ಫೀಪೋ । ಮಧುಸೂದನ ವೈ ಎನ್ । ಬಹುರೂಪಿ ಪ್ರಕಾಶನ

ಫೀಫೋ ಎನ್ನುವುದು ಕಂಪ್ಯೂಟರ್ ಪದ. First in fist out. ಈ ಪುಸ್ತಕಕ್ಕೆ ಅದೇ ಹೆಸರು ಇಟ್ಚಿರಲು ಸುರುವಿನಲ್ಲೆ ಮಧು ಸ್ಪಷ್ಟನೆ ಕೊಟ್ಟಿದ್ದಾರೆ. ನೆನಪುಗಳನ್ನು ಅಗಿವಾಗ ಈ ಪ್ಯಾಟರ್ನೆ ಬಳಕೆಯಿರುವುದರಿಂದ ಈ ಹೆಸರು ಕೊಟ್ಟಿದ್ದಾರೆ. ಮುಖಪುಟದಲ್ಲಿ ಪ್ರವರ ಕೊಟ್ಟೂರು ತೆಗೆದ ಅವರದೇ ಮುಖಪುಟವಿದೆ. ಪುಸ್ತಕದ ಹೆಸರಿನ ಕೆಳಗೆ “ಹೊಸ ರೀತಿಯ ಕಥೆಗಳ ಗುಚ್ಛ” ಎಂಬ ಅಡಿಬರಹವಿದೆ. ಓದುವ ಮುಂಚೆಯೇ ನೀವು ಇದನ್ನು ನೋಡ್ತೀರ, ನಮ್ಮದು experimental cinema ಅಂತ ಸಿನಿಮಾದವರು ಹೇಳೊಲ್ವೆ ಹಾಗೆ.
ಯಾವ ಮುನ್ನುಡಿ ಭಾರವಿಲ್ಲದ ಈ ಪುಸ್ತಕದಲ್ಲಿ ಹದಿಮೂರು ಕತೆಗಳಿವೆ, ಕೆಲವು ಕತೆಗಳಲ್ಲಿ ಮ್ಯಾಜಿಕ್ ರಿಯಲಿಸಂ ಕೆಲವು ಕತೆಗಳಲ್ಲಿ ರಿಯಲಿಸ್ಟಿಕ್ಕು ಇನ್ನೂ ಕೆಲವು ಕತೆಗಳಲ್ಲಿ ಕತೆಗೆ ಪಾತ್ರಗಳಿಗೆ ಪರಿಸರಕ್ಕೆ ತೀರ honest ಆದ ನಿರೂಪಣೆಯಿದೆ.
ಒಂದು ಅ-ಸಹ್ಯ ಕತೆ, ಬೇಟೆ, ಮುಸ್ಸಂಜೆಗಳಲ್ಲಿ ಜರುಗುವುದೆಲ್ಲ ಮಧುರ ಕತೆಗಳಲ್ಲ ಇವಿಷ್ಟು ಕತೆಗಳಲ್ಲಿ ಹೊಸತೇನೂ ನನಗೆ ಕಾಣಲಿಲ್ಲ ಇದು ಅಪವಾದವಲ್ಲ ನನ್ನ ಓದಿನ ಗ್ರಹಿಕೆಯ ಮಿತಿ ಅಷ್ಟೇ. ಆದರೆ ಈ ಪುಸ್ತಕದಲ್ಲಿ ಓದಲೇಬೇಕಾದ ಕತೆಗಳಿವೆ, ಹೊಸ ಅನುಭವದ ಕತೆಗಳು, ಹೋದ ವಾರವಷ್ಟೇ ಕಾವ್ಯ ಕಡಮೆಯವರ ಮಾಕೋನ ಏಕಾಂತ ಓದಿದ್ದೆ , ಅಲ್ಲಿನ ಪರಿಸರ ಪಾತ್ರ ಕತೆಯ ವಿಷಯಕ್ಕೂ ಈ ಪುಸ್ತಕದ ಕತೆಗಳಿಗೂ ಅಜಗತಾಂತರ, ಇದೊಂತರ ಮಜದ ವಿಷಯ.
ಇಲ್ಲಿನ ಎಲ್ಲ ಕತೆಗಳು ಈ ಮಣ್ಣಿನವೂ, ಬಹುಶಃ ಮಧು ಜಗತ್ತಿನ ಆಸುಪಾಸಿನವು ಇರಬಹುದು. ಪಾದಗಳು ಎನ್ನುವ ಕತೆಯಲ್ಲಿ ಎಲ್ಲೆಂದರಲ್ಲಿ ನಿದ್ದೆ ಹೊಡೆಯುವವ ಜಾಣ ನಾಯಕನಿಗೆ ಅವನ ನಿದ್ದೆಯನ್ನೆ ಕಸಿಯುವಂತೆ ಮಾಡುವ ಆ ಪಾದಗಳು ನಿಜಕ್ಕೂ ಶಾಕ್ ಕೊಟ್ಟ ಕತೆ, ಎರಡು ಕತೆಗಳಲ್ಲಿ ಹಿರಿ ಜೀವಗಳು ಬರುತ್ತವೆ ಒಂದು ಭಾಗ್ಯಮ್ಮ ಇನ್ನೊಂದು ಕಾಂತಮ್ಮ, ಎರಡು ಹಿರಿ ಮಹಿಳಾ ಜೀವಗಳು , ಸ್ವಾತಂತ್ರ್ಯಕ್ಕೆ ತೆರೆದುಕೊಳ್ಳುವ ಪರಿ ಚೆನ್ನಾಗಿದೆ ಒಂದು ಬಿಡುಗಡೆ ಇನ್ನೊಂದು ಗೊತ್ತಿಲ್ಲ. ಭಾಗ್ಯಮ್ಮನ ಫ್ರೀಡಂ ಕನ್ನಡಕದಲ್ಲಿದೆ ಕಾಂತಮ್ಮನ ಬಿಡುಗಡೆ ಕಿಟಕಿಯ ಸರಳುಗಳಲ್ಲಿದೆೆ.
