ಕರ್ವಾಲೊ ಮೂರು ದಿನಗಳಲ್ಲಿ ಎರಡು ಬಾರಿ ಓದಿದ ಕಾದಂಬರಿ. ಎಸ್ ಎಲ್ ಭೈರಪ್ಪನವರ ನಾಯಿ ನೆರಳು ಹೊರತು ಪಡಿಸಿದರೆ ಇದೇ ಕೃತಿಯನ್ನು ಎರಡು ಬಾರಿ ಓದಿದ್ದು.

ಸಾಮಾನ್ಯವಾಗಿ ನಾನು ಒಂದು ಪುಸ್ತಕವನ್ನು ಎರಡನೇ ಬಾರಿ ಓದುವುದೇ ಕಡಿಮೆ. ಹೊಸ ಹೊಸ ಪುಸ್ತಕಗಳು ಕೈಸೇರುವುದು ಒಂದು ಕಾರಣವಾದರೆ, ಇನ್ನೊಮ್ಮೆ ಓದುವಾಗ ಯಾವ ಕಾತುರತೆಗಳೂ, ಕುತೂಹಲಗಳೂ ಮೂಡದೇ ಒಮ್ಮೆ ಜಗಿದು ರಸ ಹೀರಿದ ಕಬ್ಬನ್ನು ಮತ್ತೆ ಜಗಿದಂತೆ ಭಾಸವಾಗಬಹುದು ಎಂದೆನಿಸಿಬಿಡುತ್ತದೆ.
ಕೆಲವು ತಿಂಗಳ ನಂತರವೊ ಅಥವಾ ವರ್ಷದ ನಂತರ ಓದಿದರೆ ಹೊಸ ದೃಷ್ಟಿಕೋನವೊಂದನ್ನು ಕಾಣಬಹುದೇನೊ. ಆದರೆ ಇದುವರೆಗೂ ಹಾಗೆ ಓದಿಲ್ಲ. ನಾನು ಪುಸ್ತಕಗಳನ್ನು ಓದಲು ಆರಂಭಿಸಿದ್ದು ಮೂರ್ನಾಲ್ಕು ವರ್ಷಗಳಿಂದೀಚೆಗೆ. ಹೀಗಾಗಿ ಸಾಧ್ಯವಾದಷ್ಟು ಹೊಸ ಪುಸ್ತಕಗಳ ಅನ್ವೇಷಣೆ.

ಕರ್ವಾಲೊ ಎರಡು ಬಾರಿ ಓದಲು ಕಾರಣ, ಕೆಪಿಪಿ ಅವರ ಕೃತಿಗಳನ್ನು ಓದುವಾಗ ಅವು ತಮ್ಮೊಳಗೆ ಲೀನವಾಗಿಸಿಕೊಳ್ಳುವ ಬಗೆ, ತಿಳಿ ಹಾಸ್ಯಮಯ ನಿರೂಪಣೆ, ಪಾತ್ರಗಳ ವೈಶಿಷ್ಟ್ಯ, ಕಥಾವಸ್ತುವಿನ ಗಹನತೆ ಎನ್ನಬಹುದು.
ಕರ್ವಾಲೊದಲ್ಲಿ ಮೂಡುವ ಹಳ್ಳಿಯ ಚಿತ್ರಣ, ರೈತರ ಕಷ್ಟಕಾರ್ಪಣ್ಯ, ಜನಜೀವನ, ಅವರು ಬದುಕುವ ರೀತಿ, ಮಂದಣ್ಣನ ಮದುವೆಯ ಅವಾಂತರಗಳು ನಕ್ಕುನಗುವಂತೆ ಮಾಡಿದರೆ, ಜೇನು ಕೂಡುವುದು,ಜೇನುಹುಳುಗಳ ಕಾರ್ಯವಿಧಾನ, ನಮಗೆ ಗೊತ್ತಿರದ ಅದೆಷ್ಟು ವಿಸ್ಮಯಗಳು ಪ್ರಕೃತಿಯ ಮಡಿಲಲ್ಲಿ ಅಡಗಿವೆ!! ಅಂತಹ ವಿಸ್ಮಯಗಳನ್ನು ಕೆಪಿಪಿ ಅವರು ಚಿತ್ರಿಸಿದ ಬಗೆ ಅನನ್ಯ.
ನಿರ್ನಾಮವಾಗಿದೆ ಎಂದು ತಿಳಿದಿರುವ ಸರಿಸೃಪಗಳ ಜಾತಿಗೆ ಸೇರುವ ಹಾರುವ ಓತಿ ನಾರ್ವೆ ಮಂದಣ್ಣನ ಮುಂದೆ ಮಿಂಚಿ, ವಿಜ್ಞಾನಿ ಕರ್ವಾಲೊರ ಸಂಶೋಧನೆಗೆ ವಸ್ತುವಾಗಿ, ಇನ್ನು ಕೆಲವರಿಗೆ ಅದರ ಚರಿತ್ರೆಯಿಂದ ಕುತೂಹಲದ ವಿಷಯವಾಗುತ್ತದೆ.
ಮಂದಣ್ಣ, ಪ್ರಭಾಕರ, ಕರಿಯಪ್ಪ, ಎಂಕ್ಟ ಕಥಾನಾಯಕ, ವಿಜ್ಞಾನಿ ಕರ್ವಾಲೊ ಅವರು ಸೇರಿ ಕಗ್ಗಾಡಿನಲ್ಲಿ ಅದರ ಅನ್ವೇಷಣೆಗೆ ತೊಡಗುವುದೇ ಕಥಾವಸ್ತು.

