“ಕ್ಷಮೆ” ಸಹನಾ ವಿಜಯಕುಮಾರ್ ಅವರ ಮೊದಲ ಕಾದಂಬರಿ.
ಹೆಣ್ಣು, ತನ್ನ ಜೀವನದಲ್ಲಿ ಇತರರಿಗಾಗಿ ಬದುಕುತ್ತ ತನ್ನ ತನವನ್ನು ಮರೆಯುತ್ತಾ ಹೋಗುತ್ತಾಳೆ. ಸಾಮಾಜಿಕ ಬದುಕಿನಲ್ಲಿ ಅವಳೆಷ್ಟೇ ಧೃಢವಾಗಿ ನಿಲ್ಲಬಲ್ಲವಳಾಗಿ, ಸ್ವಾತಂತ್ರ್ಯ, ಸಾಧನೆ, ಕೀರ್ತಿ ಸಂಪಾದಿಸಿದರೂ ಬರೀ ತನ್ನ ವಿಷಯ ಬಂದಾಗ ತನ್ನೊಳಗಿನ ತಾನೊಬ್ಬಳೆ ಆದಾಗ ಮೂಡುವ ಭಾವನೆಗಳನ್ನು ಯೋಚನೆಗಳನ್ನು ಕಾದಂಬರಿಯಲ್ಲಿ ಅದ್ಭುತವಾಗಿ ಚಿತ್ರಿಸಿದ್ದಾರೆ.
ಮಗಳಾಗಿ, ತಂಗಿಯಾಗಿ, ಹೆಂಡತಿಯಾಗಿ, ಅಮ್ಮನಾಗಿ ತನ್ನ ಬದುಕನ್ನು ಮೀಸಲಿಟ್ಟು ತನಗಾಗಿ ಬದುಕುವುದ್ಯಾವಾಗ? ಎಂಬ ಪ್ರಶ್ನೆ ಮೂಡುತ್ತದೆ. ತನಗಾಗಿ ಬದುಕಲು ತನ್ನ ಬದ್ಧತೆ, ನೈತಿಕತೆಯನ್ನು ಮರೆತು ಇರಬಲ್ಲಳೆ? , ತಾನು ಕಳೆದುಕೊಂಡಿದ್ದನ್ನು ಪಡೆಯಲು ತಾನು ಮಾಡುತ್ತಿರುವುದು ತಪ್ಪಲ್ಲ ಎಂಬ ಎಂತಹ ಸಮರ್ಥನೆಯೇ ಮೂಡಲಿ, ಅದನ್ನು ತನ್ನ ಮನಸ್ಸಾಕ್ಷಿ ಒಪ್ಪಿಕೊಳ್ಳುವುದೇ?
ಸ್ವಾತಂತ್ರ್ಯ, ನಂಬಿಕೆಗಳನ್ನು ಬರೀ ತನ್ನ ಸ್ವಾರ್ಥಕ್ಕಾಗಿ ದುರುಪಯೋಗ ಪಡಿಸಿಕೊಂಡು ಅದನ್ನು ಸಮರ್ಥಿಸಿಕೊಂಡು ಎಷ್ಟು ದಿನ ನೆಮ್ಮದಿಯಿಂದಿರಬಹುದು? ಬದುಕಿನಲ್ಲಿ ಪ್ರೀತಿಯನ್ನು ಸಾರ್ಥಕ ಪಡಿಸಿಕೊಂಡರೆ ಬರೀ ತಾನಾಗಿ ಮಾತ್ರ ಉಳಿದು ಗೆಲ್ಲಬಲ್ಲಳು, ತಾಯಿಯಾಗಿ, ಹೆಂಡತಿಯಾಗಿ ಖಂಡಿತ ಸೋಲುತ್ತಾಳೆ.
ಇಂತಹ ಅನೇಕ ಸೂಕ್ಷ್ಮ ವಿಚಾರಗಳನ್ನು,ಅವಳ ತೊಳಲಾಟವನ್ನು, ಗೊಂದಲಗಳನ್ನು ಪಲ್ಲವಿಯ ಪಾತ್ರದ ಮೂಲಕ ಚಂದವಾಗಿ ನಿರೂಪಿಸಿದ್ದಾರೆ.
