ಕನ್ನಡ · ಭಾರತಿ ಬಿ ವಿ

‘ಜಸ್ಟ್ ಮಾತ್ ಮಾತಲ್ಲಿ’ – ಭಾರತಿ.ಬಿ.ವಿ

FB_IMG_1556647088897.jpg

ಪುಸ್ತಕ : ಜಸ್ಟ್ ಮಾತ್ ಮಾತಲ್ಲಿ
ಲೇಖಕರು : ಭಾರತಿ ಬಿ ವಿ
ಪ್ರಕಾಶಕರು : ಸಾವಣ್ಣ ಎಂಟರ್ ಪ್ರೈಸಸ್
ಬೆಲೆ : 150/-

‘ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ’, ಮಾತಿನಿಂದ ಎಲ್ಲರನ್ನೂ ಗೆಲ್ಲಬಹುದು ಅನ್ನುತ್ತಾರೆ.. ಮಾತುಗಾರಿಕೆ ಒಂದು ಕಲೆ.. ರಕ್ತಗತವೋ ಅಥವಾ ಸ್ವಯಂ ಪ್ರೇರಣೆಯಿಂದ ಕಲಿತದ್ದೋ ಅಂತೂ ಮಾತನಾಡುತ್ತಲೇ ಇರಬೇಕು ಹಲವರಿಗೆ.. ಜೊತೆಗಿರುವವರಿಗೆ ಆಸಕ್ತಿ ಇರುತ್ತೋ ಬಿಡುತ್ತೋ ತುತ್ತೂರಿ ಊದಿದಂತೆ, ಅನಾಸಕ್ತಿ ವ್ಯಕ್ತಪಡಿಸಿದರೂ ನಿಲ್ಲಿಸೋಲ್ಲ.. ಇಷ್ಟೆಲ್ಲ ಮಾತಿನ ಕುರಿತು ಯಾಕೆ ಹೇಳ್ತಾ ಇದ್ದೀನಿ ಅಂದ್ರೆ ಜಸ್ಟ್ ಮಾತ್ ಮಾತಲ್ಲಿ ಇರೋದು ಕಥೆಗಳಾದ ಮಾತುಗಳು..

ಸಾವಣ್ಣ ಎಂಟರ್ ಪ್ರೈಸಸ್ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಸಮಾರಂಭ ಕಳೆದ ಸೆಪ್ಟೆಂಬರ್ ಅಲ್ಲಿ ನಡೆದಿತ್ತು.. ದೊಡ್ಡ ಮಟ್ಟಿನ ಏರ್ಪಾಡು ಹೊಂದಿದ್ದ ಕಾರ್ಯಕ್ರಮಕ್ಕೆ ನಾನೂ ಹೋಗಿದ್ದೆ.. ಖ್ಯಾತ ಕವಿ, ನಟ ನಟಿಯರು, ಸಭಾಂಗಣ ಪೂರ್ತಿ ಕಿಕ್ಕಿರಿದು ತುಂಬಿದ್ದ ಜನಸಾಗರ, ಮೂವರು ಲೇಖಕರ ಪುಸ್ತಕಗಳು ಯಶಸ್ವಿಯಾಗಿ ಬಿಡುಗಡೆಯಾಯಿತು.. ಮಾತಿನ ಸಂದರ್ಭದಲ್ಲಿ ಆವತ್ತೂ ಆಟೋದಲ್ಲೇ ಬಂದೆ ಅಂದಿದ್ದರು ಭಾರತಿಯವರು..

ಸಾಮಾನ್ಯವಾಗಿ ಕವಿತೆಗಳೆಂದರೆ ದೂರ ನಾನು, ಕೆಲವೇ ಪದಗಳಿದ್ದರೂ ಅದ್ಯಾಕೋ ಕಥೆಗಳಷ್ಟು ಮನಸ್ಸಿಗೆ ಹತ್ತಿರವಾಗೋಲ್ಲ.. ಆದರೆ ಸ್ನೇಹಿತರ ಅಭಿಪ್ರಾಯದ ಮೇರೆಗೆ, ಒಳ್ಳೊಳ್ಳೆಯ ಅನಿಸಿಕೆಗಳಿಂದಾಗಿ ಭಾರತಿಯವರ ಕಿಚನ್ ಕವಿತೆಗಳ ಕೆಲವು ಕವಿತೆಗಳ ಮೇಲೆ ಕಣ್ಣಾಡಿಸಿದ್ದೆ.. ಸಾಸಿವೆ ತಂದವಳು ಅವರ ಆತ್ಮಕಥೆ ಓದಬೇಕೆಂದುಕೊಂಡಿದ್ದರೂ ಓದಲಾಗಿಲ್ಲ, ಜಸ್ಟ್ ಮಾತ್ ಮಾತಲ್ಲಿ ನಾನೋದಿದ ಅವರ ಮೊದಲ ಪುಸ್ತಕ.. ಅವತ್ತೇ ಪುಸ್ತಕ ತಂದಿದ್ದರೂ ಇಷ್ಟು ಲೇಟ್ ಆಗಿ ಓದಿದ್ದಾ ಎಂದು ಮಾತ್ರ ಕೇಳ್ಬೇಡಿ, ಎಕ್ಸ್ಕ್ಯೂಸ್ ಕೊಡೋದಿಕ್ಕೂ ಮುಜುಗರವಾಗ್ತಿದೆ..

