‘ತಾಯಿ’- ಮ್ಯಾಕ್ಸಿಮ್ ಗೋರ್ಕಿ(ಅನು: ನಿರಂಜನ)

Image may contain: 1 person

“ತಾಯಿ”

ಕಾದಂಬರಿಯ ಕೆಲವು ಸಾಲುಗಳು ಹೀಗಿವೆ:

“ಬಡತನ, ಹಸಿವು ಮತ್ತು ರೋಗ – ಇದೇ ಈಗ ತಮ್ಮ ಕೆಲಸಕ್ಕೆ ನಮ್ಮ ಜನರಿಗೆ ಸಿಗೋ ಪ್ರತಿಫಲ. ಪ್ರತಿಯೊಂದು ನಮಗೆ ಇದಿರಾಗಿದೆ. ಜೀವಮಾನವೆಲ್ಲವೂ ನಾವು ಪ್ರತಿನಿತ್ಯವೂ ನಮ್ಮ ಶಕ್ತಿಯ ಕೊನೇ ಗುಲಗಂಜಿ ತೂಕವನ್ನೂ ಉಪಯೋಗಿಸಿ ದುಡಿಯುತ್ತೀವಿ. ಯಾವಾಗಲೂ ಹೊಲಸಾಗಿರುತ್ತೀವಿ. ಯಾವಾಗಲೂ ಮೋಸ ಹೋಗುತ್ತೀವಿ. ಬೇರೆಯವರು ಸಂಕೋಲೆಯಲ್ಲಿ ಕಟ್ಟಿದ ನಾಯಿಯ ಹಾಗೆ ನಮ್ಮನ್ನು ಅಜ್ಞಾನದಲ್ಲಿ ಇರಿಸಿ, ತಾವು ನಮ್ಮ ದುಡಿಮೆಯಿಂದ ಎಲ್ಲ ಸುಖವನ್ನು ಸೌಖರ್ಯವನ್ನು ಪಡೆಯುತ್ತಾರೆ. ನಮಗೆ ಏನೂ ಗೊತ್ತಿರುವುದಿಲ್ಲ. ನಾವು ದಿಗಿಲು ಬೀಳ್ತೀವಿ. ಪ್ರತಿಯೊಂದಕ್ಕೂ ಹೆದರುತ್ತೀವಿ! ನಮ್ಮ ಬದುಕು, ಬೆಳಕೇ ಹರಿಯದಂಥ ಉದ್ಧನೆಯ ಕತ್ತಲಿನ ರಾತ್ರಿಯ ಹಾಗೆ”.

ಇದು ಇಡೀ ಕಾದಂಬರಿಯ ಒಟ್ಟೂ ಆಶಯ. ಇದರ ಹೊರತಾಗಿ ಕಾರ್ಮಿಕ ಸಮೂಹದಲ್ಲಿನ ದಾರಿದ್ರ್ಯ, ಬಡತನ, ಅಜ್ಞಾನ, ಅಮಾಯಕತೆ, ಉಳ್ಳವರ ಪುರೋಹಿತಶಾಹಿತ್ವ ಮತ್ತವರ ಗುಲಾಮಗಿರಿ, ಬಡವರ ಮೇಲಿನ ದಬ್ಬಾಳಿಕೆ, ಕಾರ್ಮಿಕರಿಗಾಗುವ ಮೋಸ ವಂಚನೆ, ನ್ಯಾಯವನ್ನು ಸದೆಬಡಿಯುವಿಕೆ.. ಹೀಗೆ ಅನೇಕ ಸಂಗತಿಗಳ ನಡುವೆ ನಡೆಯುವ ತಿಕ್ಕಾಟ ಘರ್ಷಣೆಗಳ ಕಲಸುಮೇಲೋಗರ.

