ಅಕ್ಷರವಿಹಾರ_೨೦೨೩
ಕೃತಿ: ದಾರಿ
ಲೇಖಕರು: ಕುಸುಮಾ ಆಯರಹಳ್ಳಿ
ಪ್ರಕಾಶಕರು: ಛಂದ ಪುಸ್ತಕ, ಬೆಂಗಳೂರು
ಬದುಕಿನ ದಾರಿ…. ಬದುಕುತ್ತಿರುವ ದಾರಿ…. ಬದುಕಿನ ಬಂಡಿ ಸಾಗಿಸಲು ಸವೆಸಬೇಕಾದ ದಾರಿ….ಇದು ನಮ್ಮ ನಿಮ್ಮೆಲ್ಲರ “ದಾರಿ”….
ಬದುಕಿನಲ್ಲಿನ ಹತ್ತು ಹಲವು ದಾರಿಗಳ ಸಾಧ್ಯತೆಗಳನ್ನು,ನಾವು ಆಯ್ದುಕೊಂಡು ಸಾಗಿದ ದಾರಿಯಲ್ಲಿನ ವಿವಿಧ ಮಜಲುಗಳನ್ನು ಹಾಗೂ ಬಣ್ಣಗಳನ್ನು ಯಶಸ್ವಿಯಾಗಿ ಚಿತ್ರಿಸಿರುವ ಕಾದಂಬರಿ “ದಾರಿ”. ಒಬ್ಬರ ದಾರಿ ಮತ್ತೊಬ್ಬರಿಗಿಂತ ಭಿನ್ನವಾಗಿದ್ದರೂ ಅವು ಕೊಡುವ ಅನುಭವಗಳಲ್ಲಿ ಭಿನ್ನತೆಯ ಜೊತೆಗೆ ಸಾಮ್ಯತೆಯನ್ನು ಹೊಂದಿರುತ್ತದೆ. ಅನೇಕರ ದಾರಿಗಳು ಒಂದಾಗಿ ಕೊನೆಗೆ ಅದುವೇ ವಿಶ್ವಪಥವಾಗುವ ಮೂಲಕ ಒಬ್ಬರ ಬದುಕು ಇನ್ನೊಬ್ಬರದರ ಜೊತೆಗೆ ತಳುಕು ಹಾಕಿಕೊಳ್ಳುವ ಪರಿ ಬೆರಗನ್ನುಂಟುಮಾಡುತ್ತದೆ. ಈ ಸಂದೇಶವನ್ನು ದಾಟಿಸುವಲ್ಲಿ ಕೃತಿಯು ಸಹ ಯಶಸ್ವಿಯಾಗಿದೆ.
ಪ್ರಸ್ತುತ ಕಾದಂಬರಿಯಲ್ಲಿ ಕಥಾನಾಯಕ ಪ್ರಕಾಶ ಇಪ್ಪತ್ತು ವರ್ಷಗಳ ನಂತರ ತಾನು ಮಾಡುತ್ತಿದ್ದ ಪತ್ರಕರ್ತನ ವೃತ್ತಿಯನ್ನು ಬಿಟ್ಟು ತಾನು ಬೆಳೆದ ಹಳ್ಳಿಯಲ್ಲಿ ಏನಾದರೂ ಬದಲಾವಣೆಯನ್ನು ತರಬೇಕೆಂಬ ಉತ್ಸುಕತೆಯಿಂದ ಮರಳುತ್ತಾನೆ. ಅವನ ಪ್ರಜ್ಞೆಯಲ್ಲಿರುವುದು ಇಪ್ಪತ್ತು ವರ್ಷಗಳ ಹಿಂದೆ ಬಿಟ್ಟುಹೋದ ಊರು. ಆದರೆ ಈ ಕಾಲಘಟ್ಟದಲ್ಲಿ ಬಹಳಷ್ಟು ನೀರು ಹರಿದುಹೋಗಿದೆ ಎಂಬುದು ಅವನಿಗೆ ಮನದಟ್ಟಾಗುವುದು ಊರು ಅವನನ್ನು ಒಳಗೆ ಬಿಟ್ಟುಕೊಳ್ಳಲು ನಿರಾಕರಿಸುವಾಗ. ಪ್ರತಿಯೊಂದರಲ್ಲೂ ಜಾತಿ, ರಾಜಕೀಯ ಮತ್ತು ಹಣದ ಹಿಂದೆ ಬಿದ್ದ ಊರಿನ ಜನರಿಂದ ಭ್ರಮನಿರಸನ ಹೊಂದುವ ಪ್ರಕಾಶನಿಗೆ ಅಲ್ಲೊಂದು ಇಲ್ಲೊಂದು ಬೆಳಕಿನ ಕಿರಣಗಳು ಜವರಪ್ಪ ಮಂಗಳೆಯರ ರೂಪದಲ್ಲಿ ದೊರೆಯುತ್ತದೆ. ಜಾಗತೀಕರಣ ಭಾರೀ ಕೈಗಾರಿಕೆಗಳಿಗೆ ತೆರೆದುಕೊಳ್ಳುವ ಊರು, ಆದರ್ಶ ಜೀವನ ಮೌಲ್ಯಗಳಿಗೆ ಬೆನ್ನು ತಿರುಗಿಸುವುದನ್ನು ಕಂಡಾಗ ತಾನು ಆಯ್ದುಕೊಂಡ ದಾರಿಯ ಬಗ್ಗೆ ಅವನಲ್ಲಿ ದ್ವಂದ್ವ ಮತ್ತು ಸಂಶಯಗಳು ಮೂಡುತ್ತವೆ. ಕಾರ್ಪೋರೇಟ್ ಜಗತ್ತು, ನಮ್ಮನ್ನಾಳುವ ಘನ ಸರ್ಕಾರಗಳು ಅಭಿವೃಧ್ಧಿಯ ಹೆಸರಿನಲ್ಲಿ ಆಗುತ್ತಿರುವ ಪರಿಸರ ನಾಶದ ಕುರಿತು ತೋರುವ ಜಾಣ ಕುರುಡು, ತಮ್ಮ ಸುತ್ತಮುತ್ತಲಿನ ಪರಿಸರ ನಾಶದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಧರ್ಮ ದೇವರು ಮುಂತಾದ ವಿಷಯಗಳಿಗೆ ಪ್ರಾಮುಖ್ಯತೆಯನ್ನು ಕೊಡುವ ಜನತೆಯ ಜಡತ್ವವು ಪ್ರಸ್ತುತ ನಮ್ಮ ಸಮಾಜವು ಸಾಗುತ್ತಿರುವ ದಾರಿಗೆ ಹಿಡಿದ ಕನ್ನಡಿಯಂತೆ ಭಾಸವಾಯಿತು.

ಸಮಾಜದಲ್ಲಿ ಆದರ್ಶ ಮೌಲ್ಯಗಳು ಕುಸಿದು ಅವನತಿಯತ್ತ ಸಾಗಿವೆ, ಇನ್ನು ಬದುಕೆಂಬುದು ಅಸಹನೀಯ ಎಂಬ ಭಾವನೆ ಬಲಗೊಳ್ಳುವಾಗ ಚಂದ್ರಣ್ಣ, ಸ್ವಾಮೀಜಿ, ಪುರುಷೋತ್ತಮ ಮತ್ತು ಲೋಕಪ್ಪನವರ ಪಾತ್ರಗಳು ಹೊಸ ಆಶಾಕಿರಣವನ್ನು ಮೂಡಿಸುತ್ತವೆ. ಅವರಂತಹ ವ್ಯಕ್ತಿಗಳಿಂದ ನಡೆಯುತ್ತಿರುವ ನಿಸ್ವಾರ್ಥ ಸಮಾಜ ಸೇವೆಯ ಫಲವಾಗಿ ಎಷ್ಟೋ ಹೊಟ್ಟೆಗಳು ಹೊಟ್ಟೆ ತುಂಬಾ ಉಂಡು ಕಣ್ತುಂಬ ನಿದ್ದೆಯನ್ನು ಮಾಡುತ್ತಿವೆ ಎಂಬುದು ನೂರು ಪ್ರತಿಶತ ಸತ್ಯ. “ಆದರ್ಶಗಳೆಂಬುದು ಪರರ ಉದ್ಧಾರಕ್ಕೆ ಅಲ್ಲ,ನಮ್ಮ ಉದ್ಧಾರಕ್ಕಾಗಿ ಎಂದು ಪಾತ್ರವೊಂದು ನುಡಿಯುವ ಸಾಲು ಸೇವೆಯೆಂಬುದು ಪ್ರದರ್ಶನದ ವಸ್ತುವಾಗಬಾರದು ಎಂಬ ಸೂಕ್ಷ್ಮವನ್ನು ಸಾರುತ್ತದೆ.