ಒಂದೊಂದು ಪ್ರೊಫೆಷನಲ್ ಜನರ ಬಗ್ಗೆ ಒಂದೊಂದು ರೀತಿಯ ಅಭಿಪ್ರಾಯ ಇರುತ್ತೆ.. ಅದರಲ್ಲಿ ಸ್ವಲ್ಪ ತದ್ವಿರುದ್ಧವಾಗಿ ಕಂಡರೆ ಹೌದಾ ಹೀಗೂ ಇರ್ತಾರ ಅನಿಸುತ್ತೆ.. ನಮಗೆ ಬೇಕಾದ ಕಡೆ ಬರಬೇಕೆಂದು ಆಶಿಸುವ ನಾವುಗಳು, ಆಟೋ ಚಾಲಕರು ಬರೋಲ್ಲ ಅಂದಾಗ ಮಹಾ ಕೊಬ್ಬು ಅಂತಾನೂ, ಆಟೋ ಡ್ರೈವರ್ಸ್, ಬಸ್ ಡ್ರೈವರ್ಸ್, ಕಂಡಕ್ಟರ್ಸ್ ಎಲ್ಲರ ಬಾಯಿನೂ ಜೋರು ಅನ್ನೋದು ಸಾಮಾನ್ಯವಾಗಿ ಚಾಲ್ತಿಯಲ್ಲಿರುವ ಅಭಿಪ್ರಾಯಗಳು.. ಜೀವನದಲ್ಲಿ ಕಷ್ಟಗಳು ಯಾರಿಗಿಲ್ಲ ಹೇಳಿ, ಅಂತಹವುಗಳೇ ಮನುಷ್ಯನನ್ನು ಕಠಿಣವನ್ನಾಗಿಸುವುದು ಅದು ಹೊರಹೊಮ್ಮುವುದು ಮಾತುಗಳಿಂದ.. ಅವುಗಳ ಮೇಲೆ ಜನರನ್ನು ಜಡ್ಜ್ ಮಾಡೋದು ಸರಿಯೇ ಅಂದುಕೊಂಡರೂ, ಇತರರ ಬಗ್ಗೆ ತಕ್ಷಣ ಕಾಮೆಂಟ್ ಹೊಡೆಯೋದು ಕೂಡ ಮಾನವ ಸಹಜ.. ಮನುಷ್ಯರನ್ನು, ಕಲ್ಪನೆಗಳನ್ನು, ಅಭಿಪ್ರಾಯಗಳನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ.. ಅದಿಕ್ಕೆ ಲೈಫ್ ಹೇಗೆ ಬರುತ್ತೋ ಹಾಗೆ ಮುಂದುವರಿಯುತ್ತಾರೆ..

ಈ ಪುಸ್ತಕದ ಮಜಾ ಏನು ಗೊತ್ತಾ, ಇಲ್ಲಿರೋದು ಕೇವಲ ರಿಕ್ಷಾ ಚಾಲಕರ ಕಥೆಗಳಲ್ಲ, ಭಾರತಿಯವರ ಮನಸ್ಸಿನ ಮಾತುಗಳು, ಹಾಸ್ಯಭರಿತ ಸನ್ನಿವೇಶಗಳು, ಫ್ರೆಂಡ್ಲಿ ನೇಚರ್, ಪ್ರತೀ ಅಧ್ಯಾಯ ಓದುತ್ತಿದ್ದಂತೆ ನಗೋದು ಗ್ಯಾರಂಟಿ.. ಭಾರತಿ ಮೇಡಂ ನಿಮಗೆ ಹೇಗೆ ಅಂತಹ ವಾಚಾಳಿ ಆಟೋ ಚಾಲಕರು ಸಿಗೋದು ಅನ್ನೋ ಪ್ರಶ್ನೆ ಕೇಳುವವರ ಲಿಸ್ಟ್ ಅಲ್ಲಿ ನಾನೂ ಕೂಡ ಸೇರ್ಕೊಂಡೆ.. ಒಂದೊಂದು ಡ್ರೈವರ್ ಅನ್ನೂ ನೀವು ಅನಲೈಸ್ ಮಾಡಿದ ರೀತಿ, ಏನೋ ಕೆಟ್ಟದ್ದು ಆಗಿಬಿಡುತ್ತೆಂದು ಸಿನಿಮೀಯ ಸ್ಟೈಲ್ ಅಲ್ಲಿ ಅಂದ್ಕೊಳ್ಳೋದು ಪಕ್ಕಾ ನಗುಬರುತ್ತೆ.. ಈ ಪುಸ್ತಕ ಕೇವಲ ಕಥೆಗಳಲ್ಲ, ಗೆಳೆತಿಯೊಬ್ಬಳು ಬರೆದ ಪತ್ರಗಳನ್ನು ಓದಿದಂತಿದೆ.. ಇಂತಹ ಚಿತ್ರ ವಿಚಿತ್ರ ಅನುಭವಗಳು ಭಾರತಿ ಮೇಡಂ ನಿಮಗೆ ಮಾತ್ರ ಅನುಭವಕ್ಕೆ ಬರಲು ಸಾಧ್ಯವೇನೊ.. ಜಸ್ಟ್ ಮಾತ್ ಮಾತಲ್ಲಿ ಸಿಂಪ್ಲಿ ಸೂಪರ್ಬ್..

ಧನ್ಯವಾದಗಳು,
-ಸುಪ್ರೀತಾ ವೆಂಕಟ್

ಕನ್ನಡ · ಭಾರತಿ ಬಿ ವಿ · Uncategorized

‘ಜಸ್ಟ್ ಮಾತ್ ಮಾತಲ್ಲಿ’ – ಭಾರತಿ.ಬಿ.ವಿ

fb_img_1546923406950

ಪುಸ್ತಕ – ಜಸ್ಟ್ ಮಾತ್ ಮಾತಲ್ಲಿ (ಅನುಭವ ಬರಹಗಳು)
ಲೇಖಕರು – ಭಾರತಿ ಬಿ ವಿ
ಬೆಲೆ – 150
ಸಾವಣ್ಣ ಪ್ರಕಾಶನ

ಕವಿತೆಗಳಿಂದ ಬಹುದೂರವೇ ಆದ ನನಗೂ ಭಾರತಿ ಬಿ ವಿ ಅವರ “ಕಿಚನ್ ಕವಿತೆಗಳು” ಕವನ ಸಂಕಲನದ ಬಗ್ಗೆ ಚಂದದ ವಿಮರ್ಶೆ ಓದಿ ಕೊಳ್ಳುವ ಬಯಕೆಯಾಗಿತ್ತು.
ಬೇಕಾದಷ್ಟು ಪುಸ್ತಕಗಳು ಬಂದು ನನ್ನ ತೆಕ್ಕೆಗೆ ಬಿದ್ದಿದ್ದರೂ ಇದೊಂದು ಮಾತ್ರ ಕೈಸೇರದೇ ಅದೇಕೋ ಮುಖ ತಿರುಗಿಸಿಕೊಂಡು ಮಗುಮ್ಮಾಗಿ ಕುಳಿತುಬಿಟ್ಟಿತ್ತು.