ಇಲ್ಲಿ ಒಂದು ಕಾರ್ಖಾನೆಯಿರುತ್ತದೆ. ಅಲ್ಲಿ ಕೆಲಸ ಮಾಡುವವರು ತಮ್ಮದೆನ್ನುವ ಎಲ್ಲವನ್ನೂ, ಕೊನೆಗೆ ತಾವಾಡುವ ಉಸಿರನ್ನೂ, ಮರೆತು ಕೆಲಸ ಮಾಡುತ್ತಿರುತ್ತಾರೆ. ಅವರಿಗೆ ಸ್ವತಂತ್ರ ವಿಚಾರವಾಗಲಿ, ಧೋರಣೆ ಅಭಿಪ್ರಾಯವಾಗಲಿ ಇರುವುದಿಲ್ಲ. ಕಾರ್ಮಿಕರಿಗೆ ಸಿಗಬೇಕಾದ ಮೂಲಭೂತ ಸೌಕರ್ಯಗಳು ಗಗನ ಕುಸುಮವಾಗಿರುತ್ತದೆ. ಹೊಲಸು ಕೇರಿಗಳೊಳಗೆ ದಟ್ಟ ಬಡತನದಲ್ಲಿ ಸಿಕ್ಕಿದ್ದಷ್ಟನ್ನೇ ತಿಂದುಕುಡಿಯುತ್ತಾ, ಒಬ್ಬರ ಕಾಲು ಇನ್ನೊಬ್ಬರು ಎಳೆಯುತ್ತಾ, ಕಣ್ಣಿಗೆ ಮತ್ತು ಮನಸ್ಸಿಗೆ ಕಾಪು ಕಟ್ಟಿಕೊಂಡು ಜೀವಿಸುವುದಷ್ಟೇ ಅವರ ಜೀವನ. ಅವರಿಗೆ ಇದಕ್ಕಿಂತ ಹೆಚ್ಚಿಗೇನು ಗೊತ್ತಿಲ್ಲ ಅಥವಾ ತಿಳಿದುಕೊಳ್ಳಲು ಮೇಲ್ವರ್ಗ ಇವರಿಗೆ ಅನುವು ಮಾಡಿಕೊಟ್ಟಿರುವುದಿಲ್ಲ.

ಬದಲಾವಣೆ ಜಗದ ನಿಯಮ ತಾನೇ? ಹೀಗಿರಲು ದೇಶದೊಳಗೆ ಕಂಡೂ ಕಾಣದ ಹಾಗೆ ಮಂದಿಗೆ ಒಳಗೊಳಗೇ ಕುದಿ ಏಳುತ್ತದೆ. ತಮ್ಮ ಮೇಲಾಗುತ್ತಿರುವ ದಬ್ಬಾಳಿಕೆ ದೌರ್ಜನ್ಯದ ವಿರುದ್ಧ ಹೋರಾಟ ಮಾಡಲು ಉತ್ಸುಕರಾಗುತ್ತಾರೆ. ಸಂಘಟಿತರಾಗಿ, ಶೋಷಣೆಗೆ ಶೋಷಣೆಗೊಳಗಾದವರೆಲ್ಲರ ಪರವಾಗಿ ತಾವು ಮೇಲ್ವರ್ಗದ ವಿರುದ್ಧ ತೊಡೆ ತಟ್ಟಿ ನಿಲ್ಲುಲು ಮುಂದಾಗುತ್ತಾರೆ.

ಆ ಗುಂಪಿನ ನಾಯಕತ್ವ ವಹಿಸುವುದು ಕಥಾ ನಾಯಕಿ “ತಾಯಿ”ಯ ಮಗನಾದ ಪಾವೆಲ್ ಮತ್ತು ಆತನ ಸ್ನೇಹಿತ ಆಂದ್ರೇಯ್. ಮೊದಮೊದಲು ತನ್ನ ಮನೆಯಲ್ಲಿ ಹಲವು ಕ್ರಾಂತಿಕಾರಿಗಳೊಂದಿಗೆ ಗುಪ್ತವಾಗಿ ಸಭೆ ನಡೆಯುತ್ತಿದ್ದಾಗ ಅವರಾಡುತ್ತಿದ್ದ ಮಾತುಗಳಿಂದ ಏನನ್ನೂ ತಿಳಿಯದೆ ಮರೆಯಲ್ಲಿರುತ್ತಿದ್ದ ತಾಯಿ, ತನ್ನ ಗಂಡನೊಂದಿಗೆ ಇಪ್ಪತ್ತು ವರ್ಷಗಳ ಕಾಲ ಸತತವಾಗಿ ದೌರ್ಜನ್ಯ ದಬ್ಬಾಳಿಕೆಗೆ ಒಳಗಾಗಿ ತನ್ನ ಹಳೆಯ ನೆನಪು, ಬಾಲ್ಯ, ಯೌವ್ವನವನ್ನೇ ಮರೆತಿದ್ದ ತಾಯಿ, ಅಕ್ಷರ ಓದಲು ಬರೆಯಲು ಬಾರದ ಅವಿದ್ಯಾವಂತ ತಾಯಿ, ಬರುಬರುತ್ತಾ ನಿಧಾನವಾಗಿಯಾದರೂ ಒಂದೊಂದನ್ನೇ ಅರ್ಥೈಸಿಕೊಳ್ಳುತ್ತಾಳೆ. ಈ ಸಭೆ ಏನು? ಏತಕ್ಕಾಗಿ ನಡೆಯುತ್ತಿದೆ? ಇವರೆಲ್ಲಾ ರಹಸ್ಯವಾಗಿ ಏಕೆ ನನ್ನ ಮನೆಯಲ್ಲಿ ಸೇರುತ್ತಿದ್ದಾರೆ? ಇದರ ಉದ್ದೇಶವೇನು ಎಂಬುದು ಆಕೆಗೆ ಅರ್ಥವಾಗತೊಡಗುತ್ತದೆ.

