ಎಸ್. ಎಲ್. ಭೖೆರಪ್ಪ · ಕನ್ನಡ · Uncategorized

‘ಗೃಹಭಂಗ’ – ಎಸ್.ಎಲ್.ಬೈರಪ್ಪ

FB_IMG_1559199090786.jpg

ಪುಸ್ತಕ: ಗೃಹಭಂಗ
ಲೇಖಕರು: ಎಸ್ ಎಲ್ ಭೈರಪ್ಪ
ಪ್ರಕಾಶನ: ಸಾಹಿತ್ಯ ಭಂಡಾರ, ಹುಬ್ಬಳ್ಳಿ

ಸಾಮಾನ್ಯ ಕಥನವೊಂದು ಅದ್ಭುತವಾಗಿ ನಿರೂಪಣೆಗೊಂಡಿರುವ ಅಪ್ಪಟ ಗ್ರಾಮೀಣ ಸೊಗಡಿನ ಕಾದಂಬರಿ.

ಸ್ವಾತಂತ್ರ್ಯಪೂರ್ವದಲ್ಲಿ, ರಾಮಸಂದ್ರ ಎಂಬ ಹಳ್ಳಿಯಲ್ಲಿ ನಡೆಯುವಂಥ ಕಥೆ. ಊರ ತುಂಬ ಎಲ್ಲಾ ಥರಾದ ಜಾತಿಗಳಿವೆ, ವಿಭಿನ್ನ ವ್ಯಕ್ತಿಗಳಿದ್ದಾರೆ ಹಾಗೆ ವಿಭಿನ್ನ ಮನಸ್ಸುಗಳು ಕೂಡ.

ಕಾದಂಬರಿಯ ಪ್ರಧಾನ ಬಿಂದು #ನಂಜಮ್ಮ. ಗಟ್ಟಿಗಿತ್ತಿ.
ಪರಮ ಬೇಜವಾಬ್ದಾರಿಯ ಪತಿ, ಮಾತುಗಳಿಂದಲೇ ಕೊಲ್ಲುವ ಅತ್ತೆ, ವಿಚಿತ್ರ ಬುದ್ಧಿಯ ಮೈದುನ ಇಂಥವರ ನಡುವೆ ಅವಳ ಜೀವನ. ಇವರುಗಳ ಜೊತೆಗೆ ಪ್ಲೇಗ್ ಎಂಬ ಮಾರಿಯಿಂದ ತನ್ನೆರಡೂ ಮಕ್ಕಳನ್ನು ಕಳೆದುಕೊಳ್ಳುತ್ತಾಳೆ. ಇಂತಹ ಅನೇಕ ಕಷ್ಟ ಕೋಟಲೆಗಳನ್ನು ಸಹಿಸಿಕೊಂಡು ಬಾಳುವ ಗಟ್ಟಿಜೀವ.

#ಚನ್ನಿಗರಾಯ. ಹೆಸರಿಗಷ್ಟೇ ಶ್ಯಾನುಭೋಗ.
ಪರಮ ಬೋಳೇತನದ ವ್ಯಕ್ತಿತ್ವ. ತನ್ನ ಹೊಟ್ಟೆ ತುಂಬಿದರೆ ಸಾಕು ಬೇರೆಯೊಬ್ಬರಿಗೆ ಏನಾದರೂ ಆಗಬಹುದು ಅದಕ್ಕೂ ನನಗೂ ಸಂಬಂಧವೇ ಇಲ್ಲ ಅನ್ನುವ ವ್ಯಕ್ತಿ. ಅದರಲ್ಲೂ ತನ್ನ ಮಗು ಹುಟ್ಟಿದಾಗ , ಅದನ್ನ ಎತ್ತಿ ಮುದ್ದಾಡುವುದಿರಲಿ ಎತ್ತಿಕೊಳ್ಳಲು ಸಹ ಯೋಚಿಸುವುದಿಲ್ಲ.. ಅಂತಹ ವ್ಯಕ್ತಿತ್ವ.