ಸರೀ… ಆದಾಗ ಬಾರೇ ಸುಂದರಿ, ನಿನಗಾಗಿ ಕಾಯ್ತಿರ್ತಿನಿ ಅಂತ ಸಮಾಧಾನ ಮಾಡಿಕೊಂಡಿದ್ದೆ.

ಆದಿತ್ಯವಾರದ ಒಂದಿಷ್ಟು ಶಾಪಿಂಗ್ ಮುಗಿಸಿಕೊಂಡು ಗಡದ್ದಾಗಿ ಊಟ ಮುಗಿಸಿ ಹೊರಡುವಾಗ ನನ್ನ ಮಗಳದ್ದು ಒಂದೇ ಸಮ ಕರ್ಕರೆ.. ಅವಳ ಶಾಲೆಯಲ್ಲಿ ರಜತಮಹೋತ್ಸವದ ನಿಮಿತ್ತ ನಾಲ್ಕು ದಿನಗಳ ಭಾರೀ ಕಾರ್ಯಕ್ರಮ!! ಹೋಗುವ ಮನಸ್ಸಿಲ್ಲದಿದ್ದರೂ ಅವಳಿಂದ ತಳ್ಳಿಸಿಕೊಂಡಂತೆ ಹೋಗಬೇಕಾಯಿತು. ನನ್ನ ಗೊಣಗುವಿಕೆಗೆ ಸೊಪ್ಪುಹಾಕದೇ ಅಪ್ಪನ ಕೈಹಿಡಿದು ಕುಣಿಯುತ್ತ ನಡೆದಳು.

ಪುಟ್ಟ ಮಕ್ಕಳು ನೃತ್ಯ ರೂಪಕವನ್ನೇನೋ ಮಾಡುತ್ತಿದ್ದರು. ವ್ಹಾ.. ಭಾರಿ ಚಂದ ಮಾಡ್ತಿದ್ದ ಮಾರ್ರೇ.. ಎನ್ನುತ್ತಲೇ ಸುತ್ತು ನೋಡಿದರೆ ಒಂದಿಷ್ಟು ಸ್ಟಾಲ್ಗಳು ಬಂದಿದ್ದವು.. ಅದರ ನಡುವೆ ಅನಾಥ ಶಿಶುಗಳಂತೆ ಪಿಳಿಪಿಳಿ ಕಣ್ಣು ಬಿಡುತ್ತ ನಿಂತಿರುವ ಎರಡು ಪುಸ್ತಕ ಮಳಿಗೆಗಳು!!

ಅವುಗಳನ್ನು ಕಂಡಿದ್ದೇ ಅಪ್ಪ, ಮಗಳಿಗೆ ನಿಲ್ಲಲೂ ಕೊಡದೇ ಒಂದೇ ಸಮ ಹಠ ಮಾಡಿ ಅತ್ತ ಎಳೆದೋಯ್ದೆ.. ಬೇಕಾದ ಪುಸ್ತಕಗಳನ್ನು ಕಂಡಾಗ ಸ್ವರ್ಗ ಅದೇ ಸ್ಟಾಲಲ್ಲಿ ಕಾಲು ಮುರಿದು ಕುಳಿತಿದೆಯೇನೊ ಅನ್ನಿಸಿತು.
ಪುಸ್ತಕ ರಾಶಿಯ ನಡುವೆ ಕದ್ದು ನೋಡುತ್ತಿದ್ದ ಇದನ್ನು ಕಂಡಾಗ ಎಲ್ಲೋ ನೋಡಿದ ನೆನಪು!! ಎಚ್ಚರಿಸುವಂತೆ ಥಟ್ಟನೆ ಕೆನ್ನೆಗೆ ಬಾರಿಸಿದ್ದು ಮತ್ತದೇ ಮುನಿಸಿಕೊಂಡ ಚೆಲುವೆ ಕಿಚನ್ ಕವಿತೆಗಳು ಪುಸ್ತಕ!
ಇದು ಅದಲ್ಲದಿದ್ದರೂ ಅಕ್ಕನನ್ನು ಬಯಸಿದಾಗ ತಂಗಿ ಸಿಕ್ಕಂತಾಯಿತು.. ಅಲ್ಲಿ ನಾಲ್ಕೈದು ಕಾಪಿಗಳಿದ್ದರೂ, ಮತ್ತ್ಯಾವ ಕೈ ಆ ಕ್ಷಣಕ್ಕೆ ಕೊಳ್ಳುವ ಆಸಕ್ತಿ ತೋರದಿದ್ದರೂ ಆತುರಗೆಟ್ಟು ಬಾಚಿಕೊಂಡೆ.

ನನ್ನೆಲ್ಲಾ ಈ ಎಡಬಿಡಂಗಿತನವನ್ನು ಓರೆಗಣ್ಣಲ್ಲಿ ನೋಡುತ್ತಿದ್ದ ಮಗಳು, ಇಲ್ಲಿ ಬಂದದ್ದೇ ತಪ್ಪು ಎಂದುಕೊಂಡಿರಲಿಕ್ಕೂ ಸಾಕು..
ಒಂದು ಬಾರ್ಬಿ ಡಾಲ್ ಕೊಡಿಸಮ್ಮ ಎಂದಾದಲೆಲ್ಲಾ ಮನೆಯಲ್ಲಿ ಒಂದ್ರಾಶಿ ಬಿದ್ದಿವೆ.. ಸಾಕು ಸುಮ್ಮನಿರೆ ಎಂದು ಗದರುವ ಈ ಅಮ್ಮಾ, ಅಷ್ಟು ಪುಸ್ತಕಗಳಿದ್ರೂ ತಾನು ಮಾತ್ರ ಮತ್ತೆ ತಗೊಳ್ತಾಳೆ. ಅಪ್ಪನ ಮುಂದೆ ದೂರು!!
ಮನೆಯವರದ್ದೂ ಯಥಾಪ್ರಕಾರ ಜೇಬಿಗೆ ಕತ್ತರಿ ಬಿದ್ದಾಗಿನ ನಿರ್ಲಿಪ್ತಿತನ..

ಆಟೋ ಎಂದರೆ ಸಾಕು ಅಚ್ಚರಿ ಪಡುವ ಬಾಲ್ಯ ನಮ್ಮದು. ಓಣಿಯಲ್ಲಿ ಯಾರಿಗಾದರೂ ತುರ್ತಾಗಿ ಆಟೋ ಬೇಕಿದ್ದರೆ, ಆಟೋದವರನ್ನು ಕರೆತರಲು ನಮ್ಮನ್ನು ಅಟ್ಟುತಿದ್ದರು. ಸ್ಟ್ಯಾಂಡಿನಿಂದ ಮನೆಯವರೆಗೆ ಆಟೋ ಹತ್ತಿ ಕರೆದುಕೊಂಡು ಬರುವ ಸಂಭ್ರಮ ಹೇಳತೀರದ್ದು.
ಆದರೆ ಆ ಸಂಭ್ರಮ ಬಹುಕಾಲ ದಕ್ಕಲೇ ಇಲ್ಲ. ಇವರು ಹೇಳುವ ಪುಡಿಗಾಸಿಗೆ ಬರಲೂ ಆಗದೇ ಅತ್ತ ಸ್ಟ್ಯಾಂಡಿನಲ್ಲಿ ತಮ್ಮ ಪಾಳಿ ಕಳೆದುಕೊಳ್ಳುವ ಭೀತಿಗೆ ದೊಡ್ಡವರ ಹೊರತು ನಾವು ಕರೆಯ ಹೋದರೆ ಬರುತ್ತಿರಲಿಲ್ಲ.

ಮದುವೆಯ ನಂತರ ಆಟೋದ ಓಡಾಟಗಳೆಲ್ಲ ಸಾಮಾನ್ಯವಾದ ಮೇಲೆ ಆಟೋಗಳ ಪ್ರಯಾಣಗಳ ಬಗ್ಗೆ ಇದ್ದ ಸುಪ್ತ ಖುಷಿ ಮಾಯವಾದವು. ಆದಷ್ಟು ಕಡಿಮೆ ಬೆಲೆಗೆ ಚೌಕಾಸಿ ಮಾಡಿ ಹತ್ತುವ ಪರಿಪಾಠಗಳು ಅರಿವಿಗೆ ಬರದಂತೆ ಬದುಕಿಗೆ ಲಗ್ಗೆ ಇಟ್ಟಾಗಿತ್ತು.

ಕಷ್ಟವಾದರೂ ಆಟೋ ಹತ್ತದೇ ಬಸ್ಸಿಗೆ ಬಂದು ನೂರು ರೂಪಾಯಿ ಉಳಿಸಿದೆ ಎಂಬ ವಿಕ್ಷಿಪ್ತ ಹೆಮ್ಮೆಗೆ, ಅದಕ್ಕಿಂತಲೂ ಹೆಚ್ಚು ಬೆಲೆ ಕೊಟ್ಟು ಕೊಂಡ ಅಂಗೈ ಅಗಲದ ಚಾಕ್ಲೇಟುಗಳು ಬ್ಯಾಗಲ್ಲಿ ಮುಸಿಮಸಿ ನಗುತ್ತಿರುವುದು ಗೊತ್ತೇ ಆಗುತ್ತಿರಲಿಲ್ಲ. ಅಗತ್ಯವಿಲ್ಲದ ಕಡೆ ಸುರಿದು, ಇನ್ನೆಲ್ಲೋ ಚೌಕಾಸಿ ಮಾಡಿ ನಮ್ಮ ಜಾಣತನಕ್ಕೆ ನಾವೇ ಬೆನ್ನುತಟ್ಟಿಕೊಂಡು ಬೀಗುವುದು
ಮನುಷ್ಯನ ಸಾಮಾನ್ಯ ವಿಕೃತಿಗಳೇನೋ!!

ಆಟೋ ಹತ್ತಿ ಕುಳಿತದ್ದಷ್ಟೇ ನೆನಪು ಮೊಬೈಲಿನ ಪ್ರಪಂಚದಲ್ಲಿ ಎಲ್ಲವೂ ಮರಿವೆ. ಗೇಟಿನ ಮುಂದೆ ಆಟೋ ನಿಲ್ಲಿಸಿ ಮೇಡಂ ಇದೇ ತಾನೆ ಎಂದಾಗ ತಲೆಯ ಮೇಲೆ ಮೊಟಕಿದಂತೆ ಎಚ್ಚೆತ್ತು ಎಲ್ಲಿದ್ದೇನೆ ಎಂಬ ಆತಂಕದಲ್ಲಿ, ಹಾ… ಅಲ್ಲ, ಹೌದು.. ಎನ್ನುವಾಗ ಅವರು ಮುಗುಳು ನಗುತ್ತ ಕಳೆದ ಬಾರಿ ನನ್ನ ಆಟೋ ಹತ್ತಿದ್ರಿ ಮೇಡಂ ಎಂದಾಗ ಪೆಚ್ಚಾಗಿ ಹಲ್ಲುಕಿರಿದು ಹೌದೌದು ಎನ್ನುತ್ತ ಅವರು ಕೇಳಿದಷ್ಟು ಮರುಮಾತಾಡದೇ ಕೊಟ್ಟು ಇಳಿದು ಬಿಡುವ ದಿನಗಳೆಷ್ಟೋ.. ಅಸಲಿಗೆ ನಾನು ವಿಳಾಸ ಹೇಳಿದ್ದೇನಾ ಎನ್ನುವುದು ದೊಡ್ಡ ಪ್ರಶ್ನೆಯಾಗಿ ಕಾಡುತ್ತದೆ.