ಪ್ರೀತಿ,ಪ್ರೇಮ,ಸ್ನೇಹ,ದಾಂಪತ್ಯ,ಮನಸ್ಸು,ಸರಿ,ತಪ್ಪು ನೈತಿಕತೆ, ಕುಸಿಯುತ್ತಿರುವ ಜೀವನ ಮೌಲ್ಯಗಳು,ಕಾಲಾಂತರಗಳಿಂದ ನಡೆದುಕೊಂಡು ಬಂದ ರೂಢಿಯು ಯೋಚನಾಲಹರಿಗಳಿಗೆ ಪ್ರಯತ್ನಪೂರ್ವಕವಾಗಿ ಹಾಕುವ ಬೇಲಿ,ಪ್ರೀತಿ ಪ್ರೇಮಗಳೆಂಬ ಭಾವಗಳು ಉಂಟು ಮಾಡುವ ದ್ವಂದ್ವಗಳ ಕುರಿತಾದ ಕಾದಂಬರಿಯ ಜಿಜ್ಞಾಸೆಗಳು ಸಂಬಂಧಗಳ ಕುರಿತಾದ ನಮ್ಮ ವಿಚಾರಗಳನ್ನು ಮರುಪರಿಶೀಲಿಸುವಂತೆ ಪ್ರೇರೇಪಿಸುತ್ತವೆ. ಹೊರ ಜಗತ್ತಿಗೆ ಅನ್ಯೋನ್ಯತೆಯಿಂದ ಕಾಣುವ ಗಂಡ ಹೆಂಡಿರ ಸಂಬಂಧಗಳ ನಡುವೆ ಇರುವ ಕಂದಕವನ್ನು, ಅವರುಗಳು ಅನುಭವಿಸುವ ಏಕಾಕಿತನವನ್ನು ಓದುವಾಗ ಹೀಗೂ ಇರಬಹುದೇ ಅನಿಸಿತು. ಬಹುಶಃ ಇನ್ನೊಂದು ಹತ್ತು ವರ್ಷಗಳ ತರುವಾಯ ಈ ಕೃತಿಯನ್ನು ಮತ್ತೊಮ್ಮೆ ಓದಿದರೆ ಯಾವ ಭಾವ ತುಮುಲಗಳನ್ನು ಹೊರಡಿಸಬಹುದು ಎಂಬುದರ ಬಗ್ಗೆ ಕುತೂಹಲವಿದೆ. ಯಾಕೆಂದರೆ ವಯಸ್ಸು ಮನಸ್ಸು ಮಾಗಿದಂತೆ ಕೆಲವೊಂದು ವಿಚಾರಗಳು ಇನ್ನಷ್ಟು ಸ್ಪಷ್ಟವಾಗಿ ಗೋಚರಿಸುತ್ತವೆ ಅಲ್ಲವೇ…..
ನಮಸ್ಕಾರ,
ಅಮಿತ್ ಕಾಮತ್