‘ಗಗನ ಗೋಚರೀ ವಸುಂಧರಾ’ – ಅಹೋರಾತ್ರ

Gagana

ಇತ್ತೀಚೆಗೆ, ಕನ್ನಡಲೋಕ ದಿಂದ, Ahoratra Natesha Polepalli ಅವರ ಪರಿಕಲ್ಪನೆಯಲ್ಲಿ ಡಾ.ಶ್ರೀವತ್ಸ ಎಸ್. ವಟಿ ಅವರ ಲೇಖನಿಯಿಂದ ಮೂಡಿಬಂದ ” ಗಗನಗೋಚರೀ ವಸುಂದರಾ ” ಪುಸ್ತಕವೂ ಸೇರಿದಂತೆ ಐದು ಪುಸ್ತಕಗಳನ್ನು ವಿಶೇಷ ಬೆಲೆಯಲ್ಲಿ ಕೊಂಡುಕೊಂಡ ಬಗ್ಗೆ ಒಂದು ಮಾಹಿತಿ ಹಂಚಿಕೊಂಡಿದ್ದೆ.
https://m.facebook.com/story.php?story_fbid=1551609144928562&id=100002384735954

ಅದರಲ್ಲಿ ಮೊದಲನೆಯದಾಗಿ ” ಗಗನಗೋಚರೀ ವಸುಂದರಾ ” ಪುಸ್ತಕವನ್ನು ಓದಿ ಮುಗಿಸಿದೆ.

ಈ ಪುಸ್ತಕದ ವಿಷಯ, ಸಾರ, ಸ್ವಾರಸ್ಯ, ಇತ್ಯಾದಿಗಳಿಗೆ ಅತ್ಯಂತ ಸೂಕ್ತವಾಗಿ ಹೊಂದಿಕೆಯಾಗುವಂತಹ ಸುಂದರ ಮತ್ತು ಅರ್ಥಗರ್ಭಿತ ಹೆಸರು ಈ ಪುಸ್ತಕಕ್ಕೆ.. !!!
ಪುಸ್ತಕದ ಒಳವಿಭಾಗಗಳೂ ಕೂಡಾ ಅಷ್ಟೇ ಹಂತಹಂತವಾಗಿ, ಕ್ರಮಬದ್ಧವಾಗಿ, ಅರ್ಥವತ್ತಾಗಿ ವಿಭಾಗಿಸಲ್ಪಟ್ಟು ವಿವರಣೆ ನೀಡುತ್ತವೆ.