ಕರಾವಳಿ, ಮಲೆನಾಡುಗಳ ಬಗ್ಗೆ ಗೊತ್ತಿರಬಹುದು ನಿಮಗೆ. ತೋಟ, ಬೇಣಗಳ ನಡುವೆ ವಿರಳವಾಗಿ ಕಾಣುವ ಮನೆಗಳು. ಹಗಲಿಗೇ ನಿರ್ಜನವಾಗಿ ಆತಂಕ ಹುಟ್ಟಿಸುವಂತಿದ್ದರೆ, ರಾತ್ರಿಯಂತೂ ಇರುವ ಕತ್ತಲನ್ನೆಲ್ಲಾ ಹೊದ್ದು ಮಲಗಿರುತ್ತವೆ. ಮಿಣುಕು ಹುಳುಗಳು ಮತ್ತು ಅದಕ್ಕಿಂತಲೂ ಕ್ಷೀಣವಾಗಿ ಕಾಣುವ ದೂರದಲ್ಲಿರುವ ಮನೆಗಳ ದೀಪಗಳಷ್ಟೇ ಧೈರ್ಯ ತಂದುಕೊಡಬೇಕು.

ಗೇಟಿಗೂ ಮನೆಗೂ ಎತ್ತಣೆತ್ತಣ ಸಂಬಂಧ! ಎನ್ನುವಂತಿರುತ್ತವೆ. ಕತ್ತಲಲ್ಲಿ ಮಲಗಿರುವ ಹೆಬ್ಬಾವಿನಂತ ಕಾಲುದಾರಿಯೇ ಮನೆ ತಲುಪಿಸುವುದು.
ತೀರಾ ಅನಿವಾರ್ಯವಾದಾಗ ಮಾತ್ರ ರಾತ್ರಿ ಆಟೋ ಹತ್ತಿ ಬರಬೇಕಾಗುತ್ತದೆ. ಒಂಟಿಯಾಗಿರುವುದರ ಜೊತೆಗೆ ಅಪರಿಚಿತ ಆಟೋ ಎಂಬ ಭಯ. ಪ್ರತಿ ತಿರುವನ್ನು ಅವನು ಸರಿಯಾಗಿ ತೆಗೆದುಕೊಳ್ಳುತ್ತಿದ್ದಾನಾ ಎಂಬ ಪರೀಕ್ಷೆ ಬಾರಿ ಬಾರಿಗೂ. ಗೇಟು ಕಂಡಾಗ ಜೀವ ವಾಪಸ್ಸಾದ ದೀರ್ಘ ಉಸಿರು. ಇಂತಹ ಆತಂಕಗಳಿಗೆ ನಾಚಿಕೆ ತರಿಸುವಂತೆ ನಾನು ಹೋಗಬೇಕಾದ ಹಾದಿಗೆ ತಮ್ಮ ಹೆಡ್ಲೈಟ್ ಫೋಕಸ್ ಮಾಡಿ ನೀವು ಹೋಗಿ ಮೇಡಂ ಎನ್ನುತ್ತ ನಿಮಿಷಗಳವರೆಗೆ ನಿಲ್ಲುವ ಆಟೋದವರನ್ನು ಕಂಡಾಗ ಏನೂ ಹೇಳಲಾಗದ ಆರ್ದ್ರಭಾವ ಆವರಿಸಿಕೊಳ್ಳುತ್ತದೆ.

ಆಟೋ ಹತ್ತಿ ವಿಳಾಸ ಹೇಳುವ ಮೊದಲೇ ಪರಿಚಿತ ನಗು ಬೀರುತ್ತ ಎಲ್ಲಿಗೆ ಮೇಡಂ ಮನೆಗಾ? ಅಂಗಡಿಗಾ ಎನ್ನುತ್ತಾ ಅಚ್ಚರಿಗೆ ತಳ್ಳುವವರೆಷ್ಟೋ. ಅರೇ.. ನಮ್ಮ ಅಂಗಡಿ, ಮನೆ ಈವನಿಗೇಗೆ ಗೊತ್ತು? ಸಣ್ಣ ಊರೇ ಆಗಿರಬಹುದು. ಆದರೆ ಇಷ್ಟೆಲ್ಲಾ ನೆನಪಿಡುವ ಅಗತ್ಯ ಅವರಿಗೇನಿದೆ?
ನಮಗೆ ಆಟೋ ಒಂದು ಸೌಲಭ್ಯವಷ್ಟೇ ಆದರೆ, ಅವರಿಗೆ ಪ್ರಯಾಣಿಕರೇ ಜೀವಾಳ.

ಇವೆಲ್ಲ ನಮಗೆ ಎದುರಾಗುವ ಮೇಲ್ನೋಟದ ಅನುಭವಗಳಷ್ಟೇ. ಇದಕ್ಕಿಂತಲೂ ಭಿನ್ನವಾದ, ಸಾಮಾನ್ಯವಾಗಿ ನಾವು ಕಂಡುಕೊಳ್ಳದ ವಿಷಯಗಳನ್ನು ಭಾರತಿ ಬಿ. ವಿ ಅವರು ತಮ್ಮ “ಜಸ್ಟ್ ಮಾತ್ ಮಾತಲ್ಲಿ” ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ.

ಎಲ್ಲರೊಳಗೂ ಒಂದು ಸುಪ್ತ ಜಗತ್ತಿದೆ. ಅದು ಅಗಾಧವಾದ ಕೋಟೆಯೇನಲ್ಲ. ಯಾರದೋ ಸಣ್ಣದೊಂದು ಸಹಾನುಭೂತಿಯ ಉಸಿರಿಗೆ ಕದ ತೆರೆದು ಬೆತ್ತಲಾಗುವಂತದ್ದು. ಅದರೊಳಗೆ ಇಣುಕಿ ತೆವಳುತ್ತಿರುವ ಸಾಕಷ್ಟು ಕಥೆಗಳನ್ನು ಕಂಡುಕೊಳ್ಳುವುದು ಎಷ್ಟು ಜನರಿಗೆ ಸಾಧ್ಯ?
ಲೇಖಕಿಗಾದ ಅನುಭವಗಳು ಎಲ್ಲರಿಗೂ ಯಾಕೆ ಆಗುವುದಿಲ್ಲ? ನಮ್ಮ ಜಂಜಡಗಳಲ್ಲೇ ಕಳೆದು ಹೋದ ನಮಗೆ ಇನ್ನೊಬ್ಬರ ಬಗ್ಗೆ ತಿಳಿಯುವ ಆಸಕ್ತಿಯೇ ಉಳಿದಿಲ್ಲವೇ? ಇವು ನಮಗೆ ನಾವು ಕೇಳಿಕೊಳ್ಳಲೇಬೇಕಾದ ಪ್ರಶ್ನೆಗಳು.