ಮೇ ದಿನದಂದು ಎಲ್ಲಾ ಶೋಷಿತರ ಪರವಾಗಿ ಧ್ವಜಾರೋಹಣ ಕಾರ್ಯಕ್ರಮವನ್ನು ಪಾವೆಲ್ಲ್, ಆಂದ್ರೇಯ್ ಮತ್ತಿತರರು ಮಾಡಿ ಪೋಲೀಸರ ಕೆಂಗಣ್ಣಿಗೆ ಗುರಿಯಾಗಿ ಜೈಲು ಪಾಲಾಗುತ್ತಾರೆ. ತಾಯಿಗೆ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತಾಗುತ್ತದೆ. ಮುಂದೇನು ಎನ್ನುವ ಚಿಂತೆಯೊಂದಿಗೆ ತನ್ನನ್ನು ತಾನು ಮಗ ಮಾಡಿ ಬಿಟ್ಟಿದ್ದ ಸಕ್ರಿಯ ಕ್ರಾಂತಿ ಹೋರಾಟದಲ್ಲಿ ತೊಡಗಿಕೊಳ್ಳುತ್ತಾಳೆ, ನಿಷಿದ್ಧ ಸಾಹಿತ್ಯವನ್ನು ಸ್ಥಾವರದಿಂದ ಸ್ಥಾವರಕ್ಕೆ ತಲುಪಿಸುತ್ತಾ ಜನರಲ್ಲಿ ಜಾಗೃತಿಯನ್ನು ಉಂಟು ಮಾಡುವ ಕೆಲಸ ಮಾಡುತ್ತಾಳೆ. ತನ್ನ ಮಗ ಮತ್ತವನ ಸ್ನೇಹಿತರ ಆಶಯವನ್ನು ತನ್ನ ಹೆಗಲ ಮೇಲೆ ಹೊತ್ತು ಊರಿಂದೂರಿಗೆ, ಮನೆಯಿಂದ ಇನ್ನೊಂದು ಮನೆಗೆ, ಜನರಿಂದ ಹತ್ತು ಹಲವು ಜನರ ಬಳಿಗೆ ಒಯ್ದು ಕ್ರಾಂತಿಯ ಕಿಚ್ಚು ಆರದಂತೆ ನೋಡಿಕೊಳ್ಳುತ್ತಾಳೆ. ಬರುಬರುತ್ತಾ ತಾಯಿ ಕೂಡ ಯಾವ ಸಕ್ರಿಯ ಕ್ರಾಂತಿಕಾರಿಗೂ ಕಮ್ಮಿ ಇಲ್ಲದಂತೆ ಬೆಳೆದು ನಿಲ್ಲುವಂತಾಗುತ್ತಾಳೆ. ತನ್ನ ಮಗ ಪಾವೆಲ್ಲ್ ನ ಸ್ಥಾನವನ್ನು ತಾಯಿ ತುಂಬುತ್ತಾಳೆ. ಜನರು, ರೈತರು ಮತ್ತು ದುಡಿಯುವ ವರ್ಗದ ಕಾರ್ಮಿಕರ ಪಾಲಿನ ಇನ್ನೊಬ್ಬ ಪಾವೆಲ್ ಆಗುತ್ತಾಳೆ. ಈ ಕಾರ್ಯದಲ್ಲಿ ತಾಯಿಗೆ ಹತ್ತು ಹಲವು ಹೊಸ ಹೊಸ ಜನರ ಪರಿಚಯವಾಗುತ್ತ‌ದೆ.