‘ ಪುರಾತನರು ಆಕಾಶದಿಂದ ಭೂದೃಶ್ಯಗಳನ್ನು ನೋಡಿದ್ದಾರೆಯೆ !? ‘ ಎಂಬ ಕುತೂಹಲಕರ ಪ್ರಶ್ನೆಯನ್ನು ಕೇಳಿಕೊಳ್ಳುತ್ತಾ , ವಿಷಯ ಮಥನ ಮಾಡುತ್ತಾ ಸಾಗುವ ಮೊದಲ ಅಧ್ಯಾಯ, ನಮ್ಮೆದುರಿಗೆ ಹಲವಾರು ಮಾಹಿತಿಗಳನ್ನು ನೀಡುತ್ತಾ, ನಮ್ಮನ್ನು ಆಶ್ಚರ್ಯಚಕಿತಗೊಳಿಸುತ್ತಾ ಹೋಗುತ್ತದೆ. ಜಗತ್ತಿನ ಹಲವು ನಾಗರೀಕತೆಗಳಲ್ಲಿ ಕಂಡುಬರುವ ಆಕಾಶಯಾನದ ವಿವರಗಳಲ್ಲಿ ಸಾಮ್ಯತೆ ಇರುವುದನ್ನು , ಬೇರೆಬೇರೆ ಧರ್ಮಗ್ರಂಥಗಳಲ್ಲಿ, ಶಿಶುಸಾಹಿತ್ಯಗಳನ್ನೂ ಒಳಗೊಂಡಂತೆ ಜನಪದೀಯ ಸಾಹಿತ್ಯದಲ್ಲಿ, ಹಾಗೂ ಬಹುಶಃ ಇಂತಹ ಸಾಹಿತ್ಯಗಳಿಂದ ಪ್ರೇರೇಪಿತವಾಗಿ ಇಂದಿನ ಕಾಲಘಟ್ಟದ ಸಾಹಿತ್ಯಗಳಲ್ಲೂ ಆಕಾಶಯಾನದ ಕುರಿತಾಗಿ, ಆಕಾಶಗಮನ ಮಾಡುವವರ ಬಗ್ಗೆ ಉಲ್ಲೇಖ ಕಂಡುಬರುವುದನ್ನು ಇಲ್ಲಿ ವಿವರಿಸಲಾಗಿದೆ. ಆಂಗ್ಲ ವಾಹಿನಿಯೊಂದರಲ್ಲಿ ಪ್ರಸಾರವಾಗುವ ಬಹುಜನಪ್ರಿಯ ಕಾರ್ಯಕ್ರಮ Ancient Aliens, ನಾಜ್ಕಾ ರೇಖೆಗಳು, ನಿಗೂಢ’ ಪೆರಿ ರೈಸ್ ‘ ಚಿತ್ರ, ಈಸ್ಟರ್ ದ್ವೀಪದ ಬೃಹತ್ ಶಿಲಾಮಾನವರು, ಸ್ಟೋನ್‌ಹೆಂಜ್, ಇತ್ಯಾದಿಗಳ ಬಗ್ಗೆ ಮೊದಲ ಅಧ್ಯಾಯದಲ್ಲಿ ಚರ್ಚಿಸಲಾಗಿದೆ.

‘ ಪುರಾತನ ಭಾರತೀಯರಲ್ಲಿ ಗಗನಯಾನದ ಪರಿಕಲ್ಪನೆ ‘
ಇತ್ತೇ? ಎಂಬ ಬಗ್ಗೆ ವಿವರಿಸುತ್ತಾ ಹೋಗುವ ಎರಡನೆಯ ಅಧ್ಯಾಯ, ಅನಾದಿಕಾಲದಲ್ಲೇ ಭಾರತೀಯ ಸಾಹಿತ್ಯದಲ್ಲಿ ವರ್ಣಿಸಲಾದ ‘ ಸಪ್ತದ್ವೀಪಾ ವಸುಂಧರಾ ‘ ಎಂಬ ವರ್ಣನೆಯ ಬಗ್ಗೆ ಬೆಳಕು ಚೆಲ್ಲುತ್ತದೆ. ಆಕಾಶದಲ್ಲಿ ಹಾರುವಿಕೆಯನ್ನು ೧) ಜನ್ಮಜಾತ ಸಹಜಗುಣ, ೨) ಸಾಧನೆಯಿಂದ ಗಳಿಸಿದ ಹಾರುವ ಶಕ್ತಿ ೩) ವಾಹನಗಳ ಸಹಾಯದಿಂದ ಹಾರುವಿಕೆ ಎಂದು ಮೂರು ಬಗೆಗಳಾಗಿ ವಿಂಗಡಿಸುತ್ತಾ , ಅವುಗಳನ್ನು ವಿವರಿಸುತ್ತಾ ಹೋಗುವ ಈ ಅಧ್ಯಾಯ, ನಮಗೆ ತಿಳಿದಿರುವ ಕೆಲವು ವಿಷಯಗಳನ್ನು ಬೇರೊಂದು ಕೋನದಲ್ಲಿ ಯೋಚಿಸುವಂತೆ ಮಾಡುವಲ್ಲಿ ಸಫಲವಾಗುತ್ತದೆ.

