‘ಭಿತ್ತಿ’ – ಎಸ್ ಎಲ್ ಭೈರಪ್ಪ

Bitti

ಎಸ್ ಎಲ್ ಭೈರಪ್ಪನವರ ಭಿತ್ತಿ ಓದಿ ಮುಗಿಸಿದೆ. ಅವರ ಬಹುತೇಕ ಕೃತಿಗಳು ಸಣ್ಣ ಅಕ್ಷರಗಳೊಂದಿಗೆ ಗಾತ್ರದಲ್ಲಿ ದೊಡ್ಡವು. ಎತ್ತಿಕೊಂಡಾಗ ಎಷ್ಟು ದಿನ ಬೇಕಾಗಬಹುದು ಎಂದು ಯೋಚಿಸುವುದಿದೆ. ಒಮ್ಮೆ ಆರಂಭಿಸಿದರೆ ಕಾದಂಬರಿ ಕೆಳಗಿಡುವ ಮನಸಾಗುವುದಿಲ್ಲ, ಒಂದೇ ಕಂತಿನಲ್ಲಿ ಓದಲೂ ಸಾಧ್ಯವಾಗುವುದಿಲ್ಲ. ಒಂದು ರೀತಿಯ ಬಂಧನಕ್ಕೊಳಗಾದಂತೆ, ಅದೇ ಧ್ಯಾನದಲ್ಲಿರುವಂತೆ ಪಾತ್ರಗಳೇ ನಮ್ಮೆದುರು ಪ್ರತ್ಯಕ್ಷವಾಗಿ ಸಂಭಾಷಣೆಗಿಳಿಯುತ್ತವೆ. ನಮ್ಮ ವಾಸ್ತವ ಬದುಕಿನ ವ್ಯವಹಾರಗಳಿಂದ ನೆಗೆದು, ಬೇರೊಂದು ಪ್ರಪಂಚದಲ್ಲಿ ತೇಲುತಿರುತ್ತೇವೆ. ಅವರ ಕಾದಂಬರಿಗಳನ್ನು ಓದುವಾಗ ಅದೆಷ್ಟೋ ಬಾರಿ ಯೋಚಿಸುವುದುಂಟು ಓದಿನಲ್ಲಿ ಇಂತಹ ಏಕತಾನತೆಯನ್ನು ಮೂಡಿಸುವ ಶಕ್ತಿ ಯಾವುದು ಎನ್ನುವ ಪ್ರಶ್ನೆಗೆ ಎಂದೂ ಉತ್ತರ ಹೊಳೆದಿಲ್ಲ, ಈ ಅಜ್ಞಾತ ಪ್ರಶ್ನೆಯಲ್ಲಿಯೇ ಒಂದು ಸೆಳೆತವಿದೆ ಅದರಿಂದ ಬಿಡಿಸಿಕೊಳ್ಳುವ ಬದಲು ಅನುಭವಿಸುವುದರಲ್ಲಿ ಸುಖವಿದೆ ಎನ್ನಿಸಿಬಿಡುತ್ತದೆ.
ಓದುತ್ತಾ ಓದುತ್ತಾ ಹೋದಂತೆ ಕಾದಂಬರಿಗಳ ಆಳ, ತಲ್ಲೀನತೆಗಳು ಆಕರ್ಷಿಸಿ ಕಾದಂಬರಿ ಮುಗಿದ ಕೂಡಲೇ ಪ್ರಿಯವಾದ ಬಂಧನದಿಂದ ಬಿಡಿಸಿಕೊಂಡಂತಹ ಭಾವದ ಜೊತೆಗೆ ಮತ್ತೊಮ್ಮೆ ಓದಿಬಿಡಲಾ? ಎಂಬ ಒತ್ತಡ. ಕೆಲವು ದಿನಗಳವರೆಗೆ ಅದೇ ಲಹರಿ.
ಭೈರಪ್ಪನವರು ತಮ್ಮ ಕೃತಿಗಳಲ್ಲಿ ಒಡಮೂಡುವ ಯಾವುದೇ ಮೌಲ್ಯಗಳನ್ನು, ಭಾವನೆಗಳನ್ನು ಓದುಗರ ಮೇಲೆ ಹೇರುವುದಿಲ್ಲ ನಿರ್ಧಾರಗಳನ್ನು ಓದುಗರಿಗೇ ಬಿಟ್ಟು, ಒಂದು ನಿಲುವಿಗೆ ಬರಲು ಬೇಕಾಗುವ ಅಗತ್ಯ ಸಾಮಾಗ್ರಿಗಳನ್ನು ಎಳೆ ಎಳೆಯಾಗಿ ತೆರೆದಿಡುತ್ತಾರೆ. ಕಾದಂಬರಿಗಳ ರಚನೆಗೆ ಅವರು ನಡೆಸುವ ಗಹನವಾದ ಅಧ್ಯಯನವನ್ನು ಆವರಣ, ಸಾರ್ಥ, ಯಾನ ಮೊದಲಾದ ಕಾದಂಬರಿಗಳಲ್ಲಿ ಕಾಣಬಹುದು. ಹೀಗಾಗಿಯೇ ಅವರ ಕೃತಿಗಳಲ್ಲಿ ಅಂತಃಸತ್ವ, ವಸ್ತುನಿಷ್ಠತೆ ಇದೆ. ವಿಮರ್ಶೆ, ಪ್ರಚಾರಗಳ ಅಗತ್ಯವಿಲ್ಲದೇ ಓದುಗರಿಗೆ ಇಷ್ಟವಾಗುತ್ತವೆ.