#ಗಂಗಮ್ಮ. ಜಗಳಗಂಟಿ. ಬಾಯಿಬಿಟ್ಟರೆ ಬರೀ ಕೆಟ್ಟ ಮಾತುಗಳೇ ಜಾಸ್ತಿ. ತನ್ನದೇ ನಡೆಯಬೇಕೆಂಬ ಹಠ. ತನಗಿಲ್ಲದಿದ್ದರೂ ತನ್ನ ಮಕ್ಕಳಿಗೋಸ್ಕರ ಎಲ್ಲವೂ ಬೇಕು ಅವಳಿಗೆ. ಆದರೂ ಮಕ್ಕಳನ್ನು ಕೂಡ ಬಯ್ಯುತ್ತಾಳೆ ಅದರಲ್ಲೂ ಸೊಸೆ ನಂಜಮ್ಮನನ್ನು ಕಂಡರೆ ಅತಿ ಕೋಪ.
ಕೊನೆಯಲ್ಲಿ ಪ್ಲೇಗ್ ಗೆ ತುತ್ತಾಗುವ ನಂಜಮ್ಮನನ್ನು ಅವಳು ಆರೈಕೆ ಮಾಡುವುದು ಎಂಥ ವಿಪರ್ಯಾಸ ಎನಿಸುತ್ತದೆ.
( ನಮ್ಮ ಕಡೆ ಒಂದು ಮಾತಿದೆ.. ಕಳ್ ಅರಸೀಕೆರೆ, ಸುಳ್ ಬಾಣಾವಾರ, ಪೋಲಿ ತಿಪಟೂರು, ಜಗಳಗಂಟ ಜಾವಗಲ್ ಅಂತ. ಕಾದಂಬರಿಯಲ್ಲಿ ಗಂಗಮ್ಮನ ಊರು ಜಾವಗಲ್ ಎಂದು ಪ್ರಸ್ತಾಪವಾದಾಗ ಈ ಮಾತು ನೆನಪಿಗೆ ಬಂದಿತು.)

#ಅಪ್ಪಣ್ಣಯ್ಯ. ವಿಚಿತ್ರ ಬುದ್ಧಿಯ ಜೀವಿ.
ಅಲೆಮಾರಿತನದ ವ್ಯಕ್ತಿತ್ವ. ಅಮ್ಮನ ಮಾತೇ ವೇದವಾಕ್ಯ. ಕೊನೆಗೆ ಅಮ್ಮನನ್ನು ಬಯ್ಯುತ್ತಾನೆ. ಬೈದು ದೂರ ಇಡುತ್ತಾನೆ. ಕಟ್ಟಿಕೊಂಡ ಹೆಂಡತಿಯನ್ನು ಬಾಳಿಸಲಾಗದೆ, ಅಮ್ಮನ ಮಾತಿಗೆ ತಲೆಬಾಗಿ ತಾಳಿಯನ್ನೇ ಕಿತ್ತು ಕಳುಹಿಸುತ್ತಾನೆ. ಕೊನೆಗೂ ಸರಿದಾರಿಗೆ ಬರುತ್ತನಾದರು ಅಲೆಮಾರಿಯಾಗುತ್ತಾನೆ

#ಗುಡಿಯ_ಮಾದೇವಯ್ಯನವರು. ಜಂಗಮ. ಕಂತೆ-ಭಿಕ್ಷೆ ಎತ್ತಿ ಆ ದಿನದ ಜೀವನವನ್ನ ಸಾಗಿಸುವ ಸನ್ಯಾಸಿ. ನಂಜಮ್ಮನಿಗೆ ಮಾನಸಿಕವಾಗಿ ಶಕ್ತಿ ತುಂಬುವಂತಹ ಪಾತ್ರ. ನಂಜಮ್ಮನ ಕಿರಿಯ ಮಗ ವಿಶ್ವನಿಗೂ ಅವರಿಗೂ ಅನ್ಯೋನ್ಯ ಸಂಬಂಧ. ಇಡೀ ರಾಮಸಂದ್ರಕ್ಕೆ ಪೂಜನೀಯ. ಗಂಗಮ್ಮಳಿಗೆ ಹೊರತುಪಡಿಸಿ.