‘ ಪುರಾತನ ಭಾರತದಲ್ಲಿ ವಿಮಾನಗಳ ಪರಿಕಲ್ಪನೆ ‘ ಎಂಬುದು ಮೂರನೇಯ ಭಾಗ. ಇಲ್ಲಿ ವೇದಗಳು, ರಾಮಾಯಣ, ಭಾರದ್ವಾಜ ಮಹರ್ಷಿಗಳ ವಿಮಾನಶಾಸ್ತ್ರ, ಇತ್ಯಾದಿಗಳಲ್ಲಿ ವಿವರಿಸಲಾದ ವಿಮಾನಗಳ ಬಗ್ಗೆ ಚರ್ಚೆ ನಡೆಸುವ, ಜೊತೆಗೆ ಆ ವಿದ್ಯೆ ಯಾಕಾಗಿ ಮಾಯವಾಗಿರಬಹುದು ಎಂಬುದಕ್ಕೆ ತಾರ್ಕಿಕ ವಿವರಣೆ ನೀಡುವ ಪ್ರಯತ್ನ ಮಾಡಲಾಗಿದೆ.

‘ ಪುರಾತನ ಕಾವ್ಯಗೋಚರೀ ವಸುಂಧರಾ ‘ ಎಂಬುದು ನಾಲ್ಕನೆಯ ಭಾಗವಾಗಿದ್ದು, ಇಲ್ಲಿ, ಭಾರತೀಯ ಪುರಾತನ ಸಾಹಿತ್ಯಪ್ರಕಾರಗಳಲ್ಲಿ ಗಗನದಿಂದ ಭೂದೃಶ್ಯವೀಕ್ಷಣೆಯ ಕೆಲವು ಉದಾಹರಣೆಗಳನ್ನು ವಿವರಿಸಲಾಗಿದೆ. ರಾಮಾಯಣ, ಮಹಾಭಾರತ, ಭಾಗವತಾದಿಗಳಲ್ಲಿನ ಗಗನಯಾನ ಪ್ರಸಂಗಗಳು, ರಾಮಸೇತು, ಸಿಂಹಿಕಾ ಪ್ರಸಂಗ ಮತ್ತು ಬರ್ಮುಡಾ ಟ್ರಯಾಂಗಲ್, ಯವ ತ್ರಿಕೋನ, ಡ್ರಾಗನ್ಸ್ ಟ್ರಯಾಂಗಲ್, ಪುಷ್ಪಕವಿಮಾನ, ಮಾನಸ ಸರೋವರ, ರಾಕ್ಷಸ ಸರೋವರ, ಕೈಲಾಸ ಶಿಖರದ ನೋಟ ಇತ್ಯಾದಿಗಳ ಬಗ್ಗೆ ಓದುಗರು ಕುತೂಹಲ ತಾಳುವಂತೆ , ಹೆಚ್ಚಿನ ಮಾಹಿತಿ ಪಡೆಯುವಂತೆ ಮಾಡಲು ಈ ಅಧ್ಯಾಯ ಯಶಸ್ವಿಯಾಗುತ್ತದೆ.

‘ ಮೇಘದೂತಗೋಚರೀ ವಸುಂಧರಾ’ ಎಂಬ ಹೆಸರಿನ ಐದನೆಯ ಅಧ್ಯಾಯದಲ್ಲಿ, ಕಾಳಿದಾಸ ಮಹಾಕವಿಯ ಮೇಘದೂತಂ ಕಾವ್ಯದಲ್ಲಿ ವರ್ಣಿಸಲಾದ ಗಗನಗೋಚರೀ ಭೂದೃಶ್ಯಗಳ ಬಗ್ಗೆ ವಿವರವಾಗಿ ಚರ್ಚಿಸಲಾಗಿದೆ. ಓದುತ್ತಾ ಹೋದಂತೆ ಓದುಗರಲ್ಲಿ ರೋಮಾಂಚನವನ್ನು ಉಂಟುಮಾಡುವಲ್ಲಿ ಈ ಅಧ್ಯಾಯ ಯಶಸ್ವಿಯಾಗುತ್ತದೆ.