ಪ್ರತಿಯೊಬ್ಬ ಆಟೋರಾಜನ ಅಂತರಾಳವನ್ನ ಕೆದಕಿ ಕಥೆ ಹೇಳಿಸಿ ಅವರ ನೋವು, ನಲಿವಿಗೆ ತುಡಿಯುತ್ತ, ಮೋಸ ಮಾಡುವವರನ್ನು ತಾರಾಮಾರಿ ಉಗಿಯುತ್ತಾ ಕೊನೆಯಲ್ಲಿ ಎಷ್ಟಾದರೂ ಆಟೋ ರಾಜ ಎಂಬ ಸಹಾನುಭೂತಿಯನ್ನು ಮೆರೆಯುತ್ತಾ ಬೆಂಗಳೂರಿನ ಗಲ್ಲಿ ಗಲ್ಲಿಗಳನ್ನು ಆಟೋದಲ್ಲಿಯೇ ಸುತ್ತಿಸುತ್ತಾರೆ.

ಒಂದಿಷ್ಟು ಮಾತುಕತೆಗಳು ಯಾರ ಮನಸ್ಸನ್ನಾದರೂ ತಿಳಿಯಾಗಿಸಬಹುದು. ಜೀವನದ ಆಯಾಸವೆಲ್ಲಕ್ಕೂ ಸಣ್ಣ ಸಮಾಧಾನವಾಗಿ ಕಿರು ನಗೆಯೊಂದನ್ನು ತೇಲಿಸಬಹುದು. ಇಲ್ಲಿ ಲೇಖಕಿ ಅವರನ್ನು ಮಾತಿಗೆಳೆದು ಸಾಂತ್ವನಿಸಿದಂತೆ, ಅವರಿಂದ ಸಾಂತ್ವನಗೊಂಡಿದ್ದೂ ಇದೆ.

ಕೆಲವೊಂದು ಬರಹಗಳನ್ನು ಓದವಾಗ ಮನಸ್ಸು ದ್ರವಿಸಿ ಹೋಗುತ್ತದೆ. ಬದುಕಿನ ಅನಿರೀಕ್ಷಿತ ತಿರುವುಗಳಿಗೆ ಎದುರುಗೊಳ್ಳುವ ಅವರ ತಲ್ಲಣಗಳು, ಅಸಹಾಯಕತೆ, ದೈನೆಸೀತನ, ಅರಿವಿದ್ದೂ ಮಾಡುವ ಮೋಸಗಳು ಅದರ ಹಿಂದಿರುವ ಕಾರಣಗಳು ನಮ್ಮ ನಡುವೆಯೇ ಇರುವ ಅವರ ಜಗತ್ತಿನ ಬಗ್ಗೆ ಲವಲೇಶವೂ ಗೊತ್ತಿಲ್ಲದೆ ಬದುಕುತ್ತಿರುವ ನಮ್ಮ ಅಸಡ್ಡೆ.. ಇವೆಲ್ಲಕ್ಕೂ ತಳಮಳಿಸಿ ಹೋಗುತ್ತೇವೆ.

ಮಾತಿನಮಲ್ಲರು, ಗಂಭೀರವಾಗಿರುವವರು, ಅಸಲಿಗೇ ಮಾತೇ ಆಡದವರು, ಒಂದಿಷ್ಟು ತಿಕ್ಕಲುತನದವರು ಹೀಗೆ ಯಾರನ್ನೂ ಬಿಡದೇ ಅವರ ಅನುಭವಗಳನ್ನು ದೋಚಿದ್ದಾರೆ. ದೋಚಿದ್ದನ್ನು ರಸವತ್ತಾಗಿ ನಮಗೂ ಸಾಗಿಸಿದ್ದಾರೆ.

ಇದನ್ನು ಓದಿದ ಪ್ರತಿಯೊಬ್ಬರೂ ಮುಂದೆ ತಮಗೆ ಎದುರಾಗುವ ಆಟೋದವರ ಕಥೆಗಳನ್ನು ಕೆಣಕುವ, ಹೊಸದೊಂದು ಅನುಭೂತಿಗೆ ತಮ್ಮನ್ನು ತೆರೆದುಕೊಳ್ಳುವ ಕುತೂಹಲದಲ್ಲಿರುತ್ತಾರೆ.

ಆದ್ರೆ ಹುಷಾರು.. ಲೇಖಕಿಗೆ ಸಿಕ್ಕಂತವರೇ ಎಲ್ಲರಿಗೂ ಸಿಗಲಿಕ್ಕಿಲ್ಲ. ಏನಾದರೂ ಎಡವಟ್ಟು ಮಾಡಿಕೊಂಡು ಇವರನ್ನು ದೂರುವಂತೆಯೂ ಇಲ್ಲ.
ಕಲ್ಲನ್ನೂ ಮಾತಾಡಿಸುವ ವಾಚಾಳಿತನ, ಜಗಳಕ್ಕೆ ನಿಲ್ಲುವ ಗಟ್ಟಿತನ, ಕಥೆಗಳ ಬೆನ್ನಟ್ಟಿ ಹೋಗುವ ಹಪಾಹಪಿತನ, ನಂಬಿ ಮೋಸ ಹೋದಷ್ಟೂ ನಂಬಿಕೆಯೇ ಬದುಕನ್ನು ಸಹ್ಯವಾಗಿಸುವ ದಾರಿ ಎನ್ನುವ ಮುಗ್ಧತನ, ಎಂತಹ ಸನ್ನಿವೇಶವನ್ನೂ ಹಾಸ್ಯದ ಮೂಲಕ ನಿರೂಪಿಸುವ ಅವರ ಶೈಲಿ ಎಲ್ಲರಿಗೂ ಬರದು..