#ಕಂಠಿಜೋಯಿಸ. ನಂಜಮ್ಮ ತಂದೆ. ಪ್ರಚಂಡ.
ನಾನಾತರಹದ ವಿದ್ಯೆಗಳನ್ನು ಕರತಲಾಮಲಕ ಮಾಡಿಕೊಂಡಿರುವವನು. ಅವನನ್ನು ಎದುರಿಸಿ ನಿಲ್ಲುವುದು ಯಾರಿಗೂ ಸಾಧ್ಯವಿಲ್ಲ. ಸಂಚಾರಿ. ಆದರೆ ಅವನು ಮಾಡುವ ನಿರ್ಧಾರಗಳಿಂದಲೇ ಅವನ ಮಕ್ಕಳ ಬಾಳು ಹಾಳಾಗುತ್ತದೆ.

ಇವಿಷ್ಟು ಪ್ರಧಾನ ಪಾತ್ರಗಳು. ( ಅದರಲ್ಲೂ ನಾನು ಆ ಪಾತ್ರಗಳ ಬಗ್ಗೆ ಬರೆದಿರುವುದು ತುಂಬಾ ಸಂಕ್ಷಿಪ್ತವಾಗಿ ಅವುಗಳ ವಿಸ್ತಾರ ತುಂಬಾ ಇದೆ ಕಾದಂಬರಿಯಲ್ಲಿ )
ಇವುಗಳ ಜೊತೆಗೆ ಅಕ್ಕಮ್ಮ, ಕಲ್ಲೇಶ, ನರಸಿ, ಸರ್ವಕ್ಕ, ರೇವಣ್ಣ ಶೆಟ್ಟಿ, ಗುಂಡೇಗೌಡ, ಶಿವೇಗೌಡ, ಪಾರ್ವತಿ, ರಾಮಣ್ಣ ಇನ್ನು ಮುಂತಾದ ಅನೇಕ ಪಾತ್ರಗಳಿವೆ.
ಎಲ್ಲಕ್ಕೂ ಜೀವವಿದೆ, ಎಲ್ಲವೂ ಅರ್ಥಪೂರ್ಣವಾಗಿವೆ.
ಪುಸ್ತಕ ಪ್ರೇಮಿಯಾದವನು ಖಂಡಿತವಾಗಿಯೂ ಓದಲೇಬೇಕಾದ ಪುಸ್ತಕವಿದು. ❤

ಗೃಹಭಂಗ ಕಾದಂಬರಿಯು ಧಾರಾವಾಹಿ ರೂಪದಲ್ಲಿ ಬಂದಿದೆ.
ಕಾದಂಬರಿಗೆ ಯಾವುದೇ ಧಕ್ಕೆ ಬರದಂತೆ ಚೆನ್ನಾಗಿ ಚಿತ್ರಿಸಿದ್ದಾರೆ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರು. ಕಾದಂಬರಿಯ ಪಾತ್ರಗಳಿಗೆ ತಕ್ಕಂತೆ ಕಲಾವಿದರು ಕೂಡ ಇದ್ದಾರೆ, ಅಷ್ಟೇ ಚೆನ್ನಾಗಿ ಅಭಿನಯಿಸಿದ್ದಾರೆ ಕೂಡ.
ಕೊನೆಯ ಎರಡು ಮೂರು ಅಧ್ಯಾಯಗಳನ್ನು ಅಳವಡಿಸಿಕೊಂಡಿಲ್ಲ. ಆದರೂ ಮನಸ್ಸಿನಲ್ಲಿ ಉಳಿಯುತ್ತದೆ ಈ ಧಾರಾವಾಹಿ.

ಸಂಜಯ್ ಮಂಜುನಾಥ್

ನಿಮ್ಮ ಟಿಪ್ಪಣಿ ಬರೆಯಿರಿ