ಒಬ್ಬ ಕಲಾವಿದನ ಬದುಕಿನ ಪುಟಗಳನ್ನು ತಡಕುವ ಕುತೂಹಲ ಎಲ್ಲರಿಗೂ ಇರುತ್ತದೆ, ಅದು ಸಹಜ ಕೂಡ. ಹಾಗಿರುವಾಗ,
ಕನ್ನಡ ಸಾಹಿತ್ಯ ಲೋಕದಲ್ಲಷ್ಟೇ ಅಲ್ಲದೇ ಭಾರತೀಯ ಸಾಹಿತ್ಯ ಕ್ಷೇತ್ರದಲ್ಲಿ ಮನೆಮಾತಾದ ಎಸ್ ಎಲ್ ಭೈರಪ್ಪನವರ ಜೀವನದ ಬಗ್ಗೆ ತಿಳಿಯುವ ಉತ್ಸಾಹ ಯಾರಿಗಿರುವುದಿಲ್ಲ? ಓದುಗರ ಅಂತಹ ಕುತೂಹಲಗಳಿಗೆ ಸ್ಪಷ್ಟ ಚೌಕಟ್ಟನ್ನು ತಮ್ಮ ಆತ್ಮವೃತ್ತಾಂತ ಭಿತ್ತಿಯಲ್ಲಿ ಬಿತ್ತರಿಸಿದ್ದಾರೆ.
ಅವರ ಬಾಲ್ಯ, ಓದುವುದಕ್ಕಾಗಿ ಸಹಿಸಿದ ಕಷ್ಟಗಳು, ಅಧ್ಯಯನಶೀಲತೆ, ಸಾಹಿತ್ಯದ ತುಡಿತ, ಸಂಗೀತದ ಆಸಕ್ತಿ, ಅಂದಿನ ಸಮಾಜದಲ್ಲಿ ಪ್ರಬಲವಾಗಿದ್ದ ಜಾತಿಯ ತಿಕ್ಕಾಟಗಳು, ಭಾರತದ ರಾಜಕೀಯ ವ್ಯವಸ್ಥೆ, ಸಾಹಿತ್ಯ ಕ್ಷೇತ್ರದಲ್ಲಿ ಉಂಟಾದ ಬದಲಾವಣೆಗಳು, ನವ್ಯ ಸಾಹಿತಿಗಳ ವಿಚಾರಗಳನ್ನು ಭಿತ್ತಿಯಲ್ಲಿ ಕಾಣಬಹುದು. ಆರಂಭದಿಂದಲೂ ಜಾತಿ, ಮೌಲ್ಯಗಳ ಹೆಸರಿನಲ್ಲಿ ಅವರ ಸಾಹಿತ್ಯದ ಬೆಳವಣಿಗೆಯನ್ನು ಹತ್ತಿಕ್ಕಲು ಮಾಡಿದ ಹುನ್ನಾರಗಳ ನಡುವೆ ಗಟ್ಟಿತನ ಉಳಿಸಿಕೊಂಡಿರುವುದಕ್ಕೆ ಅವರ ಮೇರು ಕೃತಿಗಳೇ ಕೈಗನ್ನಡಿ.
ತಮ್ಮ ವ್ಯಯಕ್ತಿಕ ಬದುಕನ್ನು ಎಲ್ಲೂ ವಿಜೃಂಭಿಸಿಕೊಳ್ಳದೇ, ರಾಗದ್ವೇಷಗಳಿಗೆ ಆಸ್ಪದ ಕೊಡದೇ ಎಲ್ಲವನ್ನೂ ಕೇವಲ ವಸ್ತುಗಳಂತೆ, ಭಿತ್ತಿಯಲ್ಲಿ ದಾಖಲಿಸಿದ್ದಾರೆ.