ಇತ್ತ ಬಂಧಿತನಾದ ಮಗನ ವಿಚಾರಣೆ ನಡೆದು ಆತನನ್ನು ಸೈಬೀರಿಯಾಕ್ಕೆ ಗಡೀಪಾರು ಮಾಡಲಾಗುತ್ತದೆ. ತೀರ್ಪು ಹೊರಬೀಳುವ ಮುನ್ನ ಕೋರ್ಟಿನ ಕಟಕಟೆಯಲ್ಲಿ ತನ್ನ ಮಗ ಹೇಳಿಕೆ ನೀಡುತ್ತಾನೆ. ಆ ಹೇಳಿಕೆ ಹೇಗಿರುತ್ತದೆಂದರೆ ಸತ್ತು ಮಲಗಿದಂತಿರುವ ಸಮಾಜದ ಎಲ್ಲಾ ಬಡವರ ನೊಂದವರ ಶೋಷಿತರನ್ನು ಬಡಿದೆಬ್ಬಿಸುವಂತಿರುತ್ತದೆ. ಐತಿಹಾಸಿಕವಾದ ಆತನ ಹೇಳಿಕೆಯನ್ನು ಅಚ್ಚು ಹಾಕಿಸಿ ಜನರಿಗೆ ತಲುಪಿಸುವ ಕಾರ್ಯವನ್ನು ತಾಯಿ ಕೈಗೊಳ್ಳುತ್ತಾಳೆ. ಮತ್ತು ಈ ಕೆಲಸದಲ್ಲಿ ಗೂಡಾಚಾರರು ಮತ್ತು ಪೋಲೀಸರ ಕೈಗೆ ಸಿಕ್ಕಿ ಬೀಳುತ್ತಾಳೆ. ಇವರು ತಾಯಿಯ ಮೇಲೆ ದರ್ಪ ತೋರಿಸಿದಾಗ್ಯೂ ತಾಯಿ ಹೆದರದೆ ತನ್ನನ್ನು ತಾನು ಸಮರ್ಥಿಸಿಕೊಳ್ಳುತ್ತಾಳೆ. ಆದರೆ ಕಣ್ಣಿಲ್ಲದ ಕುರುಡು ಸಮಾಜದಲ್ಲಿ ನ್ಯಾಯದ ಮಾತಿಗೆಲ್ಲಿ ಬೆಲೆ? ತಾಯಿಯನ್ನು ಹೊಡೆದು ಸರಳುಗಳ ಹಿಂದೆ ಹಾಕುತ್ತಾರೆ. ಆದರೆ ಆಕೆಯೊಳಗಿದ್ದ ಸ್ವಾತಂತ್ರ್ಯದ ಬಯಕೆಗಳು, ಜಗತ್ತಿನ ಎಲ್ಲಾ ದುಡಿಯುವ ಕಾರ್ಮಿಕ ವರ್ಗ ಇಂದಲ್ಲ ನಾಳೆ ಒಗ್ಗೂಡಿಯೇ ತೀರುತ್ತದೆ ಎನ್ನುವ ಆಕೆಯ ಕನಸು, ನಮ್ಮ ಪಾಲಿನ ಸೂರ್ಯನು ಉದಯಿಸಲೇ ಬೇಕು ಎಂದು ಬಯಸುವ ಆಕೆಯ ನಂಬಿಕೆ ಆಕೆಯಲ್ಲಿ ಜಾಗೃತವಾಗೇ ಇರುತ್ತವೆ ಮತ್ತು ಅದನ್ನು ಬಂಧಿಸಲು ಸಾಧ್ಯವಿಲ್ಲ ಎನ್ನುವ ಆಶಯದೊಂದಿಗೆ ಕಾದಂಬರಿ ಮುಗಿಯುತ್ತದೆ.

ಇದು ನಾವು ನೀವು ಅಂದುಕೊಂಡಂತೆ ನಮ್ಮ ಸುತ್ತಮುತ್ತ ನಾವು ಕಾಣುವ ಸಾಮಾನ್ಯ ತಾಯಿಯೊಬ್ಬಳ ಕಥೆಯಲ್ಲ. ಅದೆಲ್ಲವನ್ನು ಮೀರಿ ನಿಲ್ಲುವ, ಮಾನವತೆಯ ಮೂರ್ತರೂಪವೆತ್ತ, ಅಜ್ಞಾನಿ ಅವಿದ್ಯಾವಂತೆ ತಾಯಿಯೊಬ್ಬಳು ಎಲ್ಲಾ ಅಸಾಧ್ಯತೆಯನ್ನೂ ಮೀರಿ ಬೆಳೆದು ನಿಲ್ಲುವ ಅಸಾಮಾನ್ಯ ಕಥೆ, ಕ್ರಾಂತಿಕಾರಿಣಿಯಾಗಿ ತನ್ನನ್ನು ತಾನು ಮೇಳೈಸಿಕೊಳ್ಳುವ ಕಥೆ, ಜಗತ್ತಿನ ಎಲ್ಲ ಹಿಂದುಳಿದ ವರ್ಗದ ಪ್ರತಿಧ್ವನಿಯಾಗಿ ಮಾರ್ಪಾಡಾಗುವ ಕಥೆ, ಉಳ್ಳವರ ಅರಸೊತ್ತಿಗೆಯನ್ನು ಧಿಕ್ಕರಿಸಿ ಮೆಟ್ಟಿ ನಿಲ್ಲುವ ಕಥೆ, ಕ್ರಾಂತಿಯ ಹಣತೆಯನ್ನು ಎದೆಯಲ್ಲಿ ಉರಿಯುಟ್ಟುಕೊಂಡು ನೊಂದವರ ಬಡವರ ದೀನದಲಿತರ ಹಕ್ಕುಗಳಿಗಾಗಿ ಹೋರಾಡುವ ಕಥೆ, ಆಳುವ ಮೇಲ್ವರ್ಗದವರು ಸಾಮಾನ್ಯ ಜನತೆಗೆ ಮಾಡುತ್ತಿರುವ ಅನ್ಯಾಯ ಅಕ್ರಮ ದಬ್ಬಾಳಿಕೆಯ ಬಗ್ಗೆ ಕಣ್ಣಿಕೆ ಕಾಣುವಂತೆ ಕಟ್ಟಿಕೊಡಬಲ್ಲ ತಾಯಿಯ ಕಥೆ..