ಚರಿತ್ರಪೂರ್ವ ಯುಗದಿಂದ ಬಂದ ಕಾಲದ ರಾಯಭಾರಿಯಾಗಿ, ಜೀವವಿಕಾಸದ ಸರಪಳಿಯನ್ನೇ ಬುಡಮೇಲು ಮಾಡಬಹುದಾದ, ಜಗತ್ತಿಗೇ ದಿಗ್ಭ್ರಮೆ ಮೂಡಿಸಬಹುದಾದ ಹಾರುವ ಓತಿ ಕರ್ವಾಲೊ ಕೈಗೆ ಸಿಗುತ್ತದೆಯೇ ಎನ್ನುವುದನ್ನು ಕಾದಂಬರಿ ಓದಿಯೇ ತಿಳಿಯಬೇಕು.

ಅಂತ್ಯದಲ್ಲಿ ಕ್ಷಣ ಕ್ಷಣವೂ ಕುತೂಹಲ ಮೂಡಿಸಿ ಉಸಿರು ಬಿಗಿಹಿಡಿದು ಓದುವಂತೆ ಮಾಡುತ್ತದೆ. ಓದುವಾಗ ಹಾರುವ ಓತಿ ಎಷ್ಟರ ಮಟ್ಟಿಗೆ ನನ್ನ ಮನಃಪಟಲದಲ್ಲಿ ದಾಖಲಾಗಿತ್ತೆಂದರೆ, ಗೊಡೆಯ ಮೇಲಿರುವ ಹಲ್ಲಿಗಳಿಗೂ ರೆಕ್ಕೆಮೂಡಿ ಅವುಗಳು ಕೂಡ ಹಾರುಬಹುದೇನೊ ಎಂದು ದಿಟ್ಟಿಸಿ ನನ್ನ ಮೂರ್ಖತನಕ್ಕೆ ನಾನೇ ನಕ್ಕಿದಿದೆ.
ನ್ಯಾಶನಲ್ ಜಿಯೋಗ್ರಾಫಿ಼ಕ್ ನಂತಹ ಚಾನಲ್ ಗಳಲ್ಲಿ ಫ್ಲೈಯಿಂಗ್ ಲಿಸಾರ್ಡ್ ಗಳನ್ನು ನೋಡಿರುವ ನಮಗೇ ಓದುವಾಗ ಇಂತಹ ರೋಚಕತೆ ಮೂಡುವಾಗ ಇಪ್ಪತ್ತು ವರ್ಷಗಳ ಹಿಂದೆ ಈ ಕಾದಂಬರಿ ಎಂತಹ ಸಂಚಲನವನ್ನುಂಟು ಮಾಡಿರಬಹುದೆಂದು ಊಹಿಸಿಕೊಂಡರೇ ರೋಮಾಂಚನವಾಗುತ್ತದೆ. ವಿಭಿನ್ನವಾದ ಕಾದಂಬರಿ.
ಧನ್ಯವಾದಗಳು

  • ಕವಿತಾ ಭಟ್

Advertisements