MK1968ರಲ್ಲಿ ಪ್ರಕಟಗೊಂಡ ಈ ಕಾದಂಬರಿಗೆ ಒಂದು ಚೌಕಟ್ಟನ್ನು ಹುಡುಕಲು ಹೋದರೆ ನಾವು ವಿಫಲರಾಗುತ್ತೇವೆ. ಇಲ್ಲಿ ಏನಿಲ್ಲ? ಎಲ್ಲವೂ ಇದೆ. ಕಾರಂತರೇ ತಮ್ಮ ಮುನ್ನುಡಿಯಲ್ಲಿ ಹೇಳಿರುವಂತೆ, ಈ ಕಾದಂಬರಿಗೆ ಕಥಾನಾಯಕನಿಲ್ಲ, ನಾಯಕಿಯೂ ಇಲ್ಲ. ಮೂಕಜ್ಜಿಯೂ ಕೂಡ ಇಲ್ಲಿ ಕಥಾನಾಯಕಿಯಲ್ಲ. ಕಾಲಕ್ಕೆ ತಕ್ಕಂತೆ, ಸಂದರ್ಭಾನುಸಾರ ಮೂಕಜ್ಜಿಯ ಬಾಯಿಯಿಂದ ಬರುವ ಅನುಭವದ ನುಡಿಗಳು, ಕಾಲನ ಪಾತ್ರೆಯಲ್ಲಿ ಪಕ್ವಗೊಂಡ ಮಾತುಗಳೇ ಇಲ್ಲಿ ಕಥಾನಾಯಕನ ಸ್ಥಾನ ಪಡೆಯುತ್ತವೆ. ಮೂಕಜ್ಜಿಗೆ ತನ್ನ ಎಂಟನೆಯ ವಯಸ್ಸಿಗೆ ಮದುವೆಯಾಗಿ ಹತ್ತನೆಯ ವಯಸ್ಸಿಗೆ ಗಂಡನನ್ನು ಕಳೆದುಕೊಳ್ಳುತ್ತಾಳೆ. ತನ್ನ ಇಡೀ ಜೀವಮಾನವನ್ನು ತವರುಮನೆಯಾದ ಮೂಡೂರಿನಲ್ಲೇ ಕಳೆಯುತ್ತಾಳೆ. ಅಜ್ಜಿಯ ಮೊಮ್ಮಗ ಸುಬ್ಬರಾಯ ಮತ್ತವನ ಪತ್ನಿ ಸೀತೆ ಮುಖ್ಯಪಾತ್ರಗಳು. ಊರವರೆಲ್ಲರ ದೃಷ್ಟಿಯಲ್ಲಿ ಮೂಕಜ್ಜಿಗೆ ಅರಳು ಮರಳು. ಆದರೆ ಅಜ್ಜಿ ಮತ್ತು ಮೊಮ್ಮಗ ಸೇರಿ ಓದುಗರಿಗೆ ನಾಲ್ಕೈದು ಸಾವಿರ ವರ್ಷಗಳ ಸಂಸ್ಕೃತಿಯ ದರ್ಶನವನ್ನು ಮಾಡಿಸುತ್ತಾರೆ. ಸುಬ್ಬರಾಯ ತನ್ನ ಊರಿನ ಸುತ್ತಮುತ್ತಲಿನಿಂದ ಹೆಕ್ಕಿತರುವ ಪಳೆಯುಳಿಕೆಗಳನ್ನು ಕೈಯಲ್ಲಿ ಹಿಡಿದು ಮೂಕಜ್ಜಿ ತಮ್ಮ ಅಂತಃದೃಷ್ಟಿಯಿಂದ ಆಯಾ ಕಾಲಗಳ ಸಂಸ್ಕೃತಿಯ ದರ್ಶನವನ್ನು ಓದುಗರಿಗೆ ಉಣಬಡಿಸುತ್ತಾರೆ. ಕಾದಂಬರಿಯಲ್ಲಿ ಬರುವ ಇತರ ಪಾತ್ರಗಳಾದ ಗಾಣದ ರಾಮಣ್ಣ, ನಾಗಿ, ಜನಾರ್ದನ, ನಾರಾಯಣ, ಅನಂತರಾಯ ಇವರೆಲ್ಲರೂ ಆಗಿನ ಕಾಲದ ಜನರ ಮನಸ್ಥಿತಿ, ಜೀವನಶೈಲಿಯನ್ನು ದರ್ಶನ ಮಾಡಿಸುತ್ತಾರೆ. ಮೂಕಜ್ಜಿಗಿಂತ ನಾಲ್ಕು ವರ್ಷ ಹಿರಿಯಳಾದ ಕುರುಡು ಅಜ್ಜಿ, ತಿಪ್ಪಜ್ಜಿಯ ಪಾತ್ರವೂ ಅದ್ಭುತವಾಗಿದೆ. ಜೀವನವೆಂದರೇನು? ಆಧ್ಯಾತ್ಮವೆಂದರೇನು? ಸಾವು ಎಂದರೇನು? ದೇವರಿದ್ದಾನೆಯೇ? ಇನ್ನೂ ಮುಂತಾದ ಪ್ರಶ್ನೆಗಳಿಗೆ ಚೈತನ್ಯದ ಪ್ರತೀಕದಂತಿರುವ ಮೂಕಜ್ಜಿ ಇಲ್ಲಿ ತನ್ನ ಅನುಭವದ ಮಾತುಗಳಿಂದ ಉತ್ತರಿಸುತ್ತಾ ಹೋಗುತ್ತಾಳೆ. ಈ ಪುಸ್ತಕವನ್ನು ಓದಿ ಮುಗಿಸುವ ಹೊತ್ತಿಗೆ ಜೀವನದ ಕುರಿತಾಗಿ, ದೇವರ ಅಸ್ತಿತ್ವದ ಕುರಿತಾಗಿ, ನಮ್ಮ ಭಾವನೆಗಳು, ನಮ್ಮ ನಂಬಿಕೆಗಳು ಖಂಡಿತ ಬದಲಾದಾವು. ದೇಶ, ಕಾಲ, ಭಾಷೆ, ಸಂಸ್ಕೃತಿಗಳನ್ನು ಮೀರಿ ನಿಲ್ಲಬಲ್ಲ ಕೃತಿಯಿದು. ನೀವೂ ಓದಿ. ನಮಸ್ಕಾರ.

– ರಾಂಪುರ ರಘೋತ್ತಮ

Advertisements