disojaನಾ ಡಿಸೋಜಾರವರು ಬರೆದಿರುವ ಈ ಕಾದಂಬರಿಯನ್ನು ಓದುತ್ತಿದ್ದರೆ ನಮ್ಮ ಕಣ್ಣೆದುರು ಕ್ರಿಸ್ತ ಸಮುದಾಯದ ಹಲವು ಮಜಲುಗಳು ತೆರೆದುಕೊಳ್ಳುತ್ತಾಹೋಗುತ್ತವೆ. ಅಲ್ಲಿನ ಒಳ ತುಮುಲಗಳು, ಘರ್ಷಣೆಗಳು, ನೋವು ನಲಿವುಗಳು, ಸೇವೆಯಲ್ಲಿನ ನಿರರ್ಥಕತೆ, ತ್ಯಾಗದಲ್ಲಿನ ಕಪಟತನ, ಆ ಸಮುದಾಯದ ಮುಗ್ದ ಜನರ ಅಮಾಯಕತೆ ಎಲ್ಲವನ್ನೂ ಹಂತ ಹಂತವಾಗಿ ಬಿಡಿಸುತ್ತಾ ಹೋಗುವ ಕಾದಂಬರಿಯಿದು.

ನಮ್ಮ ಮುಂದೆ ಚರ್ಚಿನ ಫಾದರ್ ಇಲ್ಲವೇ ಸಿಸ್ಟರ್ ಬಂದರೆ ನಮಗೆ ಗೊತ್ತಿಲ್ಲದೇನೇ ನಮ್ಮ ಕಣ್ಣುಗಳು ವಿಧೇಯತೆಯಿಂದ ತುಂಬಿದಂತಾಗುತ್ತವೆ, ಅವರ ಮೇಲಿನ ಗೌರವ ಇಮ್ಮಡಿಗೊಳ್ಳುತ್ತದೆ, ಭಯಭಕ್ತಿ ಒಡಮೂಡಿದಂತಾಗುತ್ತದೆ. ಏಕೆಂದರೆ ಅವರು ತಮ್ಮ ಜೀವನದಲ್ಲಿನ ಎಲ್ಲ ಲೌಕಿಕ ಸುಖಾಕಾಂಕ್ಷೆ ತೊರೆದು ಪರಿತ್ಯಕ್ತರಾಗಿ ನೊಂದವರ, ಬಡವರ, ದೀನ ದಲಿತರ, ಶೋಷಣೆಗೊಳಗಾದವರ ಕಣ್ಣೀರು ಒರೆಸಲು ತಮ್ಮ ಬದುಕನ್ನೇ ಮುಡುಪಾಗಿಟ್ಟುರುತ್ತಾರೆ ಎಂದಲ್ಲವೇ? ಸೇವೆಯನ್ನೇ ತಮ್ಮ ಉಸಿರನ್ನಾಗಿಸಿಕೊಂಡು ಜೀವನ ನಡೆಸುತ್ತಿರುತ್ತಾರೆ ಎಂದಲ್ಲವೇ? ಧಾರ್ಮಿಕ ವಿಧಿವಿಧಾನವನ್ನು ಇಡೀ ಜನರ ಪರವಾಗಿ ಅವರು ಮಾಡುತ್ತಿರುತ್ತಾರೆ ಎಂದಲ್ಲವೇ?

ಆದರೆ ಒಂದು ಸಾರಿ ಈ ಕಾದಂಬರಿಯ ಒಳ ಹೊಕ್ಕರೆ ನಮಗೆ ತಿಳಿಯುವುದು, ಹೊರ ಪ್ರಪಂಚಕ್ಕೆ ಕಾಣುವ ಫಾದರ್, ಸಿಸ್ಟರ್ ಅವರ ಬಲು ನಯ ನಾಜೂಕಿನ ಜೀವನ ಸಾಮಾನ್ಯ ಮನುಷ್ಯರಿಗಿಂತ ಭಿನ್ನವಾಗಿಲ್ಲವೆಂದು. ಎಲ್ಲ ಜಾತಿ ಮತ ಧರ್ಮದಲ್ಲಿರುವಂತೆ ಕ್ರಿಶ್ಚಿಯನ್ ಧರ್ಮದಲ್ಲೂ ರಾಜಕೀಯ, ಸ್ವಹಿತಾಸಕ್ತಿ, ಕುತಂತ್ರ, ಕುಯುಕ್ತಿ, ಧರ್ಮ ಆಶ್ರದ್ಧೆ, ಪಾಪ ನಿವೇದನೆಯ ಪುನರಾವರ್ತನೆ, ಮೂಢ ನಂಬಿಕೆ ಮುಂತಾದುವು ಮನೆ ಮಾಡಿವೆ ಎಂದು.

