*ಪುಸ್ತಕ ಪರಿಚಯ*
*ಮೊಗ ಪಡೆದ ಮನ*
*ಲೇಖಕರು:ಡಾ.ಶಿವರಾಮ ಕಾರಂತ*
*ಪ್ರಕಾಶಕರು: ಸಪ್ನ ಬುಕ್ ಹೌಸ್*
*ಬೆಲೆ: ರೂ.೨೦೦*
ನಾನು ಕನ್ನಡ ಕಾದಂಬರಿ ಲೋಕಕ್ಕೆ ಕಾಲಿಟ್ಟಿದ್ದೇ ಶಿವಾರಾಮ ಕಾರಂತರ ಕಾದಂಬರಿಗಳನ್ನು ಓದುವುದರ ಮೂಲಕ.ಅವರ ಬಹುತೇಕ ಎಲ್ಲ ಕೃತಿಗಳನ್ನೂ ಓದಿ ಬಿಟ್ಟಿದ್ದೇನೆ ಎಂದುಕೊಂಡಿದ್ದವನಿಗೆ,ಕೆಲವು ದಿನಗಳ ಹಿಂದೆ ಅಂಕಿತ ಪುಸ್ತಕ ಮಳಿಗೆಯಲ್ಲಿ ಆಕಸ್ಮಿಕವಾಗಿ ಕಣ್ಣಿಗೆ ಬಿತ್ತು,ಕಾರಂತರ *ಮೊಗ ಪಡೆದ ಮನ*.
೧೯೪೮ ರಲ್ಲಿ ಮೊದಲು ಪ್ರಕಟವಾದ ಈ ಕೃತಿ,ಒಬ್ಬ ನೃತ್ಯ ಕಲಾವಿದನ ಜೀವನದ ಏರುಪೇರುಗಳನ್ನು,ತಳಮಳವನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸಿರುವ ಒಂದು ಉತ್ತಮ ಕಾದಂಬರಿ.ಕಥಾನಾಯಕ ವ್ಯಾಸ ಒಬ್ಬ ಆದರ್ಶ ಕಲಾವಿದ.ಹಣಕ್ಕಾಗಿ,ಕೀರ್ತಿಗಾಗಿ ಎಂದೂ ಆತ ನೈಜವಾದ, ಉನ್ನತವಾದ ಕಲೆಯನ್ನು ಮಾರಿಕೊಳ್ಳಲಾರ.ನೃತ್ಯ ಕಲೆಯಲ್ಲಿ ತನ್ನೆಲ್ಲ ಆಲೋಚನೆಗಳನ್ನು,ಕನಸುಗಳನ್ನು,ಆವಿಷ್ಕಾರಪಡಿಸಬೇಕೆನ್ನುವ ಅದಮ್ಯ ಹಂಬಲವನ್ನು ಹೊಂದಿದ ಅವನಿಗೆ ಮಾರ್ಗದಲ್ಲಿ ಹಲವಾರು ಅಡೆತಡೆಗಳು ಬಂದರೂ ಧೃತಿಗೆಡದೆ ತನ್ನ ಆದರ್ಶವನ್ನು ಸಾಕ್ಷಾತ್ಕರಿಸಿಕೊಳ್ಳುವ ಅವನ ಮನೋಸ್ಥೈರ್ಯ ಸೊಗಸಾಗಿ ಚಿತ್ರಿತವಾಗಿದೆ.ಕೃತಿಯುದಕ್ಕೂ ಅಲ್ಲಲ್ಲಿ ಬರುವ ಕಡಲಿನ ವರ್ಣನೆಗಳು ಓದುಗರನ್ನು ಬೇರೆಯೇ ಆದ ಸ್ವಪ್ನ ಲೋಕಕ್ಕೆ ಕೊಂಡೊಯ್ಯುತ್ತವೆ.ಕಾರಂತರು ಜೀವನವನ್ನು ನೋಡುವ ದೃಷ್ಟಿಕೋನವೇ ತುಂಬಾ ವಿಭಿನ್ನ.ಅವರ ಉದ್ವೇಗರಹಿತ,ಆದರೆ ಅಷ್ಟೇ ಭಾವಪೂರ್ಣ ಬರವಣಿಗೆಯ ಶೈಲಿಯೂ ನನಗೆ ತುಂಬಾ ಅಚ್ಚುಮೆಚ್ಚು.ಈ ಕೃತಿಯನ್ನು ಓದುತ್ತಿರುವಾಗ ಅವರ ಇತರ ಕೃತಿಗಳಾದ ಸ್ವಪ್ನದ ಹೊಳೆ,ಮರಳಿ ಮಣ್ಣಿಗೆ,ಆಳ ನಿರಾಳ,ಬೆಟ್ಟದ ಜೀವ, ಮೂಕಜ್ಜಿಯ ಕನಸುಗಳು ಇನ್ನೂ ಹಲವಾರು ಕಾದಂಬರಿಗಳ ನೆನಪಾಯಿತು.ಕಾರಂತರಂಥ ಮಹಾನ್ ಲೇಖಕರನ್ನು ಪಡೆದ ಕನ್ನಡ ಸಾರಸ್ವತ ಲೋಕ ಮತ್ತು ಓದುಗರು ನಿಜಕ್ಕೂ ಧನ್ಯರು.
ಕೃತಿ ಬಸವನಗುಡಿ, ಗಾಂಧಿಬಜಾರ್ ನಲ್ಲಿರುವ ಅಂಕಿತ ಪುಸ್ತಕ ಮಳಿಗೆಯಲ್ಲಿ ಲಭ್ಯವಿದೆ
–ಬಿ.ಎಸ್.ಶ್ರೀನಿವಾಸ್