaniveಮಹಾಕವಿ ಕಾಳಿದಾಸ, ಕಲ್ಹಣ, ಬಿಲ್ಲಣ, ಅಭಿನವಗುಪ್ತ ಹೀಗೆಲ್ಲಾ ಪ್ರಾಚೀನ ಕವಿ, ವಿದ್ವಾಂಸರ ಹೆಸರಿನ ಜೊತೆ ಅಂಟಿಕೊಂಡಿರುವ ಕಾಶ್ಮೀರ ಭಾರತಮಾತೆಯ ಹೆಮ್ಮೆಯ ಮುಕುಟ. ಇಲ್ಲಿಯ ಬೆನ್ನೆಲುಬು ಅಸೀಮ ಹಿಮಾಲಯ ಪರ್ವತಶ್ರೇಣಿ.. ಇದು ಸೌಂದರ್ಯಾಸ್ವಾದಕರ ಸ್ವರ್ಗ, ವಿದೇಶೀಯರೂ ಮುಗಿಬಿದ್ದು ಬರುವ ಚೆಲುವು, ಸಾಹಸಕ್ರೀಡೆಗಳ ತಾಣ.. ಎಲ್ಲಕ್ಕಿನ್ನ ಮಿಗಿಲು, ಅಕ್ಷರ ದೇವಿ ಸರಸ್ವತಿಯ ವಾಸಸ್ಥಾನ…

ಆದರೆ, ದಶಕಗಳಿಂದ ಈ ಸ್ವರ್ಗ ನರಕಸದೃಶವಾಗಿ ನರಳುತ್ತಿದೆ.. ಹಸಿರು, ಹೂವು, ತೊರೆ ನದಿ ಜಲಪಾತಗಳ ಕಣಿವೆ ಬಂದೂಕು, ಗುಂಡುಗಳ ಅಟ್ಟಹಾಸದಲ್ಲಿ ಅಕ್ಷರಷಃ ರಕ್ತದೋಕುಳಿಯಲ್ಲಿ ಕದಡಿಹೋಗಿದೆ.. ಉಗ್ರವಾದಿಗಳ, ಕುರುಡು ಆಜಾ಼ದಿಯ ಘೋಷಣೆ, ವಿಕೃತಿಯಲ್ಲಿ ನಿತ್ಯ ಬೇಯುತ್ತಿದೆ. ಅಮಾಯಕರ ಬದುಕು ಅತಂತ್ರ, ಅನಿರ್ದಿಷ್ಟತೆಯಲ್ಲಿ ದಿಕ್ಕೆಟ್ಟುಹೋಗಿದೆ.. ೩೦೦೦ವರ್ಷಗಳ ಹಿಂದೆ ಇಲ್ಲಿ ಬಂದು ಕಣಿವೆಯ ಕಣಕಣದೊಡನೆ ಸುಂದರ ಬದುಕು ಕಟ್ಟಿಕೊಂಡು, ಕಾಶ್ಮೀರಕಣಿವೆಯನ್ನು ಶಾರದೆಯ ವಾಸಸ್ಥಳವೆನ್ನುವ ಹೆಸರನ್ನು ಸಾರ್ಥಕ ಮಾಡುವಂತೆ ಅಕ್ಷರಭಂಡಾರವಾಗಿಸಿದ ‘ ಕಾಶ್ಮೀರೀ ಪಂಡಿತರ” ಪಾಡಂತೂ ಹರಿದು ದಾರುಣವಾಗಿದೆ.. ಬಾಳಿ ಬದುಕಿದ ಬೇರನ್ನೇ ಕಿತ್ತು , ಅತಂತ್ರರಾಗಿ ನಿರಾಶ್ರಿತರಾಗುವ ಯಾತನೆಯಲ್ಲಿ ಸಮುದಾಯ ಬೆಂದು ಹೋಗಿದೆ..
ಇಂಥದ್ದೊಂದು ಸತ್ಯಕತೆಯ ಬೆಂಕಿಯಲ್ಲಿ ನಲುಗಿದ ಕಾಶ್ಮೀರಿ ಪಂಡಿತ ಸಮುದಾಯದ ರಾಹುಲ್ ಪಂಡಿತ್ ತಮ್ಮ ಆತ್ಮವೃತ್ತಾಂತದ ಮೂಲಕ ಈ ದಾರುಣ ವ್ಯಥೆಯನ್ನು ಕಾದಂಬರಿಯಾಗಿಸಿದ್ದಾರೆ ,Our Moon Has Blood Clots ಎನ್ನುವ ಇಂಗ್ಳೀಷ್ ಕೃತಿಯಲ್ಲಿ.. ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಬಿ.ಎಸ್. ಜಯಪ್ರಕಾಶ್ ನಾರಾಯಣ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಬಹಳ ಕಾಲ ಸಂಪಾದಕರಾಗಿದ್ದ ಜಯಪ್ರಕಾಶ್ ಮಲಾಲಾ ಕೃತಿಯನ್ನೊಳಗೊಂಡಂತೆ ಮಲ್ಯ, ಎಮ್.ಎಸ್. ಸುಬ್ಬಲಕ್ಷ್ಮಿ, ಸಾಫ್ಟ್ ವೇರ್ ನಿಂದ ಸಾಕ್ಷಾತ್ಕಾರದೆಡೆಗೆ ಹೀಗೆ ಬಹಳಷ್ಟು ಕೃತಿಗಳನ್ನು ಬಹಳ ಸಮರ್ಥವಾಗಿ ಕನ್ನಡಕ್ಕೆ ತಂದಿದ್ದಾರೆ. ಈ ಕೃತಿ ಅನುವಾದಕ್ಕೆ ಅವರು ಪ್ರಶಸ್ತಿಗಳನ್ನೂ ಪಡೆದಿದ್ದಾರೆ….