ಇಲ್ಲಿ ಧರ್ಮದ ಅವಹೇಳನವಿಲ್ಲ. ಧರ್ಮದಲ್ಲಿರುವ ಎಲ್ಲಾ ಆಚಾರ ವಿಚಾರವನ್ನು ಸ್ಥೂಲವಾಗಿ ಚ್ಯುತಿ ಬರದಂತೆ ಹೇಳುತ್ತಾ ಹೋದಂತೆ ಸೂಕ್ಷ್ಮವಾಗಿ ಅದರೊಳಗಿನ ಲೋಪದೋಷವನ್ನು ತೆರೆದಿಡುತ್ತಾ ಹೋಗುತ್ತದೆ ಕಾದಂಬರಿ. ಚರ್ಚಿನ ಫಾದರ್ ಆಗಲಿ ಅಥವಾ ಸಿಸ್ಟರ್ ಆಗಲಿ ಅವರೇನೂ ದೇವಮಾನವರಲ್ಲ, ಧೂತರಂತೂ ಅಲ್ಲವೇ ಅಲ್ಲ. ಅವರೂ ನಮ್ಮನಿಮ್ಮಂತೆ ಭಾವನೆ ಆಸೆ ಆಕಾಂಕ್ಷೆಯುಳ್ಳ ಸಾಮಾನ್ಯ ಮನುಷ್ಯರು ಎನ್ನುವ ಸಾರ್ವಕಾಲೀಕ ಸತ್ಯವನ್ನು ನಮ್ಮ ಕಣ್ಣ ಮುಂದೆ ತಂದಿಡುತ್ತಾರೆ ನಾ ಡಿಸೋಜಾ ಅವರು.

ಒಂದು ಪಕ್ಷ ನಿಷ್ಕಲ್ಮಶ ಸೇವೆ ಮಾಡಲು ನಿಂತರೂ ಧರ್ಮದೊಳಗೆ ಕಂಡೂ ಕಾಣದೆ ಅಡಗಿ ಕುಳಿತಿರುವ ಸಂಚಿತ ವ್ಯವಸ್ಥೆ ಹಾಗೆ ನಿರುಮ್ಮಳವಾಗಿ ಸೇವೆ ಮಾಡಲು ಬಿಡುವುದಿಲ್ಲ. ಒಳಸಂಚು ಮತ್ತು ಪಿತೂರಿ ಮಾಡಿ ಸೇವೆ ಮಾಡಲು ಬಂದವರನ್ನೂ ದಾರಿ ತಪ್ಪಿಸುತ್ತಾರೆ ಎನ್ನುವುದನ್ನು ಹಲವು ದಾರ್ಷ್ಟ್ರ್ಯಾಗಳೊಂದಿಗೆ ಸಾಬೀತು ಪಡಿಸುತ್ತದೆ ಕಾದಂಬರಿ. ಇದರೊಳಗೆ ಕ್ರಿಸ್ತ ಜನಾಂಗದ ಒಳ ತುಮುಲಗಳು, ಅವರನ್ನು ಕಾಡುವ ಕ್ಷೋಭೆ, ನೈತಿಕತೆ, ಅನೈತಿಕತೆ, ಸಂಬಂಧಗಳ ಅಪಮೌಲ್ಯತೆಯನ್ನು ಸತ್ಯಕ್ಕೆ ಚ್ಯುತಿ ಬಾರದಂತೆ ನಿರ್ವಹಿಸಿ, ಯಾವ ಧರ್ಮದಲ್ಲಾದರೂ ಇವು ಇರುವಂಥದ್ದೇ ಎನ್ನುವ ಸತ್ಯವನ್ನು ಓದುಗರಿಗೆ ಕಾದಂಬರಿ ತಿಳಿಸಿಕೊಡುತ್ತದೆ.