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಈ ಕಾದಂಬರಿಯಲ್ಲಿ ಬರುವ ಎಲ್ಲಾ ಪಾತ್ರಗಳೂ, ಮುಖ್ಯವಾಗಿ ತಾಯಿಯದೂ ಸೇರಿದಂತೆ ಬಹಳ ಲೌಕಿಕವಾದ ಧಾಟಿಯಲ್ಲಿ ಚಿತ್ರಿಸಲಾಗಿದೆ. ಭಾವನೆಗಳಿಗಿಲ್ಲಿ ಅವಕಾಶ ಕಡಿಮೆ. ಸುತ್ತಮುತ್ತಲ ಸನ್ನಿವೇಶ ಮತ್ತು ಪರಿಸರದ ಬಗೆಗಿರುವಷ್ಟು ವಿವರಣಿ ಪಾತ್ರಗಳಲ್ಲಿಲ್ಲ.

1906 ರಲ್ಲಿ ಮಾಕ್ಸಿಂ ಗೋರ್ಕಿ ಬರೆದಿದ್ದ ಈ ಕಾದಂಬರಿ ಈತನಕವೂ ಜಗತ್ತಿನ ಬೆಸ್ಟ್ ಸೆಲ್ಲರ್ ಗಳಲ್ಲಿ ಒಂದು. ಪ್ರಪಂಚದ ಅನೇಕಾನೇಕ ಭಾಷೆಯಲ್ಲಿ ಅನುವಾದಗೊಂಡಿದೆ, ನಾಟಕವಾಗಿದೆ, ಸಿನಿಮಾ ಆಗಿದೆ. ಕನ್ನಡಕ್ಕೆ ನಿರಂಜನ ಅವರು ಭಾಷಾಂತರ ಮಾಡಿದ್ದಾರೆ.

ಹಾಂ! ಇದು ಕಾಲ್ಪನಿಕೆ ಕಥೆಯಲ್ಲ. ಮಾಕ್ಸಿಂ ಗೋರ್ಕಿ ಜೀವನದಲ್ಲಿ ನಡೆದ ನೋಡಿದ ಜೀವಂತ ಪಾತ್ರಗಳನ್ನು ಇಟ್ಟುಕೊಂಡು, ಆಗಿನ (ಈಗಿನದೂ ಆಗಿದೆ) ಓರೆಕೋರೆಗಳನ್ನು ತಮ್ಮದೇ ಆದ ಲಯದಲ್ಲಿ ತಿದ್ದುವ ಪ್ರಯತ್ನದ ಕಥೆ. ಓದಲೇಬೇಕಾದ ಕೃತಿಯಿದು.

ನಮಸ್ಕಾರ.

ಮೋಹನ್ ಕುಮಾರ್ ಡಿ ಎನ್

 

 

Advertisements

About pustakapremi

ಪುಸ್ತಕ ಪರಿಚಯ, ವಿಮರ್ಶೆ, ಅನಿಸಿಕೆ ಮತ್ತು ಮಾಹಿತಿ ವೇದಿಕೆ. ಪುಸ್ತಕಪ್ರೇಮಿಗಳಿಗೊಂದು ಸಮೃದ್ಧ ತಾಣ.
This entry was posted in ಕನ್ನಡ - ಅನುವಾದಿತ, ನಿರಂಜನ, Uncategorized and tagged , . Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s