ಕನ್ನಡ

‘ಮುಂಬೈ ಜೀವನ’ – ವಸುಧಾ ಪ್ರಭು

ಶೀರ್ಷಿಕೆ: ಮುಂಬೈ ಜೀವನ

ಲೇಖಕಿ: ಶ್ರೀಮತಿ ವಸುಧಾ ಪ್ರಭು

ಪ್ರಕಾಶನ: ಹೆಚ್ ಎಸ್ ಆರ್ ಎ, ಬೆಂಗಳೂರು

ಪುಟಗಳು: ೧೮೬

ಬೆಲೆ: ೨೦೦

ಕೆಲವರು ತಮ್ಮ ಬದುಕಿನಲ್ಲಿ ಸುಖದ ಸುಪ್ಪತ್ತಿಗೆಯಲ್ಲಿ ತೇಲುತ್ತಿದ್ದರೆ ..ಇನ್ನು ಕೆಲವರ ಬದುಕು ‘ ಓಕೆ ‘ ಅನ್ನಿಸುವಷ್ಟು ಸಮಾಧಾನಕರವಾಗಿ ಇರುತ್ತದೆ ನಿಜ… ಆದರೂ ಈ ಎರಡೂ ಗುಂಪಿಗೆ ಸೇರದವರ ಬದುಕು ಒಂದು ಹಂತದವರೆಗೆ ಯಾತನಾಮಯಾವಾಗಿ …ನಂತರ ಆಶಾಕಿರಣ ಗೋಚರಿಸುವಂತಾಗುತ್ತದೆ. ಅಲ್ಲಿನವರೆಗೆ ಆಯಾ ವ್ಯಕ್ತಿ ಅನುಭವಿಸಿದ ನೋವು ಅವಮಾನ ಅವರಿಗಷ್ಟೇ ಗೊತ್ತಿರುತ್ತದೆ.

ಯಾವುದೇ ಸಾಧನೆ ಮಾಡುವಾಗ ಕೈ ಜೋಡಿಸದ ಸುತ್ತಮುತ್ತಲಿನ ಜನ… ಒಂದು ಹಂತಕ್ಕೆ ಪಣ ತೊಟ್ಟು, ಹಠಕ್ಕೆ ಬಿದ್ದವರಂತೆ ಸಾಧಿಸಿದಾಗ ಅವಮಾನಿಸಿದ ಮನಗಳೇ ಸನ್ಮಾನ ಮಾಡಲೂ ಬರುತ್ತಾರೆ..! ಎಂತಹ ವಿಚಿತ್ರ ಮನಸ್ಥಿತಿ !

“ಮುಂಬೈ ಜೀವನ”ದ ಕಥಾ ವಸ್ತು ಇದೇ‌…!

ಹಳ್ಳಿಯಿಂದ ಬಂದು ದಿಲ್ಲಿವರೆಗೂ ಹೋಗುವ ಆ ಕಥಾ ನಾಯಕಿ ಬೇರೆ ಯಾರೂ ಆಗಿರದೇ ಈ ಕೃತಿಯ ಲೇಖಕಿಯಾದ ಶ್ರೀಮತಿ ವಸುಧಾ ಪ್ರಭು ಅವರೇ ಆಗಿದ್ದಾರೆ. ಪ್ರತೀ ಘಳಿಗೆಯಲ್ಲೂ ಆಗ ಆದ ಸುಖ ದುಃಖಗಳನ್ನು ಯಥಾಕಥಿತವಾಗಿ ಕಣ್ಣಿಗೆ ಕಟ್ಟುವಂತೆ ವರ್ಣಿಸಿ, ತಮಗಾದ ಅಪಾರ ಅನುಭವವನ್ನು ಓದುಗ ದೊರೆಗಳೊಂದಿಗೆ ಹಂಚಿಕೊಂಡು, ಬುದ್ಧಿ ಮಾತನ್ನೂ ಹೇಳಿದ್ದಾರೆ.

ಏಕಾಗ್ರತೆಯಿಂದ ಓದುವಾಗ ಕಣ್ಣಿನ ಬಿಂದು ಜಾರದೇ ಇರದು. ಕಾರಣ ? ಅವರು ಅನುಭವಿಸಿದ ನೋವು ….ಆ ನೋವನ್ನೇ ಮೆಟ್ಟಿ ನಿಂತು … ಆ ಒಂದು ವಿಷಮ ಘಳಿಗೆಯಲ್ಲಿ ಯಮರಾಜನಿಗೇ ಸೆಡ್ಡು ಹೊಡೆದು ..ಪುನಃ ತಮ್ಮಲ್ಲಿ ತಾವೇ ಧೈರ್ಯ ತಂದುಕೊಂಡು .. ಮಾನಸಿಕ ಬಲ ಹೊಂದಿದ್ದೂ ಅಲ್ಲದೇ .. ಸಂಸಾರಿಯಾಗಿದ್ದುಕೊಂಡರೂ , ಸಮಾನ ಮನಸ್ಕರೊಡನೆ ತಮ್ಮದೇ ಆದ ತಂಡ ರಚಿಸಿ, ಆಪ್ತವಲಯದವರೊಡನೇ ಆಗಲಿ ಕುಹುಕು ನುಡಿ ಆಡುವವರಿಗೇ ಆಗಲಿ ಎಂದಿಗೂ ಸೆಳೆಯುವ ಕಿರುನಗೆಯೊಂದಿಗೆ ಬಹುತೇಕ ಕ್ಷೇತ್ರಗಳಲ್ಲಿ ಅದೆಷ್ಟು ಸಾಧನೆ ಗೈದಿದ್ದಾರೆ ಎಂದರೆ.. ಖಂಡಿತವಾಗಿಯೂ ನಮ್ಮಂತಹ ಯುವಕ / ಯುವತಿಯರಿಗೆ ಈ ಒಂದು ಹೊತ್ತಿಗೆ ಮಾರ್ಗದರ್ಶನ ಮಾಡಬಲ್ಲ .. ಸ್ಪೂರ್ತಿ ತುಂಬ ಬಲ್ಲ ಕೈಪಿಡಿಯೇ ಸರಿ.

