ABಯಂಡಮೂರಿ ವೀರೇಂದ್ರನಾಥ್ ಅವರ ಆನಂದೋ ಬ್ರಹ್ಮ, ವಂಶಿಯವರಿಂದ ಅದ್ಭುತವಾಗಿ ಅನುವಾದಗೊಂಡಿದೆ.
ಈ ಕಾದಂಬರಿ ಸುಲಭವಾಗಿ ಓದಿಗೆ ದಕ್ಕುವಂತದ್ದಲ್ಲ, ಒಮ್ಮೆ ಹಿಡಿತ ಸಾಧಿಸಿದರೆ, ಕೊನೆಯವರೆಗೂ ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ.
ವಿಶ್ವ ಎಷ್ಟು ವೇಗದಿಂದ ಮುಂದುವರೆಯುತ್ತಿದೆ, ಎಲ್ಲವೂ ಕಂಪ್ಯೂಟರೈಸ್ ಆಗುತ್ತಾ ಮಾನವ ಯಾಂತ್ರಿಕವಾಗಿ, ಯಂತ್ರಗಳ ಮೇಲೇ ಆಸರೆಯಾಗಿದ್ದಾನೆ. ಆಧುನಿಕತೆಯಿಂದ ಪಡೆದುಕೊಳ್ಳುತ್ತಿರುವ ಸೌಲಭ್ಯಗಳು ಹೇಗೆ ಹೆಚ್ಚಾಗುತ್ತಿವೆಯೋ ಹಾಗೇ ಮಾನವೀಯ ಸಂಬಂಧಗಳನ್ನು ಕಳೆದುಕೊಳ್ಳುತ್ತಿದ್ದಾನೆ.
ಕಾಲ ಕಳೆದಂತೆ ಮಾನವ ಮಾನವನ ನಡುವಿನ ಸಂಬಂಧಗಳು ಸಡಿಲವಾಗುತ್ತಿವೆ, ಈಗಾಗಲೇ ವಿಭಕ್ತ ಕುಟುಂಬಗಳು ಹೆಚ್ಚಾಗುತ್ತಿವೆ, ಕೊನೆಗೆ ಗಂಡ ಹೆಂಡತಿ ಎಂಬ ಸಹಜೀವನ, ಅನುಬಂಧಗಳೂ ಇಲ್ಲದೇ ಎಲ್ಲವೂ ವ್ಯವಹಾರದ ಚೌಕಟ್ಟಿನಲ್ಲಿ ಸೇರುವುದರಲ್ಲಿ ಸಂಶಯವಿಲ್ಲ.
2044 ರ ವರ್ಷಗಳಲ್ಲಿ ಸಂಬಂಧಗಳು, ಮಾನವೀಯತೆ, ಪ್ರೀತಿ ಮೊದಲಾದ ಮಾನವ ಸಹಜ ಭಾವನೆಗಳು ಹೇಗಿರಬಹದು, ವಿಜ್ಞಾನ ಮುಂದುವರಿದು ಅದು ದಿನ ನಿತ್ಯದ ಜೀವನದ ಮೇಲೆ ಎಷ್ಟು ಪ್ರಭಾವ ಬೀರಿ, ಮನುಷ್ಯನನ್ನು ಜಡವಾಗಿಸಬಹುದು ಎಂಬ ಕಲ್ಪನೆಯನ್ನು ಅನನ್ಯವಾಗಿ ಚಿತ್ರಿಸಿದ್ದಾರೆ.
ಆದರೂ ತನ್ನ ಮನಸ್ಸಿನ ಮೂಲೆಯಲ್ಲಿ ಕುಳಿತು ಸಣ್ಣಗೆ ಉಸಿರಾಡುವ ಆಪ್ಯಾಯತೆಯನ್ನು ಸಾಹಿತ್ಯ ಓದುವುದರಿಂದಲೇ ತೃಪ್ತಿಪಡಿಸಿಕೊಳ್ಳುತ್ತಾನೆ ಎಂಬ ಸತ್ಯವನ್ನು ಚಂದವಾಗಿ ನಿರೂಪಿಸಿದ್ದಾರೆ. ಆಧುನಿಕ ತಂತ್ರಜ್ಞಾನ ಹೇಗೇ ಬೆಳೆಯಲಿ, ತಾನು ಪ್ರೀತಿಸುವ ಮತ್ತು ಪ್ರೀತಿಸಲ್ಪಡುವ ಭಾವದಿಂದ ಮುಕ್ತನಾಗಬಲ್ಲನೇ, ತನ್ನೊಳಗಿನ ಮೊದಲ ಪ್ರೀತಿಯ ನೆನಪು ಎಂದಾದರೂ ಮರೆಯಲು ಸಾಧ್ಯವೇ?
ಒಂದು ಹೆಣ್ಣು, ಒಬ್ಬ ವ್ಯಕ್ತಿಯಲ್ಲಿನ ಸುಪ್ತ ಚೇತನವನ್ನು ಹೊರಗೆಡವಿ, ಎಷ್ಟರ ಮಟ್ಟಿಗೆ ಸ್ಫೂರ್ತಿಯಾಗಬಲ್ಲಳು ಎಂಬುವುದು ಕಥಾವಸ್ತು.
ಕಾದಂಬರಿಯಲ್ಲಿ ಇಷ್ಟವಾದ ಕೆಲವು ಸಾಲುಗಳು…..