‘ ಗೂಗಲ್‌ಗೋಚರೀ ವಸುಂಧರಾ ‘ ಎಂಬ ಆರನೆಯ ಹಾಗೂ ‘ ನಟೇಶ ಅವರು ಕಂಡಿರುವ ಇನ್ನಷ್ಟು ಚಿತ್ರ-ವಿಚಿತ್ರಗಳು ‘ ಎಂಬ ಏಳನೆಯ ಭಾಗಗಳಲ್ಲಿ, ಇಂದಿನ ಉನ್ನತ ತಾಂತ್ರಿಕತೆ, ಜ್ಞಾನದ ಸಹಾಯದಿಂದ ಸಂಗ್ರಹಿಸಲಾದ ಚಿತ್ರಗಳು ಮತ್ತು ವಿವರಣೆಗಳಿದ್ದು, ಇವು ನಮ್ಮನ್ನು ಆಶ್ಚರ್ಯಭರಿತ ಕುತೂಹಲದಿಂದ ಯೋಚಿಸುವಂತೆ ಮಾಡುವಲ್ಲಿ ಸಫಲವಾಗುತ್ತವೆ. ಇಲ್ಲಿ ಚರ್ಚಿಸಲಾದ ಅನೇಕ ವಿಷಯಗಳು ವೈಯಕ್ತಿಕವಾಗಿ ನನಗೆ ಹೊಸದಾಗಿದ್ದು ಹೊಸ ಹೊಳಹನ್ನು ನೀಡಿವೆ, ಮತ್ತೆಮತ್ತೆ ಯೋಚಿಸುವಂತೆ ಮಾಡಿವೆ. ಈ ಭೂಮಿಯ ಮೇಲಿನ ಅನೇಕ ವಿಶಿಷ್ಟ ಜಾಗಗಳಿಗೆ ಪುರಾತನ ಜನರು ಹೇಗೆ ಅನ್ವರ್ಥಕ ನಾಮಕರಣ ಮಾಡಿದ್ದರು ಎಂಬ ವಿಚಾರಮಥನ ಮಾಡುತ್ತ ನಾವೂ ಮೈಮರೆಯುವಂತಾಗುತ್ತದೆ.

‘ ಸಪ್ತದ್ವೀಪಾ ವಸುಂಧರಾ ‘ ಎಂಬ ಎಂಟನೆಯ ಭಾಗದಲ್ಲಿ ಪುರಾತನ ಭಾರತೀಯರು ಕಂಡ ಏಳು ಮಹಾದ್ವೀಪಗಳ ಬಗ್ಗೆ, ಅವುಗಳಿಗೆ ಇದ್ದ ಹೆಸರಿನ ಬಗ್ಗೆ, ಶ್ರೀಚಕ್ರ ಮತ್ತು ದೇವಕಣಗಳ ನಡುವಿನ ಸಾಮ್ಯತೆ ಇತ್ಯಾದಿಗಳ ಬಗ್ಗೆ ಚರ್ಚಿಸಲಾಗಿದೆ.

‘ ಯಥಾ ಬ್ರಹ್ಮಾಂಡೇ ತಥಾ ಪಿಂಡಾಂಡೇ ‘ ಎಂಬ ಒಂಬತ್ತನೆಯ ಭಾಗದಲ್ಲಿ ಪುರಾತನ ಭಾರತೀಯ ಬ್ರಹ್ಮಾಂಡಕಲ್ಪನೆಯನ್ನು ಹೋಲುವ ಆಧುನಿಕ ಚಿತ್ರಗಳೊಂದಿಗೆ ಅನೇಕ ಕುತೂಹಲಕರ ವಿಷಯಗಳ ಚರ್ಚೆ ನಡೆಸಲಾಗಿದೆ.

‘ ಕಡೆಗೊಂದಿಷ್ಟು ಕೊಸರು ‘ ಎನ್ನುತ್ತಾ ಹತ್ತನೆಯ ಭಾಗದಲ್ಲಿ ಚರ್ಚಿಸಿದ ವಿಷಯಗಳು, ನನ್ನನ್ನೂ ಒಳಗೊಂಡಂತೆ, ಅನೇಕರಿಗೆ ಗೊತ್ತೇ ಇಲ್ಲದ , ಗೊತ್ತಾದ ಮೇಲೆ ಬೆರಗುಗೊಳಿಸುವ ವಿಷಯಗಳಾಗಿವೆ.