ಫಾದರ್ ರಾಡ್ರಿಗಸ್ ಜಾನ್ ಮತ್ತು ಸಿಸ್ಟರ್ ರೋಜಿ ಇಬ್ಬರೂ ಕಪಟವಿಲ್ಲದೆ ನಿಶ್ಕಲ್ಮಶವಾಗಿ ಬಡವ ಬಲ್ಲಿದನೆಂಬ ಭೇಧಭಾವವಿಲ್ಲದೆ ಚರ್ಚಿನಲ್ಲಿ ಸೇವೆ ಮಾಡುತ್ತಿರುತ್ತಾರೆ. ರೋಜಿ ಕಾನ್ವೆಂಟಿನಲ್ಲಿ ಎಲ್ಲ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಟೀಚರ್ ಆಗಿ ಹೆಸರು ಗಳಿಸಿರುತ್ತಾರೆ. ಅತ್ತ ಫಾದರ್ ಅವರ ಸರಳತೆ, ಉದಾರತೆ, ಸೇವಾ ಮನೋಭಾವವನ್ನು ಸಹಿಸದೆ, ಇತ್ತ ರೋಜಿ ಸಿಸ್ಟರ್ ಅವರ ನೇರವಂತಿಕೆ, ನಿಷ್ಠುರತೆ ಎದುರಿಸಲಾರದೆ ಇಬ್ಬರ ಮೇಲೂ ಇಲ್ಲ ಸಲ್ಲದ ಆರೋಪವನ್ನು ಮಾಡಿ ಇಬ್ಬರನ್ನೂ ನೀರು ನೆರಳಿಲ್ಲದ ಜಾಗಕ್ಕೆ ವರ್ಗಾವಣೆ ಮಾಡುತ್ತಾರೆ. ಇಬ್ಬರಿಗೂ ಸಂಪರ್ಕ ತಪ್ಪಿಹೋಗುತ್ತದೆ.

ಒಮ್ಮೆ ಖಾಯಿಲೆ ಬಿದ್ದ ಸಿಸ್ಟರ್ ರೋಜಿಯನ್ನು ನೋಡಲು ಬಂದ ಫಾದರ್ ಜಾನ್ ಮಾನವೀಯತೆ ಬೆರೆತ ಅನುಕಂಪದೊಂದಿಗೆ ರೋಜಿಯನ್ನು ಯಾವುದೇ ಪ್ರತಿಫಲಾಕ್ಷೆಯಿಲ್ಲದೆ ಆಕೆಯ ಆರೈಕೆ ಮಾಡುತ್ತಾರೆ. ಇದನ್ನು ಇನ್ನೊಂದು ರೀತಿಯಲ್ಲಿ ಪರಿಭಾವಿಸಿದ ಚರ್ಚಿನ ಇತರರು ಮತ್ತು ಕಾನ್ವೆಂಟಿನ ಸಿಬ್ಬಂದಿ ವರ್ಗ ಇಬ್ಬರ ಮೇಲೂ ಇಲ್ಲಸಲ್ಲದ ಆರೋಪವನ್ನು ಮಾಡುತ್ತಾರೆ. ಇದೇ ಮೊದಲಲ್ಲ ಈ ರೀತಿ ಇಲ್ಲಸಲ್ಲದ ಆರೋಪ ಪ್ರತ್ಯಾರೋಪ ಮಾಡುತ್ತಿದ್ದುದು.