ಅವರ ಜೀವನದ ಅನೇಕ ಸೂಕ್ಷ್ಮ ವಿಚಾರಗಳು ಭಿತ್ತಿಗಿಂತ ಗೃಹಭಂಗ, ಅನ್ವೇಷಣ, ಧರ್ಮಶ್ರೀ ಗಳಲ್ಲಿ ಇನ್ನು ಹೆಚ್ಚು ಸ್ಫುಟಗೊಂಡಿರುವುದನ್ನು ಕಾಣುತ್ತವೆ. ಹೀಗಾಗಿ ಮೊದಲು ಇವುಗಳನ್ನು ಓದುವುದು ಸೂಕ್ತವೇನೊ, ನಂತರ ಭಿತ್ತಿ ಓದಿದರೆ ಅವರ ಬದುಕಿನ ಅನೇಕ ವಿಷಯಗಳು, ಕಾದಂಬರಿಗಳ ರಚನೆಯ ಹಿನ್ನೆಲೆಗಳು ಸ್ಪಷ್ಟವಾಗುತ್ತಾ ಹೋಗುತ್ತವೆ. ಭಿತ್ತಿ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಬಲ್ಲ ಕೃತಿ. ಒಂದು ಘನವಾದ ವ್ಯಕ್ತಿತ್ವಕ್ಕೆ ಕಷ್ಟಗಳು ಕೂಡ ಹೇಗೆ ಪೂರಕವಾಗಬಲ್ಲವು ಎನ್ನುವುದಕ್ಕೆ ಭೈರಪ್ಪನವರೇ ಸಾಕ್ಷಿ.
ಧನ್ಯವಾದಗಳು.

– ಕವಿತಾ ಭಟ್

Advertisements

About pustakapremi

ಪುಸ್ತಕ ಪರಿಚಯ, ವಿಮರ್ಶೆ, ಅನಿಸಿಕೆ ಮತ್ತು ಮಾಹಿತಿ ವೇದಿಕೆ. ಪುಸ್ತಕಪ್ರೇಮಿಗಳಿಗೊಂದು ಸಮೃದ್ಧ ತಾಣ.
This entry was posted in ಎಸ್. ಎಲ್. ಭೖೆರಪ್ಪ, ಕನ್ನಡ, Uncategorized and tagged , . Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s