” ನೀನು ಗೆಲ್ಲಬೇಕು… ಒಂದೊಂದೇ ಗೋಲು ಹೊಡೆಯುತ್ತಾ, ಗೆಲ್ಲಬೇಕು. ಬದುಕು ಎಂಬ ಕಾಲು ಚೆಂಡಿನಾಟದಲ್ಲಿ.. ”

“ಇಡೀ ಪ್ರಪಂಚವೇ ನಿನಗೆದುರಾದಾಗ, ನಿನ್ನನ್ನು ಯಾರೂ ನಂಬದಾಗ ಈ ವಿಶಾಲ ಪ್ರಪಂಚದಲ್ಲಿ ಒಬ್ಬರೊಂದಿಗಾದರೂ ನಿನ್ನ ಅಳಲನ್ನು ವ್ಯಕ್ತಪಡಿಸಿಕೊಳ್ಳಬೇಕೆಂದೂ, ಕೊನೆಗೆ ಒಬ್ಬರಿಂದಲಾದರೂ ಸಾಂತ್ವನ ಪಡೆದು ನಿನ್ನ ನಿಜಾಯ್ತಿಯನ್ನು ನಿರೂಪಿಸಿಕೊಳ್ಳಬೇಕೆಂದು ನಿನಗಿದ್ದರೆ, ಆ ಒಬ್ಬ ನಂಬಿದರೆ ಸಾಕು, ಈ ಪ್ರಪಂಚ ನಂಬದಿದ್ದರೂ ಪರವಾಗಿಲ್ಲ ಎಂದು ನಿನಗನಿಸಿದರೆ, ಅವರು ಕೇಳಲಿ ಬಿಡಲೀ ಅಂಥವರು ನಿನ್ನ ಪಾಲಿಗಿದ್ದಾರೆಂದಾದರೆ..
ಅವರನ್ನು ನೀನು ಪ್ರೀತಿಸುತಿದ್ದೀ ಎಂದರ್ಥ. ”

” ಬರುವಾಗಲೇ ಹೋಗುವ ವಿಷಾದವನ್ನು ತರುತ್ತೀ. ಹೋಗುವಾಗ, ಹೊರಟುಹೊಗುತ್ತೇನೆಂಬ ವಿಷಾದವನ್ನು ಉಳಿಸುತ್ತೀ!, ಓ ಪ್ರೇಮಾ… ನೀನು ಅಷ್ಟೊಂದು ವಿಷಾದವೇ!! ”

ಇಂತಹ ಎಷ್ಟೊ ಸುಂದರ ಸಾಲುಗಳಿವೆ. ಯಂಡಮೂರಿಯವರ ಕಾದಂಬರಿಗಳಲ್ಲಿ, ಪ್ರೀತಿಗೆ ವಿಶೇಷ ಅರ್ಥವಿರುತ್ತದೆ. ಅವರ ಕಾದಂಬರಿಗಳನ್ನು ಓದುವುದೇ ಒಂದು ವಿಶಿಷ್ಟ ಅನುಭೂತಿ.
ಓದುವಂತೆ ಸಲಹೆ ನೀಡಿದ್ದ ಗುಂಪಿನ ಸದಸ್ಯರೊಬ್ಬರಿಗೆ ಧನ್ಯವಾದಗಳು. ಒಂದು ಉತ್ತಮ ಕಾದಂಬರಿ ಓದಿದರ ತೃಪ್ತಿ ಸಿಕ್ಕಿದೆ.

– ಕವಿತಾ ಭಟ್

Advertisements