ಕಾಶ್ಮೀರ ಕಣಿವೆಯ ಉತ್ಪಾತಗಳು, ಅಟ್ಟಹಾಸಗಳು, ಮುಗ್ಧರ ಯಾತನೆ ಮೈಮೇಲೆ ಮುಳ್ಳೆಬ್ಬಿಸುವಂಥ ಘಟನೆಗಳ ಅನಾವರಣ ಪುಸ್ತಕ ಓದುತ್ತ ನಾವೂ ಕಣಿವೆಯ ದಳ್ಳುರಿಯಲ್ಲೇ ಇದ್ದಂತೆ ಭಾಸವಾಗುತ್ತದೆ ಇಲ್ಲಿಯ ಬರಹ.. ಕಾಶ್ಮೀರದಲ್ಲಿ ಆಳ್ವಿಕೆ ನಡೆಸಿದ ಕ್ರಿಸ್ತಪೂರ್ವ ರಾಜರ, ವಿದ್ವಂತ್ಪಂಡಿತರ ಒಂದು ಚಿಕ್ಕ ಚೊಕ್ಕ ಇತಿಹಾಸ ಕೂಡ ಇಲ್ಲಿರುವುದು ಈ ಪುಸ್ತಕದ ವೈಶಿಷ್ಟ್ಯ.. ಸುಂದರ ಕಣಿವೆಯನ್ನು ರಾಜಕೀಯ ದಾಳದಲ್ಲಿ ಮತ್ತಷ್ಟು ನಲುಗಿಸುತ್ತಿರುವ ರಾಜಕಾರಣದ ಕೊಳಕುತನಕ್ಕೆ ಖೇದವಾಗುತ್ತದೆ.. ಇತಿಹಾಸದ ದಾಖಲಾತಿ ಕೂಡ ಅವರ ಬೇಳೆ ಬೇಯಿಸಿಕೊಳ್ಳುವ ದಿಕ್ಕಿನಲ್ಲೇ ಸಾಗುವುದು ಈ ನೆಲದ ದುರಂತ..
ಈ ನಲುಗಿದ ಕಣಿವೆಯ ದುರಂತವನ್ನು ಯಾವುದೇ ಪೂರ್ವಾಗ್ರಹವಿಲ್ಲದೆ ಬರೆದಿರುವ ಮೂಲ ಲೇಖಕರು, ಅದನ್ನು ಅತ್ಯಂತ ಸಮರ್ಥವಾಗಿ ಕನ್ನಡೀಕರಣ ಮಾಡಿರುವ ಜಯಪ್ರಕಾಶರು ಅಭಿನಂದನೀಯರು, ಆತ್ಮಸಾಕ್ಷಿಗೆ ಬದ್ಧವಾದ, ಅಂತಃಕರಣ ಕಲಕುವ ಕೃತಿ, ಸೊಗಸಾದ ನಿರೂಪಣೆಯಿಂದ ಇದು ಗಮನಾರ್ಹವಾದ ಕೃತಿ ಎಂದು ಮುನ್ನುಡಿ ಬರೆದಿದ್ದಾರೆ ಖ್ಯಾತ ಕಾದಂಬರಿಕಾರ ಎಸ್.ಎಲ್.ಭೈರಪ್ಪ..

ನನಗೂ ಬಹಳ ಇಷ್ಟವಾದ ಗಂಭೀರ, ಪ್ರಸ್ತುತ, ಸಮರ್ಥ ಕೃತಿ…
ಇದರ ಪ್ರಕಾಶಕರು , *ವಸಂತ ಪ್ರಕಾಶನ*

ವಿಜಯಲಕ್ಷ್ಮಿಎಸ್.ಪಿ. (Vijaya Sp) 

Advertisements