ಪಲ್ಲವಿ ತನ್ನ ಸಾಮಾಜಿಕ ಬದುಕಿನಲ್ಲಿ ಅನೇಕ ಸಾಧನೆಗಳನ್ನು ಮಾಡಿ, ಗಟ್ಟಿ ಪಾತ್ರವಾಗುತ್ತಾಳೆ, ಆದರೆ ತನ್ನ ವ್ಯಯಕ್ತಿಕ ಜೀವನ ತೀರಾ ಸಪ್ಪೆ ಎನಿಸುತ್ತದೆ. ಎಂದೊ ಕಳೆದು, ಗಂಟು ಸೇರಿದ್ದ ಪ್ರೀತಿ ಮತ್ತೆ ತನ್ನ ಕಣ್ಣೆದುರಿಗೆ ಹರಡಿದಾಗ, ಗೊಂದಲದಲ್ಲಿ ಬೀಳುತ್ತಾಳೆ. ಇಷ್ಟು ವರ್ಷ ತನಗಾಗಿ ಬದುಕಿಲ್ಲ ಎಂಬ ಭಾವನೆ ಮೂಡುತ್ತದೆ. ಗೆಳೆಯ ಚೇತನನ ಪ್ರೀತಿಗಾಗಿ ಹಾತೊರೆಯುತ್ತಾಳೆ. ಆದರೆ ಅವನಿಗಾಗಿ ಇತರ ಸಂಬಂಧಗಳನ್ನು ಬಿಟ್ಟು ಬರಲೂ ಸಾಧ್ಯವಾಗದೇ, ಮೊದಲಿನ ಜೀವನದಲ್ಲಿ ಸಂತೋಷವನ್ನೂ ಕಾಣದೇ ಪರದಾಡುತ್ತಾಳೆ. ತಾನೆಂದೂ ತನ್ನ ಸ್ವಾರ್ಥಕ್ಕಾಗಿ ತಪ್ಪು ಮಾಡಿಲ್ಲ ಎಂಬ ಸಮರ್ಥನೆಯೊಂದನ್ನಿಟ್ಟು ಕೊಂಡು ಒಂದು ತಪ್ಪು ಮಾಡಿ, ತನ್ನ ಮನಸ್ಸಾಕ್ಷಿಗೆ, ನಂಬಿಕೆಗೆ, ನೈತಿಕತೆಗೆ, ಬದ್ಧತೆಗೆಗಳಿಗೆ ವಿರೋಧವಾಗಿ ಬದುಕಬಲ್ಲಳೇ? ಎಂಬವುದು ಕಾದಂಬರಿಯ ಕಥಾವಸ್ತು.
ಪಲ್ಲವಿ, ಚೇತನ್ ರ ಪಾತ್ರಗಳು ಅದ್ಭುತವಾಗಿದೆ, ಬದುಕಿನ ಸೂಕ್ಷ್ಮ ವಿಚಾರಗಳ ಜೊತೆ ಭಾವನಾತ್ಮಕ ಸಂವೇದನೆಯನ್ನು ಸಹನಾ ವಿಜಯಕುಮಾರ್ ಸುಂದರವಾಗಿ ನಿರೂಪಿಸಿದ್ದಾರೆ, ಅವರ ನಿರೂಪಣೆ, ಕಥೆ ಹೆಣೆದಿರುವ ಶೈಲಿ, ಕಾದಂಬರಿಯನ್ನು ಕೊನೆಯವರೆಗೆ ಬಿಟ್ಟೂಬಿಡದೆ ಓದಿಸಿಕೊಂಡು ಹೋಗುತ್ತದೆ. ಒಮ್ಮೆ ಓದಲೇ ಬೇಕಾದ ಕಾದಂಬರಿ.

ಧನ್ಯವಾದಗಳು

ಕವಿತಾ ಭಟ್

Advertisements