ತ್ರಿಭಾಷೆಗಳ (ಕನ್ನಡ, ಮರಾಠಿ, ಕೊಂಕಣಿ) ವ್ಯಾಕರಣ ಕಲಿತು ಕಥೆ ಕವನ ಬರೆಯುವಷ್ಟು ಉತ್ಸಾಹಿ ಯುವತಿ ನಮ್ಮೀ ವಸುಧಾ ಪ್ರಭು ಮೇಡಂ. ಮೋಹಿನಿ ಎಂಬುದು ಅವರ ಪೂರ್ವಾಶ್ರಮದ ಹೆಸರು ಎಂದು ತಿಳಿದು ಬರುತ್ತದೆ.

ರಂಗ ಕರ್ಮಿಯಾಗಿ ,ನಟಿಯಾಗಿ, ನಿರ್ದೇಶಕಿಯಾಗಿ, ಲೇಖಕಿಯಾಗಿ, ಕವಯಿತ್ರಿಯಾಗಿ, ಸೌಂದರ್ಯ ತಜ್ಞೆಯಾಗಿ, ಯಶಸ್ವೀ ಸ್ತ್ರೀ ಉದ್ಯೋಗಸ್ಥೆಯಾಗಿ, ಮುಂಬೈ ಆಕಾಶವಾಣಿಯಲ್ಲಿ ಸ್ತ್ರೀಶಕ್ತಿ ಮತ್ತು ಸೌಂದರ್ಯದ ಬಗ್ಗೆ ವಾಚಕರಾಗಿ ಬಹುಮುಖ ವ್ಯಕ್ತಿತ್ವದ ಮೇಡಂ ಅವರು ಅನೇಕ ಕಡೆ ಸನ್ಮಾನಿಸಲ್ಪಟ್ಟಿದ್ದಾರೆ … ರೇಖೀ ವಿದ್ಯೆಯಾಗಲೀ, ಜ್ಯೋತಿಷ್ಯ ಶಾಸ್ತ್ರವಾಗಲೀ ಕಲಿಯಬೇಕೆಂಬ ಅವರ ಸಾತ್ವಿಕ ಹಠವನ್ನು ಕಂಡಾಗ ಅಗಾಧ ಅಚ್ಚರಿಯನ್ನುಂಟು ಮಾಡುತ್ತದೆ.. ಈ ಮಹಿಳೆಗೆ ಸುಸ್ತು ಎಂಬುದೇ ಇಲ್ಲವೇನು ? ಇಷ್ಟಕ್ಕೆಲ್ಲ ಅದ್ಹೇಗೆ ಸಮಯವನ್ನು ಹೊಂದಿಸುತ್ತಾರೆ? ಎಂದೆನಿಸುತ್ತದೆ.

ಒಳ್ಳೆಯ ತಾಯಿಯಾಗಿ ಮಕ್ಕಳಿಗೆ ವಿದ್ಯಾಭ್ಯಾಸ ಕಲಿಸಿ ದೊಡ್ಡ ಹುದ್ದೆಗೇರಿಸಿದ್ದು ಅಷ್ಟೇ ಅಲ್ಲದೇ ಬಿಡುವಿಲ್ಲದ ಸಮಯದಲ್ಲೂ ತಮ್ಮ ತಂದೆಯವರನ್ನು ವಿದೇಶ ಪ್ರಯಾಣಕ್ಕೆ ಅವರಿಚ್ಛೆಯಂತೇ ಕರೆದೊಯ್ದಿದ್ದು ..ಕುಟುಂಬ ಪ್ರೀತಿಯನ್ನು ತೋರಿಸುತ್ತದೆ.

ಬಂದ ಅವಕಾಶಗಳನ್ನು ಎಂದಿಗೂ ಬಿಡಬಾರದು….

ನಮ್ಮನ್ನು ನಾವು ಸದಾ ಬಿಜಿಯಾಗಿಟ್ಟುಕೊಳ್ಳಬೇಕು..