ಇದೊಂದು ಕಿರುಪ್ರಯತ್ನ ಎನ್ನುತ್ತಾ , ಲೇಖಕರು, ಹಲವಾರು ವಿಷಯಗಳ ಬಗ್ಗೆ ಬೆಳಕು ಚೆಲ್ಲುವಲ್ಲಿ ಸಫಲರಾಗಿದ್ದಾರೆ. ತಮ್ಮ ನಿರ್ಣಯಗಳನ್ನು ಓದುಗರ ಮೇಲೆ ಹೇರುವ ಯತ್ನ ಮಾಡದೇ, ಇದಮಿತ್ತಂ ಎಂದು ತೀರ್ಪು ನೀಡದೇ, ಕೇವಲ ವಿಷಯಮಂಡನೆ ಮಾಡಿದ, ನಿರ್ಣಯಗಳನ್ನು ಓದುಗರಿಗೇ ಬಿಟ್ಟ ಲೇಖಕರ ಕ್ರಮ ಅಭಿನಂದನಾರ್ಹ.

ಹಾಗೆಯೇ,.. ಅಗತ್ಯವಿರುವಲ್ಲೆಲ್ಲ ವರ್ಣಚಿತ್ರಗಳೊಂದಿಗೆ ವಿವರಣೆ ನೀಡಿರುವ ಬಗೆ, ಬಳಸಲಾದ ಕಾಗದದ ಗುಣಮಟ್ಟ, ಸಂಪೂರ್ಣ ವರ್ಣಮಯ ಮುದ್ರಣ, ವಿಷಯ ಸಂಗ್ರಹದಲ್ಲಿ ಲೇಖಕರ ಶ್ರಮ ಇತ್ಯಾದಿ ಅಂಶಗಳನ್ನು ಗಮನಿಸಿದರೆ, ಪುಸ್ತಕದ ಬೆಲೆ ರೂ.300/- ಹೆಚ್ಚೇನಲ್ಲ. ಸಾಹಿತ್ಯಾಸಕ್ತರು….. ಸಾಹಿತ್ಯಾಸಕ್ತರು ಎಂಬುದಕ್ಕಿಂತ .. ಹೊಸವಿಷಯಗಳ ಬಗೆಗಿನ ಕುತೂಹಲಿಗಳು ಖಂಡಿತಾ ಕೊಂಡು ಓದಬೇಕಾದ ಹೊತ್ತಗೆ ಇದು.

ಅಹೋರಾತ್ರ ಅವರ ಬಗ್ಗೆ ನಾನು ಹೆಚ್ಚು ಬರೆಯುವ ಅಗತ್ಯವೇನಿಲ್ಲ. ಅಂತರ್ಜಾಲ ಜಗತ್ತಿನಲ್ಲಿ ಅವರ ವಿಶಿಷ್ಟ ವೀಡಿಯೋಗಳಿಂದ, ವಿಭಿನ್ನ ಬರಹಗಳಿಂದ ಅವರೀಗಾಗಲೇ ಬಹಳ ಜನರಿಗೆ ಪರಿಚಿತರು. ಹೆಚ್ಚಿನ ಮಾಹಿತಿಗಾಗಿ ಅವರ ಫೇಸ್‌ಬುಕ್‌ ಪೇಜನ್ನು ನೋಡಬಹುದು.

ಡಾ.ಶ್ರೀವತ್ಸ ವಟಿ , ಅಹೋರಾತ್ರ ಮತ್ತು ಕನ್ನಡಲೋಕ ಇವರಿಗೆ ಧನ್ಯವಾದಗಳು.

– ಗುರುಪ್ರಸಾದ್ ಕಾನಲೆ

Advertisements

About pustakapremi

ಪುಸ್ತಕ ಪರಿಚಯ, ವಿಮರ್ಶೆ, ಅನಿಸಿಕೆ ಮತ್ತು ಮಾಹಿತಿ ವೇದಿಕೆ. ಪುಸ್ತಕಪ್ರೇಮಿಗಳಿಗೊಂದು ಸಮೃದ್ಧ ತಾಣ.
This entry was posted in ಅಹೋರಾತ್ರ, ಕನ್ನಡ, Uncategorized and tagged , , . Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s