ಒಟ್ಟಾರೆ ಒಮ್ಮೆ ಓದಲೇಬೇಕಾದ ಚಂದದ ಪುಸ್ತಕ..

-ಕವಿತಾ ಭಟ್

ಕನ್ನಡ · ಭಾರತಿ ಬಿ ವಿ · Uncategorized

‘ಜಸ್ಟ್ ಮಾತ್ ಮಾತಲ್ಲಿ’ – ಭಾರತಿ.ಬಿ.ವಿ

 

FB_IMG_1538931274280.jpgಪುಸ್ತಕ :ಜಸ್ಟ್ ಮಾತ ಮಾತಲ್ಲಿ
ಲೇಖಕರು:ಬಿ ವಿ ಭಾರತಿ
ಪಬ್ಲಿಶರ:ಸಾವಣ್ಣ publications
ಪ್ರಕಾರ: ಲೇಖನಗಳು

ದೊಡ್ಡವರ ಬಗ್ಗೆ ಎಲ್ಲರೂ ಬರೀತಾರೆ. ದೊಡ್ಡ ದೊಡ್ಡ ಸಂಗತಿಗಳು, ಜಾತಿ ಧರ್ಮ ರಾಜಕೀಯ ಮಸಾಲೆ ಇತ್ಯಾದಿ ಇತ್ಯಾದಿ.
ಆದರೆ ದಿನ ನಿತ್ಯದಲ್ಲಿ ಸಿಗುವ ಸಾಮಾನ್ಯ ಜನರಲ್ಲಿಯ ಅಸಾಮಾನ್ಯ ಸಂದೇಶಗಳನ್ನು ಗುರುತಿಸಿ ದಾಖಲಿಸುವದು ಒಂದು ರೀತಿಯಲ್ಲಿ ಸಮಾಜ ಸೇವೆಯೇ ಸರಿ. ಅದರಲ್ಲೂ ಆಟೋ ಚಾಲಕರು ಅಂದರೆ ಮೂಗು ಮುರಿಯುವ ದರ್ಪ ತೋರಿಸುವ ಅಸಡ್ಡೆ ಮಾಡುವ ಜನರೇ ತುಂಬಿರುವಾಗ ಆಟೋ ಚಾಲಕರ ಬದುಕಿನ ಪುಟಗಳನ್ನು ಸರಳ ಪದಗಳಿಂದ ಅಲಂಕರಿಸಿ ತೆರೆದಿಡುವ Bharathi B V ನನಗೆ ಆಟೋರಾಜ ಶಂಕರನಾಗ್ ರನ್ನು ನೆನಪಿಸುತ್ತಾರೆ.
ಪ್ರತಿ ಬರಹವೂ ಹೃದಯವನ್ನು ತಟ್ಟುತ್ತವೆ. ಅವರಿಗೆ ಇನ್ನೂ ಉತ್ತಮ
ಕಥಾವಸ್ತು ಹಾಗೂ ಸಂದೇಶಗಳನ್ನು ನೀಡುವ ಅಟೋ ಚಾಲಕಿಯರೂ ಕೂಡ ಸಿಗಲಿ ಎಂದು ಆಶಿಸುತ್ತೇನೆ 🙂
ಸಂಚೈ

ಸಂಗೀತಾ

ಕನ್ನಡ · ಭಾರತಿ ಬಿ ವಿ · Uncategorized

’ಸಾಸಿವೆ ತಂದವಳು’ – ಭಾರತಿ ಬಿ ವಿ

sasiveಭಾರತಿ ಬಿ ವಿ ಯವರ “ಸಾಸಿವೆ ತಂದವಳು” ಒಂದು ಸ್ಫೂರ್ತಿದಾಯಕ ಪುಸ್ತಕವೆನ್ನುವುದರಲ್ಲಿ ಎರಡು ಮಾತಿಲ್ಲ .. ಪುಸ್ತಕಕ್ಕೆ ನೇಮಿಚಂದ್ರರ ಉತ್ತಮವಾದ ಮುನ್ನುಡಿಯೂ ಜೋಗಿರವರ ಹಾರೈಕೆಯೂ ಜೊತೆಯಾಗಿದೆ. ಇಲ್ಲಿ ಭಾರತಿಯವರು ಸಾವನ್ನ ಕುರಿತಂತೆ ಹೇಳಿಲ್ಲ . ಸಾವು ಬಂದು ಅಪ್ಪುವುದೆಂಬ ಭಯದ ನೆರಳು ತಿಳಿಸುವ ಬದುಕಿನ ಮಹತ್ವವನ್ನು ಹೇಳಿದ್ದಾರೆ.

ಬದುಕೆಂಬ ನಿಧಿಯನ್ನು ವಿಧಿಯೆಂಬ ಮಾಯಾವಿ ಯಾವ ಕ್ಷಣದಲ್ಲಿ ಯಾವ ವಿಧದಲ್ಲಿ ಕಸಿಯುತ್ತಾನೋ ಯಾರೂ ಬಲ್ಲವರಿಲ್ಲ. ಆದರೂ ಊಹಿಸದೇ ಬರುವ ಸಂಕಟಗಳನ್ನು ಎದುರಿಸದೇ ವಿಧಿಯಿಲ್ಲ. ಆದರೆ ಬದುಕು ಅದರಲ್ಲಿನ ಕನಸು ನಾಳೆಯೆಂಬ ನಂಬಿಕೆಗೆ ಸ್ವಲ್ಪವೇ ಸ್ವಲ್ಪ ಧೈರ್ಯ.. ಛಲ.. ಒಡಗೂಡಿದಾಗ ಮಾತ್ರ ಅಂತಹ ಪರಿಸ್ಥಿತಿಯಲ್ಲಿ ಮುನ್ನುಗ್ಗಬಹುದು.