ತಮ್ಮದೇ ಸಮೂಹದಲ್ಲಿನ ತಮ್ಮವರೇ ಮಾಡುತ್ತಿದ್ದ ಅತ್ಯಾಚಾರ, ಅನಾಚಾರ, ದಬ್ಬಾಳಿಕೆ, ಮೋಸ ಒಂದು ಕಡೆಯಾದರೆ ಏಸುವನ್ನೇ ನಂಬಿ, ಅವನಲ್ಲೇ ಬದುಕು ಕಟ್ಟಿಕೊಂಡು ಸಮಾಜದ ನಿರ್ಗತಿಕರ ದೀನ ದಲಿತರ ಬಡವ ಬಲ್ಲಿದರ ಸೇವೆಗಾಗಿ ಟೊಂಕ ಕಟ್ಟಿ ನಿಂತವರಿಗೆ ತಮ್ಮದೇ ಸಮಾಜದ ಒಳ ರಾಜಕೀಯ, ಪಿತೂರಿ, ಸಂಚು ಇನ್ನೊಂದು ಕಡೆ ತಬ್ಬಿಬ್ಬಾಗುವಂತೆ ಮಾಡಿದಾಗ ಇಬ್ಬರೂ ತಾವು ನಿಂತ ಜಾಗ, ತಳೆದ ನಿಲುವು ಇವುಗಳನ್ನು ತಮ್ಮಲ್ಲಿ ತಾವೇ ಪ್ರಶ್ನಿಸಿಕೊಳ್ಳುವಂತಾಗುತ್ತದೆ. ಗೆಲ್ಲುವುದು ಯಾರು? ಒಳ್ಳೆಯತನವೋ ನೀಚತನವೋ? ನೀತಿಯೋ ಅನಿತಿಯೋ? ಧರ್ಮವೋ ಅಧರ್ಮವೋ?

ಇಂತಹ ಸಂದಿಗ್ದ ಸ್ಥಿತಿಯಲ್ಲಿ ಫಾದರ್ ಜಾನ್ ಮತ್ತು ಸಿಸ್ಟರ್ ರೋಜಿ ಇಬ್ಬರೂ ಊಹಿಸಲೂ ಆಗದ, ಕಲ್ಪನೆಗೂ ನಿಲುಕದ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಸುಣ್ಣ ಬಳಿದ ಸಮಾಧಿಯಂತಿದ್ದ ತಮ್ಮ ತಮ್ಮ ನಿಲುವನ್ನು ದಿಟ್ಟತನದಿಂದ ಪ್ರದರ್ಶಿಸುತ್ತಾರೆ. ಆ ನಿರ್ಧಾರವಾದರೂ ಏನು? ಒಮ್ಮೆ ಕಾದಂಬರಿ ಓದಿ ನೋಡಿ.

ಧರ್ಮದ ಅಭಿಲಾಷೆಯನ್ನು ಮತ್ತು ಧರ್ಮದ ಮುಖವಾಡ ಹಾಕಿ ಮಾಡುತ್ತಿರುವ ಅನ್ಯಾಯವನ್ನು ತಿಳಿಸುವ ಉದ್ದೇಶವೇ ಕಾದಂಬರಿಯ ಕಥಾವಸ್ತು. ಹಾಗಂತ ಇದು ಕೇವಲ ಕ್ರೈಸ್ತ ಧರ್ಮದಲ್ಲಿ ಮಾತ್ರ ಇದೆ ಎಂದು ತಿಳಿಯುವ ಅವಶ್ಯವಿಲ್ಲ. ಜಗತ್ತಿನ ಯಾವುದೇ ಧರ್ಮದಲ್ಲಿ ಲೋಪದೋಷಗಳಿಲ್ಲ. ಧರ್ಮವನ್ನು ಪ್ರಸ್ತುತ ಇಲ್ಲವೇ ಅಪ್ರಸ್ತುತಪಡಿಸುವುದಾಗಲಿ ಅಥವಾ ಸಾರ್ಥಕ ಇಲ್ಲವೇ ನಿರರ್ಥಗೊಳಿಸುವುದಾಗಲಿ ಅದನ್ನು ನಂಬಿ ಅದರ ತಳಹದಿಯ ಆಶಯದ ಮೇಲೆ ನಡೆವರನ್ನು ಅವಲಂಭಿಸಿದೆ.

ವಿ.ಸೂ. ಈ ಕಾದಂಬರಿಯನ್ನು ಯಾವುದೇ ಪೂರ್ವಾಗ್ರಹ ಪೀಡಿತರಾಗದೆ ಓದಿದರೆ ಚಂದ. ನಮಸ್ಕಾರ.

ಮೋಹನ್ ಕುಮಾರ್ ಡಿ ಎನ್

Advertisements