ಪುಟ್ಟ ಮಕ್ಕಳು ಬರುವ ಕತೆಗಳು ತೀರ ಪ್ರಾಮಾಣಿಕವಾಗಿವೆ. ಕಣ್ಮಣಿಯ ಅಭಿಲಾಷೆ ಮತ್ತು ಬೆಳ್ಳಿಗೆರೆಯಲ್ಲಿ ಬರುವ ಪುಟ್ಟಂದಿರರ ಬದುಕು ಅವರ ಕಣ್ಣುಗಳಲ್ಲೇ ಹೇಳಿದ್ದರೆ ಇನ್ನೂ ಹೆವಿ ಇಷ್ಟವಾಗುತ್ತಿತ್ತಾದರೂ ಎರಡು ಕತೆಗಳು ನನಗೆ ಸಕತ್ ಇಷ್ಟವಾದವು. ಎರಡು ಕತೆಗಳು ಯಾರಾದರೂ ಬಳಸಿಕೊಂಡರೆ ಒಳ್ಳೆ ಕಿರುಚಿತ್ರಗಳಾಗೋದರಲ್ಲಿ ಸಂಶಯವಿಲ್ಲ. ಮಕ್ಕಳ ಪ್ರಪಂಚದ ಕತೆಗಳು ಯಾವತ್ತಿಗೂ ಚೆಂದ.
ಅನಾಹಿತ ನನಗೆ ತುಂಬ ಇಷ್ಟವಾದ ಕತೆ ನೀರಿಗೆ ಮನುಷ್ಯ ಜೀವ ಬಂದು ಮನುಷ್ಯನಿಗೆ ನೀರಿನ ಜೀವ ಬಂದು ಹರಿವ ಮತ್ತು ಹರಿಯುವ ಕತೆ. ಇಡೀ ಪುಸ್ತಕದಲ್ಲಿ ಹೊಸ ಕತೆಗಳ ಗುಚ್ಛ ಟೈಟಲ್ಲಿಗೆ ನ್ಯಾಯ ಕೊಟ್ಟ ಕತೆ ಎಂದರೆ ತಪ್ಪಿಲ್ಲ. ಪ್ರದಕ್ಷಿಣೆ ಕತೆ ಮಜ ಕೊಡ್ತು.
ಕಣಿವೆಯಲ್ಲೊಂದು ಸಂಜೆ ಮತ್ತು ಮುಸ್ಸಂಜೆಗಳಲ್ಲಿ ಜರುಗುವುದೆಲ್ಲ ಮಧುರ ಕತೆಗಳಲ್ಲ ಸಾಮಾನ್ಯ ಕತೆಗಳು.
ಇಲ್ಲಿರುವ ಎಲ್ಲ ಕತೆಗಳ ಪರಿಸರ ನಮ್ಮ ನಿಮ್ಮ ಅಕ್ಕ ಪಕ್ಕದವೋ ಇಲ್ಲ ನಿಮ್ಮ ಬಾಲ್ಯದಲ್ಲಿ ಕಂಡ ಗ್ರಾಮೀಣ ಪರಿಸರದವು ಹಾಗಾಗಿ ತೀರ ಹತ್ತಿರವಾಗುತ್ತವೆೆ
ಮಧು ಅವರ ಮೊದಲ ಪುಸ್ತಕ ಓದಿಲ್ಲ. ಇದನ್ನ ಓದಿದಾಗ ಅದನ್ನ ಓದಲೇಬೇಕೆನಿಸಿದ್ದು ಸುಳ್ಳಲ್ಲ.
ಪುಸ್ತಕಕ್ಕೆ ಮತ್ತು ಪುಸ್ತಕ ಬರೆದ ನಿಮಗೆ Madhu YN ಥ್ಯಾಂಕ್ಯೂ.
(ನಿಮ್ಮ ಬೆಳ್ಳಿಗೆರೆ ಅಥವಾ ಕಣ್ಮಣಿಯ ಅಭಿಲಾಷೆ ರೈಟ್ಸಿಗೆ ಸಿಗುವೆ ಯಾರಾದರೂ ಕಿರುಚಿತ್ರಕ್ಕೆ ದುಡ್ಡು ಹಾಕೋರು ಸಿಕ್ಕಿದಾಗ.
– ಜಯರಾಮಾಚಾರಿ