ಹೆದರಿಕೆ ಭಯ ಸ್ವಭಾವದ ಹೆಣ್ಣು ಸೂಜಿ ಚುಚ್ಚಿಸಿಕೊಳ್ಳಲು ಹೆದರುವಾಕೆ ಭಯಂಕರ ಖಾಯಿಲೆಯಿಂದ ನರಕಯಾತನೆಯ ಕೀಮೋಥೆರಪಿಗೆ ತನ್ನನ್ನು ತಾನು ಮಾನಸಿಕವಾಗಿ ಸಜ್ಜುಗೊಳಿಸಲು ಪಡುವ ಪಾಡು … ಅಬ್ಬಾ ಮನಸಿನ ತುಮುಲಗಳನ್ನು ವೇಧನೆಯನ್ನು ವ್ಯಕ್ತಪಡಿಸಿರುವ ರೀತಿ …. ಬದುಕಬೇಕೆಂಬ ಬಯಕೆಯ ಹೊತ್ತು ಬದುಕಿನ ಕ್ಷಣ ಕ್ಷಣದ ಮಹತ್ವವನ್ನು ಹೇಳಿರುವ ರೀತಿ ಆಶ್ಚರ್ಯ ಹುಟ್ಟಿಸುತ್ತದೆ. ಆಕೆ ಅಲ್ಲಲ್ಲಿ ಹೇಳಿರುವ ವಿಚಾರಗಳು ಬದುಕಿನ ಬಗೆಗೆ ಆಸೆಯನ್ನು ಅದರಲ್ಲಿನ ಆಸ್ಥೆಯನ್ನು ಓದುಗರನ್ನು ಬೇಗ ಬೇಗ ಓದುವಂತೆ ಪ್ರೇರೇಪಿಸುತ್ತದೆ.

ಬದುಕಿನ ಸವಾಲುಗಳಿಗೆ ಸಜ್ಜಾಗುವುದು ಬೇರೆ. ಜೊತೆಯಲ್ಲಿ ಮನೆಯವರು ಸ್ನೇಹಿತರು ತನ್ನವರೇ ಎಂಬ ಜೀವಗಳು ಜೊತೆಯಿರುವರೆಂಬ ನಂಬಿಕೆ … ಆದರೆ ಜೀವದೊಂದಿಗೆ ಆಟವಾಡುವ ಖಾಯಿಲೆ ಬೇಡವಾದ ಅಥಿತಿಯಾಗಿ ಬಂದಾಗ ಆಹ್ವಾನ ನೀಡದಿದ್ದರೂ ಅದ ಬಂದು ನೀಡುವ ಉಪದ್ರ ಎಂಥಹ ಗಟ್ಟಿ ಮನಸ್ಸನ್ನು ಟೊಳ್ಳಾಗಿಸುತ್ತದೆ …. ಸಾವನ್ನು ಮೆಟ್ಟಿ ನಿಲ್ಲಲಾರದು ನಿಜ ಆದರೆ ಅದು ಬರುವ ಸಮಯ ಬಂತೆಂದಾಗಲೂ ಬದುಕು ಮುಗಿದಿಲ್ಲ ಅದನ್ನು ಅಪ್ಪಿದಂತಹ ಬಂಧನ ಸಡಿಲವಾಗಿಲ್ಲ ಎಂಬ ಮಾನಸಿಕ ಸ್ಥೈರ್ಯವೇ ಅವರು ಗುಣಮುಖರಾಗಲು ಜೊತೆಯಾಗಿ ಬಂದದ್ದು ಎಂದರೆ ಸುಳ್ಳಲ್ಲ .

ಬದುಕು ಬವಣೆಯಲ್ಲ … ಭಾವನೆಗಳ ಪೀಠಿಕೆ … ಜೀವ ಜೀವನಗಳ ನಡುವಿನ ಪರದೆ ಎಷ್ಟು ಪಾರದರ್ಶಕ…. ಹೀಗೆ ಹೇಳುತ್ತಾ ಹೋದರೆ ಇದು ಮುಗಿಯದು .. ಭಾರತಿಯವರೇ ಹೇಳಿದಂತೆ ಸ್ಫೂರ್ತಿದಾಯಕ ಹೋರಾಟ ಕಥನ … ಕ್ಯಾನ್ಸರ್ ಖಾಯಿಲೆಯಿಂದ ಹೆದರುವವರಿಗೆ ಕೈಪಿಡಿಯಂತಹ ಒಂದು ವಾಸ್ತವ ಕೃತಿಯನ್ನು ಜೀವನೋತ್ಸಾಹದಿಂದ ಬರೆದಿರುವ … ಅಂತಹ ಸಂದರ್ಭದಲ್ಲೂ ಅಲ್ಲಲ್ಲಿ ಹಾಸ್ಯಪ್ರಜ್ಞೆ ಮೆರೆದಿರುವ Bharathi B V ಯವರಿಗೆ ಅಭಿನಂದನೆಗಳು ..

ಸಣ್ಣಪುಟ್ಟ ಖಾಯಿಲೆಗೂ …. ಖಾಯಿಲೆ ಎಂಬುದು ನನ್ನ ಮಟ್ಟಿಗೆ ದೊಡ್ಡ ಮಾತೇ ಬಿಡಿ… ಚಿಕ್ಕಪುಟ್ಟ ವಿಷಯಗಳಿಗೂ ಹೆದರುವ ನನಗೆ, ನನ್ನನ್ನು ಪರಿಚಯವಾದ ಅತೀ ಕಡಿಮೆ ಸಮಯದಲ್ಲಿ ಹೆಚ್ಚಾಗಿ ಅರ್ಥ ಮಾಡಿಕೊಂಡ ಕೆಲವೇ ಸ್ನೇಹಿತರಲ್ಲಿ ಗಣೇಶ್ ರವರು ಪುಕ್ಕಲು ಮನಸ್ಥಿತಿಯ ನನಗೆ ಇಂತಹ ಒಂದು ಪುಸ್ತಕವನ್ನು ಓದಲು ಪ್ರೇರೇಪಿಸಿದ ಆತ್ಮೀಯ ಸ್ನೇಹಿತರಾದ Ganesh Karkera ರವರಿಗೆ ಧನ್ಯವಾದಗಳು ….