ತಡರಾತ್ರಿಯಲ್ಲಿ ಬಂದರೂ ಬೇಸರಿಸದೇ ಹಸಿದವರಿಗೆ ಅನ್ನ ನೀಡಬೇಕು …

ಯಾರ ಬಳಿಯೂ ಕೈ ಒಡ್ಡುವಂಥಹ ಪರಿಸ್ಥಿತಿ ಬರಬಾರದು..

ಸ್ವರ್ಗ ನರಕಗಳೆಲ್ಲವೂ ನಮ್ಮ ಕೈಯ್ಯಲ್ಲೇ ಇವೆ !

ಸತ್ವಯುತವಾದ ಆಹಾರ ಸೇವಿಸುತ್ತಾ ಆ, ನೆ (ಆರೋಗ್ಯ ನೆಮ್ಮದಿ) ಹೊಂದಬೇಕು ಅಂದಾಗಲಷ್ಟೇ ಜೀವನದಲ್ಲಿನ ಹತ್ತು ಹಲವು ಆಯಾಮಗಳ ತಿರುಳಿನ ಸವಿಯನ್ನು ಅನುಭವಿಸಲು ಸಾಧ್ಯ…ಇಂತಹ ಇನ್ನೂ ಹತ್ತು ಹಲವಾರು ಹಿತನುಡಿಗಳನ್ನು ಲೇಖಕಿಯರು ತಮ್ಮ ಅನುಭವದಿಂದ ಹೇಳಿದ್ದು ಮನ ಮುಟ್ಟುತ್ತವೆ. ಮನೆಯ ಹಿರಿಯಕ್ಕಳಂತೆ ಮುಂದೆ ಕುಳಿತು ಧೈರ್ಯ ತುಂಬಿ..ಬೆನ್ನು ತಟ್ಟಿ ಮುನ್ನಡೆಸುವಂತಾಗುತ್ತದೆ.

ಗುರುಗಳ ವಿಷವರ್ತುಲದಿಂದ ಪಾರಾಗಿದ್ದು, ಕೋವಿಡ್ ಯಾತನೆ ಅನುಭವಿಸಿದ್ದು… ಓದಿದಾಗ ಮೈಝುಂ ಎನ್ನುತ್ತದೆ.

ತಾವು ಕಲಿತ ಸೌಂದರ್ಯದ ವಿದ್ಯೆಯನ್ನು ಆಸಕ್ತರಿಗೆ ಕಲಿಸಿ ..ಅವರ ಅನ್ನಕ್ಕೊಂದು ಮಾರ್ಗ ಕಲ್ಪಸಿ ..ಅವರ ಜೀವನದಲ್ಲಿನ ಕತ್ತಲೆಯನ್ನು ಓಡಿಸಿ, ಪುನಃ ನಗು ಮೂಡುವಂತೆ ಮುನ್ನಡೆಸಿದ ಹೆಗ್ಗಳಿಕೆ ಲೇಖಕಿಯರದ್ದಾಗಿದೆ.

‘ ಕನ್ನಡ ಕಥಾ ಗುಚ್ಛ ‘ವು ತಮಗೆ ಎರಡನೇ ಜೀವನವನ್ನು ಕಲ್ಪಸಿದೆ ಎಂದು ಹೇಳುವಾಗ ಅವರ ಕಣ್ಣಲ್ಲಿ ಮಿಂಚೊಂದು ಹಾದು ಹೋಗುವಂತೆ ಭಾಸವಾಗುತ್ತದೆ.

ಲೇಖಕಿಯ ಅನುಭವವನ್ನು ಪ್ರತೀ ಕಂತುಗಳನ್ನು ಓದಿಯೇ ತಿಳಿಯಬೇಕು.. ಒಮ್ಮೊಮ್ಮೆ ಕಣ್ಣಂಚಿನ ಹನಿ ಜಾರುವಂತೆ ನಿರೂಪಿಸಿದ್ದಾರೆ.

ಬದುಕಿನಲ್ಲಿ ಇನ್ನೇನು ಎಲ್ಲವನ್ನೂ ಕಳೆದುಕೊಂಡೆವು ಎಂದು ಕೈಚೆಲ್ಲದೇ ಆಶಾದಾಯಕವಾಗಿರಲು ಕರೆ ನೀಡುತ್ತಾರೆ..

ಈ “ಮುಂಬೈ ಜೀವನ “ಕೃತಿಯು ಸಂಗ್ರಹ ಯೋಗ್ಯವಾಗಿದೆ. ಆಗಾಗ‌ ಓದಿದಾಗ ಮನೋಬಲವನ್ನಂತೂ ಖಂಡಿತವಾಗಿಯೂ ಹೆಚ್ಚಿಸುತ್ತದೆ ..

ಪುಸ್ತಕವನ್ನು ಲೇಖಕಿಯರಿಂದ ಪಡೆದು ಒಮ್ಮೆಯಾದರೂ ಓದಿ ಮನನ ಮಾಡಿಕೊಳ್ಳಿ ಎಂದು ಆಶಿಸುವೆ. ಎಲ್ಲರಿಗೂ ಒಳಿತಾಗಲಿ .

*ಶ್ರೀವಲ್ಲಭ ಕುಲಕರ್ಣಿ*

ಹುಬ್ಬಳ್ಳಿ